ಬಹಳಷ್ಟು ಮಹಿಳೆಯರಿಗೆ, ಮುಖ್ಯವಾಗಿ ಯುವತಿಯರಿಗೆ ಹೈಹೀಲ್ಸ್ ಅಂದರೆ ಪಂಚಪ್ರಾಣ. ತಾನು ಇರುವ ಎತ್ತರಕ್ಕಿಂತ ಹೆಚ್ಚು ಎತ್ತರವಾಗಿ ಹಾಗೂ ಸ್ಟೈಲಿಶ್ ಆಗಿ ಕಾಣಬೇಕೆಂಬ ಬಯಕೆಯಿಂದ ತಮ್ಮ ಕೈಲಾಗದಿದ್ದರೂ, ನಡೆಯಲು ಕಷ್ಟವಾದರೂ ಹೈಹೀಲ್ಸ್ ಚಪ್ಪಲಿ ಆಯ್ಕೆ ಮಾಡುತ್ತಾರೆ. ಅದನ್ನೇ ಹಾಕಿಕೊಂಡು ಒದ್ದಾಡುತ್ತಾ ನಡೆಯುತ್ತಾರೆ. ಬಹಳಷ್ಟು ಮಂದಿಗೆ ಹೈಹೀಲ್ಸ್ ಒಳ್ಳೆಯದಲ್ಲ ಎಂಬ ಸತ್ಯ ಗೊತ್ತಿದ್ದರೂ ಹೀಲ್ಸ್ ಆಯ್ಕೆಯನ್ನು ಮಾತ್ರ ಕೈಬಿಡುವುದಿಲ್ಲ. ಆದರೆ, ಆಮೂಲಕ ತಮ್ಮದೇ ದೇಹಕ್ಕೆ ಮಾಡಬಾರದ ತೊಂದರೆಗಳನ್ನೂ, ಕಷ್ಟಗಳನ್ನೂ ಕೊಡುತ್ತಾರೆ ಎಂಬುದನ್ನು ಸ್ವತಃ ಅವರೇ ಒಪ್ಪಿಕೊಳ್ಳಲೂ ಸಿದ್ಧವಿರುವುದಿಲ್ಲ.
ಹಾಗಾದರೆ ಹೈ ಹೀಲ್ಸ್ ಚಪ್ಪಲಿ ಧರಿಸುವುದರಿಂದ ಆಗುವ ತೊಂದರೆಗಳೇನು ಎಂಬುದನ್ನು ನೋಡೋಣ.
೧. ಸೊಂಟ ನೋವು: ಸೊಂಟನೋವಿಗೆ ಕಾರಣ ಏನೆಂದು ಹುಡುಕುತ್ತಿದ್ದೀರಾ? ಯಾರಿಗ್ಗೊತ್ತು, ಇದರ ಮೂಲ ಕಾರಣ ನಿಮ್ಮ ಹೈಹೀಲ್ಸ್ ಆಗಿರಬಹುದು. ಹೈಹೀಲ್ಸ್ ನಿಮ್ಮ ಹಿಮ್ಮಡಿಗೆ ಸಂಪೂರ್ಣ ಆಧಾರ ನೀಡುವುದಿಲ್ಲವಾದ್ದರಿಂದ ಹಾಗೂ ಸಮತೋಲಿತ ತೂಕ ಇದರಲ್ಲಿ ಹಂಚಿ ಹೋಗುವುದಿಲ್ಲವಾದ್ದರಿಂದ ಸಾಕಷ್ಟು ದೈಹಿಕ ಸಮಸ್ಯೆಗಳು ಬರಬಹುದು. ಅವುಗಳಲ್ಲಿ ಪ್ರಮುಖವಾದುದು ಸೊಂಟನೋವು.
