ಇಕಿಗಾಯ್ (Ikigai) ಎಂಬುದು ಒಂದು ಜೀವನ ಪದ್ಧತಿ. ಮೊದಲು ಈ ವಿಚಾರ ಎಲ್ಲರ ಕಿವಿಗೆ ಬಿದ್ದುದು ಹೆಕ್ಟರ್ ಗಾರ್ಸಿಯಾ ಮತ್ತು ಫ್ರಾನ್ಸೆಸ್ಕ್ ಮಿರಾಲ್ಲೆಸ್ ಅವರ ʼಇಕಿಗಾಯ್: ದಿ ಜಪಾನೀಸ್ ಸೀಕ್ರೆಟ್ ಟು ಎ ಲಾಂಗ್ ಅಂಡ್ ಹ್ಯಾಪಿ ಲೈಫ್ʼ ಎಂಬ ಪುಸ್ತಕದಿಂದ. ಇದು ಜಪಾನಿನ ಒಕಿನಾವಾ ಪ್ರಾಂತ್ಯದ ಒಂದು ಸಣ್ಣ ಹಳ್ಳಿಯಾದ ಓಗಿಮಿ ಎಂಬಲ್ಲಿನ ಶತಾಯುಷಿಗಳ (centenarians) ಮೇಲೆ ನಡೆಸಿದ ಅಧ್ಯಯನದಿಂದ ಕಂಡುಕೊಂಡ ವಿಚಾರಗಳ ಬಗ್ಗೆ ಬರೆದ ಪುಸ್ತಕ. ಇವರ ಜೀವನದಿಂದ ಕಂಡುಕೊಂಡ ಹತ್ತು ಸೂತ್ರಗಳನ್ನು ಕೊನೆಯಲ್ಲಿ ಪುಸ್ತಕ ಪಟ್ಟಿ ಮಾಡುತ್ತದೆ. ಒಗಾಮಿಯ ಹಿರಿಯ ನಿವಾಸಿಗಳು ದೀರ್ಘಕಾಲ ಬದುಕಲು (long life) ಮತ್ತು ಆನಂದಿಸಲು ಮಾಡಿಕೊಂಡಿರುವ ಜೀವನಶೈಲಿ (happy life) ಪದ್ಧತಿಗಳು ಇವು. ಈ ಹತ್ತು ಸೂತ್ರಗಳನ್ನು ಪಾಲಿಸಿದರೆ ನೀವೂ ದೀರ್ಘಕಾಲ ಆನಂದದಿಂದ ಬದುಕಬಹುದು. ಆ ಹತ್ತು ರೂಲ್‌ಗಳು (Ikigai Rules) ಇಲ್ಲಿವೆ.
1. ಸಕ್ರಿಯವಾಗಿರಿ, ನಿವೃತ್ತರಾಗಬೇಡಿ
ನಿಮಗೆ ಇಷ್ಟವಾದ ಕೆಲಸಗಳನ್ನು ತ್ಯಜಿಸಬೇಡಿ. ನಿಮ್ಮ ದೇಹ ಹಾಗೂ ಮನಸ್ಸು ಚುರುಕಾಗಿಡುವಂಥದನ್ನು ಯಾವಾಗಲೂ ಮಾಡುತ್ತಲೇ ಇರಿ. ನಿಮ್ಮ ಕೆರಿಯರ್‌ನಿಂದ ನಿವೃತ್ತರಾದರೂ, ಬಳಿಕವೂ ಕ್ರಿಯಾಶೀಲರಾಗಿರಿ. ಮೌಲ್ಯಯುತವಾದ ಕೆಲಸ ಮುಂದುವರಿಸಿ, ಇತರರಿಗೆ ಉಪಯುಕ್ತರಾಗಿರಿ.
