Site icon Vistara News

Loneliness | ಎಲ್ಲರಿದ್ದೂ ಏಕಾಂಗಿತನ ಕಾಡಿದಾಗ ಹೇಗೆ ಹೊರಬರಲಿ!?

loneliness

ಕೆಲವೊಮ್ಮೆ ಒಬ್ಬರೇ ಇರುವುದು ಬಹಳ ಇಷ್ಟವಾಗುತ್ತದೆ. ಎಲ್ಲ ಕೆಲಸಗಳನ್ನು ಮುಗಿಸಿ ಒಬ್ಬರೇ ಮನೆಗೆ ಹೋದಾಗ ಯಾರೂ ಇಲ್ಲದಿದ್ದರೆ, ಸುಮ್ಮನೆ ನಮ್ಮ ಕೆಲಸಗಳನ್ನಷ್ಟೇ ಮಾಡಿಕೊಂಡು ನಿರಾಳವಾಗಿ ಬಿದ್ದುಕೊಂಡಿರಲು ಒಬ್ಬರೇ ಇರಬೇಕೆನಿಸುತ್ತದೆ. ಒಬ್ಬರೇ ಎಲ್ಲಾದರೂ ತಿರುಗಾಡಿಕೊಂಡು ಬರುವ, ಅಥವಾ ಒಬ್ಬರೇ ಮನೆಯಲ್ಲಿ ಕೆಲ ದಿನಗಳ ಕಾಲ ಇದ್ದುಬಿಡುವ ಅನ್ನುವಂಥ ಭಾವವದು. ಇದು ಕೆಲ ಗಂಟೆಗಳ ಅಥವಾ ಕೆಲದಿನಗಳ ಕಾಲ ಒಂದು ಬ್ರೇಕ್‌ನಂತೆ ಬಯಸುವುದು ನಿಜ.

ಆದರೆ ಕೆಲವೊಮ್ಮೆ ಇದೇ ಶಾಪವಾಗಿಯೂ ಕಾಡುತ್ತದೆ. ಮನೆಗೆ ಸುಸ್ತಾಗಿ ಬಂದಾಗ ಕಾಳಜಿ ವಹಿಸುವ, ಪ್ರೀತಿಯಿಂದ ಮಾತನಾಡಿಸುವ ಒಂದು ಜೀವವಾದರೂ ಇರಬೇಕಿತ್ತು ಅನಿಸುತ್ತದೆ. ಜೀವಮಾನವಿಡೀ ಒಬ್ಬರೇ ಇದ್ದು ಬಿಡುವ ಎಂಬ ಯೋಚನೆ ಯಾರಿಗೂ ಇರುವುದಿಲ್ಲ. ನನಗಾರೂ ಇಲ್ಲ, ನನನ್ನು ಪ್ರೀತಿಸುವ ಜೀವ ಒಂದೂ ಇಲ್ಲ ಎಂಬ ಭಾವವೇ ಸಾಕು, ಜೀವನದಲ್ಲಿ ಆಸಕ್ತಿ ಕುಂದಿಸಲು. ತನ್ನ ಜೊತೆ ತನಗಾಗಿ ಮಿಡಿವ ಜೀವವೊಂದು ಇರಬಾರದೇ ಎಂದು ಪ್ರತಿಯೊಬ್ಬರಿಗೂ ಅನಿಸಿಯೇ ಅನಿಸುತ್ತದೆ. ಮನುಷ್ಯನ ಮೂಲ ಗುಣವೇ ಅದು!

ಹಾಗಾದರೆ, ನಿಜವಾಗಿಯೂ ನಮ್ಮನ್ನು ಪ್ರೀತಿಸುವವರು ಯಾರೂ ಇಲ್ಲವೋ ಅಥವಾ ಅಂಥದ್ದೊಂದು ಭಾವವನ್ನು ನಾವೇ ಅಂದುಕೊಳ್ಳುತ್ತೇವೆಯೋ? ಇದರಿಂದ ಹೊರಬರುವುದು ಹೇಗೆ?

