Site icon Vistara News

Drumsticks For Weight Loss: ನುಗ್ಗೆಕಾಯಿ ತಿಂದೂ ತೂಕ ಇಳಿಸಿಕೊಳ್ಳಬಹುದು!

Drumsticks For Weight Loss

ಹಳೆಯ ಕಾಲದ ಜನರನ್ನು ಕೇಳಿದರೆ ಹೊಟ್ಟೆಯ ಮೇಲೊಂದು ಪುಟ್ಟ ಡೊಳ್ಳು ಕೂರುವುದು ಸಿರಿವಂತಿಕೆಯ ಲಕ್ಷಣ ಎನ್ನುತ್ತಿದ್ದರು. ಇಂದಿನ ಕಾಲದಲ್ಲಿ ಡೊಳ್ಳು ಸಿರಿಯಲ್ಲ, ಆರೋಗ್ಯಕ್ಕೆ ಹೊರೆ! ಬರೀ ಹೊಟ್ಟೆ ಕರಗಿಸುವುದು ಮಾತ್ರವೇ ಸವಾಲಲ್ಲ, ದೇಹ ತೂಕ ಕರಗಿಸುವುದೇ ದೊಡ್ಡ ಸವಾಲು ಎನಿಸುತ್ತದೆ. ಇದಕ್ಕಾಗಿ ಊಟ ಬಿಟ್ಟು, ನಿದ್ದೆಗೆಟ್ಟು, ತಲೆ ಕೆಟ್ಟು ಪ್ರಯತ್ನಿಸಿದರೂ ಯಶಸ್ಸು ಕಾಣದೆ ಇರಬಹುದು. ಇಂಥ ಸಂದರ್ಭದಲ್ಲಿ ಎಲ್ಲರಿಗೂ ಮೆಚ್ಚಾಗುವ ನುಗ್ಗೆಕಾಯಿ (Drumsticks for Weight Loss) ಮತ್ತು ನುಗ್ಗೆ ಸೊಪ್ಪುಗಳನ್ನು ತೂಕ ಇಳಿಸುವುದಕ್ಕಾಗಿ ಬಳಸಬಹುದೇ? ನೋಡೋಣ ಇದರ ಗುಣಗಳನ್ನು.

ದೇಹದಲ್ಲಿ ಜಮೆಯಾಗುವ ಕೊಬ್ಬನ್ನು ವಿಘಟಿಸಲು ಮತ್ತು ಕರಗಿಸಲು ನುಗ್ಗೆಸೊಪ್ಪು ಮತ್ತು ಕಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತು ಪಡಿಸಿವೆ. ಮಾತ್ರವಲ್ಲ, ಬಹಳಷ್ಟು ಬಗೆಯ ಪೋಷಕಾಂಶಗಳು ನುಗ್ಗೆಯಲ್ಲಿದ್ದು, ದೇಹಕ್ಕೆ ಹಲವು ರೀತಿಯಲ್ಲಿ ಅನುಕೂಲಗಳನ್ನು ಒದಗಿಸಿಕೊಡುತ್ತದೆ. ಭಾರತೀಯ ಸೂಪಶಾಸ್ತ್ರದಲ್ಲಿ ಶತಮಾನಗಳಿಂದ ಬಳಕೆಯಲ್ಲಿರುವ ನುಗ್ಗೆ, ಏಷ್ಯಾಖಂಡದ ಉದ್ದಗಲಕ್ಕೆ ಪ್ರಚಲಿತದಲ್ಲಿದೆ. ಇದು ತೂಕ ಇಳಿಕೆಗೆ ಹೇಗೆ ನೆರವಾಗುತ್ತದೆ ಎಂಬ ವಿವರಗಳಿವು.

