Site icon Vistara News

Yoga For Menopause: ಋತುಬಂಧ ಸಮಸ್ಯೆ ನಿಭಾಯಿಸಲು ಯೋಗ ನೆರವಾಗುವುದೇ?

Menopause

ರಜೋನಿವೃತ್ತಿ ಎಂಬುದು (Yoga for Menopause) ಎಲ್ಲ ಮಹಿಳೆಯರ ಬದುಕಿನ ನೈಸರ್ಗಿಕವಾಗ ಹಂತ. ಬದುಕಿನಲ್ಲಿ ಆವರೆಗೆ ಜೊತೆಯಲ್ಲಿದ್ದ ಪ್ರಜನನ ಸಾಮರ್ಥ್ಯ ಆನಂತರ ಇಲ್ಲವಾಗುವ ಹಂತವನ್ನೇ ಋತುಬಂಧ ಎಂದು ಕರೆಯುತ್ತೇವೆ. ಸಾಮಾನ್ಯವಾಗಿ 40ರ ನಂತರ ಯಾವಾಗಲಾದರೂ ಆರಂಭವಾಗುವ ಈ ಹಂತ, ಕೆಲವರಲ್ಲಿ ಮುಗಿಯುವಾಗ 55 ಸಮೀಪಿಸಿರುತ್ತದೆ. ಇದೊಂದು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲ, ಬದಲಿಗೆ ಹೊಸದಾಗಿ ತಮ್ಮನ್ನು ಮಹಿಳೆಯರು ಹುಡುಕುವ ಪ್ರಕ್ರಿಯೆ. ಹಾಗಾಗಿಯೇ ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಲವು ಸವಾಲುಗಳನ್ನು ಈ ದಿನಗಳು ಎದುರಿಡುತ್ತವೆ. ಇದ್ದಕ್ಕಿದ್ದಂತೆ ಮೈಯೆಲ್ಲಾ ಕಾವೇರಿದಂತೆ ಬಿಸಿಯಾಗುವುದು, ಮೈ ಬೆವರುವುದು, ಸುಸ್ತು-ಆಯಾಸ, ನಿಧಾನವಾಗುವ ಚಯಾಪಚಯ, ನಿದ್ದೆ ಬಾರದಿರುವುದು, ಮೂಡ್‌ ಏರುಪೇರು ಮುಂತಾದ ಹತ್ತು-ಹಲವು ಲಕ್ಷಣಗಳು ಕಂಡುಬರುತ್ತವೆ. ಈ ಲಕ್ಷಣಗಳು ಅತಿಯಾಗಿ, ನಿಭಾಯಿಸಲಾರದೆ ಹಾರ್ಮೋನ್‌ ಚಿಕಿತ್ಸೆಗಳನ್ನು ತೆಗೆದುಕೊಂಡವರೂ ಇರಬಹುದು. ಕೆಲವರು ನೈಸರ್ಗಿಕ ಕ್ರಮಗಳ ಮೂಲಕ ಆರೋಗ್ಯ ಸುಧಾರಿಸಿಕೊಂಡವರೂ ಇದ್ದಿರಬಹುದು. ಅಂಥ ಕ್ರಮಗಳಲ್ಲಿ ಯೋಗ ಅ‍ಭ್ಯಾಸವೂ ಒಂದು. ಯೋಗಾಭ್ಯಾಸವು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ನೆಲೆಗಳಲ್ಲಿ ಮಾಡುವಂಥ ಪ್ರಯೋಜನಗಳೇನು ಎಂಬುದನ್ನು ನೋಡೋಣ.

ದೈಹಿಕ ಲಾಭಗಳೇನು?

