ಜೀವನ ಬಹಳ ಅಮೂಲ್ಯ ಅಂತಾರೆ ಹಿರಿಯರು. ಚಿಕ್ಕವರಾಗಿದ್ದಾಗ ಜೀವನದ ಮರ್ಮಗಳೆಲ್ಲ (life lessons) ಅರಿವಿಗೆ ಬರುವುದಿಲ್ಲ. ಬದುಕಿನ ಒಂದೊಂದೇ ಪಾಠಗಳು ಶುರುವಾಗುವುದೇ ಮೂವತ್ತು ದಾಟಿದ ಮೇಲೆ.
ಹೌದು. ಬದುಕಿನಲ್ಲಿ ನಿತ್ಯದ ಧಾವಂತದಲ್ಲಿ, ಬ್ಯುಸಿ ಲೈಫಿನ ಹಳವಂಡಗಳಲ್ಲಿ ಹಿಂದೆಮುಂದೆ ನೋಡದೆ ನಾವು ಓಡುತ್ತಲೇ ಇರುತ್ತೇವೆ. ಆದರೆ, ಒಂದು ಹಂತದಲ್ಲಿ, ಅಂದರೆ ಬಹುತೇಕ ಬದುಕಿನ್ನು ಹೆಚ್ಚು ಸಮಯ ಇಲ್ಲ ಎಂಬ ಅರಿವಾಗುವ ಹೊತ್ತಿಗೆ, ಛೇ ನಾನು ಇದನ್ನು ಮಾಡಬೇಕಿತ್ತು, ಹೀಗೆ ಬದುಕಬೇಕಿತ್ತು, ಹಾಗಿರಬೇಕಿತ್ತು, ಛೇ ನಾನು ಹೀಗೆ ಯೋಚನೆಯೇ ಮಾಡಿರಲಿಲ್ಲವಲ್ಲ ಎಂಬ ಸತ್ಯಗಳು ಒಂದೊಂದೇ ಅರಿವಾಗಲು ಶುರುವಾಗುತ್ತದೆ. ಆದರೆ, ಆಗ ಸಮಯ ಬಹಳ ಮೀರಿರುತ್ತದೆ, ಅಷ್ಟೇ! ಬನ್ನಿ, ಬದುಕಿನಲ್ಲಿ ತಡವಾಗಿ ಅರ್ಥವಾಗುವ ಸತ್ಯಗಳೇನು (life truths) ಎಂಬುದನ್ನು ನೋಡೋಣ.
1. ಆರೋಗ್ಯವೇ ಭಾಗ್ಯ! ಈ ನಾಣ್ಣುಡಿಯನ್ನು ಬಹಳ ಸಣ್ಣ ವಯಸ್ಸಿನಲ್ಲಿಯೇ ಕೇಳಿರುತ್ತೇವೆ ನಿಜ. ಆದರೆ, ಅದರ ನಿಜವಾದ ಅರ್ಥ ಅರಿವಿಗೆ ಬರುವುದು ಒಂದು ವಯಸ್ಸಿನ ನಂತರವೇ. ಯಾಕೆಂದರೆ, ಸಣ್ಣ ವಯಸ್ಸಿನಲ್ಲಿ ದೇಹ ನಾವು ಹೇಳಿದಂತೆ ಕೇಳುತ್ತಿರುತ್ತದೆ. ಆರೋಗ್ಯದ ಸಮಸ್ಯೆಗಳು ಅಷ್ಟಾಗಿ ಕಾಡುವುದಿಲ್ಲ. ನಮ್ಮ ಬ್ಯುಸಿ ಲೈಫಿನ ಗಡಿಬಿಡಿಯಲ್ಲಿ ನಾವು ಆರೋಗ್ಯವನ್ನು ನಿರ್ಲಕ್ಷಿಸಿ ಬೇರೆ ಕೆಲಸಗಳಿಗಷ್ಟೇ ಗಮನ ಕೊಡಲು ಆರಂಭಿಸುತ್ತೇವೆ. ಆದರೆ, ಒಂದು ಹಂತದ ನಂತರವಷ್ಟೇ, ಛೇ ನಾನು ಆರೋಗ್ಯದ ಕಡೆಗೆ ಗಮನವನ್ನೇ ಕೊಡಲಿಲ್ಲವಲ್ಲ ಎಂಬ ವ್ಯಥೆ ಕಾಡುತ್ತದೆ. ಅದಕ್ಕಾಗಿ, ವಯಸ್ಸೇನೇ ಇರಲಿ, ಆರೋಗ್ಯಕ್ಕೆ ಮೊದಲ ಪ್ರಾಶಸ್ತ್ಯ ಕೊಡಿ. ಆರೋಗ್ಯಕರ ಊಟ ಮಾಡಿ, ವ್ಯಾಯಾಮ ಮಾಡಿ, ದೇಹವನ್ನು ಚುರುಕಾಗಿಡಿ.
