ಯಾವತ್ತಾದರೂ ನಿಮಗೆ ಕೆಲವು ಆಹಾರಗಳನ್ನು ತಿಂದರೆ ಹೊಟ್ಟೆ ನೋವಿನ, ಉಬ್ಬರಿಸಿದ ಅನುಭವವಾಗಿದೆಯೇ? (Stomach problem) ಹೀಗೆ ಅನುಭವವಾದದ್ದನ್ನು ನೀವು ಪರವಾಗಿಲ್ಲ ಎಂದು ನಿರ್ಲಕ್ಷ್ಯ ಮಾಡಿರಬಹುದು. ಆದರೆ, ಇದು ಹೊಟ್ಟೆಯ ಮಾತು. ತಿಂದದ್ದು ಯಾವುದೋ ಸರಿಯಿಲ್ಲ, ಹೊಟ್ಟೆಗೆ ಒಳ್ಳೆಯದಾಗುವ ಆಹಾರವನ್ನು ನೀವು ತಿಂದಿಲ್ಲ ಎಂದು ಹೊಟ್ಟೆ ನಿಮ್ಮ ಜೊತೆ ಹೇಳುವ ಭಾಷೆಯಿದು. ಹೊಟ್ಟೆಯ ಭಾಷೆಯನ್ನೇ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ ಹೇಳಿ! ಹೊಟ್ಟೆನೋವು ಒಮ್ಮೆ ಹಾಗೆ ಬಂದು ಹೀಗೆ ಹೋಗುತ್ತದೆ ಎಂದು ನೀವು ಅದನ್ನು ಕಡೆಗಣಿಸಿರಬಹುದು. ಆದರೆ, ಕೆಲವೊಮ್ಮೆ ಹೊಟ್ಟೆನೋವು ನಿಲ್ಲದೆ ಇದ್ದರೆ ಅದು ಖಂಡಿತ ಕ್ಷುಲ್ಲಕ ವಿಚಾರವಲ್ಲ. ಅದು ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಇದ್ದರಂತೂ ಅದರ ಮೂಲ ಯಾವುದಾದರೂ ಗಂಭೀರ ವಿಚಾರವೂ ಆಗಿರಬಹುದು. ಹೃದಯದ ಸಮಸ್ಯೆ, ಮಧುಮೇಹ ಇತ್ಯಾದಿಗಳಿಗೆ ಸಂಬಂಧವೂ ಇರಬಹುದು. ನಿಮ್ಮ ಕೆಟ್ಟ ಆಹಾರ ಸೇವನೆಗೆ ಸಂಬಂಧಿಸಿಯೂ ಇರಬಹುದು. ಹಾಗಾದರೆ ಬನ್ನಿ, ಆಹಾರ ಸೇವನೆಯ ವಿಚಾರದಲ್ಲಿ ನಿಮ್ಮ ಕೆಟ್ಟ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ.
ನಿಮ್ಮ ಆಹಾರದಲ್ಲಿ ಹೆಚ್ಚು ಸಂಸ್ಕರಿಸಿ ಆಹಾರಗಳಿದ್ದರೆ, ಕಡಿಮೆ ಪ್ರಮಾಣದಲ್ಲಿ ತರಕಾರಿ, ಹಣ್ಣುಗಳಿದ್ದರೆ ಇಂಥ ಹೊಟ್ಟೆಯ ಸಮಸ್ಯೆಗಳು ಬರಬಹುದು. ಸದಾ ಬರ್ಗರ್, ಸಕ್ಕರೆ ಹಾಕಿದ ಟೆಟ್ರಾಪ್ಯಾಕ್ ಡ್ರಿಂಕ್‌ಗಳು, ಕ್ಯಾಂಡಿಗಳು, ಆಲೂಗಡ್ಡೆ ಚಿಪ್ಸ್ ಮತ್ತಿತರ ಆಹಾರಗಳನ್ನೇ ತಿನ್ನುವ ಪ್ರಮಾಣ ಹೆಚ್ಚಿದ್ದರೆ ಹೊಟ್ಟೆನೋವಿನಂಥ ಸಮಸ್ಯೆ ಕಾಡುವ ಸಂಭವವಿದೆ. ಹೊಟ್ಟೆಯಲ್ಲಿ ಉರಿಯೂತ ಆರಂಭವಾಗಿ ಈ ಸಮಸ್ಯೆ ಬರಬಹುದು. 2022ರಲ್ಲಿ ನಡೆದ ಸಂಶೋಧನೆಯೊಂದರ ಪ್ರಕಾರ, ಸಂಸ್ಕರಿಸಿದ ಆಹಾರದ ಅತಿಯಾದ ಸೇವನೆಯೇ ಇಂದು ಇಂತಹ ಹೊಟ್ಟೆಯ ಸಂಬಂಧೀ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದಿದೆ.
