Site icon Vistara News

Migraine Headache: ಬೇಸಿಗೆಯಲ್ಲಿ ಉಲ್ಬಣಿಸುವ ತಲೆನೋವಿಗೆ ಪರಿಹಾರ ನಿಮ್ಮಲ್ಲೇ ಇದೆ!

Migraine Problem

ಚಳಿಗಾಲ ತನ್ನ ಬಾಹುಬಂಧನವನ್ನು ಕಳಚಿ ಮೆಲ್ಲಗೆ ಹಿಂದೆ ಸರಿಯುತ್ತಿರುವಾಗ ಬೇಸಗೆ ಮೆಲ್ಲಮೆಲ್ಲನೆ ತನ್ನ ಹಿಡಿಯನ್ನು ಬಿಗಿಗೊಳಿಸುವ ಕಾಲ ಇದೀಗ ಬರುತ್ತಿದೆ. ಚಳಿಗಾಲದಲ್ಲಿ ಕಾಡಿದ ಒಂದೊಂದು ಸಮಸ್ಯೆಯನ್ನು ನೆನೆದು ಬಿಸಿಲುಗಾಲ ಬಂದಾಗ ನಿಟ್ಟುಸಿರು ಬಿಟ್ಟರೂ, ಬಿಸಿಲ ಝಳ ತರುವ ಒಂದೊಂದು ಸಮಸ್ಯೆಯೂ ಚಳಿಗಾಲದ ಸಮಸ್ಯೆಗಿಂತ ಸರಳವೇನೂ ಇಲ್ಲ. ಮುಖ್ಯವಾಗಿ ಸೂರ್ಯ ನೆತ್ತಿಯ ಮೇಲೆ ಬಂದಾಗ ಕೆಲಸದ ನಿಮಿತ್ತವೋ, ಇನ್ನಿತರ ಕಾರಣಗಳಿಂದಲೋ ಮನೆಯಿಂದ ಹೊರಗೆ ಕಾಲಿಟ್ಟರೆ, ಬಿಸಿಲಲ್ಲಿ ತಿರುಗಾಡಿದರೆ ಹಲವರಿಗೆ ತಲೆ ಸಿಡಿದುಹೋಗುವಂತೆ ನೋವಾಗುವುದು (summer headache) ನಿಶ್ಚಿತ. ಮೈಗ್ರೇನಿನ ಸಮಸ್ಯೆಯಿದ್ದವರಿಗಂತೂ ಬೇಸಗೆಯಲ್ಲಿ ತಲೆನೋವಿನ ಸಂಭವ ಹೆಚ್ಚು. ಅತಿಯಾದ ಬೆಳಗು, ಬಿಸಿಲು ಇಂಥವಕ್ಕೆ ಒಳಪಟ್ಟರೆ ಈ ತೊಂದರೆಯಿರುವವರಿಗೆ ಮೈಗ್ರೇನ್‌ ಮತ್ತೆ ಕಾಟಕೊಡದೇ ಇರುವುದಿಲ್ಲ. ಇನ್ನು ಕೆಲವರು ನೀರು ಕಡಿಮೆ ಕುಡಿಯುವುದರಿಂದಾಗಿ ನಿರ್ಜಲೀಕರಣ ಸ್ಥಿತಿಯೂ ಉಂಟಾಗುವುದರಿಂದ ತಲೆಸುತ್ತು, ತಲೆನೋವಿನಂತಹ ತೊಂದರೆಗೆ ಎಡೆ ಮಾಡುತ್ತದೆ. ಕೆಲವರಿಗೆ ವ್ಯಾಯಾಮ ಇತ್ಯಾದಿಗಳನ್ನು ಬಿಸಿಲಿನಲ್ಲೇ ಮಾಡುವುದರಿಂದಲೂ ತಲೆನೋವಿಗೆ ಕಾರಣವಾಗಬಹುದು. ನಿದ್ದೆಯ ಕೊರತೆಯಾದ ಮಂದಿಗೆ, ಮಧ್ಯಾಹ್ನದೂಟ ಬಿಟ್ಟಿದ್ದರೂ ಕೆಲವರಿಗೆ ತಲೆನೋವು ತೀವ್ರವಾಗಿ ಕಾಡುವುದುಂಟು. ಹಾಗಾದರೆ, ನಮ್ಮದೇ ಆಹಾರಕ್ರಮ ಬದಲಾವಣೆ ಹಾಗೂ ಜೀವನಶೈಲಿಯ ಬದಲಾವಣೆಯಿಂದ ಬೇಸಿಗೆಯಲ್ಲಿ ಕಾಡುವ ಇಂತಹ ತಲೆನೋವಿನಿಂದ ಹೇಗೆ ಪಾರಾಗಬಹುದು (headache relief) ಎಂಬುದನ್ನು ನೋಡೋಣ.

