ಮೂವತ್ತು ವರ್ಷ ದಾಟಿದ ಮಹಿಳೆಯರು (dry fruit for woman) ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು. ಮೂವತ್ತು ಎಂಬ ವಯಸ್ಸು ಮಹಿಳೆಯರ ಬದುಕಿನ ಅತ್ಯಂತ ಮುಖ್ಯ ಘಟ್ಟ. ಮಹಿಳೆಯರು ಇದೇ ವಯಸ್ಸಿನ ಆಸುಪಾಸಿನಲ್ಲೇ, ಸಂತಾನೋತ್ಪತ್ತಿ ಸೇರಿದಂತೆ, ದೇಹ ಹಲವಾರು ಹಾರ್ಮೋನಿನ ಬದಲಾವಣೆಗೂ ಒಡ್ಡಿಕೊಳ್ಳುವುದರಿಂದ ಮಹಿಳೆಯರು ತಮ್ಮ ದೇಹದ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸಬೇಕು. ಮುಖ್ಯವಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಸೇರಿದಂತೆ ವ್ಯಾಯಾಮ, ಯೋಗ, ನಡಿಗೆ ಇತ್ಯಾದಿಗಳಿಗೆ ತಮಗೆ ತಾವು ಸಮಯ ನೀಡಬೇಕು. ಆದರೆ, ಬಹುತೇಕ ಮಹಿಳೆಯರು ಮೂವತ್ತು ದಾಟಿ ನಲುವತ್ತಾಗುವಷ್ಟರಲ್ಲಿ, ಕುಟುಂಬದ ಜವಾಬ್ದಾರಿ, ಮಕ್ಕಳು, ತಮ್ಮ ಉದ್ಯೋಗ, ಹೀಗೆ ಎಲ್ಲವನ್ನೂ ಸಂಭಾಳಿಸಿಕೊಳ್ಳುವಷ್ಟರಲ್ಲಿ, ತಮ್ಮ ಆರೋಗ್ಯವನ್ನೇ ಕಡೆಗಣಿಸುತ್ತಾರೆ. ಅದಕ್ಕಾಗಿಯೇ ಮಹಿಳೆಯರು ತಮ್ಮ ಆರೋಗ್ಯಕ್ಕಾಗಿ ಪೋಷಕಾಂಶಯುಕ್ತ ಆಹಾರ ಸೇವನೆಯನ್ನು ಎಂದಿಗೂ ನಿರ್ಲಕ್ಷಿಸಬಾರದು. ಮುಖ್ಯವಾಗಿ 30 ವರ್ಷ ದಾಟಿದ ಮಹಿಳೆಯರು ಬೀಜಗಳು ಹಾಗೂ ಒಣಹಣ್ಣುಗಳ ಸೇವನೆಯನ್ನು ನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಬೇಕು. ಬನ್ನಿ, ಯಾವೆಲ್ಲ ಬೀಜಗಳು ಹಾಗೂ ಒಣಹಣ್ಣುಗಳನ್ನು ಮೂವತ್ತು ದಾಟಿದ ಮಹಿಳೆಯರು ಸೇವಿಸಬೇಕು ಹಾಗೂ ಯಾಕಾಗಿ ಎಂಬುದನ್ನು ನೋಡೋಣ.
ಮೆಗ್ನೀಷಿಯಂ ಹಾಗೂ ಕ್ಯಾಲ್ಶಿಯಂ ಅಧಿಕವಾಗಿರುವ ಒಣಹಣ್ಣುಗಳು ಹಾಗೂ ಬೀಜಗಳ ಸೇವನೆ ಮಹಿಳೆಯರಿಗೆ ಅತ್ಯಂತ ಅಗತ್ಯ. ಬಾದಾಮಿ, ಪಿಸ್ತಾಗಳಲ್ಲಿ ಈ ಪೋಷಕಾಂಶಗಳಿವೆ. ಇದರಿಂದ ಮೂಳೆಗಳು ಗಟ್ಟಿಯಾಗಿ ಮಹಿಳೆಯರಲ್ಲಿ 40ರ ನಂತರ ಕಾಡುವ ಮೂಳೆ ಸವಕಳಿ, ಶಕ್ತಿಹೀನತೆಯಂತಹ ಸಮಸ್ಯೆಗಳು ಬರದಂತೆ ಮುಂಚಿತವಾಗಿ ಜಾಗ್ರತೆ ವಹಿಸಬಹುದು. ಒಣಹಣ್ಣುಗಳಲ್ಲಿರುವ ಝಿಂಕ್ ಹಾಗೂ ಫೋಲೇಟ್‌ಗಳ ಸೇವನೆಯಿಂದ ಸಂತಾನೋತ್ಪಾದನೆಯ ಸಂಬಂಧೀ ಸಮಸ್ಯೆಗಳು ದೂರವಾಗಿ, ಆರೋಗ್ಯ ವೃದ್ಧಿಯಾಗುತ್ತದೆ.
