Site icon Vistara News

World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

World No Tobacco Day

ಭವಿಷ್ಯದ ಪೀಳಿಗೆಯನ್ನು ತಂಬಾಕಿನ ಜಾಲದಿಂದ ರಕ್ಷಿಸಿಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಹೊರಡಿಸಿದೆ. ಇಂದು ಮಕ್ಕಳು, ವಯಸ್ಕರಾದಿಯಾಗಿ ಜಗತ್ತಿನಲ್ಲಿ ಕೋಟಿಗಟ್ಟಲೆ ಜನ ತಂಬಾಕಿನ ಚಟಕ್ಕೆ ಜೀವ ತೆರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೇ 31ನೇ ದಿನವನ್ನು ವಿಶ್ವದೆಲ್ಲೆಡೆ ಅರಿವಿನ ದಿನವನ್ನಾಗಿ ಆಚರಿಸಲಾಗುತ್ತಿದೆ.
ಪ್ರಗತಿಯನ್ನು ಸಂಖ್ಯೆಗಳಿಂದ ಅಳೆಯುತ್ತೇವೆ ಎಷ್ಟೋ ಸಾರಿ. ಈ ವರ್ಷಕ್ಕೆ ಇಷ್ಟಿರುವ ಸಂಖ್ಯೆ, 2030ಕ್ಕೆ ಎಷ್ಟು ಹೆಚ್ಚುತ್ತದೆ ಎನ್ನುವುದು ಪ್ರಗತಿಯ ಸಂಕೇತವಾಗಿ ತೋರುತ್ತದೆ ನಮಗೆ. ಈಗಾಗಲೇ ವರ್ಷಕ್ಕೆ 60 ಲಕ್ಷದಷ್ಟು ಜನ ತಂಬಾಕಿನ ಬಳಕೆಯಿಂದ ವಾರ್ಷಿಕವಾಗಿ ಮೃತಪಡುತ್ತಿದ್ದಾರೆ. 2030ರ ವೇಳೆಗೆ ಈ ಸಂಖ್ಯೆ 80 ಲಕ್ಷ ದಾಟುವ ಅಂದಾಜಿದೆ. ಸಂಖ್ಯೆಗಳನ್ನು ಕಾಣುವ ಈ ಹೆಚ್ಚಳವನ್ನೂ ಪ್ರಗತಿಯ ಸಾಲಿಗೆ ಸೇರಿಸಬಹುದೇ? ಇದು ಕೇವಲ ನೇರವಾಗಿ ಬಳಸುವವರ ಸಂಖ್ಯೆ. ಪರೋಕ್ಷವಾಗಿ ಇದರ ಪರಿಣಾಮಗಳಿಂದ ಮೃತಪಡುವವರ ಸಂಖ್ಯೆಯನ್ನೂ ಸೇರಿಸಿದರೆ, ತಂಬಾಕಿನ ಘೋರ ಪರಿಣಾಮದ ಅಂದಾಜಾದೀತು ನಮಗೆ. ಈ ಹಿನ್ನೆಲೆಯಲ್ಲಿ, ತಂಬಾಕು ರಹಿತವಾದ ವಿಶ್ವದ ಅಗತ್ಯವನ್ನು ಜಗತ್ತಿನ ಮನಗಾಣಿಸುವ ಉದ್ದೇಶದಿಂದ ಮೇ ತಿಂಗಳ ಕಡೆಯ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ (World No Tobacco Day) ಆಚರಿಸಲಾಗುತ್ತದೆ. ಈ ವರ್ಷ, ಅಂದರೆ 2024ರ ಸಾಲಿನ ಘೋಷ ವಾಕ್ಯ- ತಂಬಾಕು ಉದ್ದಿಮೆಯ ಹಸ್ತಕ್ಷೇಪದಿಂದ ಮಕ್ಕಳನ್ನು ಕಾಪಾಡುವುದು. ಅಪ್ರಾಪ್ತ ವಯಸ್ಕರು ಮತ್ತು ಯುವಜನತೆಯನ್ನೇ ಗುರಿಯಾಗಿಸಿಕೊಂಡು ತಂಬಾಕು ಮಾರಾಟ ವಿಸ್ತರಣೆಗೆ ಉದ್ದಿಮೆ ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ, ಈ ಘೋಷವಾಕ್ಯ ಮಹತ್ವವನ್ನು ಪಡೆದಿದೆ. ವಿಶ್ವದಾದ್ಯಂತ 13ರಿಂದ 15 ವರ್ಷ ವಯಸ್ಸಿನ 37 ದಶಲಕ್ಷ ಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ತಂಬಾಕು ಬಳಸುತ್ತಿದ್ದಾರೆ. ಇವರಲ್ಲಿ ಹುಡುಗಿಯರಿಗಿಂತ ಹುಡುಗರೇ ಹೆಚ್ಚಿದ್ದಾರೆ.

ಹಿನ್ನೆಲೆ ಏನು?

ವಿಶ್ವ ಆರೋಗ್ಯ ಸಂಸ್ಥೆಯ ಅಡಿಯಲ್ಲಿ 1987ರಿಂದ ಈ ಜಾಗೃತಿ ದಿನವನ್ನು ಆಚರಿಸಲಾಗುತ್ತಿದೆ. ನಿಕೋಟಿನ್‌ ವ್ಯಸನಕ್ಕೆ ಬಿದ್ದು, ಜೀವ ಕಳೆದುಕೊಳ್ಳುವ ಲಕ್ಷಾಂತರ ಮಂದಿಯ ದಾರುಣ ಕಥೆಗಳು ಎದುರಿಗಿದ್ದರೂ, ಮತ್ತೆ ತಂಬಾಕಿನ ಚಟಕ್ಕೆ ಅಂಟಿಕೊಳ್ಳುವವರನ್ನು ಇದರಿಂದ ಹೊರ ತರುವ ಅಗತ್ಯವನ್ನು ಮನಗಂಡು, ಈ ಅರಿವಿನ ದಿನವನ್ನು ಅಚರಿಸಲಾಗುತ್ತಿದೆ. ಈ ಕುರಿತಾದ ಅಂಕಿ-ಅಂಶಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ್ದು, ಹೆಚ್ಚಿನವು ಗಾಬರಿ ಹುಟ್ಟಿಸುವಂತಿವೆ.

