Site icon Vistara News

World Bicycle Day : ಸೈಕಲ್‌ ಹೊಡೆಯಿರಿ, ಆರೋಗ್ಯ ಹೆಚ್ಚಿಸಿಕೊಳ್ಳಿ

World Bicycle Day

ಎಪ್ಪತ್ತರ ದಶಕದ ಸಿನೆಮಾಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಸುಂದರ ನಾಯಕಿ ಮತ್ತವಳ ಚೆಂದುಳ್ಳಿ ಗೆಳತಿಯರು ಸೈಕಲ್‌ ಮೇಲೆ ಹಾಡುತ್ತಾ, ಸ್ವಚ್ಛ ರಸ್ತೆಗಳಲ್ಲಿ ಅಡ್ಡಾಡುವ ದೃಶ್ಯಗಳು ಎಷ್ಟೊಂದು ಕಾಣುತ್ತಿರಲಿಲ್ಲವೇ? ಆ ನಾಯಕಿಯರು ಸೈಕಲ್‌ ಓಡಿಸಿಯೇ ಅಷ್ಟು ಸುಂದರವಾಗಿ, ಸುದೃಢವಾಗಿ ಇರುತ್ತಿದ್ದರೇನೋ ಎಂದು ಈಗನ್ನಿಸಿದರೆ ತಪ್ಪೇನಿಲ್ಲವಲ್ಲ! ಅಂದಹಾಗೆ, ಇಂದು ವಿಶ್ವ ಬೈಸಿಕಲ್‌ ದಿನ (World Bicycle Day). ಸೈಕಲ್‌ ಹೊಡೆಯುವುದರಿಂದ ಆರೋಗ್ಯಕ್ಕೆ ಆಗುವಂಥ ಲಾಭಗಳನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಇಂದಿನ ದಿನದ ಆಚರಣೆಯನ್ನು ಜಾರಿಗೆ ತರಲಾಗಿದೆ.

ಆರೋಗ್ಯವೃದ್ಧಿಗಾಗಿ ಅಥವಾ ಇರುವ ಆರೋಗ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ ಪ್ರತಿದಿನವೂ ಒಂದಿಲ್ಲೊಂದು ದೈಹಿಕ ವ್ಯಾಯಾಮ ಅಗತ್ಯವಾಗಿ ಬೇಕು ಎಂಬುದನ್ನು ನಾವೆಲ್ಲರೂ ತಿಳಿದವರೇ. ಆದರೆ ಎಷ್ಟು ಜಾರಿಗೆ ತರುತ್ತೇವೆ ಇದನ್ನು ಎಂಬುದು ಮಾತ್ರ ಮಿಲಿಯನ್‌ ಡಾಲರ್‌ ಪ್ರಶ್ನೆ. ಅದರಲ್ಲೂ ದಿನಕ್ಕೊಂದೊಂದು ಹೊಸ ವ್ಯಾಯಾಮ ಮಾಡುವುದಕ್ಕಿದ್ದರೆ, ʻಅಯ್ಯೋ! ಬೆವರಿಳಿಸಬೇಕೆ?ʼ ಎಂಬ ಗೋಳಿಗೆ ಮುಕ್ತಿ ಸಿಕ್ಕಬಹುದಲ್ಲವೇ? ಇದೇ ನಿಟ್ಟಿನಲ್ಲಿ ಖಂಡಿತವಾಗಿಯೂ ಸೈಕಲ್‌ ಹೊಡೆಯುವ ಅಭ್ಯಾಸ (World Bicycle Day) ಇರಿಸಿಕೊಳ್ಳಬಹುದು