ಹತ್ತಾರು ಗೆಳೆಯರಿದ್ದಾರೆ, ದಿನವೂ ಕೆಲವರನ್ನಾದರೂ ಒಂದಲ್ಲ ಒಂದು ಕಾರಣಕ್ಕೆ ಭೇಟಿ ಮಾಡುತ್ತೇವೆ. ವೀಕೆಂಡಿನಲ್ಲಿ ಸಿಕ್ಕಿ ಪಾರ್ಟಿ ಮಾಡುತ್ತೇವೆ. ಆದರೂ ಯಾಕೋ ಏಕಾಂಗಿತನ. ಈ ಗೆಳೆಯರೆಲ್ಲ ಗೆಳೆಯರೇನೋ ಹೌದು, ಆದರೆ ತನ್ನವರಲ್ಲ ಎಂಬ ಭಾವ. ಅಥವಾ, ಇವಾವದೂ ತನಗೆ ಖುಷಿ ಕೊಡುತ್ತಿಲ್ಲ ಅನಿಸುವುದು ಅಥವಾ ಇವಾವವೂ ತನಗೆ ಬೇಡ, ತನಗೇನೋ ಬೇರೆಯೇ ಬೇಕಾಗಿದೆ, ಇವುಗಳ್ಯಾವುವೂ ತನ್ನನ್ನು ಹಿಂದಿನ ಹಾಗೆ ಖುಷಿಯಾಗಿ ಇಡುತ್ತಿಲ್ಲ ಎಂಬ ಭಾವವೊಂದು ಸದಾ ಕಾಡುತ್ತಲೇ ಇರುತ್ತದೆ.

ಬದುಕಿನ ಒಂದು ಘಟ್ಟದಲ್ಲಿ ಕೆಲವರು ಇಂಥದ್ದೊಂದು ಬಂದು ನಿಲ್ಲುತ್ತಾರೆ. ಬಾಲ್ಯ ಕಳೆದು, ಯೌವನದ ಹುಚ್ಚುಗಳೆಲ್ಲ ಮುಗಿದು, ನಿಜವಾದ ಬದುಕೊಂದು ತೆರೆದುಕೊಂಡಾಗ ಇಂಥದ್ದೊಂದು ಭಾವ ಆವರಿಸಿಬಿಡುವುದು ಸಹಜ. ಇಂಥ ಸಂದರ್ಭ ಏನು ಮಾಡಬಹುದು? ಇಂಥ ಭಾವದೊಳಗೇ ಮುಳುಗಿ ಅದು ಗಾಢವಾಗಲು ಬಿಡುವುದೇ? ಅಥವಾ ಇದರಿಂದ ಹೊರಬರಲು ತನ್ನ ನಿಜವಾದ ಆಸಕ್ತಿಗಳತ್ತ ಮುಖ ತಿರುಗಿಸುವುದೇ ಎಂಬುದು ನಿಜವಾಗಿಯೂ ಸವಾಲೇ ಸರಿ. ಇಂಥ ಸಂದರ್ಭದಲ್ಲಿ ನಮ್ಮೊಳಗಿನ ನಮ್ಮನ್ನು ಚಿಗುರಿಸಲು ಏನು ಮಾಡಬಹುದು ನೋಡೋಣ.