ಸಂಖ್ಯೆಗಳು ಏನೆನ್ನುತ್ತವೆ?

20ನೇ ಶತಮಾನದಲ್ಲಿ ಸುಮಾರು 10 ಕೋಟಿ ಮಂದಿ ಧೂಮಪಾನದ ಚಟಕ್ಕೆ ಬಲಿಯಾಗಿದ್ದಾರೆ. ಇಡೀ ವಿಶ್ವದ ಒಟ್ಟಾರೆ ಮೃತ್ಯುಗಳಲ್ಲಿ ಶೇ. 15ರಷ್ಟು ಸಾವುಗಳು ಸಂಭವಿಸಿದ್ದು ತಂಬಾಕಿನ ಚಟದಿಂದ. ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಜನ ಸಿಗರೇಟ್‌ಗೆ ಬಲಿಯಾಗುವುದಕ್ಕೆ ಕಾರಣವೆಂದರೆ ಜಗತ್ತಿನ ಐವರು ವಯಸ್ಕರ ಪೈಕಿ ಒಬ್ಬರಿಗೆ ಧೂಮಪಾನದ ಚಟವಿರುವುದು. ಜೊತೆಗೆ, 12 ಲಕ್ಷ ಮಂದಿ ಇನ್ನೊಬ್ಬರು ಸೇದುವ ಸಿಗರೇಟ್‌ ಹೊಗೆಗೆ ಬಲಿಯಾಗುತ್ತಿದ್ದಾರೆ. ಇವರಲ್ಲಿ ಶೇ. 28ರಷ್ಟು ಮಕ್ಕಳಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾದ ಅಗತ್ಯವಿದೆ. ತಂಬಾಕು ಉಪಯೋಗಿಸುವವರಲ್ಲಿ ಶೇ. 80ರಷ್ಟು ಮಂದಿ ಅಭಿವೃದ್ಧಿಶೀಲ ದೇಶಗಳಿಗೆ ಸೇರಿದವರು. ಈ ನಿಟ್ಟಿನಲ್ಲಿ ಬಡತನ ನಿವಾರಣೆಗೂ ತಂಬಾಕು ಉಪಯೋಗ ಕಡಿಮೆಯಾಗುವುದಕ್ಕೂ ನೇರ ಸಂಬಂಧವಿದೆ ಎಂದು ಹೇಳಬಹುದು.

ಇದನ್ನೂ ಓದಿ: Cervical Cancer: ಗರ್ಭಕೊರಳಿನ ಕ್ಯಾನ್ಸರ್‌ಗೆ ಮುನ್ನೆಚ್ಚರಿಕೆಯೇ ಮದ್ದು

ಮಕ್ಕಳೇ ಏಕೆ?

ಅಪ್ರಾಪ್ತ ವಯಸ್ಕರನ್ನೇ ತಂಬಾಕು ಉದ್ದಿಮೆ ಗುರಿಯಾಗಿಸಿಕೊಂಡಿರುವುದೇಕೆ? ಪ್ರತಿ ವರ್ಷ ತಂಬಾಕಿಗೆ ಜೀವ ಕಳೆದುಕೊಳ್ಳುವ ಮತ್ತು ಚಟದಿಂದ ದೂರವಾಗುವ ಲಕ್ಷಗಟ್ಟಲೆ ಜನಕ್ಕೆ ಬದಲಿಯಾಗಿ ಗ್ರಾಹಕರನ್ನು ತಂಬಾಕು ಉದ್ದಿಮೆ ಹುಡುಕುತ್ತಲೇ ಇರುತ್ತದೆ. ವಯಸ್ಕರಿಗೆ ಈ ಚಟವನ್ನು ಹೊಸದಾಗಿ ಅಂಟಿಸುವುದು ಸುಲಭವಲ್ಲ. ಆದರೆ ಇನ್ನೂ ಅರಿವು ಮೂಡದ ಮಕ್ಕಳನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವುದು ಮಾರಾಟಗಾರರಿಗೆ ಸುಲಭ. ಇದಿಷ್ಟೇ ಅಲ್ಲ, ವಯಸ್ಕರಲ್ಲಿ ತಂಬಾಕಿನಿಂದ ದೂರವಾಗುವ ಅಥವಾ ಚಟದಿಂದ ಬಿಡಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದೇ ಮಕ್ಕಳಲ್ಲಾದರೆ ಒಮ್ಮೆ ಅಂಟಿಸಿದರೆ ದೀರ್ಘ ಕಾಲ ಅವರನ್ನು ತಮ್ಮ ಗ್ರಾಹಕರನ್ನಾಗಿ ಇರಿಸಿಕೊಳ್ಳಬಹುದು ಎಂಬುದು ಉದ್ದಿಮೆಗೆ ತಿಳಿದಿದೆ. ಈ ಎಲ್ಲ ಕಾರಣಗಳಿಗಾಗಿ ಮಕ್ಕಳನ್ನು ತಂಬಾಕಿನ ಜಾಲದಿಂದ ರಕ್ಷಿಸಬೇಕೆಂಬ ಘೋಷಣೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಮುಂದಿರಿಸಿದೆ.

Exit mobile version