ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾಗತಿಕ ಮಟ್ಟದಲ್ಲಿ ಹವಾ ಎಬ್ಬಿಸಿರುವ ಕೊರಿಯಾ ಮೂಲದ ಗ್ಲಾಸ್ ಸ್ಕಿನ್ ಬ್ಯೂಟಿ ಟ್ರೆಂಡ್ ಮೋಹ ಪಾಶಕ್ಕೆ ಹುಡುಗಿಯರು ಒಳಗಾಗಿದ್ದು, ಇದಕ್ಕಾಗಿ ಯು ಟ್ಯೂಬ್ ಹಾಗೂ ಆನ್‌ಲೈನ್ ಟ್ಯೂಷನ್‌ಗಳ ಮೊರೆ ಹೋಗಿದ್ದಾರೆ. ಬ್ಯೂಟಿ ಬ್ಲಾಗ್ ಹಾಗೂ ವ್ಲಾಗ್‌ಗಳನ್ನು ಜಾಲಾಡಿ, ಹೇಗೆ ಕಡಿಮೆ ಸಮಯದಲ್ಲಿ ಗ್ಲಾಸ್ ಸ್ಕಿನ್ ಪಡೆಯಬಹುದೆಂದು ಚಿಂತನೆ ನಡೆಸಿ, ನಾನಾ ಬ್ಯೂಟಿ ಪ್ರಾಡಕ್ಟ್ಸ್ ಮೊರೆ ಹೋಗಲಾರಂಭಿಸಿದ್ದಾರೆ. ಆದರೆ ಇದು ಪರಿಹಾರವಲ್ಲ ಎಂದಿದ್ದಾರೆ ಸೌಂದರ್ಯ ತಜ್ಞರು.
ಇದೀಗ ಆನ್‌ಲೈನ್‌ನಲ್ಲಿ ಬ್ಯೂಟಿ ಚಾನೆಲ್‌ಗಳನ್ನು ತೆರೆದರೆ ಸಾಕು, ಗ್ಲಾಸ್ ಸ್ಕಿನ್ ಬ್ಯೂಟಿ ಟ್ರೆಂಡ್ ಬಗ್ಗೆಯೇ ಜಾಹೀರಾತು ಹಾಗೂ ವಿಡಿಯೊ ಕ್ಲಿಪ್‌ಗಳು ಒಂದರ ಮೇಲೊಂದರಂತೆ ತೆರೆದುಕೊಳ್ಳುತ್ತವೆ. ಸಾಲದೆಂಬಂತೆ ಸಾಲುಸಾಲಾಗಿ ಇದಕ್ಕೆ ಅಂಟಿಕೊಂಡಂತಹ ಜಾಹೀರಾತುಗಳು ಓಪನ್ ಆಗುತ್ತವೆ. ಇದು ಇತ್ತೀಚಿನ ಆನ್‌ಲೈನ್‌ನಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತಿರುವ ಬ್ಯೂಟಿ ಕ್ಷೇತ್ರದ ಬ್ಯುಸಿನೆಸ್ ಟೆಕ್ನಿಕ್ ಎನ್ನುತ್ತಾರೆ ಸೌಂದರ್ಯ ತಜ್ಞರು.
ಏನಿದು ಗ್ಲಾಸ್ ಸ್ಕಿನ್?
ಮಗುವಿನಂತಹ ಸುಕೋಮಲ ಆಕರ್ಷಕವಾದ ತ್ವಚೆ. ಮುಖದ ಮೇಲೆ ಕಲೆಯಿಲ್ಲ, ಡಾರ್ಕ್ ಸರ್ಕಲ್ ಇಲ್ಲ, ನೆರಿಗೆಯೂ ಇಲ್ಲ, ಮೊಡವೆಯಂತೂ ಇಲ್ಲವೇ ಇಲ್ಲ. ಗ್ಲಾಸ್‌ನಂತೆ ಹೊಳೆಯುವ ಶೈನಿಂಗ್ ತ್ವಚೆ. ಮೇಕಪ್ ಮಾಡಿದರಂತೂ ನೋಡಲು ಮಿನುಗುವ ಮುಖರಾವಿಂದ. ಇದು ಕೊರಿಯಾದ ಗ್ಲಾಸ್ ಸ್ಕಿನ್ ಬ್ಯೂಟಿ ಟ್ರೆಂಡ್‌ನ ಸ್ಯಾಂಪಲ್. ಇದೀಗ ಈ ಟ್ರೆಂಡ್ ಪ್ರಪಂಚದಾದ್ಯಂತ ಬ್ಯೂಟಿ ಕೇರ್ ಕ್ಷೇತ್ರದಲ್ಲಿ ನಂಬರ್ ವನ್ ಗಿಟ್ಟಿಸಿಕೊಂಡಿದೆ.