೧. ನಿಮ್ಮನ್ನು ನೀವು ಗಮನಿಸಿ: ನಿಮ್ಮನ್ನು ನೀವು ಗಮನಿಸುತ್ತಾ ಇರುವುದು ಒಂದು ಒಳ್ಳೆಯ ಅಭ್ಯಾಸ. ನಿಮ್ಮೊಳಗಿನ ವಿಮರ್ಶಕ ನಿಮ್ಮ ಬಗ್ಗೆ ಏನೆನ್ನುತ್ತಾನೆ ನೋಡಿ. ಒಳಗಿನ ಮನುಷ್ಯ ಯಾವ ಭಾವನಾತ್ಮಕ ಸಂಬಂಧಗಳನ್ನು ಇಟ್ಟುಕೊಳ್ಳದೇ ಪಾರದರ್ಶಕವಾಗಿ ಏನು ಹೇಳಿಯಾನು ಎಂಬುದನ್ನು ಯೋಚಿಸಿ. ಇಲ್ಲಿ ಭಾವನೆಗಿಂತಲೂ ಹೆಚ್ಚು ಬುದ್ಧಿ ಕೆಲಸ ಮಾಡಲಿ. ಕೆಲವೊಮ್ಮೆ ನಿಮ್ಮ ಒಳಮಾತುಗಳನ್ನು, ಅನಿಸುವ ಬೇಸರಗಳನ್ನು ಹಾಳೆಯಲ್ಲಿ, ಡೈರಿಯಲ್ಲಿ ಬರೆಯಲು ಪ್ರಯತ್ನಿಸಿ. ಮನಸ್ಸು ಹಗುರಾಗುತ್ತದೆ. ಪ್ರಶ್ನೆಗಳಿಗೆ ಉತ್ತರವೂ ಸಿಗುತ್ತದೆ.

೨. ಒಳಗಿನ ಮಾತು: ಇಂತಹ ಯೋಚನೆಗಳು ನಿಮಗೆ ಎಲ್ಲಿಂದ ಹುಟ್ಟುತ್ತವೆ, ಯಾಕಾಗಿ ಹುಟ್ಟುತ್ತವೆ ಯೋಚಿಸಿ. ಬಹಳಷ್ಟು ಸಾರಿ ನಮ್ಮ ಒಳಗಿಂದ ಈ ಮಾತುಗಳು ಬಂದಿರುವುದಿಲ್ಲ. ಬೇರೆಯವರ ದೃಷ್ಟಿಕೋನದಿಂದ ಬಂದ ಮಾತುಗಳು ನಮ್ಮೊಳಗಿಂದ ಬಂದಂತೆ ನಮಗೆ ಕಾಣುತ್ತದೆ. ನಮಗೆ ನಿಜಕ್ಕೂ ಹಾಗನಿಸುತ್ತಿದೆಯೋ ಅಂತ ಪ್ರಶ್ನೆ ಮಾಡಿಕೊಳ್ಳಿ. ಪರಿಸ್ಥಿತಿ ಏನು, ವಾಸ್ತವ ಏನು ಎಂದು ಯೋಚಿಸಿ ಅರಿಯಲು ಪ್ರಯತ್ನಪಡಿ.