2. ನೋ ಹೇಳುವುದು ಒಕೆ. ಬದುಕಿನಲ್ಲಿ ನಾವು ಮತ್ತೊಬ್ಬರಿಗೆ ನೋ ಹೇಳುವುದನ್ನು ಕಲಿಯುವುದೇ ಇಲ್ಲ. ಇಷ್ಟವಿಲ್ಲದೇ ಇದ್ದರೂ, ಇಲ್ಲ, ಬೇಡ ಎಂದು ನಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ನಾವು ಸೋಲುತ್ತೇವೆ. ನಮ್ಮ ಅಭಿಪ್ರಾಯದಿಂದ ಇನ್ನೊಬ್ಬರಿಗೆ ಬೇಸರವಾದರೆ ಎಂಬ ಅಳುಕು ಕೂಡಾ ಇರುತ್ತದೆ. ಆದರೆ, ಬಹಳ ಸಂದರ್ಭಗಳಲ್ಲಿ ನಮ್ಮ ಕೆಲಸಗಳತ್ತ ನಾವು ಗಮನ ಕೊಡಲು ಸಾಧ್ಯವಾಗುವುದೇ ಇಲ್ಲ. ಅದಕ್ಕಾಗಿ, ನೀವು ನೋ ಹೇಳಿದರೆ ಜಗತ್ತೇನೂ ಕೊನೆಗೊಳ್ಳುವುದಿಲ್ಲ ಎಂಬ ಸತ್ಯವನ್ನು ಮೊದಲು ಅರಿಯಿರಿ. ಕೆಲವಕ್ಕೆ ಸಾಧ್ಯವಿಲ್ಲ ಎಂದು ಹೇಳುವುದೂ ಕೂಡಾ ಸಾಧ್ಯ ಎಂಬುದನ್ನು ಒಪ್ಪಿಕೊಳ್ಳಿ.
3. ಹಣದಿಂದ ಸಂತೋಷ ಕೊಂಡುಕೊಳ್ಳಲು ಸಾಧ್ಯವಿಲ್ಲ. ಸಣ್ಣ ವಯಸ್ಸಿನಲ್ಲಿ ಹಣವೇ ಮುಖ್ಯ ಎಂದು ಹಣದ ಹಿಂದೆ ಬಿದ್ದು, ಆರೋಗ್ಯ, ಸಂಬಂಧಗಳು ಇವೆಲ್ಲ ನಗಣ್ಯವಾಗುವ ಸಂದರ್ಭಗಳೇ ಹೆಚ್ಚು. ಆದರೆ, ಹಣವೆಂಬುದು ಎಲ್ಲವೂ ಅಲ್ಲ ಎಂಬುದನ್ನು ಮೊದಲೇ ಅರಿತುಕೊಳ್ಳಲು ಪ್ರಯತ್ನಿಸಿ.
4. ಸೋಲೇ ಗೆಲುವಿಗೆ ಸೋಪಾನ. ಈ ನಾಣ್ಣುಡಿಯನ್ನು ಕೇಳಿ ಬೆಳೆದಿರುತ್ತೇವೆ ನಿಜ. ಆದರೆ, ಇದನ್ನು ಮನಸ್ಸು ಸುಲಭವಾಗಿ ಸ್ವೀಕರಿಸುವುದಿಲ್ಲ. ಎಲ್ಲದರಲ್ಲೂ ಗೆಲುವು ಬೇಕು ಎಂದು ಮನುಷ್ಯ ಬಯಸುವುದು ಸಾಮಾನ್ಯ. ಆದರೆ, ಸೋಲು ಕೂಡಾ ಸಹಜ ಎಂದು ಸೋಲನ್ನು ಒಪ್ಪಿಕೊಳ್ಳುವುದನ್ನು ಕಲಿತುಕೊಳ್ಳಿ.
