Site icon Vistara News

ವಿಸ್ತಾರ Explainer | ಗರ್ಭಕಂಠ ಕ್ಯಾನ್ಸರ್‌ಗೆ ಸ್ವದೇಶಿ ಲಸಿಕೆ, ಇನ್ನಿಲ್ಲ ಸಾವಿನ ಅಂಜಿಕೆ

Cervical Cancer

ಗರ್ಭಕಂಠ ಕ್ಯಾನ್ಸರ್ (Cervical Cancer). ಇದು ಮಹಿಳೆಯರ ಜೀವ ಹಿಂಡುವ ಅರ್ಬುದ ರೋಗ. ಭಾರತದಲ್ಲಿ ವಾರ್ಷಿಕವಾಗಿ 74 ಸಾವಿರ ಮಹಿಳೆಯರ ಸಾವಿಗೆ ಈ ಕ್ಯಾನ್ಸರ್ ಕಾರಣವಾಗಿದೆ. ಈವರೆಗೂ ಈ ಕ್ಯಾನ್ಸರ್ ನಿವಾರಿಸುವ ಸ್ವದೇಶಿ ಔಷಧ, ಲಸಿಕೆಯಾಗಲಿ ಇರಲಿಲ್ಲ. ಆದರೆ, ಇನ್ನು ಮುಂದೆ ಅಂಥ ಕೊರತೆ ಎದುರಾಗುವುದಿಲ್ಲ. ಭಾರತವು ಈ ಗರ್ಭಕಂಠ ಕ್ಯಾನ್ಸರ್‌ಗೆ ಲಸಿಕೆ (Cervical Cancer Vaccine) ಯನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವೈದ್ಯ ವಿಜ್ಞಾನದಲ್ಲಿ ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಸ್ವದೇಶಿಯವಾಗಿ ನಿರ್ಮಿಸಲಾದ ಮೊದಲ ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ(HPV)ಯನ್ನು ಗುರುವಾರ ಲಾಂಚ್ ಮಾಡಲಾಗುತ್ತಿದೆ.

ಗರ್ಭಕಂಠ ಕ್ಯಾನ್ಸರ್‌ (Cervical Cancer) ಮಟ್ಟ ಹಾಕಲು ಬಹುದೊಡ್ಡ ಸಾಧನವಾಗಿರುವ ಈ ಲಸಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಂಬಂಧ ಭಾರತೀಯ ಔಷಧ ನಿಯಂತ್ರಣಾ ಪ್ರಾಧಿಕಾರ(ಡಿಸಿಜಿಐ)ವು ಕಳೆದ ತಿಂಗಳವೇ ತನ್ನ ಒಪ್ಪಿಗೆಯನ್ನು ನೀಡಿತ್ತು. ಕೋವಿಡ್-19ಗೆ ಕೋವಿಶೀಲ್ಡ್ ಲಸಿಕೆ ತಯಾರಿಸಿದ್ದ ಸೀರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ(ಎಸ್ಐಐ) ಕಂಪನಿಯು, ಸ್ವದೇಶಿಯವಾಗಿ ಅಭಿವೃದ್ಧಿಪಡಿಸಲಾದ ಈ ಲಸಿಕೆಯನ್ನು ಉತ್ಪಾದಿಸಲಿದ್ದು, ಗುರುವಾರ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಭಾರತವು ಅಭಿವೃದ್ಧಿಪಡಿಸುತ್ತಿರುವ ಪ್ರಮುಖ ವ್ಯಾಕ್ಸೀನ್ ಇದಾಗಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಕೋವಿಡ್ ವರ್ಕಿಂಗ್ ಗ್ರೂಪ್ ಚೇರ್ಮನ್ ಮತ್ತು ನ್ಯಾಷನಲ್ ಟೆಕ್ನಿಕಲ್ ಅಡ್ವೈಸರಿ ಗ್ರೂಪ್ ಆನ್ ಇಮ್ಯೂನೈಸೇಷನ್(ಎನ್ಇಟಿಎಜಿಐ) ಅಧ್ಯಕ್ಷರಾಗಿರುವ ಡಾ. ಎನ್. ಅರೋರಾ ಅವರು, ನಮ್ಮ ಹೆಣ್ಣುಮಕ್ಕಳು, ಮೊಮ್ಮಕ್ಕಳಿಗೆ ಈ ಗರ್ಭಕಂಠ ಲಸಿಕೆ ಸುಲಭದಲ್ಲಿ ದೊರೆಯಲಿದೆ. ಇದು ಸಂತೋಷ ತಂದಿದೆ. ಇತ್ತೀಚೆಗೆ ಅಭಿವೃದ್ಧಿಪಡಿಸಿದ ಪ್ರಮುಖ ಲಸಿಕೆಗಳಲ್ಲಿ ಒಂದಾಗಿದೆ. ಈಗ ಭಾರತೀಯ ಲಸಿಕೆಗಳು ದೊರೆಯಲಾರಂಭಿಸಿವೆ. 9ರಿಂದ 14 ವರ್ಷದೊಳಗಿನ ನ್ಯಾಷನಲ್ ಇಮ್ಯೂನೈಸೇಷನ್ ಪ್ರೋಗ್ರಾಮ್ ಅಡಿ ಎಲ್ಲರಿಗೂ ಈ ಲಸಿಕೆ ದೊರೆಯಬಹುದು ಎಂಬ ಆಶಾಭಾವನೆಯನ್ನು ಹೊಂದಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಗರ್ಭಕಂಠ ಕ್ಯಾನ್ಸರ್ ತಡೆಯಲು ಇದೊಂದು ಪರಿಣಾಮಕಾರಿ ಲಸಿಕೆಯಾಗಿದೆ. ಯಾಕೆಂದರೆ, ಶೇ.85ರಿಂದ 90ರಷ್ಟು ಗರ್ಭಕಂಠ ಕ್ಯಾನ್ಸರ್‌ಗೆ ನಿರ್ದಿಷ್ಟ ವೈರಸ್‌ ಮಾತ್ರವೇ ಕಾರಣವಾಗಿದೆ. ಹಾಗಾಗಿ, ನಾವು ಒಂದು ವೇಳೆ, ಈ ಲಸಿಕೆಯನ್ನು ನಮ್ಮ ಹೆಣ್ಣುಮಕ್ಕಳಿಗೆ ಮತ್ತು ತರುಣಿಯರಿಗೆ ನೀಡಿದರೆ, ಸೋಂಕಿನಿಂದ ಅವರಿಗೆ ರಕ್ಷಣೆ ದೊರೆಯಲಿದೆ. ಇದರ ಪರಿಣಾಮ, ನಂತರದ 30 ವರ್ಷದಲ್ಲಿ ಅವರಿಗೆ ಈ ಕ್ಯಾನ್ಸರ್ ಕಾಣಿಸಿಕೊಳ್ಳುವುದಿಲ್ಲಎಂಬುದು ಅವರ ಅಭಿಪ್ರಾಯವಾಗಿದೆ.