ಸ್ಕಿನ್ ಗ್ಲಾಸ್ ಪ್ರಾಡಕ್ಟ್ಸ್ ಖರೀದಿಸುವ ಮುನ್ನ
ಆನ್‌ಲೈನ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಈ ಬ್ಯೂಟಿ ಟ್ರೆಂಡನ್ನು ಗಮನಿಸಿದ ಸಾಕಷ್ಟು ಬ್ಯೂಟಿ ಕಂಪನಿಗಳು ಲೆಕ್ಕವಿಲ್ಲದಷ್ಟು ಗ್ಲಾಸ್ ಸ್ಕಿನ್ ಪ್ರಾಡಕ್ಟ್ಸ್ ಬಿಡುಗಡೆಗೊಳಿಸಿ ಬ್ಯುಸಿನೆಸ್ ಹೆಚ್ಚಿಸಿಕೊಂಡಿದ್ದಾರೆ. ಇನ್ನುಸೋಷಿಯಲ್ ಮೀಡಿಯಾ ಹಾಗೂ ಆನ್‌ಲೈನ್ ಜಾಹೀರಾತುಗಳನ್ನು ನೋಡಿ ಪ್ರೇರಿತರಾಗುತ್ತಿರುವ ಬಹಳಷ್ಟು ಹುಡುಗಿಯರು ಇನ್‌ಸ್ಟಂಟ್ ಫಲಿತಾಂಶ ಪಡೆಯಲು ಹಿಂದೂ ಮುಂದೂ ನೋಡದೇ ಬ್ಯೂಟಿ ಪ್ರಾಡಕ್ಟ್‌ಗಳನ್ನು ಖರೀದಿಸಲಾರಂಭಿಸಿದ್ದಾರೆ. ಪರಿಣಾಮ, ಬಳಕೆಯ ನಂತರವೂ ಬಹುತೇಕರಿಗೆ ಸೂಕ್ತ ಫಲಿತಾಂಶ ದೊರೆಯದಿದ್ದಾಗ ಹತಾಶರಾಗುವುದು ಹಾಗೂ ತ್ವಚೆಯ ಸಮಸ್ಯೆಯಿಂದ ಬಳಲುವುದು ಕಂಡು ಬರುತ್ತಿದೆ. ಇದು ಇಂದು ಸಾಮಾನ್ಯ ಸಂಗತಿಯಾಗಿದೆ. ಹಾಗಾಗಿ ಯಾವುದೇ ಬ್ಯೂಟಿ ಟ್ರೆಂಡ್‌ಗೆ ಸಂಬಂಧ ಪಟ್ಟಂತೆ ಬ್ಯೂಟಿ ಪ್ರಾಡಕ್ಟ್ಸ್ ಖರೀದಿಸುವ ಮುನ್ನ ಯೋಚಿಸಿ. ಒಂದಿಷ್ಟು ವಿಷಯಗಳನ್ನು ತಿಳಿದುಕೊಳ್ಳಿ ಎನ್ನುತ್ತಾರೆ ಬ್ಯೂಟಿ ಕೌನ್ಸಿಲರ್ಸ್.
ವಿಭಿನ್ನ ತ್ವಚೆಯ ಚರ್ಮ ಹೊಂದಿರುವ ಭಾರತೀಯರು
ಅವರ ಪ್ರಕಾರ ಭಾರತೀಯ ಸ್ತ್ರೀಯರು ಸೂಕ್ಷ್ಮ, ಜಿಡ್ಡಿನಂಶ, ಡ್ರೈ ಸೇರಿದಂತೆ ಮಿಶ್ರ ತ್ವಚೆಯನ್ನು ಹೊಂದಿದ್ದಾರೆ. ನೆಲೆಸಿರುವ ಆಯಾ ಹವಾಮಾನಕ್ಕೆ ತಕ್ಕಂತೆ ಹಾಗೂ ಜೀವನಶೈಲಿಗೆ ತಕ್ಕಂತೆ ಚರ್ಮದ ವಿಧವನ್ನು ಹೊಂದಿದ್ದಾರೆ. ಹಾಗಾಗಿ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಗ್ಲಾಸ್ ಸ್ಕಿನ್‌ಗಾಗಿ ಹಪಹಪಿಸುವುದು ಸರಿಯಲ್ಲ! ಮುಖಕ್ಕೆ ಹೊಂದದ ಬ್ಯೂಟಿ ಪ್ರಾಡಕ್ಟ್ಸ್ ಬಳಸಿ ಮುಖವನ್ನು ಹಾಳುಮಾಡಿಕೊಳ್ಳುವುದು ತರವಲ್ಲ. . ಬೇಕೆಂದಲ್ಲಿ ಅವರವರ ತ್ವಚೆಗೆ ಸೂಟ್ ಆಗುವಂತಹ ನ್ಯಾಚುರಲ್ ಬ್ಯೂಟಿ ಆರೈಕೆಗಳನ್ನು ಅಳವಡಿಸಿಕೊಂಡು ತ್ವಚೆಯನ್ನು ಕಾಂತಿಯುಕ್ತವಾಗಿಸಿಕೊಳ್ಳಬಹುದು ಎನ್ನುತ್ತಾರೆ.
