Site icon Vistara News

Himachal Tour: ರೋಮಾಂಚನ ಉಂಟುಮಾಡುವ ಹಿಮಾಚಲ ಪ್ರದೇಶದ ಡಾಲ್ ಹೌಸಿ ಗಿರಿಧಾಮ!

Himachal tour

ದೆಹಲಿ: ಒಬ್ಬರೇ ಪ್ರವಾಸಕ್ಕೆ ಹೋಗುವುದಕ್ಕಿಂತ ಕೆಲವರಿಗೆ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗುವುದೆಂದರೆ ಬಹಳ ಇಷ್ಟ. ಇದು ನಿಮಗೆ ಹೆಚ್ಚಿನ ಮನೋರಂಜನೆಯನ್ನು ನೀಡುತ್ತದೆ. ಮತ್ತು ಸ್ಥಳದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಅವರ ವಿಚಾರಗಳನ್ನು ಹಂಚಿಕೊಳ್ಳಬಹುದು. ಹಾಗೇ ಮೋಜು, ಮಸ್ತಿ ಮಾಡಲು, ಅಲ್ಲಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಖುಷಿಯಾಗುತ್ತದೆ. ಹಾಗಾಗಿ ಕುಟುಂಬದ ಜೊತೆ ಪ್ರವಾಸ ಮಾಡಲು ಹಿಮಾಚಲ ಪ್ರದೇಶದ (Himachal Tour)ಡಾಲ್ ಹೌಸಿಗೆ ಭೇಟಿ ನೀಡಿ.

ಡಾಲ್ ಹೌಸಿ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಗಿರಿಧಾಮವಾಗಿದೆ. ಈ ಗಿರಿಧಾಮವನ್ನು 1850ರಲ್ಲಿ ಲಾರ್ಡ್ ಡಾಲ್ ಹೌಸಿ ಅಭಿವೃದ್ಧಿ ಪಡಿಸಿದ ಕಾರಣ ಈ ಗಿರಿಧಾಮಕ್ಕೆ ಆತನ ಹೆಸರನ್ನೇ ಇಡಲಾಗಿದೆ. ಈ ಸ್ಥಳ ಹಚ್ಚಹಸಿರಾದ ಸಸ್ಯಗಳಿಂದ ಆವೃತ್ತವಾಗಿದೆ. ಇಲ್ಲಿ ಕಣಿವೆಗಳು, ಜಲಪಾತಗಳು ಮುಂತಾದವುಗಳನ್ನು ನೋಡಬಹುದು. ಹಾಗಾಗಿ ನಿಮ್ಮ ಕುಟುಂಬದ ಜೊತೆ ಈ ಸ್ಥಳಕ್ಕೆ ಬನ್ನಿ.

ಖಜ್ಜಿಯಾರ್

“ಮಿನಿ ಸ್ವಿಟ್ಜರ್‌ಲ್ಯಾಂಡ್” ಎಂದು ಕರೆಯಲ್ಪಡುವ ಈ ಸ್ಥಳದಲ್ಲಿ ದಟ್ಟವಾದ ಕಾಡುಗಳು, ಹುಲ್ಲುಗಾವಲು ಮತ್ತು ಪ್ರಶಾಂತವಾದ ಸರೋವರವಿದೆ. ಈ ಸ್ಥಳವು ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಕುದುರೆ ಸವಾರಿ ಮಾಡಬಹುದು, ಪ್ರಕೃತಿ ಸೌಂದರ್ಯದ ಮಧ್ಯದಲ್ಲಿ ವಾಕಿಂಗ್ ಮಾಡಬಹುದು ಮತ್ತು ಕುಟುಂಬದವರ ಜೊತೆ ಕುಳಿತು ಹಚ್ಚ ಹಸಿರಿನ ನಡುವೆ ಊಟ ಮಾಡಲು ಅವಕಾಶವಿದೆ.

