Site icon Vistara News

Navaratri Dandiya: ನವರಾತ್ರಿ ದಾಂಡಿಯಾ ಸಂಭ್ರಮಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಹೇಗೆ ಪ್ರಯೋಜನ ನೋಡಿ!

Dandiya dance

ನವರಾತ್ರಿಯೆಂದರೆ ಭಾರತದ ಉದ್ದಗಲಕ್ಕೂ ನಾನಾ ರೀತಿಯಲ್ಲಿ ಆಚರಣೆ ನಡೆಯುತ್ತದೆ. ಕೆಲವೆಡೆ ಗೊಂಬೆ ಕೂರಿಸಿದರೆ, ಕೆಲವೆಡೆ ಬೃಹತ್‌ ಮೂರ್ತಿಯನ್ನಿಟ್ಟು ದುರ್ಗಾಪೂಜೆ. ಕೆಲವೆಡೆ ಉಪವಾಸ-ವ್ರತ, ಹಲವೆಡೆ ತರಹೇವಾರಿ ತಿಂಡಿಗಳ ಮೇಳ. ಇನ್ನು ಕೆಲವು ಭಾಗಗಳಲ್ಲಿ ಬಣ್ಣದ ಧಿರಿಸುಗಳನ್ನು ಧರಿಸಿ, ರಂಗಿನ ಕೋಲುಗಳನ್ನು ಹಿಡಿದು ದಾಂಡಿಯಾ (Navaratri Dandiya) ಮಾಡುವ ಸಮಯ. ಗುಜರಾತ್‌ನ ಜನಪದೀಯ ಲಯಗಳಿಗೆ ಸಾಂಪ್ರದಾಯಿಕ ಅಲಂಕಾರದಲ್ಲಿ, ಬಣ್ಣದ ಕೋಲಿನೊಂದಿಗೆ ಹೆಜ್ಜೆ ಹಾಕುವ ಪದ್ಧತಿ ಈಗ ಭಾರತದ ಹಲವೆಡೆಗಳಿಗೆ ವ್ಯಾಪಿಸಿದೆ.

ಯಾವುದೇ ಕಲೆಗಳು ಮನಕ್ಕೆ ಮುದ ನೀಡುತ್ತವೆ. ಅದರಲ್ಲೂ ಸರಳ ಲಯಕ್ಕೆ ಸೊಬಗಿನಿಂದ ಹೆಜ್ಜೆ ಹಾಕುವುದು ಮನಸ್ಸಿನ ಒತ್ತಡ ಕಡಿಮೆ ಮಾಡುವ ಅದ್ಭುತವಾದ ಮಾರ್ಗ. ಹೆಣ್ಣು-ಗಂಡೆಂಬ ಭೇದವಿಲ್ಲದೆ, ಮಕ್ಕಳು-ಮುದುಕರೆಂಬ ವ್ಯತ್ಯಾಸವಿಲ್ಲದೆ ತಾಸುಗಟ್ಟಲೆ ನರ್ತಿಸುವುದು ಮನಸ್ಸಿಗೆ ಮಾತ್ರವಲ್ಲ, ದೇಹಕ್ಕೂ ಅಗತ್ಯ ವ್ಯಾಯಾಮ ನೀಡುತ್ತದೆ. ಸ್ನೇಹಿತರು ಬಣ್ಣದ ಕೋಲು ಹಿಡಿದು ಕುಣಿಯುವಾಗ ಎದುರಾದರೆ ಅಥವಾ ಇಲ್ಲೆಲ್ಲೊ ಸಿಕ್ಕವರೇ ಮುಂದೆ ಸ್ನೇಹಿತರಾದರೆ- ಹೀಗೆ ಹಬ್ಬದ ಬೆನ್ನಿಗಿರುವ ಕಲೆಯೊಂದು ಬದುಕಿನ ಆಯಾಮವನ್ನೂ ಬದಲಿಸಬಲ್ಲದು.

ಇದನ್ನೂ ಓದಿ | Dandiya Fashion: ನವರಾತ್ರಿಯ ದಾಂಡಿಯಾ ಸಂಭ್ರಮಕ್ಕೆ ಸಾಥ್‌ ನೀಡುವ 3 ಟ್ರೆಡಿಷನಲ್‌ ಎಥ್ನಿಕ್‌ವೇರ್ಸ್