2. ನಿಧಾನವಾಗಿ ಮುಂದುವರಿಯಿರಿ
ಯಾವ ಅವಸರವೂ ಇಲ್ಲ. ಆತುರವಾಗಿರುವುದರಿಂದ ಜೀವನದ ಗುಣಮಟ್ಟ ಕೆಡುತ್ತದೆ. ʼಸ್ಲೋ ಆಂಡ್ ಸೆಡಿ ವಿನ್ಸ್ ದಿ ರೇಸ್ʼ ಎಂಬ ಮಾತು ಹಳೆಯದೇ ಆದರೂ ನೂರಕ್ಕೆ ನೂರು ಸತ್ಯ. ಗಡಿಬಿಡಿ ತೊರೆದಾಗ ಜೀವನ ಮತ್ತು ಸಮಯ ಹೊಸ ಅರ್ಥವನ್ನು ಪಡೆಯುತ್ತದೆ. ನೀವು ಆತುರದಲ್ಲಿದ್ದರೆ ನಿಯಂತ್ರಣದಲ್ಲಿಲ್ಲ ಎಂದರ್ಥ. ನಿಧಾನವಾಗಿ ನಡೆಯುವಾಗ ನಿಮ್ಮ ನಿರ್ಧಾರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ.
3. ಹೊಟ್ಟೆಯನ್ನು ಪೂರ್ತಿ ತುಂಬಬೇಡಿ
ಕಡಿಮೆ ತಿನ್ನುವುದೇ ದೀರ್ಘ ಜೀವನದ ರಹಸ್ಯ. ಹೊಟ್ಟೆಯ ಪ್ರತಿಶತ 80ರಷ್ಟು ಮಾತ್ರ ತುಂಬಿಸಿ. ಹೆಚ್ಚು ಕಾಲ ಆರೋಗ್ಯವಾಗಿರಬೇಕಿದ್ದರೆ ಹೊಟ್ಟೆಯನ್ನು ಪೂರ್ತಿ ತುಂಬುವ ಬದಲು ಸ್ವಲ್ಪ ಕಡಿಮೆ ತಿನ್ನಬೇಕು. ಹೊಟ್ಟೆಯಲ್ಲಿ ಸ್ವಲ್ಪ ಖಾಲಿ ಜಾಗ ಇದ್ದರೆ ಪಚನಕ್ರಿಯೆ ಸರಾಗ. ʼಹರಾ ಹಚಿ ಬುʼ ಎಂಬುದು ಒಂದು ಜಪಾನೀ ಗಾದೆ. ಅಂದರೆ ʼಕೇವಲ 80% ತಿನ್ನುವುದು ವೈದ್ಯರನ್ನು ದೂರವಿಡುತ್ತದೆ’ ಎಂದು. ಇದು 2500 ವರ್ಷಗಳಷ್ಟು ಹಿಂದಿನ ಸಂತ ಕನ್‌ಫ್ಯೂಷಿಯಸ್‌ನ ಮಾತು.
4. ಸುತ್ತ ಒಳ್ಳೆಯ ಸ್ನೇಹಿತರಿರಲಿ
ಸೋಶಿಯಲ್ ಮೀಡಿಯಾದ ಸ್ನೇಹಿತರನ್ನು ನಂಬುವ ಬದಲು, ನಿಜಜೀವನದ ಒಳ್ಳೆಯ ಸ್ನೇಹಿತರನ್ನು ಕಾಪಾಡಿಕೊಂಡರೆ ಬದುಕು ಚಂದ. ಸ್ನೇಹಿತರೇ ಅತ್ಯುತ್ತಮ ಔಷಧಿ. ನಿಮ್ಮ ಕಥೆಗಳನ್ನು, ಚಿಂತನೆಗಳನ್ನು, ಚಿಂತೆಗಳನ್ನು ಹಂಚಿಕೊಳ್ಳಲು ಅವರಿಗಿಂತ ಉತ್ತಮ ಇನ್ಯಾರೂ ಇಲ್ಲ.
