ತೂಕ ಇಳಿಸುವಾಗ ಬರುವ ದೊಡ್ಡ ಸಮಸ್ಯೆ ಎಂದರೆ ಹೊಟ್ಟೆ ಕಡಿಮೆ ಮಾಡುವುದು ಹೇಗೆ ಎಂಬುದು. ಮಜ್ಜಿಗೆ ಮೇಲಿನ ಬೆಣ್ಣೆಯಂತೆ ಸದಾ ನಮ್ಮ ಶರೀರದ ಮೇಲೆಯೇ ತೇಲುತ್ತಿರುವ ಪಾಪಿ ಹೊಟ್ಟೆಗಾಗಿ ನಾವು ಎಷ್ಟೆಲ್ಲಾ ದೊಂಬರಾಟ ಮಾಡಬೇಕಾಗುತ್ತದಲ್ಲ. ಹೋದ ಮಾನ ಬರುವುದಿಲ್ಲ, ಬಂದ ಹೊಟ್ಟೆ ಹೋಗುವುದಿಲ್ಲ ಎಂಬಂಥ ಅಸಂಖ್ಯ ನಗೆಚಟಾಕಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ನಕ್ಕು ಸುಮ್ಮನಾಗುವ ವಿಷಯವಲ್ಲ ಇದು! ಅದರಲ್ಲೂ ಅಂಗಗಳ ಒಳಭಾಗದಲ್ಲಿ ತುಂಬುವ ಕೊಬ್ಬು (Visceral fat) ನಿಜಕ್ಕೂ ಅನಾರೋಗ್ಯಕಾರಿ. ದೇಹದ ಕಿಬ್ಬೊಟ್ಟೆಯ ಭಾಗದಲ್ಲಿ ಬಲುಬೇಗನೇ ವಕ್ಕರಿಸಿಕೊಳ್ಳುವ ಈ ಕೊಬ್ಬು ಕರಗುವುದಕ್ಕೆ ಸಿಕ್ಕಾಪಟ್ಟೆ ಜಿಗುಟೂ ಹೌದು.
ಕೊಬ್ಬನ್ನು ಹೊತ್ತ ಈ ಜೀವಕೋಶಗಳು, ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುವುದು, ಹಾರ್ಮೋನುಗಳ ಏರುಪೇರು, ಟೈಪ್-೨ ಮಧುಮೇಹವನ್ನು ತರುವಂಥ ನಾನಾ ರೀತಿಯ ತೊಂದರೆಗಳನ್ನು ಉಂಟುಮಾಡುತ್ತವೆ. ಹಾಗೆಂದು ಸುಲಭದಲ್ಲಿ ಕರಗದ ಈ ಕೊಬ್ಬನ್ನು ಹೊತ್ತುಕೊಂಡೇ ಬದುಕಿ ಆಪತ್ತು ತಂದುಕೊಳ್ಳಬೇಕೆಂದಿಲ್ಲ. ಅದನ್ನು ಕರಗಿಸಲು ಉಪಾಯಗಳಿವೆ. ಆದರೆ ಈ ಬಗ್ಗೆ ಹೆಚ್ಚಿನ ಶಿಸ್ತು ಮತ್ತು ಬದ್ಧತೆಯನ್ನು ತಂದುಕೊಳ್ಳುವುದು ಅಗತ್ಯ.ಹಾಗಾದರೆ ಏನು ಮಾಡಬಹುದು?