ಮೈ ಬಿಸಿಯಾಗುವುದು ಮತ್ತು ಅತಿಯಾಗಿ ಬೆವರುವುದು ಈ ದಿನಗಳ ಅತ್ಯಂತ ಸಾಮಾನ್ಯ ಲಕ್ಷಣ. ಹೀಗೆ ಇದ್ದಕ್ಕಿದ್ದಂತೆ ಮೈ ಬಿಸಿಯೇರುವುದು ಸಾಕಷ್ಟು ಕಿರಿಕಿರಿಯನ್ನುಂಟು ಮಾಡುತ್ತದೆ. ಯೋಗದಲ್ಲಿ ಅಭ್ಯಾಸ ಮಾಡುವ ಉತ್ತಾನಪಾದಾಸನ, ಬಾಲಾಸನ, ವಿಪರೀತ ಕರಣಿಯಂಥ ಆಸನಗಳು ಮನಸ್ಸನ್ನು ವಿಶ್ರಾಂತಿಯೆಡೆಗೆ ದೂಡುತ್ತವೆ. ಇದರಿಂದ ದೇಹದ ಆಂತರಿಕ ಉಷ್ಣತೆ ಕಡಿಮೆಯಾಗಿ, ಇಂಥ ಲಕ್ಷಣಗಳನ್ನು ಕಡಿಮೆ ಮಾಡಲು ಅನುಕೂಲವಾಗುತ್ತದೆ.

ನೋವುಗಳು

ರಜೋನಿವೃತ್ತಿಯಲ್ಲಿ ಈಸ್ಟ್ರೋಜೆನ್‌ ಹಾರ್ಮೋನಿನ ಮಟ್ಟ ಗಣನೀಯವಾಗಿ ಕುಸಿಯುವುದರಿಂದ, ಕೀಲುಗಳು, ಸ್ನಾಯುಗಳಲ್ಲಿ ನೋವಿನ ಪ್ರಮಾಣ ಹೆಚ್ಚಬಹುದು. ಈ ಹಂತದಿಂದ ಮುಂದಿನ ಬದುಕಿನಲ್ಲಿ ದೇಹದ ಕೀಲುಗಳ ನಮ್ಯತೆಯನ್ನು ಹೆಚ್ಚಿಸುವ ಮತ್ತು ಸ್ನಾಯುಗಳ ಶಕ್ತಿಯನ್ನು ವೃದ್ಧಿಸುವ ವ್ಯಾಯಾಮಗಳು ಬೇಕೇಬೇಕು. ಮಾರ್ಜರಿಯಾಸನ, ಬಿಟಿಲಾಸನ, ವೀರಭದ್ರಾಸನ, ಸೇತುಬಂಧಾಸನ, ಧನುರಾಸನದಂಥ ಭಂಗಿಗಳು ಕೀಲು ಮತ್ತು ಸ್ನಾಯುಗಳ ದೇಖರೇಕಿ ಮಾಡುವಲ್ಲಿ ನೆರವಾಗುತ್ತವೆ.

ಮೂಳೆಗಳ ಆರೋಗ್ಯ

ಒಮ್ಮೆ ಈಸ್ಟ್ರೋಜೆನ್‌ ಪ್ರಮಾಣ ಕಡಿಮೆಯಾದರೆ, ಆಸ್ಟಿಯೊಪೊರೋಸಿಸ್‌ ನಂಥ ಮೂಳೆ ಟೊಳ್ಳಾಗುವ ತೊಂದರೆಗಳು ಅಮರಿಕೊಳ್ಳುತ್ತವೆ. ಇದಕ್ಕಾಗಿ ಕೆಲವು ವಿಶೇಷ ಆಸನಗಳು ಅಗತ್ಯವಾಗಿದ್ದು, ಈ ಮೂಲಕ ಸ್ನಾಯುಗಳನ್ನು ಬಲಗೊಳಿಸಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಬಹುದು. ಇದಕ್ಕಾಗಿ ವೃಕ್ಷಾಸನ, ತ್ರಿಕೋಣಾಸನದಂಥ ಭಂಗಿಗಳು ಅಗತ್ಯವಾಗುತ್ತವೆ.