೨ ಮೀನಖಂಡದ ನೋವು: ಹೀಲ್ಸ್ ಧರಿಸಿ ನಡೆಯುವುದರಿಂದ ಮೀನಖಂಡಗಳ ಮೇಲೆ ಒತ್ತಡ ಬೀಳುವುದರಿಂದ ವಿಪರೀತ ನೋವುಂಟಾಗಬಹುದು. ಬಹಳಷ್ಟು ಸಾರಿ ಮೀನಖಂಡದ ಉರಿಯೂತ, ಬಾವು ಮುಂತಾದ ಸಮಸ್ಯೆಗಳೂ ತಲೆದೋರಬಹುದು.
೩. ಹಿಮ್ಮಡಿ ನೋವು: ಇದು ಬಹುತೇಕ ಎಲ್ಲರಲ್ಲಿ ಕಾಣಿಸಿಕೊಳ್ಳುವ ಸಮಸ್ಯೆ. ಹೀಲ್ಸ್ ಧರಿಸು ಬಹುತೇಕ ಮಂದಿ ತಮ್ಮ ಹಿಮ್ಮಡಿಯ ನೋವುಂಡು ಅನುಭವ ಉಳ್ಳವರಾಗಿರುತ್ತಾರೆ. ಸುಲಭ ಹಾಗೂ ಸರಳವಾದ ಚಪ್ಪಲಿಯನ್ನು ಧರಿಸದೆ, ಕಷ್ಟವಾಗುವಂಥ ಚಪ್ಪಲಿ ಧರಿಸುವುದರ ಪ್ರಮುಖ ಸಮಸ್ಯೆ ಎಂದರೆ ಹಿಮ್ಮಡಿ ನೋವು.
೪. ಪಾದದ ಸುತ್ತ ನೋವು: ಡಿಸೈನರ್ ಹೀಲ್ಸ್‌ಗಳೇನೋ ನೋಡಲು ಚಂದ ನಿಜ. ಆದರೆ, ಇದರ ಜೊತೆಗೆ ಪಾದ, ಹಿಮ್ಮಡಿ ನೋವುಗಳೆಲ್ಲವೂ ಉಚಿತವಾಗಿಯೇ ಸಿಗುತ್ತವೆ ಎಂಬುದು ಅಷ್ಟೇ ನಿಜ. ಹೀಲ್ಸ್ ಧರಿಸಿಕೊಂಡು ಏರುಪೇರುಗಳಿರುವ, ಗುಂಡಿ ಹೋಂಡಗಳಿರುವ ರಸ್ತೆಯಲ್ಲಿ ನಡೆದು ಹೋಗುವಾಗ ಕಾಲು ಉಳುಕಿ ನೋವುಂಟಾಗುವ ಸಂದರ್ಭ ಪ್ರತಿ ಹೈಹೀಲ್ಸ್ ಪ್ರಿಯರಿಗೂ ಅನುಭವ ಆಗಿಯೇ ಇರುತ್ತದೆ. ಬಹಳ ಸಾರಿ ಇದು ಸರಳವಾದ ವಿಚಾರವಾಗದೆ, ಮೂಳೆ ಮುರಿತದವರೆಗೂ ತಲುಪಬಹುದು.
ಇದನ್ನೂ ಓದಿ | Paneer Benefits | ಪನೀರ್ ತಿನ್ನುವುದರ ಪ್ರಯೋಜನಗಳು ಗೊತ್ತೇ?
೫. ಬೆನ್ನುಹುರಿ ನೋವು: ಕಾಲಿಗೆ ಧರಿಸುವ ಹೈಹೀಲ್ಸ್‌ಗೂ ಬೆನ್ನು ನೋವಿಗೂ ಏನು ಸಂಬಂಧ ಎನ್ನಬೇಡಿ. ಬಹಳಷ್ಟು ಮಂದಿ ತಮ್ಮ ಬಳುಕುವ ಬಳ್ಳಿಯಂಥ ದೇಹ ಪ್ರದರ್ಶನಕ್ಕಾಗಿ ಸಹಜವಾಗಿರುವುದಕ್ಕಿಂತ ಹೆಚ್ಚು, ಬೆನ್ನನ್ನು ವಕ್ರವಾಗಿಸಿಸ ನಡೆದು ಎಡವಟ್ಟು ಮಾಡಿಕೊಳ್ಳುತ್ತಾರೆ. ಇಂಥ ಸಂದರ್ಭ ಬೆನ್ನುನೋವಿನಂಥ ಸಮಸ್ಯೆಗಳು ತಲೆದೋರಬಹುದು.