ಡೈನ್ಕುಂಡ್ ಶಿಖರ

ಇದು ಹಿಮಾಚಲ ಪ್ರದೇಶದ ಅತ್ಯುನ್ನತ ಶಿಖರಗಳಲ್ಲಿ ಒಂದಾಗಿದೆ. ಕಣಿವೆಯ ನೋಟ ಮತ್ತು ಹಿಮದಿಂದ ಆವೃತವಾದ ಹಿಮಾಲಯ ಶಿಖರಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ. ಇಲ್ಲಿ ಹಚ್ಚಹಸಿರಾದ ಪ್ರಕೃತಿಯ ಸೌಂದರ್ಯವನ್ನು ನೋಡಬಹುದು. ಟ್ರೆಕ್ಕಿಂಗ್ ಮತ್ತು ಇತರ ಸಾಹಸ ಚಟುವಟಿಕೆಗಳಿಗೆ ಇದು ಅತ್ಯುತ್ತಮ ಸ್ಥಳವಾಗಿದೆ

ಪಂಚಪುಲ

ಪಂಚಪುಲ ಎಂದರೆ ಐದು ಸೇತುವೆಗಳು ಎಂದರ್ಥ. ಇಲ್ಲಿ ಬಂಡೆಗಳ ಮೇಲೆ ಬೀಳುವ ಆಕರ್ಷಕ ಜಲಪಾತಗಳನ್ನು ಕಾಣಬಹುದು. ಇದು ಪ್ರಪಂಚದಾದ್ಯಂತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಹೊಳೆಗಳಲ್ಲಿ ನಿಧಾನವಾಗಿ ನಡೆಯಬಹುದು. ಇಲ್ಲಿ ತಿನ್ನಲು ಆಹಾರಗಳು ಕೂಡ ದೊರೆಯುತ್ತದೆ.

ಸತ್ಧಾರ ಜಲಪಾತ

ಹಚ್ಚಹಸುರಿನ ಕಾಡುಗಳಿಂದ ಸುತ್ತುವರಿದಿರುವ ಏಳು ಬುಗ್ಗೆಗಳಲ್ಲಿ ಚಿಮ್ಮುವ ಸತ್ಧಾರ ಜಲಪಾತ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ನೀವು ಇಲ್ಲಿಗೆ ಕುಟುಂಬದ ಜೊತೆ ಆಗಮಿಸಿದರೆ ಜಲಪಾತದ ಸೊಬಗನ್ನು ನೋಡಬಹುದು. ಇಲ್ಲಿ ಸ್ಟ್ರೀಮ್ ಸೈಡ್ ನಲ್ಲಿ ಪಿಕ್ನಿಕ್ ಗಳನ್ನು ಮಾಡಬಹುದು ಅಥವಾ ಪ್ರಕೃತಿಯ ಸೌಂದರ್ಯವನ್ನು ಪ್ರಶಾಂತವಾಗಿ ಸವಿಯಬಹುದು.

ಚಮೇರಾ ಸರೋವರ

ಡಾಲ್ ಹೌಸಿ ಪಟ್ಟಣದಿಂದ ಸುಮಾರು 25ಕಿಮೀ ದೂರದಲ್ಲಿರುವ ಚಮೇರಾ ಸರೋವರವು ಕುಟುಂಬದ ಜೊತೆಗಿನ ವಿಹಾರಕ್ಕೆ ಬಹಳ ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ನೀವು ಕುಟುಂಬದ ಜೊತೆ ದೋಣಿ ವಿಹಾರ ಮಾಡಬಹುದು. ಹಾಗೇ ಮೀನುಗಾರಿಕೆ, ಛಾಯಗ್ರಹಣ ಮುಂತಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು.

ಸೇಂಟ್ ಜಾನ್ ಚರ್ಚ್

ಇದು ಈ ಪಟ್ಟಣದಲ್ಲಿರುವ ಹಳೆಯ ಚರ್ಚ್ ಗಳಲ್ಲಿ ಒಂದಾಗಿದೆ. ಇದು ಆಧ್ಯಾತ್ಮಕ ಮತ್ತು ಐತಿಹಾಸಿಕ ಮಹತ್ವವನ್ನು ಸಾರುತ್ತದೆ. ಇಲ್ಲಿ ನೀವು ಅದರ ವಾಸ್ತುಶಿಲ್ಪಗಳನ್ನು ನೋಡಬಹುದು. ಇಲ್ಲಿ ಪ್ರಾರ್ಥನೆಗೂ ಹಾಜರಾಗಬಹುದು.