೩. ಅಂತರಂಗ ಸ್ಪಂದನ: ನಿಮ್ಮೊಳಗಿನಿಂದ ಬಂದ ಮಾತುಗಳು ಅಂದುಕೊಂಡಾಗ ಅದಕ್ಕೆ ಪ್ರತಿಕ್ರಿಯಿಸಲು ಪ್ರಯತ್ನಪಡಿ. ಅಂದರೆ, ನಿಮ್ಮೊಳಗಿನ ಮಾತು ʻನನ್ನನ್ಯಾರೂ ಪ್ರೀತಿಸುತ್ತಿಲ್ಲ, ಜೀವನ ಬೇಜಾರಾಗಿದೆʼ ಅಂತ ಆಗಾಗ ಹೇಳುತ್ತಿದ್ದರೆ, ನೀವದಕ್ಕೆ ಪ್ರತಿಕ್ರಿಯಿಸಿ. ನಿಜಕ್ಕೂ ಜೀವನ ಬೇಜಾರಾಗಿದೆಯಾ? ಇಲ್ಲವಲ್ಲ, ನನ್ನನ್ನು ಇಂಥವರು ಪ್ರೀತಿಸದಿದ್ದರೇನಂತೆ, ನನಗೆ ನಾನೇ ಜೊತೆಯಿದ್ದೇನೆ, ನಾನೊಬ್ಬ ವಿಶೇಷ ವ್ಯಕ್ತಿʼ ಅಂತ ನಿಮ್ಮ ಉತ್ತರವಿರಬಹುದು! ನಿಮ್ಮ ಬಗೆಗಿನ ಪ್ರೀತಿ ನಿಮಗಿಲ್ಲಿ ಮೊಳೆಯಬಹುದು. ನಿಜವಾದ ಮನಸ್ಸಿಲ್ಲಿ ತೆರೆಯಬಹುದು. ನಿಮಗೆ ಹೀಗನಿಸಲು ನಿಜವಾದ ಕಾರಣ ಹೊಳೆಯಬಹುದು. ನಿಮ್ಮೊಳಗಿನ ನಾಚಿಕೆಯ ಸ್ವಭಾವ, ನೀವೇ ಮುಂದುವರಿದು ಮಾತಾಡಿಸಿಕೊಂಡು ಹೋಗಲು ಸಾಧ್ಯವಾಗದಿರದೆ ಇರುವುದು, ಸಾಮಾಜಿಕವಾಗಿ ಎಲ್ಲರೊಡನೆ ಸಹಜವಾಗಿ ಬೆರೆಯಲು ಹಿಂಜರಿಕೆ, ಬೇರೆಯವರೇ ನಿಮ್ಮನ್ನು ಹುಡುಕಿಕೊಂಡು ಬಂದು ಮಾತಾಡಿಸಲಿ ಎಂಬ ನಿಮ್ಮೊಳಗಿನ ಸಣ್ಣ ಅಹಂ, ಅಥವಾ ಅಂತರ್ಮುಖಿ ಸ್ವಭಾವ ಇತ್ಯಾದಿ ಇತ್ಯಾದಿ ಕಾರಣಗಳು ನಿಮಗೆ ಅರಿವಾಗಬಹುದು. ಅದನ್ನು ಮೀರಿ ಹೊರಬರಲು ಪ್ರಾಮಾಣಿಕವಾಗಿ ನೀವು ಪ್ರಯತ್ನಿಸಬಹುದು.

ಇದನ್ನೂ ಓದಿ | Social Media | ʼಅಯ್ಯೋ, ಇಷ್ಟು ಹೊತ್ತಾದರೂ ಯಾರೂ ಲೈಕ್‌ ಮಾಡಿಲ್ಲʼ ಎಂಬ ವ್ಯಸನದಿಂದ ಹೊರಗೆ ಬರುವುದು ಹೇಗೆ?

೪. ಸ್ಸ್ವಭಾವ ಬದಲು: ಸ್ವಭಾವ ಬದಲಾಯಿಸಿ ಎಂದು ಹೇಳುವುದು ಸುಲಭ. ಮೂಲ ಸ್ವಭಾವ ಬದಲಾಯಿಸುವುದು ಸ್ವಲ್ಪ ಕಷ್ಟ. ಆದರೆ, ನಮ್ಮೊಳಗಿನ ನಮ್ಮನ್ನು ನಾವು ಅರಿತಾಗ ಮೂಲ ಸ್ವಭಾವವನ್ನು ನಮಗೆ ನಾವೇ ಬದಲಾಯಿಸಲು, ಬೆಳೆಯಲು ಬಿಡುವುದು ತಪ್ಪಲ್ಲ. ಪ್ರಯತ್ನಿಸಿ ನೋಡಿ. ಹೊಸ ಜನರು, ಹೊಸ ಪರಿಸರ ಹುಡುಕಲು ಪ್ರಯತ್ನಪಡಿ. ನಿಮ್ಮನ್ನು ನೀವು ಪ್ರೀತಿಸುವುದನ್ನು ಮೊದಲು ಕಲಿತರೆ ಹೊರಗಿನ ಪ್ರಪಂಚಕ್ಕೆ ತೆರೆದುಕೊಳ್ಳುವುದು ಸುಲಭವಾಗುತ್ತದೆ. ಮನಸ್ಸನ್ನು ಹೆಚ್ಚು ಚಿಂತೆಗಳಿಗೆ ತೆರೆಯದೆ ಹಗುರಾಗಿಸಿ. ಇವಕ್ಕೆ, ಇವರಿಗೆ ಇದಕ್ಕಿಂತ ಹೆಚ್ಚು ಗಮನ ಕೊಡಬೇಕಾದದ್ದಿಲ್ಲ ಅಂತನಿಸಿದರೆ ಅಂತವರಿಗೆ ನಿಮ್ಮ ಮನಸ್ಸಿನಿಂದ ಗೇಟ್‌ಪಾಸ್‌ ಕೊಡಲು ಪ್ರಯತ್ನಿಸಿ.