ಫಿಟ್‌ನೆಸ್‌ ತಜ್ಞರ ಪ್ರಕಾರ, ಸೈಕಲ್‌ ಹೊಡೆಯುವುದು ಮಧ್ಯಮ ಪ್ರಮಾಣದ ಅಥವಾ ಅದಕ್ಕೂ ಕಡಿಮೆ ಪ್ರಮಾಣದ ವ್ಯಾಯಾಮ. ಹೃದಯದ ಆರೋಗ್ಯವನ್ನು ಗಟ್ಟಿಗೊಳಿಸುವಂಥ ಲಘು ಕಾರ್ಡಿಯೊ ಸಹ ಹೌದು. ದೇಹದ ಕೆಳಭಾಗಕ್ಕೆ ಹೆಚ್ಚಿನ ವ್ಯಾಯಾಮ ನೀಡುವ ಈ ಕ್ರಿಯೆಯನ್ನು ಸುಮ್ಮನೆ ಖುಷಿಗಾಗಿಯೂ ಮಾಡಬಹುದು. ಮನೆಯಲ್ಲಿ ಮಕ್ಕಳಿದ್ದರೆ ಅವರೊಂದಿಗೆ ಸೈಕಲ್‌ ಹೊಡೆಯುವುದು, ಸ್ನೇಹಿತರು ಸುಮ್ಮನೇ ಗೊತ್ತುಗುರಿಯಿಲ್ಲದೆ ಸೈಕಲ್‌ನಲ್ಲಿ ಅಡ್ಡಾಡುವುದು, ಕಿವಿಗೊಂದು ಇಯರ್‌ಪ್ಲಗ್‌ ಸಿಕ್ಕಿಸಿ ಬೇಕಾದ್ದನ್ನು ಕೇಳುತ್ತಲೇ ಸೈಕಲ್‌ನಲ್ಲಿ ಸುತ್ತಾಡುವುದು- ಹೀಗೆ ಸೈಕಲ್‌ ಹೊಡೆಯುವುದಕ್ಕೆ ಎಷ್ಟೊಂದು ಆಯಾಮಗಳು ಉಂಟಲ್ಲವೇ? ಆರೋಗ್ಯವಂತರಾಗಿರುವ ಗರ್ಭಿಣಿಯರಿಗೂ ಜಿಮ್‌ನಲ್ಲಿ ಸೈಕಲ್‌ ಹೊಡೆಯುವುದಕ್ಕೆ ವೈದ್ಯರು ಅನುಮತಿ ನೀಡುವುದುಂಟು. ಹಾಗಾದರೆ ಇನ್ನೂ ಏನೇನಿವೆ ಸೈಕಲ್‌ ಹೊಡೆಯುವ ಲಾಭಗಳು ಎಂಬುದನ್ನು ತಿಳಿಯಬಹುದಲ್ಲಾ?

ಮಾಂಸಖಂಡಗಳ ಬಲವೃದ್ಧಿ

ಕಾಲಿನ ಮಾಂಸಖಂಡಗಳು, ಅಂದರೆ ಕ್ವಾಡ್‌, ಕಾಫ್‌, ಶಿನ್‌ ಮತ್ತು ಹ್ಯಾಮ್‌ಸ್ಟ್ರಿಂಗ್‌ ಭಾಗಗಳಲ್ಲಿರುವ ಮಾಂಸಖಂಡಗಳು ಸುದೃಢಗೊಳ್ಳುತ್ತವೆ. ಕಟಿಯಿಂದ ಕೆಳಗಿನ ದೇಹಭಾಗ ಸದಾ ಕಾಲ ಸಕ್ರಿಯವಾಗಿ ಇರುವುದರಿಂದ ದೇಹದ ಉತ್ತರಾರ್ಧದ ಮಾಂಸಖಂಡಗಳ ಬಲವರ್ಧನೆಗೆ ಒಳ್ಳೆಯ ವ್ಯಾಯಾಮವಿದು.

ತ್ರಾಣ ಹೆಚ್ಚಳ

ಇದನ್ನು ಲಘು ಕಾರ್ಡಿಯೊ ಪ್ರಕಾರದ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಅಂದರೆ ಸೈಕಲ್‌ ಹೊಡೆಯುವಷ್ಟೂ ಹೊತ್ತು ನಮ್ಮ ಹೃದಯ ಹೆಚ್ಚಿನ ಪ್ರಮಾಣದ ರಕ್ತವನ್ನು ಪಂಪ್‌ ಮಾಡುತ್ತಿರುತ್ತದೆ. ಇದರಿಂದ ದೇಹದ ಒಟ್ಟಾರೆ ಶಕ್ತಿ ಮತ್ತು ತ್ರಾಣ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ

ಮಾನಸಿಕ ಲವಲವಿಕೆ

ಎಂಥಾ ಟ್ರಾಫಿಕ್‌ ಜಾಮ್‌ನಲ್ಲೂ ಸಿಳ್ಳೆ ಹೊಡೆಯುತ್ತಾ ಮುಂದೆ ಸಾಗುವ ಸೈಕಲ್‌ ಸವಾರರನ್ನು ಕಾಣುವ ಉಳಿದವರಿಗೆ ಒಂದೆಳೆ ಹೊಟ್ಟೆಕಿಚ್ಚಾದರೆ ಅಚ್ಚರಿಯೇನಿಲ್ಲ. ಲೋಕದ ಚಿಂತೆಯನ್ನೇ ಬಿಟ್ಟು ನಮ್ಮಷ್ಟಕ್ಕೆ ನಾವು ಸೈಕಲ್‌ ಹೊಡೆಯುವ ಈ ಕ್ರಿಯೆ ಮನಸ್ಸಿನ ಲವಲವಿಕೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಟ್ರಾಫಿಕ್‌ ಕಿರಿಕಿರಿಯಿಲ್ಲದ ಸುಂದರ ದಾರಿಗಳಲ್ಲಿ ಸೈಕಲ್‌ ಹೊಡೆಯುವ ಅಭ್ಯಾಸವಿದ್ದರೆ ಖಿನ್ನತೆ, ಆತಂಕ, ಒತ್ತಡಗಳನ್ನು ದೂರ ಮಾಡಲು ಸಾಧ್ಯವಿದೆ.

ತೂಕ ಇಳಿಕೆಗೆ ಅನುಕೂಲ

ಒಂದು ತಾಸು ಮಧ್ಯಮ ವೇಗದಲ್ಲಿ ಸೈಕಲ್‌ ಹೊಡೆಯುವುದರಿಂದ ಅಂದಾಜು 300 ಕ್ಯಾಲರಿ ಕರಗಿಸಬಹುದಂತೆ. ಹಾಗಾಗಿ ತೂಕ ಇಳಿಸುವವರಿಗೆ ಇದೊಂದು ಖುಷಿ ಕೊಡುವ ವ್ಯಾಯಾಮ. ಮಾತ್ರವಲ್ಲ, ಇದರಿಂದ ದೇಹದ ಹಲವಾರು ಕೀಲುಗಳು ಗಟ್ಟಿಯಾಗಿ ಆರ್ಥರೈಟಿಸ್‌ನಂಥ ಸಮಸ್ಯೆಗಳನ್ನು ದೂರ ಇರಿಸಬಹುದು. ಮಧುಮೇಹಿಗಳಿಗೂ ಇದು ಒಳ್ಳೆಯ ವ್ಯಾಯಾಮ.

ಸಾಮಾಜಿಕ ನಂಟುಗಳು

ಬೈಕರ್‌ಗಳದ್ದೇ ಒಂದು ಪ್ರತ್ಯೇಕ ಲೋಕವಿದೆ. ದುಶ್ಚಟಗಳಿಂದ ದೂರವಾಗಿ, ಸಾಹಸ ಮತ್ತು ಕ್ರೀಡೆಯನ್ನೇ ಉಸಿರಾಗಿಸಿಕೊಂಡವರು ಇಲ್ಲಿ ಗೆಳೆಯರಾಗಿ ದೊರೆಯುತ್ತಾರೆ. ಇದರಿಂದ ನಮ್ಮ ಆರೋಗ್ಯದ ಬಗೆಗಿನ ಕಾಳಜಿಯೂ ಹೆಚ್ಚಲು ಸಾಧ್ಯವಿದೆ.

ಇದನ್ನೂ ಓದಿ: Bone Health: 40ರ ನಂತರ ಮೂಳೆಗಳನ್ನು ಕಾಪಾಡಿಕೊಳ್ಳುವುದು ಹೇಗೆ?

Exit mobile version