Site icon Vistara News

World Cancer Day: ಭಯದಿಂದಲ್ಲ, ಮುನ್ನೆಚ್ಚರಿಕೆಯಿಂದ ಕ್ಯಾನ್ಸರ್‌ ಗೆಲ್ಲಬಹುದು

cancer day

cancer day

ಬೆಂಗಳೂರು: ಬದಲಾದ ಜೀವನ ಶೈಲಿ, ಕಲುಷಿತ ವಾತಾವರಣ, ಅನಾರೋಗ್ಯಕರ ಹವ್ಯಾಸ, ಜಾಗೃತಿಯ ಕೊರತೆ ಹೀಗೆ ನಾನಾ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ ಮಹಾಮಾರಿಯ ಉಪಟಳ ಹೆಚ್ಚಾಗಿದೆ. ಕ್ಯಾನ್ಸರ್‌ ವಿಶ್ವಾದ್ಯಂತ ಮಾರಣಾಂತಿಕ ಕಾಯಿಲೆಯಾಗಿ ಕಾಡುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್‌ ದಿನವನ್ನು (World Cancer Day) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ದಿನದ ಮಹತ್ವ, ಉದ್ದೇಶ ಮುಂತಾದ ವಿವರ ಇಲ್ಲಿದೆ.

ಯಾವಾಗ ಆರಂಭವಾಯಿತು?

ಪ್ರಪಂಚದಾದ್ಯಂತ ಸಂಭವಿಸುವ ಸಾವಿನ ಎರಡನೇ ಪ್ರಮುಖ ಕಾರಣ ಕ್ಯಾನ್ಸರ್‌. ಹೀಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಯಾನ್ಸರ್‌ ದಿನವನ್ನು ಜಾರಿಗೆ ತರಲಾಯಿತು. 2000ನೇ ಇಸವಿಯಲ್ಲಿ ಮೊದಲ ಬಾರಿಗೆ ವಿಶ್ವ ಕ್ಯಾನ್ಯರ್‌ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ವಿಭಿನ್ನ ಧ್ಯೇಯಗಳನ್ನು ಇಟ್ಟುಕೊಂಡು ಇದನ್ನು ಆಚರಿಸಲಾಗುತ್ತದೆ.

ಉದ್ದೇಶವೇನು?

ಪ್ರಪಂಚದಾದ್ಯಂತದ ಕ್ಯಾನ್ಸರ್‌ ರೋಗಿಗಳ ಜೀವನ ಮಟ್ಟವನ್ನು ಸುಧಾರಿಸುವುದು, ಕ್ಯಾನ್ಸರ್‌ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶ. ಆರೈಕೆಯ ಅಂತರವನ್ನು ಮುಚ್ಚಿ (Close The Care Gap) ಎನ್ನುವುದು ಈ ವರ್ಷದ ಥೀಮ್‌.

ಭಯ ಬೇಡ

ಕ್ಯಾನ್ಸರ್‌ ಬಂದರೆ ಸಾವು ಖಚಿತ ಭಾವನೆ ಅನೇಕರಲ್ಲಿದೆ. ಆದರೆ ಇದು ತಪ್ಪು ಕಲ್ಪನೆ. ಈ ರೋಗವನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕ್ಯಾನ್ಸರ್‌ ರೋಗದಿಂದ ಮುಕ್ತರಾಗಿ ಸಹಜ ಜೀವನ ನಡೆಸುವ ಸಾವಿರಾರು ಮಂದಿ ನಮ್ಮ ನಡುವೆಯೇ ಇದ್ದಾರೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಕ್ಯಾನ್ಸರ್ ಎಂದರೇನು?

ಕ್ಯಾನ್ಸರ್ ಎಂದರೆ ಅನಿಯಂತ್ರಿತ ಬೆಳವಣಿಗೆ ಮತ್ತು ಅಸಹಜ ಜೀವಕೋಶಗಳ ಹರಡುವಿಕೆಯಿಂದ ನಿರೂಪಿಸಲ್ಪಟ್ಟ ರೋಗಗಳ ಒಂದು ಗುಂಪು. ಕ್ಯಾನ್ಸರ್ ಕೋಶಗಳು ಅವುಗಳ ವಂಶವಾಹಿಗಳಲ್ಲಿನ ಬಹು ಬದಲಾವಣೆಗಳಿಂದಾಗಿ ಅಭಿವೃದ್ಧಿಗೊಳ್ಳುತ್ತವೆ. ಈ ಜೀವಕೋಶಗಳ ಹರಡುವಿಕೆಯನ್ನು ನಿಯಂತ್ರಿಸದಿದ್ದರೆ, ಅದು ಸಾವಿಗೆ ಕಾರಣವಾಗಬಹುದು. ತಂಬಾಕು ಸೇವನೆ, ಧೂಮಪಾನ, ಮದ್ಯಪಾನ, ಅಧಿಕ ದೇಹದ ತೂಕ, ಆನುವಂಶಿಕ ರೂಪಾಂತರಗಳು, ಹಾರ್ಮೋನುಗಳು… ಹೀಗೆ ಕ್ಯಾನ್ಸರ್‌ಗೆ ಅನೇಕ ಕಾರಣಗಳಿವೆ. ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ.

ಮುನ್ನೆಚ್ಚರಿಕೆ ಅಗತ್ಯ

Prevention better than cure ಎನ್ನುವ ಮಾತಿದೆ. ಅಂದರೆ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಮುಖ್ಯ ಎನ್ನುವುದು ಈ ಮಾತಿನ ತಾತ್ಪರ್ಯ. ಕ್ಯಾನ್ಸರ್‌ ವಿಚಾರದಲ್ಲಿ ಈ ಮಾತು ಅನ್ವಯವಾಗುತ್ತದೆ. ನಾವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರ ಈ ಮಹಾಮಾರಿಯನ್ನು ಮಾರು ದೂರವೇ ನಿಲ್ಲುವಂತೆ ಮಾಡಬಹುದು. ಉದಾಹರಣೆಗೆ ಅತಿಯಾದ ತಂಬಾಕು ಸೇವನೆ, ಮದ್ಯಪಾನ, ಧೂಮಪಾನ ಶ್ವಾಸಕೋಶದ ಕ್ಯಾನ್ಸರ್‌, ಬಾಯಿ ಮತ್ತು ಗಂಟಲು ಕ್ಯಾನ್ಸರ್‌, ಅನ್ನನಾಳ, ಹೊಟಗಟೆ ಮತ್ತು ಕರುಳು ಕ್ಯಾನ್ಸರ್‌, ಮೂತ್ರಕೋಶದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಹೀಗಾಗಿ ಇಂತಹ ದುಶ್ಚಟಗಳಿಂದ ಹೊರ ಬರಬೇಕಿದೆ.

ಇದನ್ನೂ ಓದಿ: Breast Cancer: ಪುರುಷರಲ್ಲೂ ಸ್ತನ ಕ್ಯಾನ್ಸರ್‌! ಈ ಸಂಗತಿ ತಿಳಿದಿರಲಿ

ಹೀಗೆ ಮಾಡಿ

ಉತ್ತಮ ಆಹಾರ ಸೇವನೆ, ಸರಿಯಾದ ನಿದ್ದೆ, ಸೂಕ್ತ ವ್ಯಾಯಾಮದಿಂದ ಕ್ಯಾನ್ಸರ್‌ ಮಾತ್ರವಲ್ಲ ಅನೇಕ ರೋಗಗಳಿಂದ ಬಚಾವಾಗವಹುದು. ಫಾಸ್ಟ್‌ ಫುಡ್‌, ಸಾಫ್ಟ್‌ ಡ್ರಿಂಕ್ಸ್‌ ಸೇವನೆ ಆದಷ್ಟು ಕಡಿಮೆ ಮಾಡಿ. ಹಸಿರು ತರಕಾರಿ, ಹಣ್ಣು, ನಾರಿನಾಂಶ ಇರುವ ಸೊಪ್ಪು ಸಹಿತ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ. ಧಾರಾಳ ನೀರು ಕುಡಿಯಿರಿ. ಇನ್ನು ಹೆಪಟೈಟಸ್‌ ಬಿ ಲಸಿಕೆ ಪಡೆದುಕೊಳ್ಳುವ ಮೂಲಕ ಪಿತ್ತಕೋಶದ ಕ್ಯಾನ್ಸರ್‌, ಹ್ಯುಮನ್‌ ಪ್ಯಾಪಿಲೋಮ ವೈರಸ್‌ ಲಸಿಕೆ ಮೂಲಕ ಗರ್ಭಕೋಶದ ಸರ್ವಿಕಲ್‌ ಕ್ಯಾನ್ಸರ್‌ ನಿಯಂತ್ರಿಬಹುದು. ಇದಕ್ಕಾಗಿ ನಿಯಮಿತವಾಗಿ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿ. ಅದರಲ್ಲೂ 40 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಇಡೀ ದೇಹದ ತಪಾಸಣೆ ಮಾಡಿಸುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ಪ್ರಾಥಮಿಕ ಹಂತದಲ್ಲಿಯೇ ರೋಗವನ್ನು ಗುರುತಿಸಿ ಗುಣಪಡಿಸಬಹುದು ಎಂದು ತಜ್ಞರು ಸೂಚಿಸುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version