Site icon Vistara News

World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

World Malaria Day

ಈ ಬೇಸಿಗೆಯಲ್ಲಿ ಸೊಳ್ಳೆಗಳ ಹಾವಳಿ (World Malaria Day) ಹೆಚ್ಚಿನ ಕಡೆಗಳಲ್ಲಿ ತೀವ್ರವಾಗಿ ಕಾಣುತ್ತಿದೆ. ಮುಂಗಾರು ಬರುವ ಮೊದಲೇ ಸೊಳ್ಳೆಗಳು ದಾಂಗುಡಿಯಿಟ್ಟಿವೆ. ಬೇಸಿಗೆ ರಜೆಯೆಂಬ ನೆವದಲ್ಲಿ ಪ್ರಯಾಣ ಮಾಡುವಾಗ ಸೊಳ್ಳೆಗಳ ಕಾಟವಿರುವ ಊರು ಎದುರಾದರೆ ಆತಂಕವಾಗುವುದು ಸಹಜ. ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ ಒಂದೇ ರೀತಿಯವು ಎನ್ನುವಂತಿಲ್ಲ. ಪ್ರತಿಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಈ ನಿಟ್ಟಿನಲ್ಲಿ, ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯ ಮತ್ತು ಡೆಂಗು ರೋಗಗಳಿಗೆ ವ್ಯತ್ಯಾಸವೇನು ಎಂಬ ಅರಿವಿನ ಲೇಖನವಿದು.

ಪ್ರಸರಣ ಹೇಗೆ?

ಮಲೇರಿಯ

ಅನಾಫಿಲಿಸ್‌ ಸೊಳ್ಳೆಯಿಂದ ದೇಹ ಪ್ರವೇಶಿಸುವ ಪ್ಲಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಮಲೇರಿಯ ಹೆಚ್ಚಿರುವ ಪ್ರದೇಶಗಳಿಗೆ ಹೋದಾಗ ಇದಕ್ಕೆ ತುತ್ತಾಗುವ ಸಂಭವ ಹೆಚ್ಚು.

ಡೆಂಗ್ಯು

ಈಡಿಸ್‌ ಸೊಳ್ಳೆಯು ದೇಹಕ್ಕೆ ಚುಚ್ಚುವ ಡೆಂಗ್ಯು ವೈರಸ್‌ನಿಂದ ಬರುವ ರೋಗವಿದು. ಅಂದರೆ ಮಲೇರಿಯ ಬರುವುದು ಪರಾವಲಂಬಿ ಜೀವಿಯಿಂದಾದರೆ, ಡೆಂಗ್ಯು ಬರುವುದು ವೈರಸ್‌ನಿಂದ. ಯಾವುದೇ ಪ್ರದೇಶದಲ್ಲೂ ಡೆಂಗು ಸೊಳ್ಳೆಗಳು ಕಾಣಬಹುದು, ಸೊಳ್ಳೆ ಕಚ್ಚಿದಾಗ ಬರಬಹುದು.

ಲಕ್ಷಣಗಳೇನು?

ಮಲೇರಿಯ

ಜ್ವರ, ನಡುಕ, ಬೆವರು, ತಲೆನೋವು, ಮೈಕೈ ನೋವು, ಹೊಟ್ಟೆ ತೊಳೆಸುವುದು, ವಾಂತಿ.

ಡೆಂಗ್ಯು

ಇದ್ದಕ್ಕಿದ್ದಂತೆ ತೀವ್ರವಾದ ಜ್ವರ, ತೀಕ್ಷ್ಣ ತಲೆನೋವು, ಕಣ್ಣು ನೋವು, ಮೈಮೇಲೆಲ್ಲ ದದ್ದುಗಳು, ಕೀಲು, ಸ್ನಾಯುಗಳಲ್ಲಿ ತೀವ್ರ ನೋವು. ಜೊತೆಗೆ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯುತ್ತದೆ. ಅಂದರೆ ಮಲೇರಿಯ ಫ್ಲೂ ಮಾದರಿಯ ಲಕ್ಷಣಗಳನ್ನು ತೋರಿಸಿದರೆ, ಡೆಂಗು ಜ್ವರದಲ್ಲಿ ತಲೆನೋವು ಮತ್ತು ಕೀಲು-ಸ್ನಾಯುಗಳ ನೋವು ತೀವ್ರವಾಗಿರುತ್ತದೆ.

