Site icon Vistara News

World Digestive Health Day: ಜೀರ್ಣಕ್ರಿಯೆಯಲ್ಲಿ ತೊಡಕು ಅನಾರೋಗ್ಯಕ್ಕೆ ದಾರಿ; ಈ ಸಲಹೆ ಪಾಲಿಸಿ

World Digestive Health Day

ಸರ್ವ ರೋಗಕ್ಕೂ ಹೊಟ್ಟೆಯೇ ಮೂಲ (Gut is the butt of every problem) ಎಂಬ ಮಾತೊಂದಿದೆ. ಈ ಮಾತು ಸುಳ್ಳೇನಲ್ಲ, ದೇಹದ ಹಲವು ಸಮಸ್ಯೆಗಳಿಗೆ ನಮ್ಮ ಆಹಾರ ಪದ್ಧತಿಗಳು, ಜೀರ್ಣಾಂಗದ ಏರುಪೇರುಗಳು ಕಾರಣವಾಗುತ್ತವೆ. ಬೊಜ್ಜು, ಮಧುಮೇಹದಂಥ ಸಮಸ್ಯೆಗಳಿಂದ ಹಿಡಿದು ಎಷ್ಟೋ ಸಮಸ್ಯೆಗಳು ಕಾಡುವುದು ದೇಹದ ಚಯಾಪಚಯ ಸರಿಯಿಲ್ಲದ ಸಂದರ್ಭಗಳಲ್ಲೇ. ದೇಹದ ಸ್ವಾಸ್ಥ್ಯ ಹೆಚ್ಚಿಸಿಕೊಳ್ಳುವ ದಾರಿಯಲ್ಲಿ ಜೀರ್ಣಾಂಗಗಳ ಆರೋಗ್ಯ ರಕ್ಷಣೆ ಎಷ್ಟು ಮಹತ್ವದ್ದು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವುದು ವಿಶ್ವ ಜೀರ್ಣಾಂಗಗಳ ಆರೋಗ್ಯ ದಿನದ ಉದ್ದೇಶ. ಪ್ರತಿ ವರ್ಷ ಮೇ ತಿಂಗಳ 29ನೇ ದಿನವನ್ನು (World Digestive Health Day) ಇದಕ್ಕಾಗಿ ಮೀಸಲಿಡಲಾಗಿದೆ. ಎಲ್ಲರ ಕರುಳಿನಲ್ಲೂ ಅಸಂಖ್ಯಾತ ಬ್ಯಾಕ್ಟೀರಿಯಗಳಿರುತ್ತವೆ. ಇವುಗಳನ್ನು ಒಳ್ಳೆಯವು ಮತ್ತು ಕೆಟ್ಟವೆಂದು ವಿಂಗಡಿಸಲಾಗಿದೆ. ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚಿದಷ್ಟೂ ದೇಹ ಸ್ವಾಸ್ಥ್ಯ ಚೆನ್ನಾಗಿರುತ್ತದೆ. ಕೆಟ್ಟ ಬ್ಯಾಕ್ಟೀರಿಯಗಳ ಪ್ರಮಾಣ ಹೆಚ್ಚಿದಷ್ಟೂ ದೇಹ ರೋಗಗಳ ಗೂಡಾಗುತ್ತದೆ. ಜೀರ್ಣಾಂಗಗಳ ಆರೋಗ್ಯ ಚೆನ್ನಾಗಿದ್ದರೆ ತೂಕ ನಿರ್ವಹಣೆ, ಸತ್ವಗಳನ್ನು ಹೀರಿಕೊಳ್ಳುವುದು, ಚೋದಕಗಳ ನಿರ್ವಹಣೆ, ಉರಿಯೂತ ನಿವಾರಣೆ, ಚಯಾಪಚಯ ಸರಿಪಡಿಸುವಂಥ ಕೆಲಸಗಳು ಕಷ್ಟವಿಲ್ಲದೆ ನೆರವೇರುತ್ತವೆ. ಹಾಗಾದರೆ ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಏನು ಮಾಡಬೇಕು? ಯಾವ ಕ್ರಮಗಳನ್ನು ಅನುಸರಿಸಬೇಕು?