5. ಮುಂದಿನ ಜನ್ಮದಿನಕ್ಕೆ ಫಿಟ್ ಆಗಿರಿ
“ನೀರು ಚಲಿಸುವಾಗ ತಾಜಾ ಆಗಿರುತ್ತದೆ; ನಿಂತರೆ ಕೊಳೆಯುತ್ತದೆ. ನೀವು ಜೀವನದಲ್ಲಿ ಚಲಿಸುತ್ತಿದ್ದಷ್ಟು ಕಾಲ ದೀರ್ಘಕಾಲದವರೆಗೆ ಕಾರ್ಯನಿರ್ವಹಿಸಲು ಅಗತ್ಯವಾದ ಶಕ್ತಿ ಪಡೆಯುತ್ತೀರಿ. ವ್ಯಾಯಾಮವು ನಿಮಗೆ ಸಂತೋಷವನ್ನುಂಟುಮಾಡುವ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಮುಂದಿನ ಜನ್ಮಮದಿನದ ಹೊತ್ತಿಗೆ ನೀವು ಮತ್ತಷ್ಟು ಯಂಗ್ ಆಗಬೇಕು; ಮುದುಕರಾಗಬಾರದು.
6. ನಗುನಗುತ್ತಾ ಇರಿ
ಹರ್ಷಚಿತ್ತದ ಮನೋಭಾವವು ವಿಶ್ರಾಂತಿ ನೀಡುವುದು ಮಾತ್ರವಲ್ಲ, ಸ್ನೇಹಿತರನ್ನು ಮಾಡಿಕೊಳ್ಳಲೂ ಸಹಾಯ ಮಾಡುತ್ತದೆ. ನಾವು ಇಲ್ಲಿ ಈ ಜಗತ್ತಿನಲ್ಲಿ ಬದುಕಿರುವುದೇ ಆನಂದಪಡಲು ಸಾಕಾದ ಸಂಗತಿ. ನಮ್ಮ ಸುತ್ತಲೂ ನಗಲು ಬೇಕಾದ ವಿಷಯಗಳಿವೆ. ನಕ್ಕರೆ ಆನಂದದ ಹಾರ್ಮೋನುಗಳು ನಿಮ್ಮ ದೇಹವನ್ನು ಸೆಡೆತದಿಂದ ಕಾಪಾಡುತ್ತವೆ.
7. ಪ್ರಕೃತಿಯೊಂದಿಗೆ ಸಂಪರ್ಕವಿಟ್ಟುಕೊಳ್ಳಿ
ಮಾನವರು ನಿಸರ್ಗದ ಭಾಗ. ನಮ್ಮ ದೇಹದ ಬ್ಯಾಟರಿಗಳು ರೀಚಾರ್ಜ್ ಆಗುವುದೇ ಪ್ರಕೃತಿಯ ಮಡಿಲಿನಲ್ಲಿ. ಕಲ್ಲಿನ ಕಟ್ಟಡಗಳ ನಡುವೆ ಇದ್ದರೂ ಕನಿಷ್ಠ ಮುಂಜಾನೆ ಅಥವಾ ಸಂಜೆ ಪಾರ್ಕ್‌ನಲ್ಲಿ ವಾಕಿಂಗ್ ಮಾಡುವುದು ಒಳ್ಳೆಯದು. ಅರಣ್ಯವಾಸದಿಂದ ಆನಂದ. ʼಶಿನ್ರಿನ್ ಯೊಕುʼ ಎಂಬುದು ಜಪಾನಿ ವಾಕ್ಕು. ಅಂದರೆ ʼಅರಣ್ಯ ಸ್ನಾನʼ ಎಂದರ್ಥ. ಸುಮ್ಮನೆ ಕಾಡಿನಲ್ಲಿ ನಡೆಯುವುದೂ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ.
ಇದನ್ನೂ ಓದಿ: Happy married life | ಸುಖೀ ಸಂಸಾರದ ಸೀಕ್ರೆಟ್ ಅಂದ್ರೆ ಪ್ರತ್ಯೇಕ ಬೆಡ್‌ರೂಂ!
