Site icon Vistara News

World Lung Day: ಶ್ವಾಸಕೋಶದ ಸಮಸ್ಯೆ ಉಂಟಾಗದಿರಲು ಹೀಗೆ ಮಾಡಿ

World Lung Day

ಇವು ಜಟಿಲ ಪ್ರಶ್ನೆಗಳು- ಉಸಿರಾಡುವ ಗಾಳಿ ಇಷ್ಟೊಂದು ಕಲುಷಿತವಾಗಿರುವಾಗ ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಸೋಂಕುಗಳು ನೇರವಾಗಿ ಶ್ವಾಸಕೋಶಕ್ಕೇ ದಾಳಿ ಇಡುವಾಗ, ಅದನ್ನು ಜೋಪಾನ ಮಾಡುವುದು ಸಾಧ್ಯವೇ? ಪುಪ್ಪುಸಗಳ ಅನಾರೋಗ್ಯ ಎಂಬುದು ಅತ್ಯಂತ ಸಾಮಾನ್ಯ ವಿಷಯ ಎನಿಸಿರುವ ದಿನಗಳಲ್ಲಿ, ಅವುಗಳ ದೀರ್ಘ ಬಾಳಿಕೆಗೆ ಏನು ಮಾಡಬೇಕು? ಸೆಪ್ಟೆಂಬರ್‌ 25ನೇ ದಿನ ವಿಶ್ವ ಶ್ವಾಸಕೋಶ ದಿನವನ್ನಾಗಿ (World Lung Day) ಆಚರಿಸುತ್ತಿರುವುದು, ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಹತ್ವವನ್ನು ಹೆಚ್ಚಿಸಿಕೊಂಡಿದೆ.

ಗಾಳಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯುವಲ್ಲಿ ಸಮುದಾಯದ ಇಚ್ಛಾಶಕ್ತಿ ಬೇಕು. ಏಕಾಂಗಿಯಾಗಿ ಹೋರಾಡಿ ಯಶಸ್ಸು ಪಡೆದವರಿಲ್ಲವೆಂದಲ್ಲ; ಆದರೆ ಅದು ಎಲ್ಲರಿಗೂ ಸಾಧ್ಯವೇ ಎಂಬುದೂ ಯೋಚಿಸುವ ವಿಚಾರ. ಈ ವಿಷಯದ ಹೊರತಾಗಿ, ಇನ್ನೇನನ್ನಾದರೂ ವೈಯಕ್ತಿವಾಗಿ ನಾವು ಮಾಡಬಹುದೇ? ಖಂಡಿತ, ದೇಹದ ಉಳಿದೆಲ್ಲಾ ಅಂಗಗಳಿಗೆ ಅನ್ವಯಿಸುವ ಬಹಳಷ್ಟು ನಿಯಮಗಳು ನಮ್ಮ ಪುಪ್ಪುಸಗಳಿಗೂ ಅನ್ವಯಿಸುತ್ತವೆ. ಸಮತೋಲಿತವಾದ ಆಹಾರ ಶ್ವಾಸಕೋಶಗಳ (World Lung Day) ದೀರ್ಘ ಬಾಳಿಕೆಗೆ ನಾಂದಿ ಹಾಡಬಲ್ಲದು. ಒತ್ತಡ ನಿವಾರಣೆಯ ಪ್ರಮುಖ ತಂತ್ರವಾದ ಪ್ರಾಣಾಯಾಮವು ಶ್ವಾಸಕೋಶಗಳಿಗೆ ಶಕ್ತಿ ತುಂಬಬಲ್ಲದು. ನಿಯಮಿತ ವ್ಯಾಯಾಮ ಬಹಳಷ್ಟು ಮಾಡಬಲ್ಲದು. ಇವುಗಳನ್ನೇ ವಿವರವಾಗಿ ನೋಡುವುದಾದರೆ-