ತೂಕ ಇಳಿಕೆಗೆ ಬೇಕು

ನುಗ್ಗೆಯಲ್ಲಿ ಉತ್ಕರ್ಷಣ ನಿರೋಧಕಗಳು ಹೇರಳವಾಗಿವೆ. ವಿಟಮಿನ್‌ ಎ, ಇ, ಸಿ ಸತ್ವಗಳು, ಕ್ಯಾಲ್ಶಿಯಂ, ಪೊಟಾಶಿಯಂ, ಕಬ್ಬಿಣದಂಥ ಖನಿಜಗಳು ನುಗ್ಗೆಯಲ್ಲಿ ಭರಪೂರ ಇವೆ. ಹೆಚ್ಚಿನ ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸಿದರೆ, ಕಳ್ಳ ಹಸಿವೆಯನ್ನು ತಡೆಯಬಹುದು. ಇದರಿಂದ ಸತ್ವವಿಲ್ಲದ, ಕ್ಯಾಲರಿ ತುಂಬಿದ ಸಕ್ಕರೆ, ಕೊಬ್ಬಿನ ಆಹಾರಗಳ ಸೇವನೆಯ ಬಯಕೆಯನ್ನು ಹತ್ತಿಕ್ಕುವುದಕ್ಕೆ ಅನುಕೂಲವಾಗುತ್ತದೆ.

ನಾರುಭರಿತ

ನುಗ್ಗೆಕಾಯಿಯಲ್ಲಿ ನಾರು ವಿಫುಲವಾಗಿದೆ. ನಾರುಭರಿತ ಆಹಾರಗಳ ಸೇವನೆಯಿಂದ ದೇಹಕ್ಕೆ ನಾನಾ ರೀತಿಯ ಲಾಭಗಳಿವೆ. ನಾರು ಹೆಚ್ಚು ತಿಂದಾಗ ಬೇಗ ಹೊಟ್ಟೆ ತುಂಬಿದಂತೆ ಭಾಸವಾಗಿ, ದೀರ್ಘಕಾಲದವರೆಗೆ ಹಸಿವಾಗದಂತೆ ಉಳಿಯುತ್ತದೆ. ಇವುಗಳು ಜೀರ್ಣವಾಗುವುದಕ್ಕೆ ಪಿಷ್ಟಭರಿತ ಆಹಾರಗಳಿಗಿಂತ ಹೆಚ್ಚಿನ ಸಮಯ ಬೇಕು. ಇದರಿಂದ ದೇಹಕ್ಕೆ ಅಗತ್ಯವಾದ್ದಕ್ಕಿಂತ ಹೆಚ್ಚಿನ ಆಹಾರ ಸೇವಿಸುವುದನ್ನು ತಪ್ಪಿಸಬಹುದು.

ನಾರು ಹೆಚ್ಚಿರುವ ಆಹಾರಗಳು ನಮ್ಮ ಜೀರ್ಣಾಂಗಗಳನ್ನು ಶುದ್ಧಗೊಳಿಸುತ್ತವೆ. ಕರಗಬಲ್ಲ ನಾರುಗಳು ನಮ್ಮ ದೇಹದಲ್ಲಿನ ಕೊಬ್ಬಿನಾಂಶವನ್ನು ವಿಘಟಿಸಿದರೆ, ಕರಗದೆ ಇರುವಂಥ ನಾರುಗಳು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತವೆ. ಇವುಗಳ ಜೊತೆಗೆ, ನುಗ್ಗೆಯಲ್ಲಿನ ಕ್ಯಾಲರಿ ಕಡಿಮೆ. ಮನಸ್ಸಿಗೆ ತೃಪ್ತಿಯಾಗುವಷ್ಟು ತಿಂದರೂ, ಸಿಕ್ಕಾಪಟ್ಟೆ ಕ್ಯಾಲರಿಗಳೇನೂ ದೇಹ ಸೇರುವುದಿಲ್ಲ. ಹಾಗಾಗಿ ನುಗ್ಗೆ ತಿನ್ನುವಾಗ ಹೆಚ್ಚು ಯೋಚಿಸಬೇಕಿಲ್ಲ.

