ನ್ಯೂಯಾರ್ಕ್: ಎಲಾನ್ ಮಸ್ಕ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತು. ಸ್ಪೇಸ್ ಎಕ್ಸ್, ಟೆಸ್ಲಾ ಸಂಸ್ಥೆಗಳ ಸಂಸ್ಥಾಪಕ, ಇತ್ತೀಚೆಗಷ್ಟೇ ಟ್ವಿಟರ್ ಖರೀದಿಯನ್ನೂ ಮಾಡಿರುವ ಜಗತ್ತಿನ ಹೆಸರಾಂತ ಉದ್ಯಮಿ ಸದಾ ಏನಾದರೊಂದು ಮಾಡುತ್ತ ಸುದ್ದಿಯಲ್ಲಿರುವವರು.
ಆದ್ರೆ ಇದೀಗ ಎಲಾನ್ ಮಸ್ಕ್ ಪುತ್ರ ಸುದ್ದಿಯಲ್ಲಿದ್ದಾರೆ. ಎಲಾನ್ ಮಗ ಕ್ಸೇವಿಯರ್ ಅಲೆಕ್ಸಾಂಡರ್ ಮಸ್ಕ್ ತನ್ನ ಹೆಸರನ್ನು ಬದಲಾಯಿಸುವಂತೆ ಮತ್ತು ಲಿಂಗ ಬದಲಾವಣೆಯನ್ನು ಘೋಷಿಸುವಂತೆ ಕೋರಿದ್ದಾರೆ ಎನ್ನಲಾಗುತ್ತಿದೆ.
ಎಲಾನ್ ಮಸ್ಕ್‌ಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ಕ್ಸೇವಿಯರ್ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಏಪ್ರಿಲ್ ತಿಂಗಳಲ್ಲಿ 18 ವರ್ಷ ತುಂಬಿದ ನಂತರ ಕ್ಸೇವಿಯರ್, ಲಾಸ್ ಏಂಜಲೀಸ್‌ನ ನ್ಯಾಯಾಲದ ಮೊರೆ ಹೋಗಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಹೆಸರನ್ನು “ವಿವಿಯನ್ ಜೆನ್ನಾ ವಿಲ್ಸನ್” ಎಂದು ಬದಲಾಯಿಸಲು ನ್ಯಾಯಾಲಯವನ್ನು ಕೋರಿದ್ದಾರೆ ಮತ್ತು ತಮ್ಮ ಲಿಂಗವನ್ನು ಸ್ತ್ರೀ ಎಂದು ಗುರುತಿಸಲು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.
ಕ್ಸೇವಿಯರ್ ಮಸ್ಕ್ ಸಲ್ಲಿಸಿದ ದಾಖಲೆಗಳಲ್ಲಿ “ನಾನು ಇನ್ನು ಮುಂದೆ ನನ್ನ ಜೈವಿಕ ತಂದೆಯೊಂದಿಗೆ ಯಾವುದೇ ರೀತಿಯಲ್ಲಿ ಗುರುತಿಸಿಕೊಳ್ಳಲು ಹಾಗೂ ವಾಸಿಸಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ. ಇದರೊಂದಿಗೆ ಎಲಾನ್ ಜತೆಗಿನ ಸಂಬಂಧವನ್ನು ಕಡಿದುಕೊಳ್ಳುವುದು ಬಹುತೇಕ ಖಚಿತವಾಗಿದೆ.
ಎಲಾನ್ ಮಸ್ಕ್ 2002ರಲ್ಲಿ ಕೆನಡಾದ ಲೇಖಕಿ ಜಸ್ಟಿನ್ ವಿಲ್ಸನ್ ಅವರನ್ನು ಮದುವೆ ಆಗಿದ್ದರು. ಅವರಿಗೆ ಅವಳಿ ಮಕ್ಕಳಾಗಿ ಕ್ಸೇವಿಯರ್ ಅಲೆಕ್ಸಾಂಡರ್ ಮತ್ತು ಗ್ರಿಫಿನ್ ಜನಿಸಿದ್ದರು. 2008ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡರು. ಸದ್ಯ ಕ್ಸೇವಿಯರ್ ಲಿಂಗ ಪರಿವರ್ತನಾ ಪ್ರಕ್ರಿಯೆಗೆ ಒಳಗಾಗುವುದರ ಜತೆಗೆ ತಂದೆಯೊಂದಿಗಿನ ಸಂಬಂಧವನ್ನೂ ಕಡಿದುಕೊಳ್ಳುವ ಹಂತದಲ್ಲಿದ್ದಾರೆ. ಸದ್ಯ ನ್ಯಾಯಾಲಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿ ಮಾಡಿದೆ.
ಇದನ್ನೂ ಓದಿ: ಎಲಾನ್ ಮಸ್ಕ್‌ಗೆ ಮಾರಾಟಕ್ಕೆ ಸಂಬಂಧಿಸಿ ಷೇರುದಾರರ ಮತದಾನಕ್ಕೆ ಟ್ವಿಟರ್ ನಿರ್ಧಾರ