1. ಸರಿಯಾಗಿ ನೀರು ಕುಡಿಯಿರಿ: ನಿತ್ಯವೂ ಸರಿಯಾಗಿ ನೀರು ಕುಡಿಯಿರಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಿಡಿದು, ಇಡೀ ದಿನ ಕನಿಷ್ಟ ನಾಲ್ಕು ಲೀಟರ್‌ ನೀರಾದರೂ ಕುಡಿಯುವುದು ಅಗತ್ಯ.

2. ದೇಹವನ್ನು ತಂಪಾಗಿಡುವ ಪಾನೀಯಗಳನ್ನು ಸೇವಿಸಿ: ಬೇಸಿಗೆಯ ತಲೆನೋವನ್ನು ತಪ್ಪಿಸಲು, ದೇಹವನ್ನು ತಂಪಾಗಿ ಇಡುವುದು ಅತ್ಯಗತ್ಯ. ಕೋಕಂ ಶರಬತ್ತು, ಕಲ್ಲಂಗಡಿ ಹಣ್ಣಿನ ಜ್ಯೂಸು, ಎಳನೀರು, ಹಾಲಿನೊಂದಿಗೆ ಗುಲ್ಕಂದ್‌ ಇತ್ಯಾದಿಗಳನ್ನು ಸೇವಿಸಬಹುದು.

3.  ಚಹಾ ಕಾಫಿಯನ್ನು ಆದಷ್ಟೂ ಕಡಿಮೆ ಮಾಡಿ: ತಲೆನೋವು ಎಂದು ಪದೇ ಪದೇ ಕಾಫಿ ಕುಡಿಯುವುದು, ಚಹಾ ಸೇವಿಸುವುದು ಮಾಡಬೇಡಿ. ಬೇಸಿಗೆಯಲ್ಲಿ ಕೆಫೀನ್‌ಯುಕ್ತ ಪೇಯಗಳನ್ನು ಮಿತವಾಗಿಟ್ಟಿರಿ. ಶುಂಠಿ ಚಹಾ ಮಾಡಿ ಕುಡಿದರೆ, ತಲೆನೋವು ಕೊಂಚ ಸುಧಾರಣೆ ಕಾಣಬಹುದು.

4. ಮೆಗ್ನೀಶಿಯಂಯುಕ್ತ ಹಣ್ಣು ತಿನ್ನಿ: ಬೇಸಿಗೆಯಲ್ಲಿ ಮೆಗ್ನೀಶಿಯಂಯುಕ್ತ ಹಣ್ಣುಗಳನ್ನು ಸೇವಿಸಿ. ಬಾಳೆಹಣ್ಣು, ಅನನಾಸು, ಕಲ್ಲಂಗಡಿ ಹಣ್ಣು, ಆಪ್ರಿಕಾಟ್‌ ಮತ್ತಿತರ ಹಣ್ಣುಗಳಲ್ಲಿ ಮೆಗ್ನೀಶಿಯಂ ಅಧಿಕವಾಗಿದೆ.