ಗಂಜಿ ಪಹಾರಿ

ಡಾಲ್ ಹೌಸ್ ನಿಂದ ಕೇವಲ 5 ಕಿ.ಮೀ ದೂರದಲ್ಲಿರುವ ಗಂಜಿ ಪಹಾರಿ ಬೆಟ್ಟಗಳಲ್ಲಿ ಒಂದಾಗಿದೆ. ಇಲ್ಲಿ ಸುತ್ತಮುತ್ತಲಿನ ಕಣಿವೆಗಳ ವ್ಯಾಪಕ ನೋಟಗಳ ಜೊತೆಗೆ ಕೆಲವು ರೋಮಾಂಚಕಾರಿ ಚಾರಣಗಳನ್ನು ಮಾಡಬಹುದು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು.

ಸುಭಾಷ್ ಬಾವೊಲಿ

ಇದಕ್ಕೆ ಭಾರತದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಹೆಸರನ್ನು ಇಡಲಾಗಿದೆ. ಇಲ್ಲಿ ನೀವು ನೈಸರ್ಗಿಕ ಚಿಲುಮೆಗಳು ಮತ್ತು ಪ್ರಶಾಂತವಾದ ವಾತಾವರಣವನ್ನು ಕಾಣಬಹುದು. ಇದು ಔಷಧೀಯ ಗುಣಗಳನ್ನು ಹೊಂದಿದ್ದು, ಸ್ವಾತಂತ್ರ್ಯ ಹೋರಾಟಗಾರನ ಅನಾರೋಗ್ಯವನ್ನು ಗುಣಪಡಿಸಿದೆ ಎಂದು ನಂಬಲಾಗಿದೆ. ಹಾಗಾಗಿ ಹಚ್ಚ ಹಸಿರಾದ ಪ್ರಕೃತಿ ಸೌಂದರ್ಯದ ಜೊತೆ ಸಮಯ ಕಳೆಯಲು ನಿಮ್ಮ ಕುಟುಂಬದ ಜೊತೆ ಇಲ್ಲಿಗೆ ಬನ್ನಿ.

ಡಾಲ್ ಹೌಸಿ ಮಾಲ್ ರಸ್ತೆ

ಡಾಲ್ ಹೌಸಿ ಪಟ್ಟಣವು ತನ್ನದೇ ಆದ ಮಾಲ್ ರಸ್ತೆಗಳನ್ನು ಹೊಂದಿದೆ. ಇಲ್ಲಿ ಶಾಪಿಂಗ್ ಮಾಲ್ ಮತ್ತು ರೆಸ್ಟೋರೆಂಟ್ ಗಳಿವೆ. ಜೊತೆಗೆ ಇಲ್ಲಿ ಪ್ರಪಂಚದಾದ್ಯಂತ ಅನೇಕ ರೀತಿಯ ಭಕ್ಷ್ಯಗಳು ಸಿಗುತ್ತವೆ. ಹಾಗೇ ಸ್ಮಾರಕಗಳು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ನೋಡಲು ಬಯಸಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಿ.

ಇದನ್ನೂ ಓದಿ: Viral News: ರೈಲಿನಲ್ಲಿ ಜನಿಸಿದ ತಮ್ಮ ಮಗುವಿಗೆ ʼಮಹಾಲಕ್ಷ್ಮಿʼ ಎಂದು ಹೆಸರಿಟ್ಟಿದ್ದೇಕೆ ಮುಸ್ಲಿಂ ದಂಪತಿ?

ಕಲಾಟಾಪ್ ವನ್ಯಜೀವಿ ಅಭಯಾರಣ್ಯ

ಈ ಸುಂದರವಾದ ಅಭಯಾರಣ್ಯವು ಡಾಲ್ ಹೌಸಿ ಮತ್ತು ಖಜ್ಜಿಯಾರ್ ನಡುವೆ ಇದೆ. ಇಲ್ಲಿ ಜಿಂಕೆಗಳು , ಕಪ್ಪು ಕರಡಿಗಳು, ನರಿ, ಚಿರತೆ, ಕಾಡು ಬೆಕ್ಕುಗಳು ಇತರ ಜಾತಿಯ ಪ್ರಾಣಿಗಳು ಹಾಗೂ ಪಕ್ಷಿಗಳನ್ನು ನೋಡಬಹುದು. ಇಲ್ಲಿ ನೀವು ಅಳಿವಿನಂಚಿನಲ್ಲಿರುವ ಪ್ರಾಣಿಗಳು ಮತ್ತು ಪಕ್ಷಿಗಳನ್ನು ನೋಡಬಹುದು.

Exit mobile version