Site icon Vistara News

Yogurt vs Curd: ಮಾಮೂಲಿ ಮೊಸರಿಗೂ ಗ್ರೀಕ್‌ ಯೋಗರ್ಟ್‌ಗೂ ಏನು ವ್ಯತ್ಯಾಸ?

Yogurt vs Curd

ಮೊಸರನ್ನು ಮೆಚ್ಚದವರು (Yogurt vs Curd) ಅಪರೂಪ. ದ್ವಾಪರದ ಕೃಷ್ಣನಿಂದ ಹಿಡಿದು, ಕಲಿಯುಗದ ಚಿಣ್ಣರೆಲ್ಲರೂ ಗಟ್ಟಿ ಮೊಸರು ತಟ್ಟೆಗೆ ಬರುತ್ತಿದ್ದಂತೆ ಸಂಭ್ರಮಿಸುತ್ತಾರೆ. ಇದು ಮನೆಯಲ್ಲಿ ಮಾಡಿದ ಮೊಸರೇ ಇರಬಹುದು ಅಥವಾ ಅಂಗಡಿಯಿಂದ ತಂದ ʻಯೋಗರ್ಟ್‌ʼ ಎಂಬ ಹೆಸರಿನದ್ದೇ ಇರಬಹುದು. ಅಂತೂ ಮೊಸರು ಮೆಲ್ಲುವುದು ಬಹುಮಂದಿಗೆ ಮೆಚ್ಚಿನ ಕೆಲಸ. ಬೇರೆ ಬೇರೆ ಬ್ರ್ಯಾಂಡ್‌ಗಳಲ್ಲಿ ಹಲವು ರುಚಿಗಳ ಯೋಗರ್ಟ್‌ಗಳು ದೊರೆಯುತ್ತವೆ; ಸದಾ ಕಾಲ ಸಪ್ಪೆ ಮೊಸರನ್ನೇ ತಿನ್ನಬೇಕೆಂದಿಲ್ಲ. ಜೊತೆಗೆ ಗ್ರೀಕ್‌ ಯೋಗರ್ಟ್‌ ತಿನ್ನುವವರ ಸಂಖ್ಯೆಯೂ ಕಡಿಮೆ ಇಲ್ಲ. ಆದರೆ ಆಯ್ಕೆಯ ಪ್ರಶ್ನೆ ಬಂದಾಗ ಯಾವುದನ್ನು ಕೈಗೆತ್ತಿಕೊಳ್ಳಬೇಕು ಎಂಬ ಗೊಂದಲ ಬಂದರೆ, ಸಹಜ. ಹಾಗಾಗಿ ಮಾಮೂಲಿ ಮೊಸರಿಗೂ ಗ್ರೀಕ್‌ ಯೋಗರ್ಟ್‌ ಇರುವ ವ್ಯತ್ಯಾಸಗಳನ್ನು ತಿಳಿದುಕೊಂಡರೆ, ಯಾವುದನ್ನು ಆಯ್ದುಕೊಳ್ಳಬೇಕು ಎನ್ನುವ ಗೊಂದಲಕ್ಕೆ ಉತ್ತರ ದೊರೆಯುತ್ತದೆ. ಪ್ಲೇನ್‌ ಯೋಗರ್ಟ್‌ ಮತ್ತು ಗ್ರೀಕ್‌ ಯೋಗರ್ಟ್‌- ಈ ಎರಡೂ ರೀತಿಯ ಮೊಸರಿಗೆ ಅದರದ್ದೇ ಆದ ಪ್ರತ್ಯೇಕ ರುಚಿ, ಘಮ ಮತ್ತು ಸತ್ವಗಳಿವೆ. ಪ್ಲೇನ್‌ ಯೋಗರ್ಟ್‌ ನಮ್ಮ ಮನೆಗಳಲ್ಲಿ ನಿತ್ಯ ಉಪಯೋಗಿಸುವ ಮೊಸರಿನಂತೆಯೇ, ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಮಾರುಕಟ್ಟೆಯ ದೃಷ್ಟಿಯಿಂದ ಅದಕ್ಕೆ ಬಣ್ಣ, ರುಚಿ, ಘಮ ಇತ್ಯಾದಿಗಳನ್ನು ಸೇರಿಸಿದವು ಲಭ್ಯವಿವೆ. ಕೃತಕ ಬಣ್ಣ, ರುಚಿ, ಸಕ್ಕರೆಗಳು ಬೇಡ ಎನ್ನುವವರಿಗೆ ಮನೆಯಲ್ಲಿ ಮಾಡಿದ ಮೊಸರು ಎಲ್ಲ ದೃಷ್ಟಿಯಲ್ಲೂ ಶ್ರೇಷ್ಠ. ಇವುಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮೊಸರು

ಇದು ಗ್ರೀಕ್‌ ಯೋಗರ್ಟ್‌ನಷ್ಟು ಮಂದವಿರುವುದಿಲ್ಲ. ಮನೆಯಲ್ಲಿ ಮಾಡಿದ ಮೊಸರಿನಂತೆಯೇ ರುಚಿ, ಬಣ್ಣ ಎಲ್ಲವೂ ಇರುತ್ತದೆ. ಪ್ಲೇನ್‌ ಯೋಗರ್ಟ್‌ ಮತ್ತು ಮನೆ ಮೊಸರಿಗೆ ಹೆಚ್ಚಿನ ವ್ಯತ್ಯಾಸವೂ ಇಲ್ಲ. ಆರೋಗ್ಯಕ್ಕೆ ಅಗತ್ಯವಾದ ಬೇಕಾದ ಪ್ರೊಬಯಾಟಿಕ್‌ ಅಂಶಗಳನ್ನು ಹೇರಳವಾಗಿ ನೀಡುತ್ತದೆ. ಇದಲ್ಲದೆ, ಸಾಕಷ್ಟು ಪ್ರೊಟೀನ್‌ ಅಂಶಗಳನ್ನೂ ಒಳಗೊಂಡಿದ್ದು, ಸ್ನಾಯುಗಳ ದುರಸ್ತಿ ಮತ್ತು ಬೆಳವಣಿಗೆಗೆ ಸೂಕ್ತವಾಗಿದೆ.
ಕ್ಯಾಲ್ಶಿಯಂ ಸತ್ವ ಇದರಲ್ಲಿ ಭರಪೂರ ದೊರೆಯುತ್ತದೆ. ಮೂಳೆಗಳನ್ನು ಬಲಪಡಿಸುವುದಕ್ಕೆ ಇದು ಒಳ್ಳೆಯ ಆಯ್ಕೆ. ಜೀರ್ಣಾಂಗಗಳಿಗೆ ಬೇಕಾದ ಒಳ್ಳೆಯ ಬ್ಯಾಕ್ಟೀರಿಯಗಳನ್ನು ಇದು ಧಾರಾಳವಾಗಿ ನೀಡುತ್ತದೆ. ಜೊತೆಗೆ, ವಿಟಮಿನ್‌ ಡಿ, ವಿಟಮಿನ್‌ ಬಿ೧೨, ಪೊಟಾಶಿಯಂ ಮತ್ತು ಮೆಗ್ನೀಶಿಯಂ ಸತ್ವಗಳು ಇದರಲ್ಲಿವೆ. ನೈಸರ್ಗಿಕವಾಗಿ ಕೊಂಚ ಸಕ್ಕರೆಯಂಶವೂ ಇದರಲ್ಲಿದ್ದು, ಉತ್ತಮ ಪಿಷ್ಟ ದೇಹಕ್ಕೆ ಲಭಿಸುತ್ತದೆ.

