ಇಂದು ವಿಶ್ವ ಮೆದುಳು ದಿನ (World Brain Day). ಮಡಿಕೆಗಳಲ್ಲಿ ಹುದುಗಿ ಕುಳಿತ ಮೆದುಳೆಂಬ ಅಂಗದ ಕಾಳಜಿ ಮಾಡುವುದನ್ನು ಮರೆಯಬಾರದು ನಾವು. ಮೆದುಳಿನ ಕಾಳಜಿ ಮಾಡುವುದೆಂದರೆ ಹೇಗೆ? ತ್ವಚೆ, ಕೂದಲು ಮುಂತಾದವುಗಳ ಕಾಳಜಿಯಾದರೆ ನಮಗೆ ಸುಲಭ. ಆದರೆ ಮೆದುಳಿಗೆ ಹಾಗಲ್ಲವಲ್ಲ. ಜೀವನಶೈಲಿ ಮತ್ತು ಆಹಾರದ ಮೂಲಕವೇ ನಮ್ಮ ಮಸ್ತಿಷ್ಕದ ದೇಖರೇಖಿ ಮಾಡಬೇಕು. ಒತ್ತಡ ಮುಕ್ತವಾದ ಜೀವನ ಈ ನಿಟ್ಟಿನಲ್ಲಿ ಮಹತ್ವದ್ದು. ಅಷ್ಟೇ ಪ್ರಮುಖವಾದ ಇನ್ನೊಂದು ವಿಷಯವೆಂದರೆ ನಮ್ಮ ಆಹಾರ. ಮೆದುಳಿನ ಯೋಗಕ್ಷೇಮದ ರಕ್ಷಣೆ ಮಾಡುವಂಥ ಒಂದಿಷ್ಟು ಆಹಾರಗಳು ʻಬ್ರೈನ್ ಫುಡ್ಸ್ʼ ಎಂದೇ ಕರೆಸಿಕೊಳ್ಳುತ್ತವೆ. ಮೆದುಳಿನ ಕ್ಷಮತೆಯನ್ನು ಹೆಚ್ಚಿಸಿ, ಬದುಕಿನ ಗುಣಮಟ್ಟವನ್ನು ವೃದ್ಧಿಸುವಂಥ ಕೆಲವು ಪೇಯಗಳ ವಿವರಗಳು ಇಲ್ಲಿವೆ. ಆದರೆ ಮಾರುಕಟ್ಟೆಯಲ್ಲಿ ದೊರೆಯುವ ಸಕ್ಕರೆ ಭರಿತ ಜ್ಯೂಸ್‌ಗಳ ಬದಲು, ಈ ಹಣ್ಣು-ತರಕಾರಿಗಳಿಂದ ನೀವೇ ಮಾಡಿಕೊಂಡರೆ, ದೇಹದ ಆರೋಗ್ಯಕ್ಕೂ ಒಳ್ಳೆಯದು.
ಮೆದುಳಿಗೆ ಗ್ರಾಸ…?
ಮೆದುಳಿಗೆಂದೇ ಪ್ರತ್ಯೇಕ ಆಹಾರಗಳಿಗೆ ಎಂದು ಹೇಳುತ್ತಿಲ್ಲ. ಆದರೆ ಕೆಲವು ಆಹಾರಗಳು ಮೆದುಳಿಗೆ ಹೆಚ್ಚಿನ ಗ್ರಾಸವನ್ನು ಒದಗಿಸುತ್ತವೆ. ಉದಾ, ಯಾವುದೇ ರೀತಿಯ ಕೊಬ್ಬಿನ ಮೀನುಗಳು ಮೆದುಳಿಗೆ ಅತಿ ಹೆಚ್ಚಿನ ಪೋಷಣೆಯನ್ನು ಒದಗಿಸುತ್ತವೆ. ಬ್ಲೂಬೆರಿಯಂಥ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ನೆನಪಿನ ಶಕ್ತಿ ವೃದ್ಧಿಸಲು ಸಹಕಾರಿ. ಅರಿಶಿನದಲ್ಲಿರುವ ಕರ್ಕುಮಿನ್ ಅಂಶವು ಮೆದುಳಿನ ಕೋಶಗಳ ಸಂರಕ್ಷಣೆಯಲ್ಲಿ ನೆರವಾಗುತ್ತದೆ. ಕುಂಬಳಕಾಯಿ ಬೀಜದಲ್ಲಿರುವ ಮೆಗ್ನೀಶಿಯಂ, ಜಿಂಕ್ ಮುಂತಾದ ಅಗತ್ಯ ಖನಿಜಗಳು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ. ಫ್ಲೆವನಾಯ್ಡ್ ಇರುವ ಡಾರ್ಕ್ ಚಾಕಲೇಟ್ ಸೇವನೆಯಿಂದ ಮೆದುಳನ್ನು ಚುರುಕಾಗಿಡುತ್ತದೆ. ಈ ನಿಟ್ಟಿನಲ್ಲಿ ಕೆಲವು ರುಚಿಕರ ಪೇಯಗಳನ್ನು ಸವಿಯುವ ಮೂಲಕ ಮೆದುಳನ್ನು ಆರೋಗ್ಯಪೂರ್ಣವಾಗಿ ಮತ್ತು ಚುರುಕಾಗಿ ಇರಿಸಿಕೊಳ್ಳಬಹುದು.
