ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುವೆಯಾದ ಮಾನಿನಿಯರು ರ‍್ಯಾಂಪ್ ಮೇಲೆ ಆತ್ಮ ವಿಶ್ವಾಸದಿಂದ ಹೆಜ್ಜೆ ಹಾಕುತ್ತಿದ್ದರು. ಕೆಲವರು ಟ್ರೆಡಿಷನಲ್ ರೌಂಡ್‌ನಲ್ಲಿ ಸೀರೆಯುಟ್ಟು ವಾಕ್ ಮಾಡಿ ನೋಡುಗರ ಮನ ಸೆಳೆದರೇ, ಇನ್ನು ಕೆಲವರು ಗೌನ್ ರೌಂಡ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು. ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಿಸೆಸ್ ಕರ್ನಾಟಕ ಬ್ಯೂಟಿ ಪೇಜೆಂಟ್‌ನಲ್ಲಿ (Mrs Karnataka Pageant News) ಈ ದೃಶ್ಯ ಕಂಡು ಬಂತು.
ಸೆಲೆಬ್ರೆಟಿ ಶೋ ಸ್ಟಾಪರ್ ವಾಕ್
ಈ ಸೌಂದರ್ಯ ಸ್ಪರ್ಧೆಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಾಲಿವುಡ್‌ನ ನಟಿ ಮಧೂ ಶಾ, ರೂಪದರ್ಶಿಗಳಿಗೆ ಪ್ರೋತ್ಸಾಹ ನೀಡಿದರು. ತಾವು ಕೂಡ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ನಂತರ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ಇಂದಿನ ಮಹಿಳೆಯರು ರಾಜಕೀಯ, ಸಾಹಿತ್ಯ, ಶಿಕ್ಷಣ ಮತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸುತ್ತಿದ್ದಾರೆ. ಇದರೊಂದಿಗೆ ಅವರು ಕೂಡ ತಮ್ಮ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಗಮನಹರಿಸಬೇಕಿದೆ ಎಂದರು.
ಆರ್ ಜೆ ರಾಜೇಶ್ ಮಾತು
ಇದೇ ವೇಳೆ ಮಾತನಾಡಿದ ಆರ್.ಜೆ.ರಾಜೇಶ್, 2022ರಲ್ಲಿ ಮಿಸೆಸ್ ಕರ್ನಾಟಕ ರನ್ನರ್ ಅಪ್ ಆಗಿದ್ದ ಚೈತ್ರಾ ಗೌಡ ಅವರ ಪೇಜೆಂಟ್ ಆಯೋಜಿಸುವ ಕನಸಿಗೆ ಸ್ನೇಹಿತರಾದ ಪಲ್ಲವಿ ಗೌಡ, ನಟ ಮನೋಜ್ ಕುಮಾರ್, ವಾಣಿಜ್ಯೋದ್ಯಮಿ ಪ್ರಿಯಾ ಗೌತಮ್ ಕೈ ಜೋಡಿಸಿದ್ದು, ಈ ಸೌಂದರ್ಯ ಸ್ಪರ್ಧೆ ಹುಟ್ಟಿಗೆ ಕಾರಣವಾಯಿತು. ಗ್ರಾಮೀಣ ಭಾಗದ ಬಡ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪೇಜೆಂಟ್ ವಿಜೇತರ ಪಟ್ಟಿ
ಮಿಸೆಸ್ ಕರ್ನಾಟಕ ಕೀರಿಟವನ್ನು ಕವಿತಾ ವೀರೇಂದ್ರ ಮುಡಿಗೇರಿಸಿಕೊಂಡರು. ಪ್ರಿಯಾಂಕಾ ರಿಯಾ ಫಸ್ಟ್ ವಿನ್ನರ್, ಶಾಹಿಸ್ತಾ ನಾಝ್ ಸೆಕೆಂಡ್ ರನ್ನರ್ ಅಪ್ ಸ್ಥಾನ ಪಡೆದರು. ಜ್ಯೂರಿ ಟೀಮ್‌ನಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ 2017 ತೃಪ್ತಿ ಗೌಡ, ಮಾಡೆಲ್ ಪ್ರಿಯಾ ಪ್ರಶಾಂತ್ ಸೇರಿದಂತೆ ನಾನಾ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು. ರಾಜಕೀಯ ದಿಗ್ಗಜರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Model Fashion Life: ಏರ್ ಟ್ರಾಫಿಕ್ ಕಂಟ್ರೊಲರ್ ನಮ್ರತಾ ಜೈನ್ ವಿಂಟರ್ ಫ್ಯಾಷನ್ ಟಿಪ್ಸ್!