ವೈವಿಧ್ಯಮವಾಗಿರಲಿ

ಋತುಮಾನಕ್ಕೆ ಸರಿಯಾದ ಹಣ್ಣು-ತರಕಾರಿಗಳು, ಕಾಯಿ-ಬೀಜಗಳು, ಕಾಳು-ಬೇಳೆಗಳು, ಇಡೀ ಧಾನ್ಯಗಳು, ಡೇರು ಉತ್ಪನ್ನಗಳಿಂದ ಆಹಾರ ಸಮೃದ್ಧವಾಗಿರಬೇಕು. ಇದರಿಂದ ಕರುಳಿನ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಬೇಕಾದ ಆಹಾರ ದೊರೆತು ಅವುಗಳ ಸಂಖ್ಯೆ ಹೆಚ್ಚುತ್ತದೆ. ಅಷ್ಟೇ ಅಲ್ಲ, ಕರುಳಿನಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳೂ ವೈವಿಧ್ಯಮಯವಾಗುತ್ತವೆ. ಇದರಿಂದ ಬಗೆಬಗೆಯ ಪ್ರಯೋಜನಗಳಿವೆ.

ಪ್ರಿಬಯಾಟಿಕ್‌, ಪ್ರೊಬಯಾಟಿಕ್

ಜೀರ್ಣಾಂಗಗಳ ಆರೋಗ್ಯ ನಿರ್ವಹಣೆಗೆ ಇದು ಪ್ರಧಾನ ಪಾತ್ರ ವಹಿಸುತ್ತದೆ. ಹುದುಗು ಬಂದಿರುವಂಥ ಮೊಸರು, ಮಜ್ಜಿಗೆಯಂಥ ಆಹಾರಗಳು, ಹಸಿಯಾದ ಮೊಳಕೆ ಕಾಳುಗಳಂಥ ಆಹಾರಗಳು ಅಗತ್ಯವಾದ ಪ್ರಿಬಯಾಟಿಕ್‌ ಮತ್ತು ಪ್ರೊಬಯಾಟಿಕ್‌ ಅಂಶಗಳನ್ನು ಒದಗಿಸುತ್ತವೆ. ಕರುಳಿನ ಸೂಕ್ಷ್ಮಾಣುಗಳ ಸಮತೋಲನಕ್ಕೆ ಇದು ಅತಿ ಮುಖ್ಯ.

ನೀರು-ನಾರು-ನಿದ್ದೆ

ಇವೆಲ್ಲವೂ ಸಾಕಷ್ಟು ಬೇಕು. ದಿನಕ್ಕೆ ಮೂರು ಲೀ. ನೀರು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಬಲ್ಲದು. ಇದರೊಂದಿಗೆ ನಾರಿನಂಶವೂ ಸಾಕಷ್ಟು ಸೇರಿದರೆ ಅಜೀರ್ಣ, ಮಲಬದ್ಧತೆಯಂಥ ತೊಂದರೆಗಳು ಮಾಯವಾಗುತ್ತವೆ. ರೆಸ್ಟ್‌-ಡೈಜೆಸ್ಟ್‌ ಎಂಬುದು ದೇಹಕ್ಕೆ ಚೆನ್ನಾಗಿ ಅರ್ಥವಾಗುವ ವಿಚಾರ. ಹಾಗಾಗಿ ದಿನಕ್ಕೆ ಏಳೆಂಟು ತಾಸಿನಷ್ಟು ನಿದ್ದೆ ಮಾಡಿದರೆ ಜೀರ್ಣಾಂಗಗಳ ರಿಪೇರಿ ಕೆಲಸ ಸಾಂಗವಾಗಿ ನೆರವೇರುತ್ತದೆ.

ಮುಕ್ಕಬೇಡಿ

ಆಹಾರ ಸೇವನೆಗೊಂದು ಕ್ರಮವಿದೆ. ಈಗಿನ ದರ್ಶಿನಿ ಸಂಸ್ಕೃತಿಯಲ್ಲ ತಿನ್ನುವಾಗ ಬೇಕಿರುವುದು. ಅಂದರೆ ಗಡಿಬಿಡಿಯಲ್ಲಿ ಒಂದಿಷ್ಟು ಮುಕ್ಕಿ ಓಡುವುದಲ್ಲ. ನೆಮ್ಮದಿಯಿಂದ ಕುಳಿತು, ಚೆನ್ನಾಗಿ ಅಗಿದು ತಿನ್ನಿ. ಇದರಿಂದ ಅತಿಯಾಗಿ ತಿನ್ನುವುದು, ಅಗತ್ಯಕ್ಕಿಂತ ಹೆಚ್ಚು ತಿನ್ನುವುದನ್ನೆಲ್ಲ ಕಡಿಮೆ ಮಾಡಬಹುದು. ಜೊತೆಗೆ, ಆಹಾರ ತಿಂದ ತೃಪ್ತಿಯೂ ದೊರೆಯುತ್ತದೆ.