ಬ್ಲೂಬೆರಿ ರಸ
ಆಂಥೋಸಯನಿನ್‌ಗಳೆಂಬ ಫ್ಲೆವನಾಯ್ಡ್‌ಗಳು ಬ್ಲೂಬೆರಿ ಹಣ್ಣುಗಳಲ್ಲಿ ಭರಪೂರ ಇವೆ. ಹಾಗಾಗಿ ನಿಯಮಿತವಾಗಿ ಬ್ಲೂಬೆರಿ ರಸ ಕುಡಿಯುವುದರಿಂದ ಮೆದುಳಿನ ಕ್ಷಮತೆಯನ್ನು, ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳಬಹುದು.
ದಾಳಿಂಬೆ ರಸ
ದಾಳಿಂಬೆಯಲ್ಲಿರುವ ಪಾಲಿಫೆನಾಲ್‌ಗಳು ಮೆದುಳಿನ ಶಕ್ತಿಯನ್ನು ಹೆಚ್ಚಿಸುತ್ತವೆ. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದು ಹೆಚ್ಚಿನ ಕಲಿಕೆಗೆ ನೆರವಾಗುತ್ತದೆ.
ಬೀಟ್ರೂಟ್ ರಸ
ಈ ಗಡ್ಡೆಯಲ್ಲಿರುವ ನೈಟ್ರೇಟ್ ಅಂಶಕ್ಕೆ ಹಲವು ಸಾಧ್ಯತೆಗಳಿವೆ. ರಕ್ತ ನಾಳಗಳನ್ನು ಹಿಗ್ಗಿಸಿ, ಮೆದುಳಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಹರಿಯುವಂತೆ ಮಾಡುತ್ತದೆ. ಈ ಮೂಲಕ ಮಸ್ತಿಷ್ಕದ ಕಾರ್ಯಭಾರವನ್ನು ವೃದ್ಧಿಸುತ್ತದೆ.
ಪಾಲಕ್
ಇದಲ್ಲಿರುವ ಲೂಟಿನ್ ಎಂಬ ಉತ್ಕರ್ಷಣ ನಿರೋಧಕವು ಮೆದುಳಿಗೆ ವಯಸ್ಸಾಗುವುದನ್ನು ನಿಧಾನ ಮಾಡುತ್ತದೆ. ಅಂದರೆ ದೇಹಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಿ ಶುದ್ಧೀಕರಿಸುವ ಮೂಲಕ ಈ ಕೆಲಸ ಮಾಡುತ್ತದೆ.
ಕಿತ್ತಳೆ ರಸ
ಇದರಲ್ಲಿ ತುಂಬಿಕೊಂಡಿರುವ ವಿಟಮಿನ್ ಸಿ ಅಂಶವು, ಸ್ಪಷ್ಟ ಆಲೋಚನೆಗಳನ್ನು ಮಾಡುವಲ್ಲಿ ಸಹಕಾರಿ. ಮೆದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ವಿಟಮಿನ್ ಸಿ ನೆರವಾಗುತ್ತದೆ.
ಕ್ಯಾರೆಟ್ ರಸ
ಲುಟೋಲಿನ್ ಎಂಬ ಉತ್ಕರ್ಷಣ ನಿರೋಧಕವನ್ನು ಗಜ್ಜರಿಗಳು ಹೊಂದಿವೆ. ಇವು ಮೆದುಳಿನ ರಕ್ಷಣೆಗೆ ಬೇಕಾದಂಥ ಅಂಶಗಳು. ಇದನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಲಾಭದಾಯಕ.
ದ್ರಾಕ್ಷಿಯ ರಸ
ನೆನಪಿನ ಶಕ್ತಿಯನ್ನು ಹೆಚ್ಚಿಸುವಂಥ ಪಾಲಿಫೆನಾಲ್‌ಗಳನ್ನು ದ್ರಾಕ್ಷಿ ಹೊಂದಿದೆ. ಹಾಗಾಗಿ ದ್ರಾಕ್ಷಿಯನ್ನು ಅಥವಾ ಅದರ ರಸವನ್ನು ಸೇವಿಸುವುದರಿಂದ ಮೆದುಳನ್ನು ಚುರುಕಾಗಿಸಬಹುದು.
ಟೊಮೇಟೊ ರಸ
ಲೈಕೋಪೇನ್ ಎಂಬ ಉತ್ಕರ್ಷಣ ನಿರೋಧಕ ತುಂಬಿರುವ ಟೊಮೇಟೊ ರಸವನ್ನು ಸೇವಿಸುವುದು ಮೆದುಳಿನ ಆರೋಗ್ಯಕ್ಕೆ ಪೂರಕ. ಇದು ಮೆದುಳಿನ ಕೋಶಗಳಿಗೆ ಹಾನಿಯಾಗದಂತೆ ಕಾಪಾಡುತ್ತದೆ.
ಸೇಬು ರಸ
ಬುದ್ಧಿ ಶಕ್ತಿ ಕೈಕೊಡದಂತೆ ಕಾಪಾಡುವಂಥ ಉತ್ಕರ್ಷಣ ನಿರೋಧಕಗಳು ಸೇಬು ಹಣ್ಣಿನಲ್ಲಿವೆ. ದಿನವೂ ನಿಯಮಿತವಾಗಿ ಇದರ ರಸವನ್ನು ಸೇವಿಸುವುದರಿಂದ ಮೆದುಳಿನ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬಹುದು.