Site icon Vistara News

Women’s Health: 40 ವರ್ಷ ದಾಟಿದ ಮಹಿಳೆಯರು ಈ ವಿಷಯದಲ್ಲಿ ಎಚ್ಚರ ವಹಿಸಲೇಬೇಕು

Women's Health

ಮಹಿಳೆಯ ದೇಹ (Women’s Health) ಮಾಗುತ್ತಾ ಮಾಗುತ್ತಾ ಬಹಳಷ್ಟು ಬದಲಾವಣೆಗಳಿಗೆ ಒಳಗಾಗುವುದರಿಂದ 40 ದಾಟುತ್ತಿದ್ದ ಹಾಗೆಯೇ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನೂ ಆಕೆ ಅನುಭವಿಸಬೇಕಾಗುತ್ತದೆ. ವಯಸ್ಸಾಗುವಿಕೆಯಿಂದ ಆರಂಭವಾಗುವ ಈ ಸಮಸ್ಯೆಗಳಿಗೆ ಬೇರೆ ವಿಚಾರಗಳ ಪ್ರಭಾವವೂ ಇರುತ್ತದೆ. ಉದಾಹರಣೆಗೆ ಆಕೆಯ ಜೀವನಶೈಲಿ, ಆಹಾರಕ್ರಮ, ಆಕೆಯ ಅಭ್ಯಾಸಗಳು ಇತ್ಯಾದಿ ಇತ್ಯಾದಿಗಳು ಆರೋಗ್ಯದ ಮೇಲೆ ನಲವತ್ತರ ನಂತರ ಪರಿಣಾಮ ಬೀರಲಾರಂಭಿಸುತ್ತದೆ. 40 ವರ್ಷ ದಾಟಿದ ತಕ್ಷಣ ಮಹಿಳೆ ತನ್ನ ಆರೋಗ್ಯದ ಕಾಳಜಿಯನ್ನು ತುಸು ಹೆಚ್ಚೇ ಮಾಡಬೇಕು. ಮುಖ್ಯವಾಗಿ ಮಹಿಳೆಯ ಹಾರ್ಮೋನಿನಲ್ಲಿ ಈ ಸಂದರ್ಭ ಬದಲಾವಣೆಗಳಾಗುವುದರಿಂದ, ಮೆನೋಪಾಸ್‌ ಅಥವಾ ಋತುಬಂಧದ ಆರಂಭವಾಗುವ ಸನಿಹಕ್ಕೆ ಬರುವುದರಿಂದ ದೇಹದ ಶಕ್ತಿ ಕುಗ್ಗುತ್ತದೆ. ಹಾಗಾಗಿ ಮಹಿಳೆ ತನ್ನ ಆರೋಗ್ಯದತ್ತ ಈ ಸಂದರ್ಭ ಗಮನ ಹರಿಸುವುದು ಒಳಿತು. ಬನ್ನಿ, ಪ್ರತಿ 40 ದಾಟಿದ ಮಹಿಳೆ ತನ್ನ ಆರೋಗ್ಯದ ಯಾವ ವಿಚಾರಗಳಲ್ಲಿ ಹೆಚ್ಚು ಎಚ್ಚರಿಕೆ ವಹಿಸಿಕೊಳ್ಳಬೇಕು ಎಂಬುದನ್ನು ನೋಡೋಣ.

ಕಿಡ್ನಿಯಲ್ಲಿ ಕಲ್ಲು

ಮೂತ್ರನಾಳ ಅಥವಾ ಕೋಶದಲ್ಲಿ ಖನಿಜಲವಣಗಳು ಕಲ್ಲಿನ ರೂಪದಲ್ಲಿ ಸಂಗ್ರಹವಾಗುವ ಸಮಸ್ಯೆ. ಇದು ಅತ್ಯಂತ ನೋವನ್ನು ನೀಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಸಾಮಾನ್ಯವಾಗಿ ಕಿಡ್ನಿಯಲ್ಲಿ ಕಲ್ಲು ಅಥವಾ ಸ್ಟೋನ್‌ ಪುರುಷರಲ್ಲಿ ಹೆಚ್ಚೆಂದು ಹೇಳಿದರೂ, ಮಹಿಳೆಯರಲ್ಲೂ ಇದು ಕಾಣಿಸಿಕೊಳ್ಳುತ್ತದೆ. ಸೊಂಟದ ಸಮೀಪ ತೀವ್ರ ನೋವು, ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು, ಮೂತ್ರದಲ್ಲಿ ರಕ್ತ, ವಾಂತಿ, ಕೆಟ್ಟ ವಾಸನೆಯ ಮೂತ್ರ ಇತ್ಯಾದಿ ಕಿಡ್ನಿಸ್ಟೋನ್‌ನ ಸಾಮಾನ್ಯ ಲಕ್ಷಣಗಳು. ಹೆಚ್ಚು ನೀರು ಕುಡಿಯುವುದು ಇಲ್ಲಿ ಬಹಳ ಮುಖ್ಯ.

ಸಂಧಿವಾತ

ಮಹಿಳೆಯರಲ್ಲಿ ನಲುವತ್ತು ದಾಟಿದ ಮೇಲೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಗಳಲ್ಲಿ ಇದೂ ಒಂದು. ಮೂಳೆಯ ಸಾಂದ್ರತೆ ಕುಸಿಯುವುದರಿಂದ ಆಗುವ ನಿಃಶಕ್ತಿ, ಮೂಳೆಗಳಲ್ಲಿ ನೋವು, ಗಂಟುಗಳ ಬಿಗಿತ, ಸಂದಿಗಳಲ್ಲಿ ನೋವು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ.

ಮಧುಮೇಹ

ಮಹಿಳೆಗೆ ನಲುವತ್ತು ದಾಟಿದ ಕೂಡಲೇ ಮಧುಮೇಹದ ಅಪಾಯವೂ ಇರುತ್ತದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರಿಕೆ, ಇದರೆಂದಾಗಿ ತಲೆಸುತ್ತು, ಕೈಕಾಲು ನಡುಕ, ನಿಃಶಕ್ತಿ, ಕಣ್ಣು ಮಂಜಾಗುವುದು, ತೂಕ ಇಳಿಕೆ, ಒಸಡುಗಳು ಮೆದುವಾಗುವುದು ಇತ್ಯಾದಿ ಸಮಸ್ಯೆಗಳು ಆರಂಭವಾಗುತ್ತದೆ.

ಮೂಳೆ ಸವೆತ

40ರ ನಂತರ ಮೂಳೆಗಳ ಸಮಸ್ಯೆ ಮಹಿಳೆಯರಲ್ಲಿ ಸಾಮಾನ್ಯವಾಗುತ್ತದೆ. ಮೂಳೆಯ ಸಾಂದ್ರತೆ ಕಡಿಮೆಯಾಗುವುದಲ್ಲದೆ, ಸವೆತವೂ ಕೆಲವರಲ್ಲಿ ಆರಂಭವಾಗುತ್ತದೆ. ಸಂದಿಗಳಲ್ಲಿ ವಿಪರೀತ ನೋವು ಹಾಗೂ ಸೆಳೆತ, ಸೊಂಟ ನೋವು, ಬೆನ್ನು ನೋವು, ಕಾಲು ನೋವುಗಳು ಹೆಚ್ಚಾಗುತ್ತವೆ. ಮೂಳೆ ಮುರಿತದಂತಹ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ 40 ದಾಟಿದ ಮಹಿಳೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಸ್ವೀಕರಿಸಿ, ಕ್ಯಾಲ್ಶಿಯಂ ಹಾಗೂ ವಿಟಮಿನ್‌ ಡಿ ಸಪ್ಲಿಮೆಂಟ್‌ ಸೇವಿಸಬೇಕು.

ಮೂತ್ರ ಸಮಸ್ಯೆ

ವಯಸ್ಸಾಗುತ್ತಾ ಆಗುತ್ತಾ, ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕೆಲವು ಮಹಿಳೆಯರಲ್ಲಿ ಕಡಿಮೆಯಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಆ ಭಾಗದ ಮಾಂಸಖಂಡಗಳ ಶಕ್ತಿಗುಂದುವುದೂ ಇದಕ್ಕೆ ಕಾರಣ. ಇಂಥ ಸಂದರ್ಭ ಹೆಚ್ಚು ಹೊತ್ತು ಮೂತ್ರ ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಿರುವಂಥ ಸಮಸ್ಯೆಗಳೂ ಬರಬಹುದು. ಸಣ್ಣ ಕೆಮ್ಮು, ಸೀನು ಇತ್ಯಾದಿಗಳಿಗೆ ಮೂತ್ರ ಚಿಮ್ಮುವುದು ಇತ್ಯಾದಿಗಳಿಗೂ ಇದೇ ಕಾರಣ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಸಾಮಾನ್ಯ ತೊಂದರೆಯಾದರೂ, ಇದು ಅತ್ಯಂತ ಅಪಾಯಕಾರಿ ಕೂಡಾ. ಈ ಸಮಸ್ಯೆ ಹೃದಯದ ತೊಂದರೆ, ಕಿಡ್ನಿ ತೊಂದರೆ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳಿಗೂ ದಾರಿ ಮಾಡಿಕೊಡುತ್ತದೆ.

ಬೊಜ್ಜು

40 ದಾಟುವ ಮಹಿಳೆಯ ಪ್ರಮುಖ ಸಮಸ್ಯೆ ಎಂದರೆ ಬೊಜ್ಜು. ಬದಲಾದ ಜೀವನಕ್ರಮ, ಮೆನೋಪಾಸ್‌ನಿಂದಾಗಿ ಹಾರ್ಮೋನಿನ ಏರುಪೇರು, ಅನಾರೋಗ್ಯಕರ ಆಹಾರಕ್ರಮ ಇವೆಲ್ಲವೂ ಇಂದಿನ ಮಹಿಳೆಯರ ಬಹುದೊಡ್ಡ ಸಮಸ್ಯೆಯಾದ ಬೊಜ್ಜಿಗೆ ಕಾರಣ. ಉತ್ತಮ ಆಹಾರ ಸೇವನೆ, ವೈದ್ಯರನ್ನು ಸಂಪರ್ಕಿಸಿ ಹಾರ್ಮೋನಿನ ವೈಪರೀತ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು, ನಿಯಮಿತ ವ್ಯಾಯಾಮ, ಕ್ರಿಯಾಶೀಲರಾಗಿರುವುದು ಇತ್ಯಾದಿಗಳಿಂದ ಈ ಸಮಸ್ಯೆಯಿಂದ ಹೊರಬರಬಹುದು. ತಮ್ಮನ್ನು ತಾವು ಫಿಟ್‌ ಆಗಿಟ್ಟು ಕೊಳ್ಳಬಹುದು.

Exit mobile version