ಆರೋಗ್ಯಕರ ಎಣ್ಣೆ

ಗಾಣದ ಎಣ್ಣೆಗಳು ಅಥವಾ ಕೋಲ್ಡ್‌ ಪ್ರೆಸ್‌ ಮಾಡಿದ ಎಣ್ಣೆಗಳು ಬಳಕೆಗೆ ಹೆಚ್ಚು ಸುರಕ್ಷಿತ. ರಿಫೈನ್‌ ಮಾಡಿದ ಎಣ್ಣೆಗಳು, ಮರು ಬಳಕೆಯ ಎಣ್ಣೆಗಳು ಸೂಕ್ತವಲ್ಲ. ಇಂಥವುಗಳಿಂದ ದೇಹದಲ್ಲಿ ಉರಿಯೂತ ಹೆಚ್ಚುತ್ತದೆ. ಹಾಗಾಗಿ ತಾಜಾ ಮತ್ತು ಆರೋಗ್ಯಕರ ಎಣ್ಣೆಗಳನ್ನೇ ಅಡುಗೆಗೆ ಬಳಸಿ. ಪಚನಾಂಗಗಳ ಆರೋಗ್ಯ ರಕ್ಷಣೆಗೆ ಇವೂ ಮುಖ್ಯವಾದವು.

ಒತ್ತಡ

ಮಾನಸಿನ ಒತ್ತಡ ಹೆಚ್ಚಿದಷ್ಟೂ ಜೀರ್ಣಾಂಗಗಳ ಏರುಪೇರು ಹೆಚ್ಚುತ್ತದೆ. ಇವೆರಡರ ನಡುವೆ ನೇರ ಸಂಬಂಧವಿದೆ. ಹಾಗಾಗಿ ಮಾನಸಿನ ಒತ್ತಡ ನಿರ್ವಹಣೆಗೆ ಧ್ಯಾನ, ಯೋಗ, ಪ್ರಾಣಾಯಾಮ, ಆರೋಗ್ಯ ಹವ್ಯಾಸಗಳನ್ನು ರೂಢಿಸಿಕೊಳ್ಳುವಂಥ ಕೆಲಸಗಳು ಒಳ್ಳೆಯ ಪರಿಣಾಮ ಬೀರುತ್ತವೆ. ಇಂಥ ಕ್ರಮಗಳಿಂದಲೂ ಕರುಳಿನ ಆರೋಗ್ಯ ಸುಧಾರಿಸಬಹುದು.

ಇದನ್ನೂ ಓದಿ: AC Side Effects: ಅತಿಯಾದ ಎಸಿ ಬಳಕೆಯಿಂದ ಏನಾಗುತ್ತದೆ ಎಂಬ ಅರಿವಿರಲಿ

ಇವುಗಳು ಬೇಡ

ಪ್ರತಿ ದಿನ ಒಂದೇ ರೀತಿಯ ಆಹಾರವನ್ನು ಸೇವಿಸಬೇಡಿ. ಆರೋಗ್ಯಕರವಾದ ವೈವಿಧ್ಯಮಯ ಆಹಾರಗಳು ಜೀರ್ಣಾಂಗಗಳ ಸ್ಥಿತಿಯನ್ನು ಸುಧಾರಿಸುತ್ತವೆ. ಸಂಸ್ಕರಿತ ಆಹಾರಗಳು ಬೇಡ. ಇದರಿಂದ ಕರುಳಿನ ಉರಿಯೂತ ಹೆಚ್ಚುತ್ತದೆ. ಗಬಗಬ ತಿನ್ನುವುದರ ಬದಲು, ಸಾವಧಾನವಾಗಿ ತಿನ್ನುವುದನ್ನು ರೂಢಿಸಿಕೊಳ್ಳಿ. ಕೃತಕ ಸಿಹಿ, ರುಚಿ, ಬಣ್ಣಗಳೆಲ್ಲ ಉರಿಯೂತ ಹೆಚ್ಚಿಸುತ್ತವೆ. ಬದಲಿಗೆ ನೈಸರ್ಗಿಕ ರುಚಿ, ಬಣ್ಣಗಳಿಗೆ ಆದ್ಯತೆ ನೀಡಿ.

Exit mobile version