ಎಲ್ಲ ಬ್ಯಾಟರಿಗಳಿಗೂ ಒಂದು ಅಂತ್ಯವೆನ್ನುವುದು ಇದ್ದೇ ಇರುತ್ತದೆ. ಅದೇ ರೀತಿ ನಿಮ್ಮ ಫೋನ್‌ನೊಳಗಿರುವ ಬ್ಯಾಟರಿಗೆ ಕೂಡ. ಆದರೆ ಫೋನ್‌ನ ಬ್ಯಾಟರಿಗಳ ವ್ಯಾಲಿಡಿಟಿ ನಿರ್ಧಾರವಾಗುವುದು ನೀವು ಅವುಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ ಎನ್ನುವುದರ ಮೇಲೆ. ಬ್ಯಾಟರಿ ಹಲವು ವರ್ಷಗಳ ಕಾಲ ಚೆನ್ನಾಗಿಯೇ ಇರಬೇಕು ಎನ್ನುವುದಾದರೆ ನೀವು ಅದರ ಬಗ್ಗೆ ಸ್ವಲ್ಪ ಕಾಳಜಿ ವಹಿಸಲೇಬೇಕಾಗುತ್ತದೆ. ಹೇಗೆ ನೀವು ನಿಮ್ಮ ಫೋನ್ ಬ್ಯಾಟರಿ ಬಗ್ಗೆ ಕಾಳಜಿ ವಹಿಸಬಹುದು (Mobile Battery Tips) ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಚಾರ್ಜರ್ ಯಾವುದು?
ಸಾಮಾನ್ಯವಾಗಿ ಎಲ್ಲರಿಗೂ ಒಂದು ಅಭ್ಯಾಸವಿರುತ್ತದೆ. ನಿಮ್ಮ ಫೋನ್‌ಗೆ ಸರಿಹೊಂದುವಂತಹ ಯಾವುದೇ ಚಾರ್ಜರ್ ಆದರೂ ಸರಿಯೇ, ಚಾರ್ಜ್‌ಗೆ ಹಾಕಿಬಿಡುತ್ತೀರಿ. ಆದರೆ ಇದರಿಂದ ನಿಮ್ಮ ಬ್ಯಾಟರಿ ಆದಷ್ಟು ಬೇಗ ಹಾಳಾಗಿಬಿಡಬಹುದು. ನಿಮ್ಮ ಫೋನ್‌ಗೆ ಬ್ಯಾಟರಿ ಚಾರ್ಜಿಂಗ್ ಕ್ಯಾಪಾಸಿಟಿ ಇರುತ್ತದೆ. ಅದು ಎಷ್ಟು ವೋಲ್ಟೇಜ್ ಇದೆಯೋ ಅಷ್ಟೇ ವೋಲ್ಟೇಜ್‌ನದ್ದು ಚಾರ್ಜರ್ ಅನ್ನು ಫೋನ್‌ನೊಂದಿಗೆ ಕೊಡಲಾಗಿರುತ್ತದೆ. ನೀವು ಅದನ್ನು ಬಿಟ್ಟು ಬೇರೆ ಚಾರ್ಜರ್‌ಗೆ ಹಾಕಿದಾಗ ಅದರಲ್ಲಿ ವೋಲ್ಟೇಜ್ ಹೆಚ್ಚು ಕಡಿಮೆಯಾಗುತ್ತದೆ. ಅದು ನಿಮ್ಮ ಬ್ಯಾಟರಿ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.
ಇದನ್ನೂ ಓದಿ: ರಿಕವರಿಗೆ ತೆರಳಿದ್ದ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಕೇರಳದಲ್ಲಿ ಅರೆಸ್ಟ್!