ಬಿಸಿಯಾದ, ತಾಜಾ ಆಹಾರ ಸೇವಿಸಿ

ಅಡುಗೆ ಮಾಡುವುದಕ್ಕೆ ಸಮಯವೇ ಇಲ್ಲ ಎಂಬ ನೆವ ಇಟ್ಟುಕೊಂಡು ಸಿಕ್ಕಿದಲ್ಲಿ, ಸಿಕ್ಕಿದ್ದನ್ನು ತಿಂದುಕೊಂಡು ಕಾಲ ಹಾಕುವುದು ಖಂಡಿತಕ್ಕೂ ಆರೋಗ್ಯದ ಮೇಲೆ ಬರೆ ಹಾಕುತ್ತದೆ. ಅದರಲ್ಲೂ ತಂಗಳು ತಿನ್ನುವುದು, ಫ್ರಿಜ್‌ನಲ್ಲಿರುವ ಅತಿಯಾದ ತಣ್ಣನೆಯ ಆಹಾರ, ಹಲ್ಲು ಜುಂಮ್ಮೆನ್ನುವಂಥ ಜ್ಯೂಸ್‌, ಸೋಡಾಗಳು ಶ್ವಾಸಕೋಶಗಳ ಉರಿಯೂತವನ್ನು ಹೆಚ್ಚಿಸುತ್ತವೆ. ಹಾಗಾಗಿ ಇಡೀ ಧಾನ್ಯಗಳನ್ನು ಮತ್ತು ಬಿಸಿಯಾದ ಆಹಾರಗಳನ್ನು ತಾಜಾ ಇರುವಾಗಲೇ ಸೇವಿಸುವುದು ಒಳ್ಳೆಯದು

ಸಾಂಬಾರ್ ಪದಾರ್ಥಗಳು

ಭಾರತೀಯ ಅಡುಗೆ ಮನೆಗಳಲ್ಲಿ ಬಳಕೆಯಾಗುವ ಬಹಳಷ್ಟು ಸಾಂಬಾರ್ ಪದಾರ್ಥಗಳು ರುಚಿಗೆ ಮಾತ್ರವೇ ಅಲ್ಲ, ಪಚನ ಕಾರ್ಯಕ್ಕೂ ಸೈ. ಅರಿಶಿನ, ಜೀರಿಗೆ, ಧನಿಯಾ, ಕಾಳು ಮೆಣಸು, ಶುಂಠಿ, ಚಕ್ಕೆ ಮುಂತಾದವು ಜೀರ್ಣಕ್ರಿಯೆಯನ್ನು ಚುರುಕು ಮಾಡುತ್ತವೆ. ಸರಿಯಾಗಿ ಜೀರ್ಣವಾಗದ ಆಹಾರಗಳು ಕಫಕ್ಕೂ ಕಾರಣವಾಗಬಹುದು. ಕೆಲವೊಮ್ಮೆ ಅಲರ್ಜಿಯಂಥ ಪ್ರತಿಕ್ರಿಯೆಗಳನ್ನೂ ದೇಹ ತೋರಿಸಬಹುದು. ಹಾಗಾಗಿ ಸಾಂಬಾರ ಪದಾರ್ಥಗಳನ್ನು ನಿಯಮಿತ ಮತ್ತು ಮಿತವಾಗಿ ಬಳಸಿ

ಹರ್ಬಲ್‌ ಚಹಾಗಳು ಅಥವಾ ಕಷಾಯಗಳು

ತುಳಸಿ, ಅತಿಮಧುರ, ಶುಂಠಿ, ನಿಂಬೆಹುಲ್ಲು, ಪುದೀನಾ ಮುಂತಾದ ಮೂಲಿಕೆಗಳ ಚಹಾ ಇಲ್ಲವೇ ಕಷಾಯಗಳು ಶ್ವಾಸಕೋಶಗಳ ಆರೋಗ್ಯಕ್ಕೆ ಹಿತಕಾರಿ. ಇವು ರೋಗ ನಿರೋಧಕ ಶಕ್ತಿಯನ್ನು ಚುರುಕು ಮಾಡುವುದೇ ಅಲ್ಲದೆ, ಗಂಟಲಿಗೆ ಆರಾಮ ನೀಡಿ, ಕಫ ಕರಗಿಸಲೂ ನೆರವು ನೀಡುತ್ತವೆ