೬. ಹೈಹೀಲ್ಸ್ ಯಾವಾಗಲೂ ಧರಿಸುವುದರಿಂದ ಕಾಲು ಹಾಗೂ ಪಾದದ ಆಕಾರವೇ ಬದಲಾಗಿ ಬಿಡುವ ಸಂಭವವಿದೆ. ಚೂಪಾದ ಹಾಗೂ ಉದ್ದವಾದ ಪಾದಗಳಾಗಿ ಬದಲಾಗುವ ಕಾರಣ, ಬೇರೆ ಚಪ್ಪಲ್ಲಿ, ಹಾಗೂ ಶೂ ಧರಿಸಲು ಕಾಲಿನ ಆಕಾರ ಸೂಕ್ತವಲ್ಲದ್ದಾಗಿ ಬದಲಾಗಿ ನೋವು ಅನುಭವಿಸಬೇಕಾಗುತ್ತದೆ.
೭. ಹೈಹೀಲ್ಸ್‌ನಲ್ಲಿ ನಡೆಯುವ ಭಂಗಿಯಿಂದಾಗಿ, ಕಾಲಿನ ಮೇಲೆ ಅನವಶ್ಯಕ ಒತ್ತಡ ಬಿದ್ದು ನಮ್ಮ ಗಂಟುಗಳಲ್ಲಿರುವ ಅತ್ಯಂತ ಅಗತ್ಯವಾದ ಲಿಗಮೆಂಟ್‌ಗಳು ಶಕ್ತಿಹೀನವಾಗುವ ಸಂಭವವೂ ಇದೆ.
೮. ಮೊಣಕಾಲು ನೋವು, ಗಂಟುನೋವುಗಳು ವಯಸ್ಸಾದವರ ಸಮಸ್ಯೆ ಎಂದು ಆರಾಮವಾಗಿರಬೇಡಿ. ನೀವು ಹೈ ಹೀಲ್ಸ್ ಧರಿಸುವ ಅಭ್ಯಾಸ ಹೊಂದಿದ್ದರೆ ಅದು ಸಣ್ಣ ವಯಸ್ಸಿನಲ್ಲೂ ಬರಬಹುದು. ಇತ್ತೀಚಿನ ದಿನಗಳಲ್ಲಿ, ಬದಲಾದ ಜೀವನಪದ್ಧತಿ ಹಾಗೂ ಇತರ ಅಭ್ಯಾಸಗಳಿಂದ ಹಲವು ಇಂತಹ ಸಮಸ್ಯೆಗಳು ವಯಸ್ಸಿನ ಭೇದವಿಲ್ಲದೆ ಸಣ್ಣ ವಯಸ್ಸಿನಲ್ಲೂ ಬರುವುದರಿಂದ ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಫ್ಯಾಷನ್, ಟ್ರೆಂಡ್‌ಗಳನ್ನು ಅನುಕರಿಸುವಾಗ ತಮ್ಮ ಆರೋಗ್ಯಕ್ಕೆ ಪೂರಕವಾದ, ಸರಳವಾದ ಶೈಲಿ ಹಾಗೂ ಕ್ರಮವನ್ನು ಅನುಸರಿಸಿದರೆ ಒಳ್ಳೆಯದು.
ಇದನ್ನೂ ಓದಿ | Coriander Benefits | ಕೊತ್ತಂಬರಿ ಬೀಜ ಮತ್ತು ಸೊಪ್ಪು- ಅಡುಗೆಗೆ ರುಚಿ, ಆರೋಗ್ಯಕ್ಕೂ ಹಿತ