ಅಗ್ಗದ ಚಾರ್ಜರ್
ನಿಮ್ಮ ಒರಿಜಿನಲ್ ಚಾರ್ಜರ್ ಕಳೆದುಹೋಯಿತು ಎನ್ನುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಯಾವುದು ಸಿಗುತ್ತದೆ ಎಂದು ಅಗ್ಗದ ಚಾರ್ಜರ್ ತಂದು ಚಾರ್ಜಿಂಗ್ ಹಾಕಬೇಡಿ. ಸ್ಥಳೀಯವಾಗಿ ಮಾಡುವ ಅಗ್ಗದ ಚಾರ್ಜರ್‌ಗಳು ನಿಮಗೆ ಸುರಕ್ಷತೆ ಬಗ್ಗೆ ಯಾವುದೇ ಗ್ಯಾರಂಟಿ ಕೊಡುವುದಿಲ್ಲ. ಇದರಿಂದಾಗಿ ನಿಮ್ಮ ಫೋನ್ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಫೋನ್ ಕವರ್ ಬೇಡ
ಫೋನ್ ಸುರಕ್ಷಿತವಾಗಿರಬೇಕೆಂದರೆ ಅದಕ್ಕೆ ಫೋನ್ ಕವರ್ ಹಾಕಬೇಕು. ಆದರೆ ಅದನ್ನು ಚಾರ್ಜ್ ಮಾಡುವ ಸಮಯದಲ್ಲಿ ಫೋನ್ ಕವರ್ ತೆಗೆಯುವುದು ಒಳಿತು. ಸಾಮಾನ್ಯವಾಗಿ ಚಾರ್ಜ್ ಆಗುವಾಗ ಬ್ಯಾಟರಿ ಬಿಸಿಯಾಗುತ್ತವೆ. ಆದರೆ ಅದಕ್ಕೆ ಫೋನ್ ಕವರ್‌ಗಳು ಅಡ್ಡಿಯುಂಟುಮಾಡಬಹುದು. ಹಾಗಾಗಿ ಕವರ್ ತೆಗೆದು ಫೋನ್ ಚಾರ್ಜ್‌ಗೆ ಹಾಕಿ ಅದನ್ನು ಯಾವುದಾದರೂ ಮೆತ್ತಗಿನ ಸ್ಥಳದಲ್ಲಿ ಉಲ್ಟಾ ಇಡುವುದು ಒಳಿತು.
ಫಾಸ್ಟ್ ಚಾರ್ಜರ್ ಏಕೆ?
ಫಾಸ್ಟ್ ಚಾರ್ಜ್ ಮಾಡಿಕೊಳ್ಳುವುದು ನಿಮಗೆ ಸಮಯ ಉಳಿತಾಯ ಮಾಡುತ್ತದೆ ಹೌದು. ಆದರೆ ಯಾವಾಗಲೂ ಫಾಸ್ಟ್ ಚಾರ್ಜಿಂಗ್ ಮೊರೆಹೋಗುವುದು ಸೂಕ್ತವಲ್ಲ. ಫಾಸ್ಟ್ ಚಾರ್ಜಿಂಗ್‌ನಿಂದಾಗಿ ಫೋನ್ ಬ್ಯಾಟರಿಗೆ ಹೆಚ್ಚಿನ ವೋಲ್ಟೇಜ್ ಹೋಗುತ್ತದೆ. ಅದರಿಂದಾಗಿ ಬ್ಯಾಟರಿ ಬೇಗನೆ ಬಿಸಿ ಆಗಬಹುದು. ಹಾಗಾಗಿ ಆಗಾಗ ಸಾಮಾನ್ಯ ಚಾರ್ಜರ್‌ನಲ್ಲೂ ಚಾರ್ಜಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.
ರಾತ್ರಿ ಚಾರ್ಜಿಂಗ್
ಬೆಳಗ್ಗೆಯೆಲ್ಲ ಫೋನ್ ಬಳಸಿ, ರಾತ್ರಿ ಮಲಗುವ ವೇಳೆ ಅದನ್ನು ಚಾರ್ಜ್‌ಗೆ ಹಾಕಿ ಮಲಗುವ ಅಭ್ಯಾಸ ಅನೇಕರಿಗಿದೆ. ಆದರೆ ಇದು ಫೋನ್‌ಗೆ ಒಳ್ಳೆಯದಲ್ಲ. ಓವರ್ ಚಾರ್ಜಿಂಗ್ ಆಗುವುದರಿಂದ ಬ್ಯಾಟರಿ ಸಾಮರ್ಥ್ಯ ಬೇಗ ಕಡಿಮೆಯಾಗುತ್ತದೆ.
ಥರ್ಡ್ ಪಾರ್ಟಿ ಬ್ಯಾಟರಿ ಆಪ್
ಬ್ಯಾಟರಿ ಸೇವ್ ಮಾಡುತ್ತೇವೆ ಎನ್ನುವಂತಹ ಹಲವಾರು ಆಪ್‌ಗಳಿವೆ. ಆದರೆ ಅದನ್ನು ಡೌನ್‌ಲೋಡ್ ಮಾಡಿಕೊಳ್ಳುವಂತಹ ತಪ್ಪನ್ನು ಮಾಡಲು ಹೋಗಬೇಡಿ. ಥರ್ಡ್ ಪಾರ್ಟಿ ಬ್ಯಾಟರಿ ಆಪ್‌ಗಳು ನಿಮ್ಮ ಮೊಬೈಲ್ ಬ್ಯಾಟರಿಗೆ ಋಣಾತ್ಮಕವಾಗಿಯೇ ಕೆಲಸ ಮಾಡುತ್ತವೆ. ಇದರಿಂದ ನಿಮ್ಮ ಫೋನಿನ ಬ್ಯಾಟರಿ ಲೈಫ್ ಕಡಿಮೆಯಾಗುತ್ತದೆ.
