Site icon Vistara News

How to spot fake ghee: ನಾವು ಖರೀದಿಸಿದ ತುಪ್ಪ ಶುದ್ಧವೋ ಕಲಬೆರಕೆಯೋ ಪರೀಕ್ಷಿಸುವುದು ಹೇಗೆ?

Ghee benefits

ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಅದು ಅಡುಗೆ ಮನೆಯೊಳಗಿನ ಚಿನ್ನವೂ ಹೌದು. ನಮ್ಮ ಭಾರತೀಯ ಶೈಲಿಯ ಕೆಲ ಅಡುಗೆಗಳಿಗೆ ತುಪ್ಪ ಹಾಕಿದರೆ ಅದರ ರುಚಿ, ಘಮ ಎಲ್ಲವೂ ಸ್ವರ್ಗಸದೃಶ. ಅನ್ನ, ದೋಸೆ, ಪರಾಠಾ, ಚಪಾತಿ ಸೇರಿದಂತೆ ನಿತ್ಯವೂ ತುಪ್ಪ ಹಾಕಿ ಉಣ್ಣುತ್ತೇವೆ. ದೇಸೀ ದನದ ತುಪ್ಪದ ಹಿತಮಿತ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ನಮ್ಮ ಹಿರಿಯರು ತಲೆತಲಾಂತರ ವರ್ಷಗಳಿಂದ ತುಪ್ಪದ ಬಹುಪಯೋಗಗಳ ಅರಿವನ್ನು ನಮಗೆ ದಾಟಿಸುತ್ತಲೇ ಬಂದಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ತುಪ್ಪದ ಬಗೆಗೆ ಮತ್ತೆ ಜನರಲ್ಲಿ ಅರಿವು ಮೂಡಿ ಮತ್ತೆ ತುಪ್ಪ ಸೇವನೆಯತ್ತ ಹಲವರು ಮುಖ ಮಾಡಿ ಅದರ ಲಾಭಗಳನ್ನು ಪಡೆಯುತ್ತಿದ್ದಾರೆ ಕೂಡಾ. ಆದರೆ, ಮನೆಗಳಲ್ಲಿ ತುಪ್ಪ ಮಾಡುವ ಪ್ರವೃತ್ತಿ ಅತ್ಯಂತ ಕಡಿಮೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ತುಪ್ಪವನ್ನು ಕೊಂಡು ತರುವುದು ಸಾಮಾನ್ಯ. ಆದರೆ, ಶುದ್ಧ ತುಪ್ಪ ಎಂದುಕೊಂಡು ನಾವು ಕೊಂಡು ತಂದು ಬಳಸುವ ತುಪ್ಪದಲ್ಲಿ ಕಲಬೆರಕೆಯೂ ಇರಬಹುದು ಎಂಬ ಸತ್ಯವನ್ನು ನಾವು ಅರಗಿಸಿಕೊಳ್ಳಲೇ ಬೇಕಾಗಿದೆ. ಯಾಕೆಂದರೆ ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಸುಮಾರು 14 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಮೂರು ಸಾವಿರ ಲೀಟರ್‌ಗಳಷ್ಟು ತುಪ್ಪದಲ್ಲಿ ಕಲಬೆರಕೆಯಾಗಿರುವುದನ್ನು ಪತ್ತೆ ಹಚ್ಚಿರುವ ಎಫ್‌ಡಿಸಿಎ ಅವುಗಳನ್ನು ವಶಪಡಿಸಿಕೊಂಡಿದೆ. ಇದು ನಮಗೆ ಎಚ್ಚರಿಕೆಯ ಕರೆಗಂಟೆಯೂ ಆಗಿದೆ. ನಾವು ಮಾರುಕಟ್ಟೆಯಿಂದ ಕೊಂಡು ತರುವ ತುಪ್ಪದ ಮೇಲೆ ಎಷ್ಟೇ ನಂಬಿಕೆಯಿದ್ದರೂ, ನಮ್ಮ ನಂಬಿಕೆಯನ್ನೊಮ್ಮೆ ನಾವು ಪರೀಕ್ಷಿಸಿ ದೃಢಪಡಿಸಿಕೊಂಡರೆ ತಪ್ಪಿಲ್ಲ. ಬನ್ನಿ ತುಪ್ಪ ಪರಿಶುದ್ಧವಾಗಿದೆಯೋ (How to spot fake ghee), ಕಲಬೆರಕೆಯದ್ದೋ ಎಂದು ಹೇಗೆಲ್ಲ ಪರೀಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

ನೀರಿನ ಮೂಲಕ ಪರೀಕ್ಷೆ

ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಗಟ್ಟಿಯಾದ ತುಪ್ಪವನ್ನು ಹಾಕಿ. ಅದು ತೇಲಿದರೆ ನಿಮ್ಮ ತುಪ್ಪ ಪರಿಶುದ್ಧವಾಗಿದೆ ಎಂದು ಅರ್ಥ.

