ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕನ್ನಡ ರಾಜ್ಯೋತ್ಸವದ ಸಂಭ್ರಮದಂದು ಧರಿಸುವ ಡ್ರೆಸ್‌ಕೋಡ್, ನಮ್ಮ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಿರಬೇಕು ಹಾಗೂ ಎಲ್ಲರ ಮನಗೆಲ್ಲುವಂತಿರಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ದೀಪಿಕಾ. ಈ ಬಗ್ಗೆ ಅವರು ಒಂದೈದು ಸಲಹೆಗಳನ್ನು ನೀಡಿದ್ದಾರೆ.
೧. ಸಂಸ್ಕೃತಿಗೆ ಮ್ಯಾಚ್ ಆಗುವಂತಿರಲಿ
ರಾಜ್ಯೋತ್ಸವದಂದು ಧರಿಸುವ ಉಡುಗೆಗಳು, ನಮ್ಮ ನೆಲ, ಜಲ ಹಾಗೂ ಸಂಸ್ಕೃತಿಗೆ ಮ್ಯಾಚ್ ಆಗುವಂತಿರಬೇಕು. ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಹೀಗೆ ನಾನಾ ಕಡೆಯಲ್ಲಿ ಧರಿಸುವ ಉಡುಪುಗಳು, ಸೀರೆಗಳನ್ನು ಧರಿಸಬಹುದು. ಈ ವಿಭಿನ್ನ ಟ್ರೆಡಿಷನಲ್ ಉಡುಪುಗಳು ನಮ್ಮತನವನ್ನು ಪ್ರತಿಬಿಂಬಿಸುತ್ತವೆ.
೨. ತಾತ್ಕಾಲಿಕವಾಗಿ ವೆಸ್ಟರ್ನ್ ಔಟ್‌ಫಿಟ್‌ಗೆ ಬೈ ಬೈ ಹೇಳಿ
ಕನ್ನಡ ರಾಜ್ಯೋತ್ಸವದಂದು ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ಬೈ ಬೈ ಹೇಳಿ. ಆದಷ್ಟೂ ಸ್ಥಳೀಯ ಲೋಕಲ್ ಬ್ರಾಂಡ್‌ನ ಉಡುಪುಗಳಿಗೆ ಸೈ ಹೇಳಿ. ದೇಸಿ ಉತ್ಪನ್ನ ತಯಾರಿಕರಿಂದ ಖರೀದಿಸಿ ಧರಿಸಬಹುದು. ಕಾಟನ್, ಖಾದಿಯ ಉಡುಗೆಗಳನ್ನು ಧರಿಸಬಹುದು. ತಯಾರಕರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ.
೩. ಗ್ರೂಪ್ ಡ್ರೆಸ್‌ಕೋಡ್
ರಾಜ್ಯೋತ್ಸವದ ಯಾವುದೇ ಸಮಾರಂಭ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂಘ-ಸಂಸ್ಥೆ ಮತ್ತು ತಂಡಗಳು ಯೂನಿಫಾರ್ಮಿಟಿ ಲುಕ್ ಪಾಲಿಸಬೇಕು. ಇದು ನೋಡಲು ಐಕ್ಯತೆಯನ್ನು ಸಾರುವುದು. ಒಂದೇ ರೀತಿಯ ಡ್ರೆಸ್‌ಕೋಡ್ ಪಾಲಿಸಿ. ಇದಕ್ಕಾಗಿ ಕೆಂಪು ಹಾಗೂ ಹಳದಿ ಮಿಕ್ಸ್ ಇರುವಂತಹ ಫ್ಯಾಬ್ರಿಕ್‌ನ ಸೀರೆ, ಕುರ್ತಾ ಅಥವಾ ಇತರೇ ಉಡುಗೆಗಳನ್ನು ಆಯ್ಕೆ ಮಾಡಬಹುದು.
೪. ಸಂಸ್ಕೃತಿ ಬಿಂಬಿಸುವ ಸೀರೆಗಳು
ಮಹಿಳೆಯರು ಟ್ರೆಡಿಷನಲ್ ಸೀರೆ ಮಾತ್ರವಲ್ಲ, ಅದನ್ನು ಉಡುವ ಶೈಲಿಯನ್ನು ವಿಭಿನ್ನವಾಗಿರಿಕೊಳ್ಳಬೇಕು. ಉದಾಹರಣೆಗೆ: ಉತ್ತರ ಕರ್ನಾಟಕ, ಕೊಡಗು ಸೇರಿದಂತೆ ನಾನಾ ಭಾಗಗಳಲ್ಲಿ ಸೀರೆಯನ್ನು ವೈವಿಧ್ಯಮಯವಾಗಿ ಉಡಲಾಗುತ್ತದೆ. ಇದನ್ನು ಪ್ರಯೋಗ ಮಾಡಬಹುದು. ಆಚರಣೆಯಲ್ಲಿ ನಮ್ಮ ಕನ್ನಡ ನಾಡು ವೈವಿಧ್ಯಮಯ ಸಂಸ್ಕೃತಿಯ ಬೀಡು ಎಂದು ಬಿಂಬಿಸಬಹುದು.
೫. ಧ್ವಜದ ಗೌರವಕ್ಕೆ ಧಕ್ಕೆಯಾಗದಿರಲಿ
ಯಾವುದೇ ಕಾರಣಕ್ಕೂ ಧ್ವಜದ ಗೌರವಕ್ಕೆ ಧಕ್ಕೆಯಾಗದಂತಹ ಡ್ರೆಸ್‌ಕೋಡ್ ಡಿಸೈನ್ಸ್ ಆಯ್ಕೆ ಮಾಡಿ. ಸೀರೆ, ಲೆಹೆಂಗಾ, ಹಾಫ್ ಸೀರೆ, ಕುರ್ತಾ ಯಾವುದಾದರೂ ಸರಿಯೇ, ಧರಿಸುವ ರೀತಿ-ನೀತಿ ಸರಿಯಾಗಿರಲಿ.
ರಾಜ್ಯೋತ್ಸವದ ಡ್ರೆಸ್‌ಕೋಡ್‌ಗೆ ಒಂದಿಷ್ಟು ಸಲಹೆ
· ಯೆಲ್ಲೋ ಹಾಗೂ ರೆಡ್ ವರ್ಣದ ಮಿಕ್ಸ್ ಮ್ಯಾಚ್ ಉಡುಪು ಧರಿಸಬಹುದು.
· ಕೆಂಪು ಹಾಗೂ ಹಳದಿಯ ಗಾಜಿನ ಬಳೆಗಳನ್ನು ಧರಿಸಬಹುದು.
· ಇದೇ ವರ್ಣದ ಸ್ಟೇಟ್‌ಮೆಂಟ್ ಜುವೆಲರಿಗಳು ಕೂಡ ಲಭ್ಯ.
· ಗೋಲ್ಡನ್ ಶೇಡ್ಸ್ ಮಿಕ್ಸ್ ಮಾಡಿ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಗ್ಲಾಮರಸ್ ನಟಿ ಜಾಹ್ನವಿ ಕಪೂರ್ ಸೀರೆ-ಜುಮಕಿ ಪ್ರೇಮ