ಚಯಾಪಚಯ ಹೆಚ್ಚಳ

ತೂಕ ಇಳಿಕೆಗಾಗಿಯೇ ಆಹಾರಕ್ರಮವನ್ನು ರೂಪಿಸಿಕೊಂಡಿದ್ದರೆ, ಅದರಲ್ಲಿ ನುಗ್ಗೆಗೆ ಜಾಗ ಬೇಕೇಬೇಕು. ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಂದರೆ ಇದರಲ್ಲಿರುವ ಐಸೊಥಿಯೊಸೈನೇಟ್‌ಗಳು ದೇಹದ ಶಕ್ತಿ ಬಳಕೆಯ ಪ್ರಮಾಣವನ್ನು ಹೆಚ್ಚಿಸುತ್ತವೆ. ಅಂದರೆ ನಾವು ಬಳಸುವ ಶಕ್ತಿಗಿಂತ ದೇಹಕ್ಕೆ ದೊರೆಯುವ ಶಕ್ತಿ ಕಡಿಮೆಯಾದರೆ ಸಹಜವಾಗಿಯೇ ದೇಹದ ತೂಕ ಇಳಿಯುತ್ತದೆ.

ಸಕ್ಕರೆಮಟ್ಟ ನಿಯಂತ್ರಣ

ತೂಕ ನಿಯಂತ್ರಿಸುವಾಗ ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣವನ್ನೂ ಅಗತ್ಯವಾಗಿ ಮಾಡಬೇಕಾಗುತ್ತದೆ. ರಕ್ತದಲ್ಲಿ ಸಕ್ಕರೆಯಂಶ ಹತೋಟಿಯಲ್ಲಿಲ್ಲದೆ ಏರಿಳಿತವಾಗುತ್ತಿದ್ದರೆ, ತಿನ್ನುವ ಆಹಾರದ ಪ್ರಮಾಣ, ಅಗತ್ಯ ಮತ್ತು ಬಯಕೆಗಳೂ ನಿಯಂತ್ರಣಕ್ಕೆ ದೊರೆಯುವುದಿಲ್ಲ. ಅನಾರೋಗ್ಯಕರ ಆಹಾರಗಳತ್ತ ನಮ್ಮ ಚಿತ್ತ ಹೊರಳಬಹುದು. ಇಂಥವೆಲ್ಲದಕ್ಕೂ ಕಡಿವಾಣ ಹಾಕಲು ಸುಲಭವಾಗುವಂತೆ, ನುಗ್ಗೆಕಾಯಿ ಸಕ್ಕರೆ ಮಟ್ಟವನ್ನು ಏರಿಳಿತವಿಲ್ಲದಂತೆ ಮಾಡಲು ನೆರವಾಗುತ್ತದೆ.

ಡಿಟಾಕ್ಸ್‌ ಪೇಯ

ನುಗ್ಗೆ ಸೊಪ್ಪಿನ ಚಹಾವನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಡಿಟಾಕ್ಸ್‌ ಪೇಯವಾಗಿ ಬಳಸಲಾಗುತ್ತದೆ. ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಇದು ನೆರವಾಗುತ್ತದೆ. ಅದರಲ್ಲೂ ನುಗ್ಗೆ ಸೊಪ್ಪಿನ ಕಷಾಯವನ್ನು ಬೆಳಗಿನ ಹೊತ್ತು ಸೇವಿಸಿದಾದ ಹೊಟ್ಟೆಯ ಭಾಗದಲ್ಲಿ ಜಮೆಯಾಗಿರುವ ಕೊಬ್ಬನ್ನು ಕತ್ತರಿಸಲು ಸಹಾಯವಾಗುತ್ತದೆ ಎನ್ನುತ್ತವೆ ಅಧ್ಯಯನಗಳು.

ಇದನ್ನೂ ಓದಿ: Tips to Keep Joints Healthy: ಹೀಗೆ ಮಾಡಿ, ಕೀಲುಗಳ ಸ್ವಾಸ್ಥ್ಯ ಕಾಪಾಡಿ

Exit mobile version