Site icon Vistara News

World Organ Donation Day: ಇಂದು ವಿಶ್ವ ಅಂಗಾಂಗದಾನ ದಿನ; ಯಾರದ್ದೋ ಬದುಕಿಗೆ ಭರವಸೆಯಾಗೋಣ! ನೋಂದಣಿ ಹೇಗೆ?

World Organ Donation Day

ಇಂದು ವಿಶ್ವ ಅಂಗಾಂಗ (World Organ Donation Day) ದಾನ ದಿನ. ನಮ್ಮೊಂದಿಗೇ ನಮ್ಮ ಅಮೂಲ್ಯ ಅಂಗಾಂಗಗಳು ಮಣ್ಣುಗೂಡಬಾರದೆಂಬ ಜಾಗೃತಿಯನ್ನು ಎಲ್ಲರಲ್ಲಿ ಮೂಡಿಸುವುದು ಈ ದಿನದ ಉದ್ದೇಶ. ನಮ್ಮ ಬುದಕಿನ ನಂತರ, ಅಗತ್ಯ ಇರುವವರಿಗೆ ಅಂಗಾಂಗಳನ್ನು ದಾನ ಮಾಡಲು ನಾವು ಬದುಕಿದ್ದಾಗಲೇ ನಿರ್ಧಾರಗಳನ್ನು ಮಾಡಬೇಕೆಂಬ ಸರಳ ಸತ್ಯಗಳನ್ನು ಅರಿವಿಗೆ ತರಿಸುವುದಕ್ಕೆ ಇದನ್ನು ಆಚರಿಸಲಾಗುತ್ತದೆ. ಅಂದಹಾಗೆ, ಅಂಗಾಂಗ ದಾನವನ್ನು ಬದುಕಿರುವವರೂ ಮಾಡಬಹುದು. ಈ ಬಾರಿಯ ಘೋಷವಾಕ್ಯ: ಯಾರದ್ದೋ ನಗುವಿಗೆ ನೀವು ಇಂದೇ ಕಾರಣರಾಗಿ! ದಿನದಿಂದ ದಿನಕ್ಕೆ ಅಂಗಾಂಗ ದಾನ ಬಯಸುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ದಾನಿಗಳ ಸಂಖ್ಯೆ ಕಡಿಮೆಯಿದೆ. ಜನ್ಮಜಾತ ಸಮಸ್ಯೆ ಇರುವವರು, ಬದುಕಿನ ಯಾವುದೋ ಹಂತದಲ್ಲಿ ಕ್ಯಾನ್ಸರ್‌ ಅಥವಾ ಇನ್ನಾವುದೋ ರೋಗಕ್ಕೆ ತುತ್ತಾಗಿ ಅಂಗಗಳ ಕಸಿ ಅಗತ್ಯವಾದವರು, ಅಪಘಾತಕ್ಕೆ ತುತ್ತಾಗಿ ಅಂಗಗಳನ್ನು ಕಳೆದುಕೊಂಡವರು- ಹೀಗೆ ಅಂಗಗಳ ದಾನ ಬೇಡುವುದಕ್ಕೆ ಬಹಳಷ್ಟು ಕಾರಣಗಳು ಇರಬಹುದು. ಕಣ್ಣು, ಯಕೃತ್‌, ಮೂತ್ರಪಿಂಡ, ಹೃದಯ, ಪುಪ್ಪುಸ ಮುಂತಾದ ಹಲವು ಅಂಗಗಳನ್ನು ಕಸಿ ಮಾಡುವುದಕ್ಕೆ ವೈದ್ಯ ವಿಜ್ಞಾನಕ್ಕೆ ಇಂದು ಸಾಧ್ಯವಿದೆ. ಆದರೆ ದಾನಿಗಳ ಕೊರತೆ ಕಾಡುತ್ತದೆ.