ಮಾನಸಿಕ ಆರೋಗ್ಯಕ್ಕಾಗುವ ಲಾಭ

ಆತಂಕ, ಒತ್ತಡ, ಖಿನ್ನತೆ, ಮೂಡ್‌ ಬದಲಾವಣೆಯಂಥ ಮಾನಸಿಕ ಸಮಸ್ಯೆಗಳು ಈ ದಿನಗಳಲ್ಲಿ ಎಷ್ಟೋ ಮಹಿಳೆಯರನ್ನು ಕಾಡುತ್ತದೆ. ಯೋಗದಲ್ಲಿ ಅಭ್ಯಾಸ ಮಾಡುವ ಮಾನಸಿಕ ಸ್ಥಿರತೆಯ ಕ್ರಮಗಳು ಮತ್ತು ಉಸಿರಾಟದ ತಂತ್ರಗಳು ಈ ನಿಟ್ಟಿನಲ್ಲಿ ಬಹುದೊಡ್ಡ ನೆರವು ನೀಡುತ್ತವೆ. ನಾಡಿಶೋಧನ, ಭ್ರಾಮರಿಯಂಥ ಉಸಿರಾಟದ ತಂತ್ರಗಳು ಮನಸ್ಸನ್ನು ಕೇಂದ್ರೀಕರಿಸಲು ಉಪಯುಕ್ತ. ನಿಯಮಿತವಾದ ಧ್ಯಾನದಿಂದ ಆಗುವ ಲಾಭಗಳಂತೂ ಹೇಳಿ ಮುಗಿಸಲಾಗದು.

ನಿದ್ದೆ

ಋತುಬಂಧದ ದಿನಗಳಲ್ಲಿ ಮತ್ತು ನಂತರ ಬಹಳಷ್ಟು ಮಹಿಳೆಯರು ನೆಮ್ಮದಿಯ ನಿದ್ದೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಆಳ ವಿಶ್ರಾಂತಿಗೆ ದೂಡುವಂಥ ಡಿಆರ್‌ಟಿ ಅಥವಾ ಯೋಗನಿದ್ದೆಯಂಥ ಅಭ್ಯಾಸಗಳು ನಿದ್ದೆಯ ತೊಂದರೆಯನ್ನು ಬಹುತೇಕ ದೂರ ಮಾಡುತ್ತವೆ. ಜೊತೆಗೆ ಮಕರಾಸನ, ಸುಪ್ತಬದ್ಧಕೋಣಾಸನ, ಶವಾಸನದಂಥವು ಹೆಚ್ಚುವರಿ ವಿಶ್ರಾಂತಿಯನ್ನು ಒದಗಿಸುತ್ತವೆ.

ಇದನ್ನೂ ಓದಿ: Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

ಸ್ಪಷ್ಟತೆ, ಏಕಾಗ್ರತೆ

ರಜೋನಿವೃತ್ತಿಯಲ್ಲಿ ಕಾಣುವ ಇನ್ನೊಂದು ತೊಂದರೆಯೆಂದರೆ ನೆನಪು ಮತ್ತು ಏಕಾಗ್ರತೆಯ ಕೊರತೆ. ಕೆಲವೊಮ್ಮೆ ನಿರ್ಧಾರಗಳಲ್ಲಿ ಗೊಂದಲೂ ಮೂಡುತ್ತದೆ. ಇದಕ್ಕಾಗಿ ದೇಹ-ಮನಸ್ಸುಗಳ ಹೆಚ್ಚುವರಿ ಹೊಂದಾಣಿಕೆಯನ್ನು ಬೇಡುವ ಗರುಡಾಸನ, ಅರ್ಧ ಚಂದ್ರಾಸನ ಮುಂತಾದ ಭಂಗಿಗಳು ಮಾನಸಿಕ ಸ್ಪಷ್ಟತೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ ಧ್ಯಾನ ಮತ್ತು ಪ್ರಾಣಾಯಾಮ ಅತ್ಯಗತ್ಯ.

Exit mobile version