8. ಕೃತಜ್ಞತೆ ಸಲ್ಲಿಸಿ
ನಿಮ್ಮನ್ನು ಸೃಷ್ಟಿಸಿದ್ದಕ್ಕಾಗಿ ನಿಮ್ಮ ಪೂರ್ವಜರಿಗೆ, ನೀವು ಉಸಿರಾಡುವ ಗಾಳಿಗೆ, ನೀವು ಸೇವಿಸುವ ಆಹಾರಕ್ಕೆ, ಅದನ್ನು ಒದಗಿಸುವ ಪ್ರಕೃತಿಗೆ, ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ, ನಿಮ್ಮ ದಿನಗಳನ್ನು ಬೆಳಗಿಸುವ ಮತ್ತು ನಿಮ್ಮನ್ನು ಜೀವಂತವಾಗಿರಿಸುವ ಎಲ್ಲದಕ್ಕೂ ಪ್ರತಿದಿನ ಕೃತಜ್ಞತೆ ಸಲ್ಲಿಸಲು ಒಂದು ಕ್ಷಣವನ್ನು ಕಳೆಯಿರಿ. ನಿಮ್ಮ ಸಂತೋಷದ ಸಂಗ್ರಹ ಬೆಳೆಯುವುದನ್ನು ನೀವೇ ನೋಡುತ್ತೀರಿ.
9. ಈ ಕ್ಷಣದಲ್ಲಿ ಬದುಕಿ
ಹಿಂದಿನದರ ಬಗ್ಗೆ ವಿಷಾದಿಸುವುದನ್ನು ನಿಲ್ಲಿಸಿ, ಭವಿಷ್ಯದ ಬಗ್ಗೆ ಭಯಪಡುವುದನ್ನು ನಿಲ್ಲಿಸಿ. ಇಂದು ನಿಮ್ಮ ಬಳಿ ಇರುವುದು ಈ ಕ್ಷಣ ಅಷ್ಟೆ. ಅದರ ಸದುಪಯೋಗ ಮಾಡಿಕೊಳ್ಳಿ. ಅದನ್ನು ನೆನಪಿನಲ್ಲಿಟ್ಟುಕೊಳ್ಳಲು ಯೋಗ್ಯವಾಗಿಸಿ. ನಮ್ಮ ಮನಸ್ಸು ಒಂದು ಚಿಂತೆಯಿಂದ ಇನ್ನೊಂದಕ್ಕೆ ಜಿಗಿಯುತ್ತದೆ. ಪ್ರತಿ ಕ್ಷಣದಲ್ಲಿ ಜಾಗೃತರಾಗಿ, ಪ್ರಸ್ತುತವಾಗಿ ಜೀವಂತವಾಗಿರುವುದನ್ನು ಮರೆತುಬಿಡುತ್ತೇವೆ. ಈ ಕ್ಷಣದ ಬದುಕೇ ಬದುಕು.
10. ನಿಮ್ಮೊಳಗೊಂದು ಇಕಿಗಾಯ್
ನಿಮ್ಮೊಳಗೆ ಒಂದು ಉತ್ಸಾಹವಿದೆ. ನಿಮ್ಮ ದಿನಗಳಿಗೆ ಅರ್ಥವನ್ನು ನೀಡುವ ಅನನ್ಯ ಪ್ರತಿಭೆ ನಿಮ್ಮಲ್ಲಿದೆ. ನಿಮ್ಮ ಬದುಕಿಗೆ ಒಂದು ಉದ್ದೇಶವಿದೆ. ಜೀವನದ ಕೊನೆಯವರೆಗೂ ಇನ್ನೊಬ್ಬರ ಜತೆ ಹಂಚಿಕೊಳ್ಳಲು ನಿಮ್ಮಲ್ಲಿ ಏನೋ ಇದೆ- ಹೀಗೆ ಭಾವಿಸುವುದರಿಂದ ನೀವು ಸಂಪನ್ನರಾಗುತ್ತೀರಿ. ನಿಮ್ಮಲ್ಲಿ ಶ್ರೀಮಂತಿಕೆ ಇರಬೇಕಿಲ್ಲ. ಏನಿದೆಯೋ ಅದನ್ನು ಹಂಚಿಕೊಳ್ಳುವುದರಿಂದ ಬದುಕು ಸುಂದರ.
ಇದನ್ನೂ ಓದಿ: Happy life: ಸಾಯೋ ಮೊದಲು ಇವರು ಹೇಳಿದ ಮಾತುಗಳು ನಾವು ನೆನಪಿಡಲೇಬೇಕು!