80% ಆದರೂ ಚಾರ್ಜ್ ಆಗಲಿ
ಫೋನ್ ಚಾರ್ಜ್ ತೀರಾ ಕಡಿಮೆಯಾದಾಗ ಚಾರ್ಜ್‌ಗೆ ಹಾಕಿ ಒಂದು ಹತ್ತಿಪ್ಪತ್ತು % ಆದ ತಕ್ಷಣ ಅದನ್ನು ತೆಗೆದು ಫೋನ್ ಅನ್ನು ಮತ್ತೆ ಬಳಸುವ ಅಭ್ಯಾಸ ನಿಮಗಿರಬಹುದು. ಅದು ಕೂಡ ಫೋನ್ ಬ್ಯಾಟರಿಗೆ ಒಳ್ಳೆಯದಲ್ಲ. ನಿಮ್ಮ ಫೋನ್ ಕೊನೆ ಪಕ್ಷ 80% ಆದರೂ ಚಾರ್ಜ್ ಆಗಲು ಬಿಡಿ.
ಪದೇಪದೆ ಚಾರ್ಜಿಂಗ್ ಬೇಡ
ಕೆಲವರಿಗೆ ಫೋನ್‌ನಲ್ಲಿ ಚಾರ್ಜ್ ಕಡಿಮೆ ಇರುವುದನ್ನು ನೋಡಲಾಗುವುದಿಲ್ಲ. ಹಾಗಾಗಿ ಪದೇಪದೆ ಫೋನ್ ಅನ್ನು ಚಾರ್ಜ್‌ಗೆ ಹಾಕುತ್ತಿರುತ್ತಾರೆ. ಈ ರೀತಿ ಮಾಡುವುದು ಕೂಡ ನಿಮ್ಮ ಫೋನ್ ಬ್ಯಾಟರಿಗೆ ತೊಂದೆಯನ್ನುಂಟುಮಾಡುತ್ತದೆ. ಒಮ್ಮೆ ಫೋನ್ ಅನ್ನು ಚಾರ್ಜ್ ಮಾಡಿದ ಮೇಲೆ ಅದರ ಚಾರ್ಜ್ 20%ಗಿಂತ ಕಡಿಮೆ ಬರುವವರೆಗೆ ಮತ್ತೆ ಚಾರ್ಜ್‌ಗೆ ಹಾಕಲು ಹೋಗಬೇಡಿ. 20%ಕ್ಕಿಂತ ಕಡಿಮೆ ಆದ ಮೇಲೆ ಚಾರ್ಜ್‌ಗೆ ಹಾಕಿ 80% ಆಗುವವರೆಗೆ ತೆಗೆಯಲು ಹೋಗಬೇಡಿ.
ಪವರ್ ಬ್ಯಾಂಕ್ ಆಯ್ಕೆ
ಪವರ್ ಬ್ಯಾಂಕ್ ನಿಜಕ್ಕೂ ಉಪಯುಕ್ತ. ಹಾಗೆಂದ ಮಾತ್ರಕ್ಕೆ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಪವರ್ ಬ್ಯಾಂಕ್ ತೆಗೆದುಕೊಂಡು ಬಳಸಲು ಹೋಗಬೇಡಿ. ವೋಲ್ಟೇಜ್ ಏರಿಳಿತ, ಶಾರ್ಟ್ ಸರ್ಕ್ಯೂಟ್, ಹೆಚ್ಚಿನ ವಿದ್ಯುತ್ ವಿರುದ್ಧ ಸುರಕ್ಷತೆ ನೀಡುವಂತಹ ಪವರ್ ಬ್ಯಾಂಕ್ ಅನ್ನೇ ಖರೀದಿಸಿ ಉಪಯೋಗಿಸಿ. ಇದರಿಂದಾಗಿ ನಿಮ್ಮ ಫೋನಿನ ಬ್ಯಾಟರಿಯ ಆಯಸ್ಸು ಕಡಿಮೆಯಾಗುವುದು ತಪ್ಪುತ್ತದೆ.
ಫೋನ್ ಬಳಕೆ ಹೇಗೆ?
ಪವರ್ ಬ್ಯಾಂಕ್‌ಗೆ ನಿಮ್ಮ ಫೋನ್ ಅನ್ನು ಕನೆಕ್ಟ್ ಮಾಡಿರುವಾಗ ಫೋನ್ ಅನ್ನು ಬಳಸಲು ಹೋಗಬೇಡಿ. ಪವರ್ ಬ್ಯಾಂಕ್‌ನಿಂದ ಫೋನ್ ಚಾರ್ಜ್ ಆಗುತ್ತಿರುವಾಗ ಅದನ್ನು ಬಳಸಿದರೆ ಫೋನಿನಲ್ಲಿ ಬಿಸಿ ಜಾಸ್ತಿಯಾಗಿ ಫೋನಿನ ಬ್ಯಾಟರಿಗೆ ತೊಂದರೆಯುಂಟಾಗುತ್ತದೆ.