ಇನ್ನು ನ್ಯಾಚುರಲ್ ಆಗಿ ಮನೆಯಲ್ಲೆ ಹೇಗೆ ಗ್ಲಾಸ್ ಸ್ಕಿನ್ ಪಡೆಯಬಹುದು ಎಂಬುದರ ಬಗ್ಗೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್ ಅವರು ವಿವರಿಸಿದ್ದಾರೆ.
- ಮುಖವನ್ನು ವಾಶ್ ಮಾಡುವುದು ಒಂದು ರೀತಿಯ ಕ್ಲೆನ್ಸಿಂಗ್. ಇಲ್ಲವೇ ಆಯಿಲ್ ಬೇಸ್ಡ್ ಕ್ಲೆನ್ಸರ್‌ನಿಂದ ಕ್ಲೆನ್ಸ್ ಮಾಡಿ.
- ನಿಮ್ಮ ಚಾಯ್ಸ್‌ನ ಯಾವುದೇ ಸ್ಕ್ರಬ್ ಬಳಸಿ, ಸ್ಕ್ರಬ್ ಮಾಡಿ.
- ಟೋನರ್ ಬಳಸಿ. ಇದು ಮುಖದ ಚರ್ಮವನ್ನು ಸಾಫ್ಟ್ ಮಾಡುವುದು.
- ನಿಮ್ಮ ತ್ವಚೆಗೆ ಹೊಂದುವಂತಹ ಸಿರಮ್ ಲೇಪಿಸಿ.
- ನೀರಿನಂಶ ಇರುವಂತಹ ವಾಟರ್ ಬೇಸ್ಡ್ ಮಾಯಿಶ್ವರೈಸರ್ ಹಚ್ಚಿಕೊಳ್ಳಿ. ತ್ವಚೆಯನ್ನು ನಿರ್ಜಲಿಕರವಾಗದಂತೆ ನೋಡಿಕೊಳ್ಳಿ.
- ಸನ್ ಸ್ಕ್ರೀನ್ ಬಳಸಿ, ನ್ಯಾಚುರಲ್ ಗ್ಲೋಗಾಗಿ ಶೀಟ್ ಮಾಸ್ಕ್ ಬಳಸಬಹುದು.
ಇದು ಆನ್‌ಲೈನ್ ಕೊರಿಯನ್ ಗ್ಲಾಸ್ ಸ್ಕಿನ್‌ಗಾಗಿ ನೈಸರ್ಗಿಕವಾಗಿ ಮನೆಯಲ್ಲೆ ಮಾಡಬಹುದಾದ ಬ್ಯೂಟಿ ಆರೈಕೆ. ಇದು ಒಂದು ದಿನಕ್ಕೆ ಸೀಮೀತವಾಗಬಾರದು. ಇನ್ನು ಹೆಚ್ಚು ನೀರು ಕುಡಿಯುವುದು, ಎಂಟು ಗಂಟೆ ನಿದ್ರೆ ಮಾಡುವುದು ಸೇರಿದಂತೆ
ಆರೋಗ್ಯಕರ ಜೀವನಶೈಲಿಯಿಂದಲೂ ಕಾಂತಿಯುಕ್ತ ತ್ವಚೆಯನ್ನು ಪಡೆಯಬಹುದು ಎನ್ನುತ್ತಾರೆ ಸೌಂದರ್ಯ ತಜ್ಞೆ ಉಮಾ ಜಯಕುಮಾರ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Beauty secret: ಬಾಲಿವುಡ್ ತಾರೆಯರ ಕಿಚನ್‌ನಲ್ಲೇ ಇದೆಯಂತೆ ಇವರ ಚೆಲುವಿನ ಗುಟ್ಟು!