5. ಮಜ್ಜಿಗೆ ಸೇವಿಸಿ: ಮೊಸರು ಹಾಗೂ ಮೊಸರಿನ ಸಂಬಂಧೀ ಪೇಯಗಳನ್ನು ಕುಡಿಯಿರಿ: ಮೊಸರಿನ ಉತ್ಪನ್ನಗಳಾದ ಮಜ್ಜಿಗೆ, ಲಸ್ಸಿ ಇತ್ಯಾದಿಗಳನ್ನೂ ಸೇವಿಸಬಹುದು. ಆದಷ್ಟೂ ತಂಪಾದ ಮಜ್ಜಿಗೆ ಕುಡಿಯಿರಿ.

ಇದನ್ನೂ ಓದಿ: Health Tips: ತಂಪು ತಂಪು ಕೂಲ್‌ ಕೂಲ್‌ ಈ ಲಾವಂಚ ಎಂಬ ಬೇಸಿಗೆಯ ಬಂಧು!

6. ದೇಸೀ ಪರ್ಯಾಯಗಳನ್ನು ಹುಡುಕಿ: ಬಾರ್ಲಿ ಗಂಜಿ, ರಾಗಿ ಅಂಬಲಿ ಇತ್ಯಾದಿ ದೇಸೀ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಆದಷ್ಟೂ ಕಾರ್ಬೋನೇಟೆಡ್‌ ಡ್ರಿಂಕ್‌ಗಳಿಂದ ದೂರವಿರಿ.

7. ಅಗಸೆಬೀಜ ತಿನ್ನಿ: ಫ್ಲ್ಯಾಕ್‌ಸೀಡ್‌ ಅಥವಾ ಅಗಸೆ ಬೀಜ ಮೆಗ್ನೀಶಿಯಂನಿಂದ ಶ್ರೀಮಂತವಾಗಿರುವ ಬೀಜವಾಗಿರುವುದರಿಂದ ಬೇಸಗೆಯಲ್ಲಿ ನಿತ್ಯ ನಿಮ್ಮ ಆಹಾರದೊಂದಿಗೆ ಅಗಸೆಬೀಜ ಬಳಸುವುದನ್ನು ರೂಢಿ ಮಾಡಿಕೊಳ್ಳಿ. 100 ಗ್ರಾಂ ಅಗಸೆಬೀಜದಲ್ಲಿ 392 ಮಿಲಿಗ್ರಾಂನಷ್ಟು ಮೆಗ್ನೀಶಿಯಂ ಇದೆ.

8. ಮೀನು ತಿನ್ನಿ: ಸಾಲ್ಮನ್‌, ಟೂನಾದಂತಹ ಮೀನನ್ನು ಬೇಸಗೆಯಲ್ಲಿ ತಿನ್ನುವುದು ಒಳ್ಳೆಯದು. ಇದರಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ ಇರುವುದರಿಂದ ಇದು ತಲೆನೋವಿಗೂ ಒಳ್ಳೆಯದು.

9. ಸಪ್ಲಿಮೆಂಟ್‌ ಕೂಡಾ ಪರಿಹಾರವಾಗಬಹುದು: ತಲೆನೋವು ಅತ್ಯಂತ ಹೆಚ್ಚು ಬಾಧೆ ಕೊಡುತ್ತಿದ್ದರೆ ವೈದ್ಯರ ಸಲಹೆ ಮೇರೆಗೆ ಮಲ್ಟಿವಿಟಮಿನ್‌ ಸಪ್ಲಿಮೆಂಟ್‌ ಮಾತ್ರೆಗಳನ್ನು ಸೇವಿಸಬಹುದು. ಕಬ್ಬಿಣಾಂಶ ಹಾಗೂ ಮೆಗ್ನೀಶೀಯಂಯುಕ್ತ ಮಾತ್ರೆಗಳ ಸೇವನೆಯಿಂದಲೂ ಪರಿಹಾರ ಕಾಣಬಹುದು. ಆದರೆ, ವೈದ್ಯರ ಸಲಹೆ ಮೇರೆಗೆ ಇದನ್ನು ಸೇವಿಸಬಹುದು.

ಇದನ್ನೂ ಓದಿ: Health Tips: ನಾನ್‌ಸ್ಟಿಕ್‌ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?

Exit mobile version