ಕುದಿಸುವ ಪರೀಕ್ಷೆ

ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಾಗಾದಾಗ ಪ್ರತ್ಯೇಕವಾದ ಪದರವೊಂದು ತುಪ್ಪದ ಮೇಲ್ಮೈ ಮೇಲೆ ಸಂಗ್ರಹವಾಯಿತೆಂದರೆ, ಆ ತುಪ್ಪದಲ್ಲಿ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಕೆಲ ಅಗ್ಗದ ಎಣ್ಣೆಗಳನ್ನು ತುಪ್ಪದ ಜೊತೆ ಕಲಬೆರಕೆ ಮಾಡಿರಲೂಬಹುದು ಎಂದರ್ಥ.

ಅಯೋಡಿನ್‌ ಪರೀಕ್ಷೆ

ಸ್ವಲ್ಪ ಅಯೋಡಿನ್‌ ಅನ್ನು ಮಾರುಕಟ್ಟೆಯಿಂದ ಕೊಂಡು ತನ್ನಿ. ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಮೂರ್ನಾಲ್ಕು ಬಿಂದುಗಳಷ್ಟು ಅಯೋಡಿನ್‌ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಿಮ್ಮ ತುಪ್ಪ ಪರಿಶುದ್ಧವಾಗಿದ್ದರೆ ಅದು ಬಣ್ಣ ಬದಲಾಯಿಸದು. ನಿಮ್ಮ ತುಪ್ಪಕ್ಕೆ ಸ್ಟಾರ್ಚ್‌ ಅಥವಾ ಗಂಜಿಯ ಕಲಬೆರಕೆ ಮಾಡಿದ್ದರೆ ನಿಮ್ಮ ತುಪ್ಪ ಅಯೋಡಿನ್‌ ಜೊತೆ ಸೇರಿದ ತಕ್ಷಣ ನೀಲಿ ಬಣ್ಣಕ್ಕೆ ತಿರುಗಬಹುದು.

ಅಂಗೈ ಪರೀಕ್ಷೆ

ಸ್ವಲ್ಪ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಳ್ಳಿ. ನಿಮ್ಮ ತುಪ್ಪ ಶುದ್ಧವಾಗಿದ್ದರೆ ಅದು ನಿಧಾನವಾಗಿ ಕರಗಿ ಹರಿಯಲು ಶುರು ಮಾಡುತ್ತದೆ. ನಿಮ್ಮ ತುಪ್ಪ ಕಲಬೆರಕೆಯದಾಗಿದ್ದರೆ, ಅದು ಗಟ್ಟಿಯಾಗಿ ಅಲುಗಾಡದೆ ಕೈಯಲ್ಲಿ ಹಾಗೆಯೇ ಇರುತ್ತದೆ. ಅತೀವ ಚಳಿ ಪ್ರದೇಶಗಳಲ್ಲಿ ಈ ಪರೀಕ್ಷೆ ಅನ್ವಯಿಸದು.

ಇದನ್ನೂ ಓದಿ: Superfoods: ಮಾರುಕಟ್ಟೆಯಲ್ಲಿ ಸೂಪರ್‌ಫುಡ್‌ಗಳೆನ್ನುವ ಈ ಆಹಾರಗಳು ನಿಜಕ್ಕೂ ಸೂಪರ್‌ಫುಡ್‌ಗಳೇ?

ಎಚ್‌ಸಿಎಲ್‌ ಪರೀಕ್ಷೆ

ಒಂದು ಟೆಸ್ಟ್‌ ಟ್ಯೂಬ್‌ ತೆಗದುಕೊಂಡು ಅದರಲ್ಲಿ ಸ್ವಲ್ಪ ತುಪ್ಪ ತೆಗೆದುಕೊಳ್ಳಿ. ನಂತರ ಅದಕ್ಕೆ ಕೆಲ ಬಿಂದುಗಳಷ್ಟು ಹೈಡ್ರೋಕ್ಲೋರಿಕ್‌ ಆಸಿಡ್‌ ಸೇರಿಸಿ ಕುಲುಕಿ. ಆಗ ನಿಮ್ಮದು ಶುದ್ಧ ತುಪ್ಪವಾಗಿದ್ದರೆ ಅದರ ಬಣ್ಣ ಬದಲಾಗದೆ ಹಾಗೆಯೇ ಇರುತ್ತದೆ. ಕಲಬೆರಕೆಯ ತುಪ್ಪವಾಗಿದ್ದರೆ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.

Exit mobile version