ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫಂಕಿ ಲುಕ್ ನೀಡುವ ಜೆಮೆಟ್ರಿಕ್ ಜುವೆಲರಿಗಳು ಇಂದು ಕಾಲೇಜು ಹುಡುಗಿಯರನ್ನು ಆಕರ್ಷಿಸಿವೆ. ಈ ವಿನೂತನ ಜೆಮೆಟ್ರಿಕ್ ಕಾನ್ಸೆಪ್ಟ್ ಇದೀಗ ಆಕ್ಸೇಸರೀಸ್‌ಗಳಿಗೂ ಕಾಲಿಟ್ಟಿದ್ದು, ವೃತ್ತಾಕಾರ ಮಾತ್ರವಲ್ಲದೇ ತ್ರಿಭುಜ, ಚೌಕ, ಆಯತ, ವಜ್ರಾಕೃತಿ, ಷಟ್ಬುಜ ಸೇರಿದಂತೆ ನಾನಾ ಚಿತ್ರ-ವಿಚಿತ್ರ ಶೈಲಿಯವು ಟ್ರೆಂಡಿಯಾಗಿವೆ.
ಫಂಕಿ ಲುಕ್ ನೀಡುವ ಇಯರಿಂಗ್ಸ್:
ಫಂಕಿ ಲುಕ್ ನೀಡುವ ಈ ಜೆಮೆಟ್ರಿಕ್ ರೂಪದ ಇಯರಿಂಗ್ಸ್‌ನಲ್ಲಿ ಹ್ಯಾಂಗಿಂಗ್ಸ್, ಬಿಗ್ ಸ್ಟಡ್ಸ್, ರಿಂಗಿನ ಆಕೃತಿಗಳು, ಶೋಲ್ಡರ್ ಲೆಂತ್ ಕಿವಿಯೋಲೆಗಳು ಹೆಚ್ಚು ಪಾಪ್ಯುಲರ್ ಆಗಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಸೆಲೆಬ್ರಿಟಿಗಳು ಇವನ್ನು ಧರಿಸುತ್ತಿರುವುದು ಪಾಪ್ಯುಲರ್ ಆಗಲು ಕಾರಣ ಎನ್ನುತ್ತಾರೆ ಫಂಕಿ ಜುವೆಲರಿ ಮಾರಾಟಗಾರರು. ಅವರ ಪ್ರಕಾರ, ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಇವು ಹೆಚ್ಚು ಜನಪ್ರಿಯ ಆಗಿವೆ. ಆದರೆ, ಕೆಲವು ಬಿಗ್ ಬ್ರಾಂಡ್‌ಗಳಲ್ಲೂ ಇವು ದೊರಕುತ್ತಿದ್ದು, ಮಾಲ್‌ಗಳಲ್ಲಿ ಸಾವಿರಾರು ರೂ. ಬೆಲೆ ಇವಕ್ಕಿದೆ ಎನ್ನುತ್ತಾರವರು.
“ ಅಕ್ಸೆಸರೀಸ್‌ಗಳಲ್ಲಿ ಅತಿ ಹೆಚ್ಚು ವೆರೈಟಿಗಳ ಪ್ರಯೋಗಕ್ಕೆ ಇಯರ್ ರಿಂಗ್ಸ್ ಅವಕಾಶ ನೀಡುತ್ತದೆ. ಹ್ಯಾಂಗಿಗ್‌ನ ತುದಿಯಲ್ಲಿರೆಕ್ಟಾಂಗಲ್, ಟ್ರಯಾಂಗಲ್, ಸ್ಕ್ವೇರ್ ಆಕೃತಿಯ ನೇತಾಡುವ ಇಯರಿಂಗ್‌ಗಳು ಹೆಚ್ಚು ಟೀನೇಜ್ ಹುಡುಗಿಯರನ್ನು ಸೆಳೆಯುತ್ತಿವೆ. ಇವು ಮಿಕ್ಸ್ ಮ್ಯಾಚ್ ಉಡುಪಿನೊಂದಿಗೆ ಧರಿಸಿದಾಗ ಟ್ರೆಂಡಿಯಾಗಿ ಕಾಣಿಸುತ್ತವೆ’ ಎನ್ನುತ್ತಾರೆ ಸ್ಟೈಲಿಸ್ಟ್ ಸುಜೀತ್.
