ಪ್ರತಿ ಮನೆಯ ಪಾಲಿಗೆ ಅಡುಗೆ ಮನೆಗಿಂತ ಮುಖ್ಯವಾದ ಇನ್ನೊಂದು ಕೋಣೆಯಿಲ್ಲ. ಪ್ರತಿದಿನವೂ ಮನೆಯ ಮಂದಿಗೆಲ್ಲ ಅನ್ನ ಕೊಡುವ ತಾಣವದು. ಮನೆಯ ಎಲ್ಲರನ್ನೂ ಆರೋಗ್ಯವಾಗಿಡುವ ದೇವರೂ ಅಡುಗೆ ಮನೆಯೆಂದರೆ ತಪ್ಪಾಗಲಾರದು. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಇನ್ನೇನಿದೆ!
ಇಂತಹ ಅಡುಗೆಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದೂ ಕೂಡಾ ಅಷ್ಟೇ ಮುಖ್ಯ. ಇದಕ್ಕಾಗಿ ಇಂದು ಅನೇಕ ಕ್ಲೀನರ್‌ಗಳು, ಬಗೆಬಗೆಯ ಸ್ವಚ್ಛತೆಯ ಲಿಕ್ವಿಡ್‌ಗಳು, ಒರೆಸುವ ಬಟ್ಟೆಗಳು ಮಾರುಕಟ್ಟೆಯಲ್ಲಿ ಬೇಕಾದಷ್ಟು ದೊರೆಯುತ್ತದೆ ನಿಜ. ಅಡುಗೆ ಮನೆಯ ಕೊಳೆ, ಜಿಡ್ಡಿನ ಕಲೆ, ಮಸಿ ಕಲೆ ಸೇರಿದಂತೆ, ದಿನವೂ ಅಡುಗೆ ಮಾಡುವ ಒಲೆ, ಸುತ್ತಮುತ್ತಲ ಟೈಲ್ಸ್ ಎಲ್ಲವೂ ಬೇಗನೆ ಕೊಳೆಯಾಗುತ್ತದೆ. ಇವನ್ನೆಲ್ಲ ನಿತ್ಯವೂ ನೀಟಾಗಿ, ವಾಸನೆ ಬರದಂತೆ ಅಚ್ಚುಕಟ್ಟಾಗಿ ಜೋಡಿಸಿಡುವುದೂ ಕೂಡಾ ಅಡುಗೆ ಮನೆಗೆ ಶೋಭೆ. ಇವಕ್ಕೆ ಮಾರುಕಟ್ಟೆಯ ಲಿಕ್ವಿಡ್‌ಗಳಿಗಿಂತಲೂ ಅಡುಗೆ ಮನೆಯಲ್ಲೇ ಲಭ್ಯವಿರುವ ವಸ್ತುಗಳಿಂದಲೂ ಸ್ವಚ್ಛ ಮಾಡಬಹುದು. ನಿಂಬೆಹಣ್ಣು ಈ ವಸ್ತುಗಳ ಪೈಕಿ ಮುಂಚೂಣಿಯಲ್ಲಿರುವ ಸರಳವಾದ ವಿಧಾನ.
ನಿಂಬೆಹಣ್ಣು ಅಸಿಡಿಕ್ ಆಗಿರುವುದರಿಂದ ಇದು ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ ಕೂಡಾ ಹೌದು. ಆದರೆ, ಬಳಸುವ ಮೊದಲು ಇದಕ್ಕೆ ಕೊಂಚ ನೀರು ಸೇರಿಸಿ ಹದ ಮಾಡಿಕೊಳ್ಳುವ ಅಗತ್ಯವೂ ಇದೆ. ಅಷ್ಟೇ ಅಲ್ಲ ಇದರ ಜೊತೆಗೆ ಇನ್ನೂ ಕೆಲವು ವಸ್ತುಗಳನ್ನು ಮಿಕ್ಸ್ ಮಾಡುವ ಮೂಲಕವೂ ಕ್ಲೀನಿಂಗ್ ಏಜೆಂಟ್ ಆಗಿ ಬಳಸಬಹುದು. ಉಪ್ಪು, ನೀರು, ವಿನೆಗರ್ ಅಥವಾ ಬೇಕಿಂಗ್ ಸೋಡಾ ಇತ್ಯಾದಿ ವಸ್ತುಗಳನ್ನು ನಿಂಬೆಹಣ್ಣಿನ ರಸದ ಜೊತೆ ಬೆರೆಸಿದರೆ ಅತ್ಯುತ್ತಮ ಕ್ಲೀನಿಂಗ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಈ ವಸ್ತುಗಳ ಪೈಕಿ ಯಾವುದಾದರೊಂದನ್ನು ನಿಂಬೆಹಣ್ಣಿನ ಜೊತೆ ಸೇರಿಸುವ ಮೂಲಕ ನಿಂಬೆಹಣ್ಣಿನ ಅಸಿಡಿಕ್ ಗುಣವನ್ನು ಕೊಂಚ ತಗ್ಗಿಸಿಕೊಳ್ಳಬಹುದು.