ಅತಿಯಾದ ಸಕ್ಕರೆಯ ಸೇವನೆಯೂ ಕೂಡಾ ಇಂತಹ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾದರೆ, ಹೆಚ್ಚು ಎಂದರೆ ಎಷ್ಟು ಎಂಬ ಪ್ರಶ್ನೆ ಇಲ್ಲಿ ಏಳಬಹುದು. ಆದರೆ, ಇಲ್ಲಿ ಸಕ್ಕರೆಯನ್ನು ಹಾಗೇ ತಿನ್ನುವುದಕ್ಕಿಂತಲೂ ಹೆಚ್ಚು ಆಹಾರದ ಮೂಲಕ ಸಕ್ಕರೆಯು ದೇಹಕ್ಕೆ ಎಷ್ಟು ಸೇರಿದೆ ಎಂಬುದೂ ಮುಖ್ಯವಾಗುತ್ತದೆ. ಅದು ನೈಸರ್ಗಿಕವಾಗಿರಬಹುದು ಅಥವಾ ಸಂಸ್ಕರಿಸಿದ ಸಕ್ಕರೆಯಾಗಿರಬಹುದು. ಈ ಹಿಂದೆ ನಡೆದ ಒಂದು ಅಧ್ಯಯನ ಪ್ರಕಾರ ನಾವು ತಿನ್ನುವ ಸಕ್ಕರೆಯ ಪ್ರಮಾಣವೇ ಇಂದು ನಮ್ಮ ದೇಹದ ಹೃದಯದ ಸಮಸ್ಯೆ, ಮಧುಮೇಹ, ಬೊಜ್ಜು ಮತ್ತಿತರ ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ.
ತರಕಾರಿಗಳನ್ನು ಹಾಗೂ ನಾರಿನಂಶದ ಆಹಾರವನ್ನು ಸೇವಿಸದೆ ಇರುವುದು ಕೂಡಾ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಮ್ಮ ದೇಹದ ಪಚನಕ್ರಿಯೆಯಲ್ಲಿನ ಆರೋಗ್ಯಕ್ಕೆ ಇವೆರಡು ಅತ್ಯಂತ ಅಗತ್ಯ. ಹೆಚ್ಚು ಹೆಚ್ಚು ತರಕಾರಿ ತಿಂದರೆ, ಹೊಟ್ಟೆಯಲ್ಲಿನ ಉರಿಯೂತದಂತಹ ಸಮಸ್ಯೆಗಳು ಸಮತೋಲನಕ್ಕೆ ಬರುತ್ತದೆ ಎಂದು ಅಧ್ಯಯನಗಳು ಸ್ಪಷ್ಠೀಕರಿಸಿವೆ.
ಅತಿಯಾದ ಗ್ಲುಟೆನ್ ಸೇವನೆಯೂ ಕಾರಣವಾಗಿತ್ತದೆ. ಗ್ಲುಟೆನ್ ಎಂದರೆ ಧಾನ್ಯಗಳಲ್ಲಿರುವ ಒಂದು ಬಗೆಯ ಪ್ರೊಟೀನ್. ಗೋಧಿಯಲ್ಲಿ ಇದು ಹೆಚ್ಚಿದೆ. ಪಿಜ್ಜಾ, ಬ್ರೆಡ್ ಮತ್ತಿತರ ಆಹಾರಗಳಲ್ಲಿ ಇದು ಹೇರಳವಾಗಿದೆ. ಹಲವಾರು ಅಧ್ಯಯನಗಳೂ ಇತ್ತೀಚೆಗೆ ಗ್ಲುಟೆನ್ ರಹಿತ ಆಹಾರ ಸೇವನೆ ಮಾಡಿದರೆ ಹೊಟ್ಟೆಯ ಸಮಸ್ಯೆಗಳಿಂದ ದೂರಾಗಬಹುದು ಎಂದಿವೆ.
ಅತಿಯಾಗಿ ಮದ್ಯಪಾನ ಮಾಡುವುದೂ ಕೂಡ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡುವುದು ಹೊಟ್ಟೆನೋವು ಮತ್ತಿತರ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಸಂಶೋಧನೆಗಳೂ ಹೇಳಿವೆ.
ಇದನ್ನೂ ಓದಿ: Men’s Health After 40: 40ರ ನಂತರ ಪುರುಷರ ಆರೋಗ್ಯ ಕಾಳಜಿ ಹೀಗಿರಲಿ