ಲಸಿಕೆ ಕೊರತೆ
ಜಾಗತಿಕ ಮಾರುಕಟ್ಟೆಯಲ್ಲಿ ಗರ್ಭಕಂಠ ಕ್ಯಾನ್ಸರ್ ಲಸಿಕೆಗಳ ಕೊರತೆ ಇದೆ. ಭಾರತವು ಅಭಿವೃದ್ಧಿಪಡಿಸಿದ ಲಸಿಕೆ ಈಗ ಮಾರುಕಟ್ಟೆ ಪ್ರವೇಶಿಸಿದೆ. ಹಾಗಾಗಿ ನಾವೀಗ ನಮ್ಮ ಅಗತ್ಯಗಳನ್ನು ಭಾರತದಲ್ಲೇ ತಯಾರಾದ ಲಸಿಕೆಯ ಮೂಲಕ ಈಡೇರಿಸಿಕೊಳ್ಳಬಹುದಾಗಿದೆ. ಗರ್ಭಕಂಠ ಕ್ಯಾನ್ಸರ್ ಲಸಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಹಾಗಾಗಿ, ಭಾರತವು ಈ ಸ್ಪರ್ಧೆಯಲ್ಲಿ ತೊಡಗಿರುವುದರಿಂದ ಕೊಂಚ ನಿರಾಳತೆ ಸಿಗಬಹುದು. ಹೆಚ್ಚಾಗಿ, ಭಾರತೀಯ ಅಗತ್ಯಗಳನ್ನು ಪೂರೈಸಲು ಇನ್ನೂ ವಿದೇಶಿ ಲಸಿಕೆಯ ಮೇಲೆ ಅವಲಂಬಿತವಾಗಬೇಕಿಲ್ಲ. ಅಧಿಕಾರಿಗಳ ಪ್ರಕಾರ, ಈ ಲಸಿಕೆಯು ಗರ್ಭಕಂಠದ ಎಲ್ಲಾ ಉದ್ದೇಶಿತ HPV ಪ್ರಕಾರಗಳ ವಿರುದ್ಧ ಮತ್ತು ಎಲ್ಲಾ ಡೋಸ್ ಮತ್ತು ವಯಸ್ಸಿನ ಗುಂಪುಗಳ ವಿರುದ್ಧ ಬೇಸ್‌ಲೈನ್‌ಗಿಂತ ಸುಮಾರು 1,000 ಪಟ್ಟು ಹೆಚ್ಚು ದೃಢವಾದ ಪ್ರತಿಕಾಯಗಳನ್ನು ಪ್ರದರ್ಶಿಸಿದೆ.