ಕಿಚನ್ ಸ್ವಚ್ಛತೆಗೆ ಸ್ಪ್ರೇ ಕೊಳ್ಳಲು ನೀವು ಮಾರುಕಟ್ಟೆಗೆ ಎಡತಾಕಬೇಕಿಲ್ಲ. ನಿಂಬೆಹಣ್ಣನ್ನು ಉಪಯೋಗಿಸಿ ಕ್ನೀನಿಂಗ್ ಸ್ಪ್ರೇ ಕೂಡಾ ನೀವು ಮನೆಯಲ್ಲಿಯೇ ತಯಾರಿಸಬಹುದು. ಅರ್ಧ ನಿಂಬಹಣ್ಣನ್ನು ತೆಗೆದುಕೊಳ್ಳಿ. ಅದರ ರಸ ಹಿಂಡಿ ಅದಕ್ಕೆ ಅರ್ಧ ಕಪ್ ನೀರು ಸೇರಿಸಿ. ಅಥವಾ ಇದಕ್ಕೆ ವಿನೆಗರ್ ಅನ್ನೂ ಸೇರಿಸಿ ಇನ್ನೂ ಶಕ್ತಿಯುತವಾಗಿ ಕ್ಲೀನಿಂಗ್ ಸ್ಪ್ರೇ ಆಗಿ ತಯಾರಿಸಬಹುದು. ಇದನ್ನು ಒಂದು ಬಾಟಲ್‌ನಲ್ಲಿ ಹಾಕಿಟ್ಟು ಕೊಳಕಾದ ಜಾಗಗಳಿಗೆ ಸ್ಪ್ರೇ ಮಾಡಿ, ಬಟ್ಟೆಯಲ್ಲಿ ಉಜ್ಜಿ ತೆಗೆಯಿರಿ.
1. ಮೈಕ್ರೋವೇವ್‌ನಲ್ಲಿ ಕಲೆಗಳು ಕೆಲವೊಮ್ಮೆ ಹಾಗೆಯೇ ಉಳಿದುಬಿಡುತ್ತವೆ. ಇದನ್ನು ಎಷ್ಟು ಚೆನ್ನಾಗಿ ಉಜ್ಜಿ ತೆಗೆಯಲು ನೋಡಿದರೂ ಬಹಳ ಸಾರಿ ಈ ಕಲೆ ಹೋಗುವುದೇ ಇಲ್ಲ. ಇಂಥ ಸಂದರ್ಭ ಅತ್ಯಂತ ಚೆನ್ನಾಗಿ ಬಳಕೆಗೆ ಬರುವುದು ನೀವೇ ತಯಾರಿಸಿಕೊಳ್ಳಬಹುದಾದ ಈ ನಿಂಬೆಹಣ್ಣಿನ ಕ್ಲೀನಿಂಗ್ ಏಜೆಂಟ್. ಅರ್ಧ ಕಪ್ ನೀರಿಗೆ ಅರ್ಧ ನಿಂಬೆಹಣ್ಣಿನ ರಸ ಸೇರಿಸಿ ಮೈಕ್ರೋವೇವ್‌ನಲ್ಲಿ ಐದು ನಿಮಿಷ ಇಡಿ. ಈ ನೀರಿನಲ್ಲಿ ಮೈಕ್ರೋವೇವ್ ಅನ್ನು ಕೂಡಲೇ ಟವಲ್‌ನಿಂದ ಉಜ್ಜಿ ತೆಗೆಯಿರಿ.
