ಆಹಾರ ಸೇವನೆ ಬದುಕುಳಿಯುವುದಕ್ಕೆ ಮಾತ್ರವೇ ಅಗತ್ಯವಲ್ಲ; ನಮ್ಮ ಸ್ವಾಸ್ಥ್ಯದ ಸೋಪಾನವದು. ಒಳ್ಳೆಯ ಆಹಾರದಿಂದ ದೇಹಕ್ಕೆ ಸಾಕಷ್ಟು ಪೋಷಕಸತ್ವಗಳು ದೊರೆಯುವ ಹಾಗೆಯೇ, ತಿನ್ನುವ ಆಹಾರ ಸರಿಯಿಲ್ಲದಿದ್ದರೆ ಸಾಕಷ್ಟು ರೋಗಗಳನ್ನೂ ಆಹ್ವಾನಿಸುತ್ತದೆ. ಕೆಟ್ಟ ಆಹಾರ ತಿಂದರೂ, ಆಹಾರ ಕೆಟ್ಟ ಮೇಲೆ ತಿಂದರೂ ಅನಾರೋಗ್ಯ ತಪ್ಪಿದ್ದಲ್ಲ. ಹಾಗಾಗಿ ಸುರಕ್ಷತೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಜೂನ್ ತಿಂಗಳ 7ನೇ ದಿನವನ್ನು ಜಾಗತಿಕ ಆಹಾರ ಸುರಕ್ಷತಾ ದಿನವೆಂದು (World Food Safety Day) ಗುರುತಿಸಲಾಗಿದೆ.
ಆಹಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಬೇಕೆಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2018ರಲ್ಲಿ ಕೈಗೊಳ್ಳಲಾಗಿತ್ತು. ಆಹಾರದಿಂದ ಉಂಟಾಗುವ ಅನಾರೋಗ್ಯಗಳನ್ನು ತಡೆಯುವ, ನಿರ್ವಹಿಸುವ ಮತ್ತು ಪತ್ತೆ ಮಾಡುವ ಉದ್ದೇಶ ಇದರ ಹಿಂದಿದೆ. ವಿಶ್ವ ಸಂಸ್ಥೆಯ ಅಡಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಆಹಾರ ಮತ್ತು ಕೃಷಿ ಸಂಸ್ಥೆಗಳು ಜಂಟಿಯಾಗಿ ಈ ದಿನವನ್ನು ಆಚರಿಸುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಈ ವರ್ಷ ಹೊರಡಿಸಿರುವ ಘೋಷವಾಕ್ಯ- ಆಹಾರ ಸುರಕ್ಷತೆ: ಅನಿರೀಕ್ಷಿತಗಳಿಗೆ ಸಜ್ಜಾಗಿ. ಆಹಾರ ಸುರಕ್ಷತೆಯ ಹೆಚ್ಚಿನ ಕ್ರಮಗಳು ಪಾಲನೆಯಾಗುವುದು ಅಥವಾ ಉಲ್ಲಂಘನೆ ಆಗುವುದು ಅಡುಗೆಮನೆಗಳಲ್ಲೇ. ಆದರೆ ಅದಕ್ಕೂ ಮುನ್ನ, ಬೆಳೆಯುವ ಹಂತದಿಂದ ಹಿಡಿದು, ದಾಸ್ತಾನು ಮಾಡುವವರೆಗೂ ಆಹಾರ ಸುರಕ್ಷಾ ನಿಯಮದ ಉಲ್ಲಂಘನೆಗಳು ಆಗುತ್ತಲೇ ಇರುತ್ತವೆ. ಅತಿಯಾದ ಕೀಟನಾಶಕಗಳ ಬಳಕೆ, ಕಳೆನಾಶಕಗಳನ್ನು ಸುರಿಯುವುದು, ಸಾವಯವ ಪದ್ಧತಿಗಳ ಅವನತಿ, ದಾಸ್ತಾನು ಮಾಡುವಾಗಲೂ ಬಳಕೆಯಾಗುವ ರಾಸಾಯನಿಕಗಳು, ಕಲಬೆರಕೆಗಳು- ಇವೆಲ್ಲ ಆಹಾರದ ಸುರಕ್ಷಾ ಗುಣಮಟ್ಟ ಕುಸಿಯುವಂತೆ ಮಾಡುತ್ತವೆ. ಆದಾಗ್ಯೂ ಕೆಲಮಟ್ಟಿಗೆ ಅವುಗಳನ್ನು ಬಳಕೆಯೋಗ್ಯ ಮಾಡುವುದು ಬಳಕೆದಾರರ ಕೈಯಲ್ಲೂ ಇದೆ. ಇಲ್ಲಿವೆ ಕೆಲವು ಸರಳ ಕ್ರಮಗಳು-
ಸ್ವಚ್ಛತೆಗೆ ಆದ್ಯತೆ
ಹಣ್ಣು, ತರಕಾರಿಗಳನ್ನು ಉಪಯೋಗಿಸುವ ಮುನ್ನ ಕೆಲಕಾಲ ನೆನೆಸಿ, ಸ್ವಚ್ಛವಾಗಿ ತೊಳೆಯಿರಿ. ಅಡುಗೆಮನೆಯ ನೈರ್ಮಲ್ಯ ಮತ್ತು ಬಳಸುವ ಉಪಕರಣಗಳ ಸ್ವಚ್ಛತೆಗೂ ಆದ್ಯತೆ ನೀಡಿ. ಆಹಾರ ಬೇಯಿಸುವ ಕೈಗಳು ಸಹ ಶುಚಿಯಾಗಿರಲಿ.