Dandiya by childrens

ಹಬ್ಬದ ನೆವದಲ್ಲಿ ಹೆಚ್ಚಿದ್ದ ಕೊಬ್ಬನ್ನು ಕರಗಿಸಲು, ಒತ್ತಡ ಕಡಿಮೆ ಮಾಡಲು, ಕಾಲು, ತೋಳುಗಳಿಗೆ ಮಾತ್ರವಲ್ಲದೆ ಇಡೀ ದೇಹದ ವ್ಯಾಯಾಮಕ್ಕೆ ಅನುಕೂಲವಾದಂಥದ್ದು ದಾಂಡಿಯಾ. ಹೃದಯದ ಕ್ಷಮತೆಯನ್ನೂ ಹೆಚ್ಚಿಸುವಂಥ ಸರಳ ಕಾರ್ಡಿಯೊ ಕೂಡಾ ಹೌದು. ನವರಾತ್ರಿಯ ನೆವದಲ್ಲಿ ದಾಂಡಿಯಾದಲ್ಲಿ (dandiya) ಪಾಲ್ಗೊಳ್ಳುವ ಲಾಭಗಳೇನು ಎಂಬುದನ್ನು ನೋಡೋಣ.

ಹೃದಯಕ್ಕೆ ಪೂರಕ

ದಾಂಡಿಯಾ ಆಡುವುದಕ್ಕೆ ದೊಡ್ಡ ನರ್ತಕರೇ ಆಗಬೇಕೆಂದಿಲ್ಲ ಅಥವಾ ಅದೇನು ನರ್ತಿಸುವ ಸ್ಪರ್ಧೆಯೂ ಅಲ್ಲ. ಸರಳ ಲಯಕ್ಕೆ ಒಂದಿಷ್ಟು ಹೆಜ್ಜೆ ಹಾಕುವುದಕ್ಕೆ ಬಂದರೆ ಸಾಕು. ಹೀಗೆ ಆವರ್ತನಗಳಿಗೆ ಹೆಜ್ಜೆ ಹಾಕುವುದರಿಂದ ದೇಹದಲ್ಲಿ ರಕ್ತ ಸಂಚಾರ ವೃದ್ಧಿಸುತ್ತದೆ. ಇದರಿಂದ ಉಸಿರಾಟವೂ ತೀವ್ರವಾಗಿ, ಹೆಚ್ಚಿನ ಆಮ್ಲಜನಕ ಪೂರೈಕೆಯಾಗುತ್ತದೆ. ಇವೆಲ್ಲವುಗಳ ಪರಿಣಾಮ, ಹೃದಯಕ್ಕೆ ಅಗತ್ಯವಾದ ಕಾರ್ಡಿಯೊ ವ್ಯಾಯಾಮದಂತೆ ಇದು ಪರಿಣಾಮ ಬೀರುತ್ತದೆ

ಬಲವರ್ಧನೆ

ದೇಹ ಮತ್ತು ಮನಸ್ಸುಗಳ ಸಮನ್ವಯಕ್ಕೆ ಇಂದಿನ ದಿನಗಳಲ್ಲಿ ಬಹಳಷ್ಟು ಮಹತ್ವವಿದೆ. ದೇಹದ ಒಂದೊಂದೇ ಸ್ನಾಯುಗಳನ್ನು ಗುರಿಯಾಗಿಸಿ ಬಲವರ್ಧನೆ ಮಾಡುವುದು ಬೇರೆ. ಅದಕ್ಕೆ ಜಿಮ್‌ ಅಥವಾ ವ್ಯಾಯಾಮ ತರಗತಿಗೆ ಸೇರುವುದು ಅಗತ್ಯ. ಇಲ್ಲಿ ಹಾಗಲ್ಲ, ಕೈ-ಕಾಲುಗಳ ಚಲನೆಯ ಜೊತೆಗೆ ಮನಸ್ಸಿನ ಸಮನ್ವಯವೆಂಬ ಅತಿ ಸಾಮಾನ್ಯ ಪ್ರಕ್ರಿಯೆಯಷ್ಟೇ ಜರುಗುವುದು. ಆದರೆ ದೇಹದ ದೊಡ್ಡ ಸ್ನಾಯುಗಳ ಬಲವರ್ಧನೆಗೆ ಇದು ಸಹಕಾರಿಯಾಗುತ್ತದೆ.