2. ಸ್ಟೀಲ್ ಪಾತ್ರೆಗಳು ಹಳೇ ಕಲೆಗಳನ್ನು ಉಳಿಸಿಕೊಂಡಿದ್ದರೂ ಕೂಡಾ ಈ ಲಿಕ್ವಿಡ್ ಒಳ್ಳೆಯ ಪರ್ಯಾಯ ಉಪಾಯ. ಪಾತ್ರೆಗಳನ್ನು ತೊಳೆಯುವಾಗ ಒಂದಿಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ ಉಜ್ಜಿ ತೊಳೆಯಿರಿ. ಪಾತ್ರೆಗಳೆಲ್ಲ ಪಳಪಳನೆ ಹೊಳೆಯುತ್ತವೆ. ಅಥವಾ ಬಳಸಿದ ನಿಂಬೆಹಣ್ಣಿನ ಉಳಿದ ಸಿಪ್ಪೆಯನ್ನು ಎಸೆಯದೆ ಹಾಗೆಯೇ ಇಡಿ. ಇದನ್ನು ಸಂಗ್ರಹಿಸಿ ಬೇಕಾದ ಪಾತ್ರೆಗಳ್ನು ಉಜ್ಜಿ ತೊಳೆಯಲು ಬಳಸಬಹುದು. ಅಥವಾ ಪಾತ್ರೆ ತೊಳೆಯುವ ಸಿಂಕ್ ಕ್ಲೀನ್ ಮಾಡಲು ಈ ಸಿಪ್ಪೆಯನ್ನು ಬಳಸಬಹುದು.
ಇದನ್ನೂ ಓದಿ: Indian Spices: ಮನೆಯೊಳಗಿನ ಮಸಾಲೆ ಡಬ್ಬಿಯಲ್ಲಿದೆ ಮನೆಯವರ ಆರೋಗ್ಯ!
3. ಚೂರಿಯಲ್ಲಿ ತುಕ್ಕು ಹಿಡಿದಿದ್ದರೂ ಆ ತುಕ್ಕನ್ನು ತೆಗೆದು ಚೂರಿಯನ್ನು ಪಳಪಳ ಹೊಳೆವಂತೆ ಮಾಡಲು ನಿಂಬೆಹಣ್ಣಿನ ರಸ ಅಪಕಾರಿ. ಇದು ಚೂರಿಗೆ ಹೊಳಪನ್ನೂ ನೀಡುತ್ತದೆ.
4. ತರಕಾರಿ ಕತ್ತರಿರುವ ಬೋರ್ಡ್ ಮೇಲೆ ತರಕಾರಿಗಳ ಕಲೆ ಉಳಿದುಹೋಗಿದೆಯಾ? ನಿಂಬೆಹಣ್ಣಿನ ರಸದಿಂದ ತಿಕ್ಕಿ ತೊಳೆಯಿರಿ. ಬೋರ್ಡ್ ಫಳಪಳಿಸುತ್ತದೆ.
5. ಕಿಚನ್ ಸಂದಿಗಳಲ್ಲಿ, ಒಲೆಯ ಸಂದಿಗಳಲ್ಲಿ ಸೇರಿದಂತೆ ಕಿಚನ್‌ನ ಹಲವೆಡೆ ಜಿಡ್ಡು, ಕೊಳೆ ಸೇರಿ ಬಹಳ ದಿನವೇ ಆಗಿರುತ್ತದೆ. ಇದು ಕೆಟ್ಟ ವಾಸನೆಯನ್ನೂ ಕೊಡುತ್ತಿದ್ದರೆ, ಕಿಚನ್ ಫಳಪಳಿಸಲು ಕೂಡಾ ನಿಂಬೆರಸವೇ ಸಾಕು. ನೀರು ಹಾಕಿ ಮಾಡಿಟ್ಟ ನಿಂಬೆಹಣ್ಣಿನ ಲಿಕ್ವಿಡ್ ಸ್ಪ್ರೇ ಬಳಸಿ ಕ್ಲೀನ್ ಮಾಡಿ. ವಾಸನೆ ಎಲ್ಲ ಮಾಯ! ರಾಸಾಯನಿಕ ಯುಕ್ತ ಕ್ಲೀನರ್‌ಗಳ ಬದಲು ನೈಸರ್ಗಿಕ ವಿಧಾನಗಳ ಕ್ಲೀನಿಂಗ್ ಆರೋಗ್ಯಕ್ಕೂ ಒಳ್ಳೆಯದು.
ಇದನ್ನೂ ಓದಿ: Kitchen Tips: ಊಟದ ಡಬ್ಬಿಯಲ್ಲಿ ಉಳಿದು ಹೋಗುವ ಕೆಟ್ಟ ವಾಸನೆಯಿಂದ ಮುಕ್ತಿ ಹೇಗೆ? ಇಲ್ಲಿವೆ ಟಿಪ್ಸ್!