ಪಿಷ್ಟಕ್ಕೆ ಕತ್ತರಿ
ಕಡಿಮೆ ಕೊಬ್ಬಿನ ಆಹಾರಕ್ಕಿಂತ ಕಡಿಮೆ ಕಾರ್ಬ್ ಇರುವ ಆಹಾರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಪರಿಣಾಮ ಬೀರಬಲ್ಲವು. ಈ ನಿಟ್ಟಿನಲ್ಲಿ ತಜ್ಞರು ನಡೆಸಿದ ಪ್ರಯೋಗಗಳ ಪ್ರಕಾರ, ಆಹಾರದಲ್ಲಿ ಇದೊಂದು ಮಾರ್ಪಾಡು ಮಾಡುವಷ್ಟರಲ್ಲೇ ಶೇ. ೧೦ಕ್ಕಿಂತ ಹೆಚ್ಚಿನ ಒಳಾಂಗದ ಕೊಬ್ಬು ಕರಗುತ್ತದೆ. ತೂಕಕ್ಕಿಂತ ಪ್ರಧಾನವಾಗಿ ಹೊಟ್ಟೆ ಕರಗಿಸಬೇಕು ಎಂದಿದ್ದರೆ, ಇದರೊಂದಿಗೆ ಕಾರ್ಡಿಯೊ ಮಾಡುವುದನ್ನೂ ಪರಿಶೀಲಿಸಬಹುದು.
ನಾರಿನಂಶ ಹೆಚ್ಚಿಸಿ
ಪಿಷ್ಟ ಮತ್ತು ಕೊಬ್ಬುರಹಿತವಾದ ಆಹಾರವೆಂದರೆ ನಾರು. ಇದನ್ನು ಊಟದಲ್ಲಿ ಹೆಚ್ಚಿಸುವುದು ಅಗತ್ಯ. ಇದರಿಂದ ಕುರುಕಲು ತಿನ್ನುವ ಬಾಯಿಯ ಚಪಲಕ್ಕೆ ಬ್ರೇಕ್ ಹಾಕಲು ಅನುಕೂಲ. ಮಾತ್ರವಲ್ಲ, ಮುಖ್ಯವಾಗಿ ಹೊಟ್ಟೆಯ ಕೊಬ್ಬು ಕರಗಿಸಲು ಸಮರ್ಥ ಮಾರ್ಗವೂ ಹೌದು.
ಪ್ರೊಟೀನ್
ಇದನ್ನಂತೂ ಕಡ್ಡಾಯವಾಗಿ ಹೆಚ್ಚಿಸಬೇಕು. ಕಾರ್ಬ್ ಕಡಿತದಿಂದ ಉಂಟಾಗುವ ಹಸಿವನ್ನು ಇಂಗಿಸಲು ಇದುವೇ ಮುಖ್ಯ ಮಾರ್ಗ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವನೆ ಕೊಡುವ ಪ್ರೊಟೀನ್ಗಳು, ದೇಹವನ್ನು ಸದೃಢವಾಗಿಸಲೂ ನೆರವಾಗುತ್ತದೆ. ಒಟ್ಟಿನಲ್ಲಿ ಕೊಬ್ಬು ಕರಗಿಸುವ ಒಳ್ಳೆಯ ಮಾರ್ಗವಿದು
ಸಕ್ಕರೆ ಮೇಲೆ ಅಕ್ಕರೆ ಬೇಡ
ಮೇಲಿಂದ ತಿನ್ನುವ ಸಕ್ಕರೆಯ ಪ್ರಮಾಣವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮಾಡಿ. ಯಾವುದೇ ವಿಟಮಿನ್, ಖನಿಜಗಳನ್ನು ದೇಹಕ್ಕೆ ನೀಡದ ಸಕ್ಕರೆ, ತೂಕವನ್ನಂತೂ ಯಶಸ್ವಿಯಾಗಿ ಏರಿಸುತ್ತದೆ. ಹೊಟ್ಟೆಯ ಭಾಗದ ಕೊಬ್ಬು ಶೇಖರಣೆಗೆ ರಹದಾರಿ ಮಾಡಿಕೊಡುತ್ತದೆ. ಇವೆಲ್ಲವುಗಳ ಜೊತೆಗೆ ಕಡ್ಡಾಯವಾಗಿ ಬೇಕಿರುವುದು ವ್ಯಾಯಾಮ.