ಆರೋಗ್ಯಕರ ಕೊಬ್ಬು

ಕೊಬ್ಬೆಲ್ಲ ಕೆಟ್ಟದ್ದು ಎಂದು ಭಾವಿಸಿದವರಿಗೆ ಇಲ್ಲೊಂದು ಕಿವಿ ಮಾತು- ಸಂಸ್ಕರಿತ ಕೊಬ್ಬುಗಳನ್ನು, ಕರಿದ ಆಹಾರಗಳನ್ನು ದೂರ ಇರಿಸಿದಷ್ಟೂ ಕ್ಷೇಮ. ಆದರೆ ಆರೋಗ್ಯಕರ ಕೊಬ್ಬುಗಳು ದೇಹಕ್ಕೆ ದೊರೆಯಲೇಬೇಕು. ತುಪ್ಪ, ಕೊಬ್ಬರಿ ಎಣ್ಣೆ, ಆಲಿವ್‌ ಎಣ್ಣೆ, ಅಗಸೆ ಎಣ್ಣೆ ಮುಂತಾದವು ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇದು ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಳಕ್ಕೂ ಬೇಕಾದವು.

ಜೇನುತುಪ್ಪ

ಯಾವುದೇ ಸಂಸ್ಕರಣೆಗೆ ಒಳಗಾಗದ ನೈಸರ್ಗಿಕ ಜೇನುತುಪ್ಪ ಶ್ವಾಸಕೋಶ ಆರೋಗ್ಯಕ್ಕೆ ಬಹಳ ಒಳ್ಳೆಯದು. ಗಂಟಲಲ್ಲಿ ಕಿರಿಕಿರಿ, ನೆಗಡಿ, ಕೆಮ್ಮಿನಂಥ ಲಕ್ಷಣಗಳಿದ್ದರೆ, ಜೇನುತುಪ್ಪದೊಂದಿಗೆ ತುಳಸಿ ರಸ ಅಥವಾ ಶುಂಠಿ ರಸ ಮುಂತಾದ ಸರಳ ಮನೆಮದ್ದುಗಳು ಉಪಶಮನ ನೀಡುತ್ತವೆ.

ಸಂಸ್ಕರಿತ/ರಿಫೈನ್ಡ್‌ ಆಹಾರಗಳು ಬೇಡ

ಬಿಳಿ ಅಕ್ಕಿ, ರಿಫೈನ್ಡ್‌ ಎಣ್ಣೆ, ಬಿಳಿ ಬ್ರೆಡ್‌, ಬಿಳಿ ಪಾಸ್ತಾ, ಮೈದಾದಿಂದ ತಯಾರಾದ ಆಹಾರಗಳು- ಇಂಥವೆಲ್ಲವೂ ಸಂಸ್ಕರಿತ ಆಹಾರಗಳ ಪಟ್ಟಿಯಲ್ಲಿ ಬರುತ್ತವೆ. ಆಹಾರ ಸಂಸ್ಕಾರಗೊಂಡಷ್ಟೂ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತವೆ. ಅದರಲ್ಲೂ ಶ್ವಾಸಕೋಶಗಳ ಉರಿಯೂತವೆಂದರೆ ಕೆಮ್ಮು, ಉಬ್ಬಸ, ಅಸ್ತಮಾದಂಥ ಲಕ್ಷಣಗಳು ಕಾಡತೊಡಗುತ್ತವೆ. ಹಾಗಾಗಿ ಉರಿಯೂತಕ್ಕೆ ಕಾರಣವಾಗುವ ಆಹಾರಗಳನ್ನು ದೂರ ಮಾಡಿ.

ನೀರು-ನಿದ್ದೆ ಬೇಕು

ದಿನಕ್ಕೆ ಎಂಟು ತಾಸುಗಳ ನಿದ್ದೆಯು ದೇಹದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಮಾಡಿಸಲು ನೆರವಾಗುತ್ತದೆ. ದಿನಕ್ಕೆಂಟು ಗ್ಲಾಸ್ ನೀರು ಕುಡಿಯುವುದು ದೇಹದ ಒಟ್ಟಾರೆ ಸ್ವಾಸ್ಥ್ಯಕ್ಕೆ ಅಗತ್ಯ.

ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!

Exit mobile version