ಗೋಡಂಬಿಯಲ್ಲಿ ಅತ್ಯಂತ ಹೆಚ್ಚು ಕಬ್ಬಿಣಾಂಶವಿದ್ದು ಇದು ಮಹಿಳೆಯರಿಗೆ ಅತ್ಯಂತ ಅವಶ್ಯಕ ಪೋಷಕಾಂಶಗಳಲ್ಲಿ ಇದೂ ಒಂದು. ಹಾಗಾಗಿ ಕಬ್ಬಿಣಾಂಶ ಅಧಿಕವಿರುವ ಆಹಾರ ಸೇವನೆ ಬಹಳ ಅಗತ್ಯ.
ನಿತ್ಯವೂ ಬಾದಾಮಿ ಸೇವನೆ ಮಹಿಳೆಯರಿಗೆ ಅತ್ಯಂತ ಒಳ್ಳೆಯದು. ದಿನವೂ ಮೂರ್ನಾಲ್ಕು ನೆನೆಸಿಟ್ಟ ಬಾದಾಮಿ ತಿನ್ನುವ ಮೂಲಕ ಆರೋಗ್ಯವೃದ್ಧಿಯ ಕಡೆ ಗಮನ ಹರಿಸಬೇಕು. ಪ್ರೊಟೀನ್, ಮೆಗ್ನೀಷಿಯಂ, ವಿಟಮಿನ್ ಇ, ನಾರಿನಂಶ ಹಾಗೂ ಅತ್ಯುತ್ತಮ ಕೊಬ್ಬು ಇದರಲ್ಲಿದ್ದು, ಇವೆಲ್ಲ ಪೋಷಕಾಂಶಗಳೂ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅವಶ್ಯಕ.
ಪಿಸ್ತಾದಲ್ಲೂ ಕೂಡಾ ಸಾಕಷ್ಟು ಉತ್ತಮ ಕೊಬ್ಬು ಹಾಗೂ ಇತರ ಪೋಷಕಾಂಶಗಳು ಹೇರಳವಾಗಿ ಇರುವುದರಿಂದ ಇದೂ ಕೂಡಾ ಮಹಿಳೆಯರಿಗೆ ಒಳ್ಳೆಯದು. ಆದರೆ, ಹಿತಮಿತವಾಗಿ ತಿನ್ನುವುದು ಒಳ್ಳೆಯದು.
ಕಪ್ಪು ಒಣದ್ರಾಕ್ಷಿ ಮಹಿಳೆಯರ ಆರೋಗ್ಯದ ದೃಷ್ಠಿಯಿಂದ ಅತ್ಯಂತ ಅವಶ್ಕಕ. ಇದು ಮಹಿಳೆಯರ ಆರೋಗ್ಯ ಸಮಸ್ಯೆಗಳಾದ ಋತುಚಕ್ರದಲ್ಲಿ ಏರುಪೇರು, ಅತಿಯಾದ ಋತುಸ್ರಾವ, ಪಿಸಿಒಡಿ ಹಾಗೂ ಋತುಚಕ್ರದ ಸಂಬಂಧೀ ಸಮಸ್ಯೆಗಳಿಗೆ ಬಹಳ ಒಳ್ಳೆಯದು. ನಿತ್ಯವೂ ಐದಾರು ದ್ರಾಕ್ಷಿಗಳನ್ನು ನೆನೆಸಿ ತಿನ್ನುವುದರಿಂದ ಮಹಿಳೆಯರಲ್ಲಿ ಕಾಡುವ ಅತೀವ ಸುಸ್ತು, ನಿತ್ರಾಣ, ಶಕ್ತಿಹೀನತೆ ಇತ್ಯಾದಿ ಸಮಸ್ಯೆಗಳೂ ಕ್ರಮೇಣ ದೂರವಾಗುವುದು.
ಖರ್ಜೂರದಲ್ಲಿ ಸಾಕಷ್ಟು ಕಬ್ಬಿಣಾಂಶ, ಪೊಟಾಶಿಯಂ, ನಾರಿನಂಶ, ಹಾಗೂ ಪ್ರೊಟೀನ್ ಇರುವುದರಿಂದ ಮಹಿಳೆಯರ ಆರೋಗ್ಯ ವೃದ್ಧಿಯಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ. ಸುಸ್ತು, ಶಕ್ತಿಹೀನತೆ ಇತ್ಯಾದಿ ಸಮಸ್ಯೆಗಳಿಗೂ ಇದು ಒಳ್ಳೆಯದು. ಇದು ಮೂಳೆಗಳನ್ನು ಬಲಪಡಿಸುವ ಜೊತೆಗೆ, ನೈಸರ್ಗಿಕ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ.
ಇದನ್ನೂ ಓದಿ: Bone Health: 40ರ ನಂತರ ಮೂಳೆಗಳನ್ನು ಕಾಪಾಡಿಕೊಳ್ಳುವುದು ಹೇಗೆ?