ಇತಿಹಾಸ

ಅಂಗದಾನದ ಮೂಲ 20ನೇ ಶತಮಾನದಲ್ಲಿದೆ. 1954ರಲ್ಲಿ ಮೊದಲ ಬಾರಿಗೆ ಮೂತ್ರಪಿಂಡದ ಕಸಿಯನ್ನು ಯಶಸ್ವಿಯಾಗಿ ಮಾಡಲಾಯಿತು. ರೊನಾಲ್ಡ್‌ ಲೀ ಹೆರಿಕ್‌ ಎಂಬಾತ ತನ್ನ ಅವಳಿ ಸೋದರನಿಗೆ ದಾನ ಮಾಡಿದ್ದ ಮೂತ್ರಪಿಂಡವನ್ನು ಡಾ. ಜೋಸೆಫ್‌ ಮರ್ರೆ ಯಶಸ್ವಿಯಾಗಿ ಕಸಿ ಮಾಡಿದ್ದರು. ಆನಂತರದಿಂದ ಅಂಗದಾನ ಮತ್ತು ಕಸಿಯ ಬಗ್ಗೆ ವೈದ್ಯ ವಿಜ್ಞಾನ ಬಹಳ ಮುಂದುವರಿದಿದ್ದು, 1994ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಹೃದಯವನ್ನೂ ಯಶಸ್ವಿಯಾಗಿ ಕಸಿ ಮಾಡಲಾಗಿತ್ತು. ಅಂಗದಾನದ ಬಗ್ಗೆ ಅರಿವು ಮೂಡಿಸಿ, ನಿಸ್ವಾರ್ಥ ಭಾವದಿಂದ ಅಂಗದಾನ ಮಾಡಿದವರ ಮತ್ತು ಅವರ ಕುಟುಂಬದವರ ಉಪಕಾರವನ್ನು ಸ್ಮರಿಸುವ ನಿಟ್ಟಿನಲ್ಲಿ ಆಗಸ್ಟ್‌ ತಿಂಗಳ ೧೩ನೇ ದಿನವನ್ನು ವಿಶ್ವದೆಲ್ಲೆಡೆ ಅಂಗದಾನ ದಿನವೆಂದು ಗುರುತಿಸಲಾಗಿದೆ.
ವಿಶ್ವದಲ್ಲಿ ಇಂದಿಗೂ ಲಕ್ಷಾಂತರ ಮಂದಿ ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ. ಪ್ರತಿಯೊಬ್ಬ ದಾನಿಯೂ ತನ್ನ ನಂತರ ಮಾಡುವ ಅಂಗದಾನದಿಂದ 8 ಮಂದಿಯ ಜೀವ ಉಳಿಸಿ, 75 ಜನರ ಬದುಕನ್ನು ಹಸನು ಮಾಡಬಹುದು. ಹಾಗಾಗಿ ಈ ಜೀವ ಉಳಿಸುವ ಕ್ರಿಯೆಯಲ್ಲಿ ಪಾಲ್ಗೊಳ್ಳಿ, ನಿಮ್ಮ ನಂತರ ಇತರರ ಬದುಕನ್ನು ಸುಂದರವಾಗಿಸಿ ಎನ್ನುವ ಸಂದೇಶವನ್ನು ಸಾರಲಾಗುತ್ತಿದೆ.

ಇದನ್ನೂ ಓದಿ: Ghee For Health: ನಾವು ಆರೋಗ್ಯವಾಗಿರಲು ದಿನಕ್ಕೆಷ್ಟು ತುಪ್ಪ ತಿನ್ನಬೇಕು?

ಭಾರತದಲ್ಲಿ ಹೇಗೆ?

ಅಂಗ ದಾನ ಮಾಡಲು ಆಸಕ್ತಿ ಇರುವವರು ಇದಕ್ಕಾಗಿ ನೋಂದಣಿ ಮಾಡಿಸಿಕೊಳ್ಳುವುದು ಅಗತ್ಯ. ಇದನ್ನು ಭಾರತದಲ್ಲಿ ಹೇಗೆ ಮಾಡಬೇಕು? ನಮ್ಮ ದೇಶದಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಕಾನೂನು ರೂಪಿಸಲಾಗಿದೆ. ಮಾನವ ಅಂಗ ಮತ್ತು ಅಂಗಾಂಶ ಕಸಿ ಕಾಯ್ದೆ 1994ರ ಅನ್ವಯ ಇದನ್ನು ನಿರ್ವಹಿಸಲಾಗುತ್ತದೆ. 18 ವರ್ಷಕ್ಕೆ ಮೇಲ್ಪಟ್ಟವರು- ಯಾವುದೇ ಲಿಂಗ, ವಯಸ್ಸು, ಜಾತಿ, ಮತ ಇತ್ಯಾದಿಗಳ ಭೇದವಿಲ್ಲದೆ, ಎಲ್ಲರೂ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಇದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್‌ ಇದ್ದು, ಇದರ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
https://www.organindia.org/pledge-to-be-an-organ-donor/
ಈ ವೆಬ್‌ಸೈಟ್‌ನಲ್ಲಿ ಅರ್ಜಿ ತುಂಬಿದ ಮೇಲೆ, ಸರಕಾರದಿಂದಲೇ ನೀಡಲಾದ ಪ್ರತ್ಯೇಕ ನೋಂದಣಿ ಸಂಖ್ಯೆ ಹೊಂದಿದ ʻಡೋನರ್‌ ಕಾರ್ಡ್‌ʼ ಲಭಿಸುತ್ತದೆ. ಈ ಬಗ್ಗೆ ಕುಟುಂಬದವರ ಜೊತೆ ಚರ್ಚಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬೇಕಾದ್ದು ದಾನಿಗಳ ಕರ್ತವ್ಯ. ಕಾರಣ, ದಾನಿಯ ದೇಹಾಂತ್ಯದ ನಂತರ ಅವರ ವಾರಸುದಾರರೇ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಒಂದೊಮ್ಮೆ ಅಂಗದಾನದ ನೋಂದಣಿ ಮಾಡಿದ್ದರೂ, ವಾರಸುದಾರರು ಪ್ರತಿಕೂಲವಾಗಿ ನಿರ್ಧರಿಸಿದರೆ, ಅದನ್ನು ನೆರವೇರಿಸಲು ಸಾಧ್ಯವಿಲ್ಲ. ಹಾಗಾಗಿ ಕುಟುಂಬದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ.

Exit mobile version