ಹಸಿ ಆಹಾರಗಳ ಬಗ್ಗೆ ಎಚ್ಚರ
ಮೊಟ್ಟೆ ಮತ್ತು ಮಾಂಸಾಹಾರಗಳನ್ನೂ ಎಂದಿಗೂ ಹಸಿಯಾಗಿ ಸೇವಿಸಬೇಡಿ. ಸಾದಾ ಹಾಲಿನ ಬದಲು ಪ್ಯಾಶ್ಚರೈಸ್ ಮಾಡಿದ ಹಾಲು ಬಳಕೆಗೆ ಹೆಚ್ಚು ಸುರಕ್ಷಿತ.
ಕೀಟಗಳು
ಅಡುಗೆ ಮನೆಯಲ್ಲಿ ಇಲಿ, ಜಿರಳೆ, ಕೀಟಗಳೆಲ್ಲ ಇದ್ದಷ್ಟೂ ಆಹಾರದ ಸುರಕ್ಷತೆ ನಿಭಾಯಿಸುವುದು ಕಷ್ಟ. ಹಾಗಾಗಿ ಇಂಥ ಪ್ರಾಣಿಗಳಿಂದ ಪಾಕಗೃಹವನ್ನು ಮುಕ್ತಗೊಳಿಸಿಕೊಳ್ಳಿ.
ತಾಜಾತನ
ಆಹಾರ ಬಿಸಿಯಾಗಿರುವಾಗಲೇ ಸೇವಿಸಿದರೆ ರುಚಿ, ಆರೋಗ್ಯ ಎರಡನ್ನೂ ಸಾಧಿಸಬಹುದು. ಇದಕ್ಕಾಗಿ ಮನೆಯ ಎಲ್ಲರೂ ಒಟ್ಟಿಗೆ ಊಟ ಮಾಡುವ ಅಭ್ಯಾಸ ಜಾರಿಗೆ ತನ್ನಿ. ಇದರಿಂದ ಮನೆಮಂದಿಯ ಬಾಂಧವ್ಯವೂ ಹೆಚ್ಚುತ್ತದೆ.
ಉಳಿಕೆ ಬಗ್ಗೆ ಜಾಗ್ರತೆ
ಉಳಿಕೆ ಆಹಾರವನ್ನು ಪ್ಲಾಸ್ಟಿಕ್ ಬದಲಿಗೆ ಲೋಹ ಅಥವಾ ಗಾಜಿನ ಪಾತ್ರೆಗಳಲ್ಲಿ ಶೀಥಲೀಕರಿಸಿ. ಉಳಿಕೆ ಆಹಾರವನ್ನು ಸೇವಿಸುವಾಗ, ಫ್ರಿಜ್‌ನಿಂದ ತೆಗೆದು ಚೆನ್ನಾಗಿ ಹಬೆಯಾಡುವಂತೆ ಬಿಸಿಮಾಡಿ. ಒಮ್ಮೆ ಬಿಸಿ ಮಾಡಿದ ಉಳಿಕೆ ಆಹಾರವನ್ನು ಮತ್ತೆ ಫ್ರಿಜ್‌ನಲ್ಲಿಟ್ಟು ಸೇವಿಸಬೇಡಿ, ಉಳಿದರೆ ಬಿಸಾಡಿ.
ನೀರು
ಕುಡಿಯುವ ನೀರನ್ನು ಕುದಿಸಿ ಕುಡಿಯಿರಿ ಅಥವಾ ಆಧುನಿಕ ಪ್ಯೂರಿಫೈಯರ್ ಬಳಸಿ. ನಿತ್ಯವೂ ನೀರಿನ ಬಾಟಲಿಗಳನ್ನು ಬಳಸುವ ಅಭ್ಯಾಸವಿದ್ದರೆ, ಅವುಗಳನ್ನು ಆಗಾಗ ತೊಳೆದು ಶುಚಿ ಮಾಡಿ.