ಗ್ರೀಕ್‌ ಯೋಗರ್ಟ್‌

ಹಾಲಿನಲ್ಲಿರುವ ನೀರಿನಂಶವನ್ನು ತೆಗೆದು ಸಂಸ್ಕರಿಸಿದ ನಂತರ ಈ ಮೊಸರನ್ನು ಮಾಡಲಾಗುವುದರಿಂದ, ಗ್ರೀಕ್‌ ಯೋಗರ್ಟ್‌ ಹೆಚ್ಚು ಮಂದವಾಗಿ ಕೆನೆಭರಿತವಾಗಿರುತ್ತದೆ. ಇದರ ರುಚಿಯೂ ಗಾಢವಾಗಿಯೇ ಇರುವುದರಿಂದ ಮಾಮೂಲಿ ಮೊಸರಿನ ಬದಲು, ಇದನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆ ಸಾಕಷ್ಟು ದೊಡ್ಡದಿದೆ. ಇದರಲ್ಲೂ ಪ್ರೊಬಯಾಟಿಕ್‌ ಕಿಣ್ವಗಳು ಸಾಕಷ್ಟಿವೆ. ಆದರೆ ಮೊಸರಿನಲ್ಲಿರುವ ದೊರೆಯುವ ಬ್ಯಾಕ್ಟೀರಿಯಗಳಿಗೂ ಗ್ರೀಕ್‌ ಯೋಗರ್ಟ್‌ನಲ್ಲಿ ದೊರೆಯುವ ಬ್ಯಾಕ್ಟೀರಿಯಗಳಿಗೂ ವ್ಯತ್ಯಾಸವಿದೆ.
ಮಾಮೂಲಿ ಮೊಸರಿಗಿಂತ ಗ್ರೀಕ್‌ ಯೋಗರ್ಟ್‌ನಲ್ಲಿ ಪ್ರೊಟೀನ್‌ ಸಾಂದ್ರವಾಗಿದೆ. ಇದರಿಂದ ಸ್ನಾಯುಗಳನ್ನು ಬೆಳೆಸಲು, ದೇಹ ಹುರಿಗಟ್ಟಿಸಲು ಇದು ಯೋಗ್ಯವಾದ ಆಹಾರ. ಅದರಲ್ಲೂ ಸಸ್ಯಾಹಾರಿಗಳಿಗೆ ಪ್ರೊಟೀನ್‌ ಅಂಶವನ್ನು ಹೆಚ್ಚಿಸಿಕೊಳ್ಳಲು ಇದು ಉತ್ತಮ ಆಯ್ಕೆ. ಇದರಲ್ಲಿರುವ ನೀರಿನಂಶವನ್ನು ತೆಗೆಯಲಾದ್ದರಿಂದ, ಮಾಮೂಲಿ ಮೊಸರಿಗಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ ಕ್ಯಾಲ್ಶಿಯಂ ಅಂಶ ಇರುತ್ತದೆ.
ಉಳಿದಂತೆ ವಿಟಮಿನ್‌ಗಳು, ಖನಿಜಗಳು ಇದರಲ್ಲೂ ಇವೆ. ಆದರೆ ಸಾಂದ್ರತೆ ಮಾಮೂಲಿ ಮೊಸರಿಗಿಂತ ಕೊಂಚ ಭಿನ್ನವಾಗಿರುತ್ತದೆ. ಇದರಲ್ಲಿ ಸಕ್ಕರೆಯಂಶ ಮತ್ತು ಪಿಷ್ಟವೂ ಕಡಿಮೆ. ಹಾಗಾಗಿ ತೂಕ ಇಳಿಸುವ ಉದ್ದೇಶ ಇರುವವರಿಗೆ ಇದು ಒಳ್ಳೆಯ ಆಯ್ಕೆ. ಲ್ಯಾಕ್ಟೋಸ್‌ ತಿಂದರೆ ಸಮಸ್ಯೆ ಆಗುತ್ತದೆ ಎನ್ನುವವರಿಗೆ ಮಾಮೂಲಿ ಮೊಸರಿಗಿಂತ ಗ್ರೀಕ್‌ ಯೋಗರ್ಟ್‌ ಒಳ್ಳೆಯದು.

ಇದನ್ನೂ ಓದಿ: Health Tips: ನಮ್ಮ ದೇಹಕ್ಕೆ ಪ್ರೊಟೀನ್‌ ಪುಷ್ಟಿ ನೀಡಲು ಯಾವ ಮೊಳಕೆ ಕಾಳುಗಳು ಸೂಕ್ತ?

Exit mobile version