ಡಿಫರೆಂಟ್ ಪೆಂಡೆಂಟ್:
ಕತ್ತನ್ನು ಸುತ್ತುವರಿದ ತೆಳ್ಳನೆಯ ಸರಕ್ಕೆ ನಾನಾ ಶೇಪ್‌ನ ಜೆಮೆಟ್ರಿಕ್ ಸ್ಟೈಲಿಶ್ ಪೆಂಡೆಂಟ್‌ಗಳು ಕ್ಯಾಶುವಲ್ ಉಡುಪಿಗೆ ಸಖತ್ತಾಗಿ ಕಾಣುತ್ತವೆ. ಈಗಂತೂ ಲೆಕ್ಕವಿಲ್ಲದಷ್ಟೂ ಬಗೆಯ ವಿನೂತನ ಶೈಲಿಯ ಊಹೆಗೂ ಮೀರಿದ ರೇಖಾ ಚಿತ್ರಗಳ ಪೆಂಡೆಂಟ್‌ಗಳು ಆಕ್ಸೆಸರೀಸ್ ಲೋಕದಲ್ಲಿ ಕಾಲಿಟ್ಟಿವೆ. ಕೆಲವೊಮ್ಮೆ ಇವು ಪ್ರತ್ಯೇಕವಾಗಿ ದೊರೆಯುತ್ತವೆ. ಇನ್ನು ಕೆಲವೊಮ್ಮೆ ಇವು ಸರದೊಂದಿಗೆ ದೊರಕುತ್ತವೆ. ಟ್ರಡಿಷನಲ್ ಉಡುಪನ್ನು ಹೊರತುಪಡಿಸಿ ಯಾವುದಕ್ಕೆ ಬೇಕಾದರೂ ಇವನ್ನು ಮ್ಯಾಚ್ ಮಾಡಬಹುದು.
ವಿಚಿತ್ರಾಕಾರದ ಬಳೆ /ಕಡಗ/ಬ್ರೇಸ್‌ಲೇಟ್:
ಕೈಗಳಿಗೆ ಟ್ರಯಾಂಗಲ್, ಆಫ್ ಸರ್ಕಲ್, ರೆಕ್ಟಾಂಗಲ್ ಸೇರಿದಂತೆ ವಿವಿಧಾಕಾರದ ಬಳೆ ಇಲ್ಲವೇ ಕಡಗ ಶೈಲಿಯವು ಈ ಸೀಸನ್‌ನ ಜೆಮೆಟ್ರಿಕಲ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಚಿತ್ರ-ವಿಚಿತ್ರ ಬ್ರೇಸ್‌ಲೇಟ್‌ಗಳನ್ನು ಕೂಡ ಕಾಣಬಹುದು. ಡಿಫರೆಂಟ್ ಲುಕ್ ಪಡೆಯಬಹುದು.
ಕೊಳ್ಳುವ ಮುನ್ನ:
ಯಾವುದೇ ಜೆಮೆಟ್ರಿಕಲ್ ಆಕಾರದ ಆಕ್ಸೆಸರೀಸ್‌ಗಳನ್ನು ಕೊಳ್ಳುವ ಮುನ್ನ ಅವುಗಳ ಫಿನಿಶಿಂಗ್ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ. ಧರಿಸಿದಾಗ ಕೆರೆತ ಉಂಟಾದಲ್ಲಿ ಅಲರ್ಜಿ ಎಂಬುದನ್ನು ಮನಗಾಣಿರಿ. ಇಂತಹ ಆಕ್ಸೆಸರೀಸ್‌ಗಳು ಸೀಸನ್‌ಗೆ ಸೂಟ್ ಆಗುತ್ತವೆಯೇ ಎಂಬುದನ್ನು ತಿಳಿದುಕೊಂಡು ಧರಿಸಿ. ಟ್ರೆಡಿಷನಲ್‌ವೇರ್‌ಗೆ ಇವು ಸೂಟ್ ಆಗದು. ಫಂಕಿ ಜುವೆಲರಿಗಳು ಆದಷ್ಟೂ ಪಾಶ್ಚಿಮಾತ್ಯ ಶೈಲಿಯ ಕ್ಯಾಶುವಲ್ ಡ್ರೆಸ್‌ಗಳಿಗೆ ಮ್ಯಾಚ್ ಆಗುತ್ತವೆ ಎಂಬುದು ಗೊತ್ತಿರಲಿ. ಟ್ರೆಂಡ್‌ನಲ್ಲಿ ಮೊದಲು ಏನೇನಿದೆ ಎಂಬುದನ್ನು ತಿಳಿದುಕೊಂಡು ಖರೀದಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Celebrity Fashion Corner: ಫ್ಯಾಷನ್ ಎಂಬುದು ಹರಿಯುವ ನೀರಿನಂತೆ!