5. ಪ್ರೀತಿಪಾತ್ರರೊಂದಿಗೆ ಸಮಯ ಕಳೆಯಿರಿ. ಪ್ರೀತಿಪಾತ್ರರ ಜೊತೆಗೆ ಸಮಯ ಕಳೆಯುವುದು ಸಣ್ಣ ವಯಸ್ಸಿನಲ್ಲಿ ಮುಖ್ಯವಾಗಿ ಕಾಣುವುದಿಲ್ಲ. ನಮ್ಮ ಕೆಲಸದ ಒತ್ತಡಗಳೇ ನಮಗೆ ಮುಖ್ಯವಾಗಿ ಕಾಣುತ್ತದೆ ನಿಜ. ಅವರನ್ನು ನಿಲ್ರಕ್ಷ್ಯವೂ ಮಾಡಿರುತ್ತೇವೆ ನಿಜ. ಆದರೆ, ಬದುಕಿನಲ್ಲಿ ಇವೆಲ್ಲ ಇಲ್ಲವಾದಾಗ, ಯಾರೂ ಜೊತೆಗೆ ಇಲ್ಲದಿದ್ದಾಗ ಪ್ರೀತಿಪಾತ್ರರ ಜೊತೆಗೆ ನಾನು ಸಮಯ ಕಳೆಯಬೇಕಿತ್ತು ಎಂಬ ಹತಾಶಾ ಭಾವ ಕಾಡುತ್ತದೆ.
6. ಹೊಸದನ್ನು ಕಲಿಯಲು ವಯಸ್ಸಿನ ಹಂಗಿಲ್ಲ. ಬದುಕಿನಲ್ಲಿ ಎಲ್ಲ ಮುಗಿಯಿತು, ಇನ್ನೇನಿದೆ ಎಂದು ಒಂದು ವಯಸ್ಸಿನಲ್ಲಿ ಅನಿಸುವುದು ಸಹಜ. ಆದರೆ, ಕಲಿಕೆಗೆ ವಯಸ್ಸಿನ ಹಂಗಿಲ್ಲ. ವಯಸ್ಸಾದರೂ ಹೊಸದನ್ನು ಕಲಿಯುವಲ್ಲಿ ಆಸಕ್ತಿ ತೋರಿಸಿದರೆ, ಜೀವನೋತ್ಸಾಹ ಹೆಚ್ಚುತ್ತದೆ. ಲವಲವಿಕೆ ಮೂಡುತ್ತದೆ. ಬದುಕು ಕೊನೆಗೂ ರಮ್ಯವಾಗಿ ಕಾಣಬಹುದು!
7. ಎಲ್ಲದರಲ್ಲೂ ಪರ್ಫೆಕ್ಷನ್ ಬೇಕಾಗಿಲ್ಲ. ಬದುಕಿನಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಎಂದು ಬಯಸುವುದು ತಪ್ಪಲ್ಲ. ಆದರೆ, ಎಲ್ಲವೂ ಪರ್ಫೆಕ್ಟ್ ಆಗಿಸುವ ಭರದಲ್ಲಿ ಸಣ್ಣ ಸಣ್ಣ ಸಂತೋಷಗಳನ್ನು ಕಳೆದುಕೊಳ್ಳುತ್ತೇವೆ ಎಂಬುದನ್ನು ನೆನಪಿಡಿ. ಕೊನೆಯ ಗಳಿಗೆಯಲ್ಲಿ ಈ ಅರಿವು ಬರುವು ಮುನ್ನವೇ ಜಾಗೃತರಾಗಿರಿ.