೫. ದಿನಚರಿ ಬದಲಿಸಿ: ನಿಮ್ಮ ಎಂದಿನ ದಿನಚರಿಯಲ್ಲಿ ಬದಲಾವಣೆ ಮಾಡಿ ನೋಡಿ. ಎಲ್ಲಿಗೂ ಹೋಗಿಲ್ಲ ಎನಿಸಿದರೆ ತಿರುಗಾಡಿ ಬನ್ನಿ. ದಿನವೂ ಹೋಗುವ ಪಾರ್ಕ್‌ ಬದಲಾವಣೆ ಮಾಡಿ. ದಿನವೂ ಓಡಾಡುವ ಪರಿಸರ ಬದಲಾಯಿಸಿ ನೋಡಿ. ಮಲಗುವ ಕೋಣೆ, ಮನೆಯ ಇಂಟೀರಿಯರ್‌, ಹೊಸ ಕರ್ಟೈನ್‌, ಹೊಸ ಬೆಡ್‌ಶೀಟ್‌ ಹೀಗೆ ಇರುವ ಪರಿಸರದಲ್ಲಿಯೂ ಚಿಕ್ಕಪುಟ್ಟ ಬದಲಾವಣೆ ಮಾಡಿ ನೋಡಬಹುದು. ನಮ್ಮನ್ನು ನಿಜವಾಗಿ ಯಾರು ಇಷ್ಟಪಡುತ್ತಾರೆ ಎಂದೊಮ್ಮೆ ಆತ್ಮಾವಲೋಕನ ಮಾಡಿ ನೋಡಿ ಅವರ ಜೊತೆಗೊಮ್ಮೆ ಸಮಯ ಕಳೆದು ಅನಿಸುವ ಭಾವನೆಯನ್ನು ಮನಬಿಚ್ಚಿ ಹೇಳಬಹುದು ಅಥವಾ ತನ್ನಷ್ಟಕ್ಕೆ ತಾನು ಬರೆದುಕೊಂಡು ಹಗುರಾಗಬಹುದು. ಆದರೆ ಒಮ್ಮೆ ನಿಮ್ಮ ಭಾವನೆಗಳನ್ನು ನಿಮಗೇ ನಿಯಂತ್ರಿಸಲು ಸಾಧ್ಯವಾಗದ ಮಟ್ಟಿಗೆ ನೀವು ತಲುಪಿದ್ದೀರಿ ಅಂತನಿಸಿದರೆ ನೀವು ಈ ಬಗೆಗೆ ಮಾನಸಿಕ ತಜ್ಞರ ನೆರವು ಪಡೆಯಬಹುದು. 

ಇದನ್ನೂ ಓದಿ | World Motorcycle Day | ಬೈಕೆಂಬ ಭಾವಗೀತೆ! ನೆನಪುಗಳ ಗಂಟು, ಅಳಿಸಲಾಗದ ಪ್ರೀತಿ ನಂಟು

Exit mobile version