ಕೇಂದ್ರ ಸಚಿವರಿಂದ ಚಾಲನೆ
ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ ಗರ್ಭಕಂಠ ಕ್ಯಾನ್ಸರ್ ಲಸಿಕೆಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ದಿಲ್ಲಿಯಲ್ಲಿ ಚಾಲನೆ ನೀಡಲಿದ್ದಾರೆ. ಲಸಿಕೆಯನ್ನು ತಯಾರಿಸುತ್ತಿರುವ ಸೀರಮ್ ಇನ್ಸಿಟಿಟ್ಯೂಟ್‌ ಮುಖ್ಯಸ್ಥರಾಗಿರುವ ಆಧಾರ್ ಪೂನಾವಾಲ ಹಾಜರು ಇರಲಿದ್ದಾರೆ.

ಏನಿದು ಗರ್ಭಕಂಠ ಕ್ಯಾನ್ಸರ್?
ಗರ್ಭಕಂಠದ ದ್ವಾರ ಅಥವಾ ಅದರ ಸುತ್ತಮುತ್ತ ಕಂಡು ಬರುವ ತೀವ್ರ ಸ್ವರೂಪದ ಗೆಡ್ಡೆಯನ್ನೇ ಗರ್ಭಕಂಠ ಕ್ಯಾನ್ಸರ್ ಎಂದು ಕರೆಯುತ್ತೇವೆ. ಯೋನಿಯಲ್ಲಿ ರಕ್ತ ಸ್ರಾವ ಕಂಡು ಬಂದರೂ ಕ್ಯಾನ್ಸರ್ ಎಂದು ಗೊತ್ತಾಗುವುದಿಲ್ಲ. ಕ್ಯಾನ್ಸರ್ ಬೆಳೆದು ತೀವ್ರ ಹಂತದಲ್ಲಿದ್ದಾಗ ಅದರ ಲಕ್ಷಣಗಳ ಗೋಚರವಾಗುತ್ತವೆ. ಹ್ಯೂಮನ್ ಪ್ಯಾಪಲೋಮವೈರ್ ಗರ್ಭಕಂಠ ಕ್ಯಾನ್ಸರ್‌ಗೆ ಕಾರಣವಾಗುವ ಪ್ರಮುಖ ವೈರಸ್. ಈಗಾಗಲೇ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟಗಳು ಇದಕ್ಕೆ ತಮ್ಮದೇ ಆದ ಲಸಿಕೆಯನ್ನು ಅಭಿವೃದ್ಧಿಪಡಿಸಿಕೊಂಡಿವೆ.

ಈ ಕ್ಯಾನ್ಸರ್ ಲಕ್ಷಣಗಳೇನು?

ಸಾವಿನ ಪ್ರಮಾಣ
ಹೆಣ್ಣು ಮಕ್ಕಳಿಗೆ ಕಾಡುವ ಕ್ಯಾನ್ಸರ್‌ಗಳ ಪೈಕಿ ಗರ್ಭಕಂಠ ಕ್ಯಾನ್ಸರ್ ಕೂಡ ಪ್ರಮುಖವಾದದ್ದು. ಹೆಣ್ಣು ಮಕ್ಕಳ ಸಾವಿಗೆ ನಾಲ್ಕನೇ ಅತಿದೊಡ್ಡ ಕಾಣಿಕೆ ಇದು ನೀಡುತ್ತದೆ. ಭಾರತದಲ್ಲಿ ವಾರ್ಷಿಕ 74,000 ಮಹಿಳೆಯರು ಈ ಕ್ಯಾನ್ಸರ್‌ನಿಂದ ಮೃತರಾಗುತ್ತಿದ್ದಾರೆ. ಅಂದರೆ, ದಿನಕ್ಕೆ ಸರಾಸರಿ 200 ಮಹಿಳೆಯರು ಗರ್ಭಕಂಠ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ವಾರ್ಷಿಕವಾಗಿ 132,000 ಕ್ಯಾನ್ಸರ್‌ಪೀಡಿತ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುತ್ತದೆ.

ಇದನ್ನೂ ಓದಿ | Cancer cure | ಕ್ಯಾನ್ಸರ್‌ಗೆ ತುತ್ತಾಗಲು ಮೂರೇ ಮೂರು ಕಾರಣಗಳು

Exit mobile version