8. ನಮ್ಮನ್ನು ನಾವು ಪ್ರೀತಿಸಬೇಕು. ಎಲ್ಲರೂ ಎಡವುವುದು ಇಲ್ಲಿಯೇ. ನಮ್ಮ ಕುಟುಂಬ, ಮಕ್ಕಳು, ಹಿರಿಯರು, ಗೆಳೆಯರು, ಜವಾಬ್ದಾರಿಗಳು ಹೀಗೆ ಎಲ್ಲವನ್ನೂ ಸಂಭಾಳಿಸಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ನಡೆಯುವಾಗ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು, ನಮ್ಮಿಷ್ಟದ ಕೆಲಸಗಳನ್ನು ಮಾಡುವುದನ್ನೇ ನಾವು ಸೈಡಿಗಿಟ್ಟುಬಿಡುತ್ತೇವೆ. ಮೊದಲು ನಮ್ಮನ್ನು ನಾವು ಪ್ರೀತಿಸುವುದು ಕಲಿಯಬೇಕು. ನಮ್ಮಿಷ್ಟದ ಸಂಗತಿಗಳಿಗೂ ಸಮಯ ನೀಡುವುದನ್ನು ಕಲಿಯಬೇಕು.
ಇದನ್ನೂ ಓದಿ: Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!
9. ಜೀವನ ರೇಸ್ ಅಲ್ಲ. ಒಂದೊಂದು ವಯಸ್ಸಿಗೂ ಒಂದೊಂದು ಜವಾಬ್ದಾರಿಗಳು ಸುತ್ತಿಕೊಳ್ಳುತ್ತವೆ ನಿಜ. ಓದಿ ವಿದ್ಯಾವಂತರಾದ ತಕ್ಷಣ ಕೆಲಸ ಹುಡುಕು, ಕಾಲ ಮೇಲೆ ನಿಂತುಕೋ, ಕುಟುಂಬವನ್ನು ನೋಡಿಕೋ, ಮದುವೆಯಾಗಿ, ಮನೆಕಟ್ಟು, ಸಾಲ ತೀರಿಸು, ಇನ್ನೊಂದು ಮನೆ ಕಟ್ಟು, ಸೈಟ್ ತೆಗೋ, ಮಕ್ಕಳಿಗೆ ಆಸ್ತಿ ಮಾಡು, ಅವರನ್ನು ಓದಿಸು… ಹೀಗೆ ಬದುಕಿನಲ್ಲಿ ಕೆಲಸಗಳು ಜವಾಬ್ದಾರಿಗಳು ಮುಗಿಯುವುದೇ ಇಲ್ಲ. ಆದರೆ, ಜೀವನ ರೇಸ್ ಅಲ್ಲ. ಯಾವುದನ್ನು ಎಷ್ಟು ಮಾಡಬೇಕು ಎಂಬುದು ತಿಳಿದಿರಲಿ. ಇವೆಲ್ಲ ಮಾಡದಿದ್ದರೆ ಬದುಕು ವೇಸ್ಟ್ ಅಲ್ಲ. ನಮ್ಮ ಬದುಕಿಗೆ ಯಾವುದು ಅಗತ್ಯ ಎಂಬುದನ್ನು ನೋಡಿಕೊಂಡು, ನಮ್ಮ ಖುಷಿಗಳಿಗೂ ಪ್ರಾಮುಖ್ಯತೆ ಕೊಟ್ಟು ಮಾಡುವುದನ್ನು ಕಲಿಯುವುದು ಮುಖ್ಯ.
10. ಜೀವನವೇ ಒಂದು ಸರ್‌ಪ್ರೈಸ್. ಇಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ನಮಗೆ ಬದುಕು ಅಂತ್ಯವಾಗುವವರೆಗೂ ಉತ್ತರ ದೊರೆಯುವುದಿಲ್ಲ. ಉತ್ತರ ದೊರೆಯದ ಪ್ರಶ್ನೆಗಳ ಬಗೆಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬದುಕನ್ನು ಬಂದ ಹಾಗೆ ಸ್ವೀಕರಿಸುತ್ತಾ ಇರುವುದರಲ್ಲೇ ಬದುಕಿನ ನಿಜವಾದ ಸತ್ಯ ಅಡಗಿದೆ ಎಂಬುದನ್ನು ಮೊದಲೇ ಅರ್ಥ ಮಾಡಿಕೊಂಡರೆ ಚಿಂತೆಯೇ ಇಲ್ಲ. ಆಗ ಬದುಕು ಸುಂದರವಾಗಿಯೇ ಕಾಣುತ್ತದೆ.
ಇದನ್ನೂ ಓದಿ: Life Tips: ಹೇಗೇ ಇದ್ದರೂ ಬದುಕು ಸುಂದರವಾಗಿ ಕಾಣಬೇಕೆಂದರೆ ಇಲ್ಲಿದೆ ಕೀಲಿಕೈ!