ತೂಕ ಇಳಿಕೆ

ಯಾವುದೇ ವ್ಯಾಯಾಮವನ್ನು ಕ್ರಮಬದ್ಧವಾಗಿ ಮಾಡಿದರೆ, ದೇಹದಲ್ಲಿ ಒಂದಿಷ್ಟು ಕೊಬ್ಬು ಕರಗುವುದು ನಿಶ್ಚಿತ. ದಾಂಡಿಯಾವನ್ನು ಸಹ ವ್ಯಾಯಾಮವೆಂದೇ ಪರಿಗಣಿಸಿ, ನಿಯಮಿತವಾಗಿ ಮಾಡಿದರೆ ಅಥವಾ ಅದಕ್ಕೆಂದೇ ಇರುವ ಕ್ಲಾಸುಗಳಿಗೆ ಸೇರಿದರೆ ಒಂದಿಷ್ಟು ತೂಕ ಇಳಿಯುವುದು ಖಚಿತ. ಹಬ್ಬದ ಹೊತ್ತಿನಲ್ಲಿ ಒಂದೆರಡು ದಿನ ಮಾಡಿದ್ದಕ್ಕೆ ತೂಕ ಇಳಿಯುವುದೆಂಬ ಭ್ರಮ ಅನಗತ್ಯ. ಇದಕ್ಕೆ ಹೆಚ್ಚಿನ ಅಭ್ಯಾಸ ಬೇಕು. ಅದರಲ್ಲೂ, ನವರಾತ್ರಿಯ ನೆವದಲ್ಲಿ ಹಲವು ಬಗೆಯ ಸಿಹಿಗಳನ್ನು ತಿನ್ನುವಾಗಲಂತೂ ಒಂಬತ್ತೂ ದಿನ ತಪ್ಪದೆ ದಾಂಡಿಯ ಆಡುವುದು ಅನುಕೂಲವಾಗಬಹುದು.

ನಮ್ಯತೆ ವೃದ್ಧಿ

ಕೆಳಗೆ ಕೂರುವುದಕ್ಕಾಗದು, ನೆಲಕ್ಕೆ ಕೈ ಕೊಡದೆ ಮೇಲೆ ಏಳುವುದಕ್ಕಾಗದು ಎಂದೆಲ್ಲಾ ವಯಸ್ಸಾದವರು ಹೇಳಿದರೆ ಹೆಚ್ಚಲ್ಲ. ಆದರೆ ನಲವತ್ತರ ಒಳಗಿನವರೇ ಈ ಮಾತುಗಳನ್ನು ಹೇಳುವಾಗ, ದೇಹದ ಸ್ನಾಯುಗಳ ನಮ್ಯತೆ ಅಥವಾ ಫ್ಲೆಕ್ಸಿಬಿಲಿಟಿ ಕಡಿಮೆಯಾಗಿರುವುದು ತಿಳಿಯುತ್ತದೆ. ದೈಹಿಕ ಕೆಲಸಗಳು ಕಡಿಮೆಯಾದಂತೆ ದೇಹ ಬಿಗಿಯುವುದು ಸಹಜ. ಅವಕ್ಕೆಲ್ಲ ಉಪಾಯವೆಂದರೆ ಇಂಥ ನೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು. ಇದೀಗ ವ್ಯಾಯಾಮ ಅನಿಸದೆಯೂ ನಮ್ಮ ದೇಹದ ಬಿಗಿಯನ್ನು ಕಳೆದು, ನಮ್ಯತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ | Navaratri Yellow Colour Fashion Tips: ನವರಾತ್ರಿ 5 ನೇ ದಿನದ ಹಳದಿ ವರ್ಣದ ಎಥ್ನಿಕ್‌ಲುಕ್‌ ಜಾದೂ

ಮನಸ್ಸಿನ ಬಲವರ್ಧನೆ

ಈವರೆಗೆ ಹೇಳಿದ್ದೆಲ್ಲಾ ದೈಹಿಕ ಪ್ರಯೋಜನಗಳಾದವು. ಇದರಷ್ಟೇ ಅಥವಾ ಇದಕ್ಕೂ ಮೀರಿ ಮಾನಸಿಕ ಲಾಭಗಳು ಹಲವಾರಿವೆ. ಸಾಮಾಜಿಕ ತಾಣಗಳ ಭರಾಟೆಯಲ್ಲಿ ತಾನೊಬ್ಬ ಸಮಾಜಜೀವಿ ಎನ್ನುವುದನ್ನೇ ಮನುಷ್ಯ ಮರೆತಿರುವಾಗ- ಮತ್ತೆ ಸಮಾಜಮುಖಿಯಾಗಲು ಇಂಥ ಕೂಟಗಳು ಪ್ರೇರಣೆ ನೀಡುತ್ತವೆ. ಬಂಧು-ಮಿತ್ರರ ಜೊತೆಗಿನ ಭೇಟಿ, ಒಟ್ಟಿಗೇ ನಲಿಯುವುದು, ತಿನ್ನುವುದು- ಇವೆಲ್ಲಾ ಸಾಮಾಜಿಕ ನಂಟುಗಳನ್ನು ಬೆಸೆಯುತ್ತವೆ. ಸಂಬಂಧಗಳು ವೃದ್ಧಿಸುತ್ತವೆ. ಇವೆಲ್ಲವುಗಳ ಪರಿಣಾಮ ಮನಸ್ಸಿನ ಭಾರವೂ ಇಳಿಯುತ್ತದೆ, ಒತ್ತಡ ತಾನೇತಾನಾಗಿ ಕರಗುತ್ತದೆ… ಏನು! ದಾಂಡಿಯಾ ಆಡುವುದಕ್ಕೆ ಸಿದ್ಧವೇ?

Exit mobile version