ಪತ್ತೆ ಹೇಗೆ?

ಎರಡೂ ಮಾದರಿಯ ಜ್ವರಗಳಿಗೆ ರಕ್ತ ಪರೀಕ್ಷೆಯೇ ಪತ್ತೆ ಮಾಡುವುದಕ್ಕೆ ನಿಖರವಾದ ಆಧಾರ.

ಚಿಕಿತ್ಸೆ ಏನು?

ಮಲೇರಿಯ

ಕ್ಲೊರೊಕ್ವಿನ್‌ನಂಥ ಔಷಧಿಗಳು ಇದಕ್ಕಾಗಿಯೇ ಇವೆ. ಪ್ಲಾಸ್ಮೋಡಿಯಂನಂಥ ಪರಾವಲಂಬಿಗಳ ಹತೋಟಿಗೆ ಔಷಧಿ ನೀಡಲಾಗುತ್ತದೆ. ಉಳಿದಂತೆ, ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ಬೇಕಾಗುತ್ತದೆ.

ಡೆಂಗ್ಯು

ಈ ವೈರಸ್‌ಗೆ ಪ್ರತ್ಯೇಕವಾದ ಆಂಟಿವೈರಸ್‌ ಚಿಕಿತ್ಸೆ ಲಭ್ಯವಿಲ್ಲ. ರೋಗಿಯ ಲಕ್ಷಣಗಳನ್ನು ಆಧರಿಸಿ ಅದಕ್ಕೆ ಔಷಧಿಯನ್ನು ನೀಡಲಾಗುತ್ತದೆ. ಪ್ಲೇಟ್‌ಲೆಟ್‌ ಕುಸಿದಂಥ ಸಂದರ್ಭಗಳಲ್ಲಿ ರೋಗಿಯ ಆಹಾರ ಪದ್ಧತಿ ಅತ್ಯಂತ ಮಹತ್ವದ್ದು.

World Malaria Day, Mosquito eradication is essential to prevent the disease

ಸಾವಿನ ಪ್ರಮಾಣ

ಮಲೇರಿಯ

ಸೂಕ್ತ ಸಮಯಲ್ಲೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ, ಮಲೇರಿಯ ಪ್ರಾಣಕ್ಕೆ ಎರವಾಗುತ್ತದೆ. ವಿಶ್ವದಲ್ಲಿ ಇಂದಿಗೂ ಮಲೇರಿಯಕ್ಕೆ ತುತ್ತಾಗು ಜೀವ ಕಳೆದುಕೊಳ್ಳುತ್ತಿರುವವರ ಸಾವಿನ ಸಂಖ್ಯೆ ಬಹಳಷ್ಟಿದೆ.

ಡೆಂಗ್ಯು

ಈ ಜ್ವರವೂ ಪ್ರಾಣಾಪಾಯ ತರಬಹುದಾದರೂ, ಮಲೇರಿಯಕ್ಕೆ ಹೋಲಿಸಿದರೆ ಸಾವಿನ ಪ್ರಮಾಣ ಇದರಲ್ಲಿ ಕಡಿಮೆ.

ತಡೆ ಹೇಗೆ?

ಈ ಎರಡೂ ರೋಗಗಳಲ್ಲಿ ಸೊಳ್ಳೆ ನಿರ್ಮೂಲನೆಯೇ ಮುಖ್ಯವಾಗಿದ್ದು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಬೇಕು. ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇರಬೇಕು.

ಇದನ್ನೂ ಓದಿ: World Malaria Day: ಭಾರತದಲ್ಲಿ ಮಲೇರಿಯಾಗೆ ಪ್ರತಿವರ್ಷ 20 ಸಾವಿರ ಬಲಿ; ಸೊಳ್ಳೆಗಳು ಭಾರಿ ಡೇಂಜರ್‌!

Exit mobile version