ಕೃತಜ್ಞತೆ (Gratitude) ಎಂಬುದು ಸಂತೋಷದ (happiness key) ಕೀಲಿಕೈಯಂತೆ! ಹೌದು. ಕೃತಜ್ಞರಾಗಿರುವುದನ್ನು ನಾವು ಕಲಿತುಕೊಂಡರೆ, ಆ ಅರಿವನ್ನು ನಾವು ಬೆಳೆಸಿಕೊಂಡರೆ, ಜೀವನ ಸುಗಮವಾಗಿ ಸಾಗುತ್ತದೆ ಎನ್ನುತ್ತಾರೆ ತಿಳಿದವರು. ಏಳುಬೀಳುಗಳಿದ್ದರೂ, ಬದುಕು ಎಷ್ಟು ಅದ್ಭುತ ಅನಿಸುತ್ತದೆ. ಬದುಕು ರಮ್ಯವಾಗಿ, ಸೊಗಸಾಗಿ ಕಾಣಬೇಕೆಂದರೆ ನಾವು ಬದುಕಿನ ಕೆಲವನ್ನು ಸರಳವಾಗಿ ತೆಗೆದುಕೊಳ್ಳುವುದನ್ನು ಕಲಿಯಬೇಕು. ಆಗ ನಾವು ಬದುಕಿನ ನಿಜವಾದ ಮರ್ಮವನ್ನು ಅರಿಯಲು ಸಾಧ್ಯವಾಗುತ್ತದೆ.
ಬದುಕಿನಲ್ಲಿ ಸಂತೋಷ ಹೊಂದಬೇಕಾದರೆ ಶ್ರೀಮಂತಿಕೆಯೇ ಬೇಕಾಗಿಲ್ಲ. ಅದಿಲ್ಲದೆಯೂ ಜೀವನ ಅದ್ಭುತವಾಗಿರಬಲ್ಲುದು. ಏಳುಬೀಳುಗಳ ಹೊರತಾಗಿಯೂ ಬದುಕೆಷ್ಟು ಚಂದ ಎಂದು ಅನಿಸಬೇಕಾದರೆ, ನೀವು ಬದುಕನ್ನು ದೂಷಿಸದೆ ಇರುವ ಗುಣವನ್ನು ಕಲಿಯಬೇಕಾದರೆ, ಈ ಕೆಲವು ವಿಚಾರಗಳನ್ನು ನೀವು ತಿಳಿಯಬೇಕು. ಆ ಅರಿವು ನಿಮ್ಮೊಳಗಿಂದ ಬಂದರೆ, ನೀವು ಬದುಕಿನ ಅಗಾಧತೆಯನ್ನು, ಅನನ್ಯತೆಯನ್ನು, ಸಂಪೂರ್ಣತೆಯನ್ನು ಸವಿಯುತ್ತೀರಿ. ಹಾಗಾಗಿ ತಮ್ಮ ಬದುಕು ಹೇಗೇ ಇದ್ದರೂ ಸಂತೋಷವಾಗಿರುವ ಮಂದಿಯ ಬದುಕಿನ ಸೀಕ್ರೆಟ್ (Life tips, life secret) ಇಲ್ಲಿದೆ.
1. ಮೊದಲು ಜೀವನಕ್ಕೇ ಕೃತಜ್ಞರಾಗಿರಿ. ಹೌದು ಕೇಳಲು ವಿಚಿತ್ರವಾಗಿ ಅನಿಸಬಹುದು. ಆದರೆ ಇದು ನಿಜ. ಯಾಕೆಂದರೆ ಈ ಜಗತ್ತಿನಲ್ಲಿ ನೀವು ಈ ಭೂಮಿಯಲ್ಲಿ ಜನ್ಮ ತಳೆಯಲು ೪೦೦ ಟ್ರಿಲಿಯನ್‌ನಲ್ಲಿ ಒಂದರಷ್ಟೇ ಅವಕಾಶವಿದ್ದುದು, ಹಾಗೂ ಆ ಅವಕಾಶ ನಿಮ್ಮದಾಗಿದೆ ಎಂದರೆ ಅದು ನಿಮ್ಮ ಭಾಗ್ಯವೇ ಸರಿ ಎಂಬುದನ್ನು ಮನಗಾಣಬೇಕು. ಆಗ ನಿಮ್ಮ ಜೀವನ ಎಷ್ಟು ಮುಖ್ಯವಾದುದೆಂದು ನಿಮಗೆ ಅರಿವಾದೀತು. ಹಾಗಾಗಿ ಜೀವನ ಎಂಬುದು ಅತ್ಯಂತ ಅಮೂಲ್ಯ.
2. ನಿಮ್ಮ ಜೀವನದಿಂದ ಹೊರಹೋದವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಖುಷಿಯಾಗಿರುವ ಮಂದಿ ಬೇರೆಯವರ ನಿರ್ಧಾರಗಳನ್ನೂ ಖಂಡಿತ ಗೌರವಿಸುತ್ತಾರೆ. ಹಾಗಾಗಿಯೇ, ನೀವು ಖುಷಿಯಾಗಿರಬೇಕೆಂದರೆ, ನೀವು ಯಾರಿಗೋ ಬಾಗಿಲು ಮುಚ್ಚಿದ್ದಕ್ಕೋ, ಬೇರೆಯವರ್ಯಾರೋ ನಿಮ್ಮೆದುರು ಬಾಗಿಲು ಮುಚ್ಚಿದ್ದಕ್ಕೋ ಚಿಂತಿಸಬೇಡಿ. ಒಂದು ಬಾಗಿಲು ಮುಚ್ಚಿದರೆ, ಇನ್ನೊಂದು ಬಾಗಿಲು ತೆರೆಯುತ್ತದೆ, ನೆನಪಿಡಿ. ಬದುಕನ್ನು ಬಂದ ಹಾಗೆ ಸ್ವೀಕರಿಸಿ. ಅಗತ್ಯವಿಲ್ಲದ ಮೆಸೇಜುಗಳು, ಕಸಿಕ್ಕದ ಕೆಲಸಗಳು, ಕೈತಪ್ಪಿಹೋದ ಅವಕಾಶಗಳು ನಿಜವಾಗಿಯೂ ನಿಮ್ಮದಲ್ಲ, ನಿಮಗಾಗಿ ಬಂದಿದ್ದಲ್ಲ ಎಂದು ಸಕಾರಾತ್ಮಕವಾಗಿ ಯೋಚಿಸಿ. ಹೋದುದಕ್ಕೆ ಚಿಂತಿಸಿ ನೆಮ್ಮದಿ ಕಳೆಯಬೇಡಿ.
3. ಸಂತೋಷವಾಗಿರುವ ಮಂದಿ ತಮ್ಮ ಸುತ್ತಮುತ್ತಲ ಪರಿಸರವನ್ನು ನೋಡುತ್ತಾರೆ. ಪ್ರಕೃತಿಯ ಖುಷಿಯಲ್ಲಿ ತಮ್ಮ ಖುಷಿಯನ್ನು ಕಾಣುತ್ತಾರೆ. ಹಕ್ಕಿಗಳಿಂಚರ, ಹೂಗಳ ಘಮ, ಗಾಳಿಯ ಜೋಗುಳ, ಮಳೆಯ ತಂಪು ಹೀಗೆ ಪ್ರತಿಯೊಂದರಲ್ಲೂ ಸಣ್ಣ ಸಣ್ಣ ಖುಷಿಗಳನ್ನು ಹೆಕ್ಕಿ. ಪ್ರಕೃತಿಯೊಂದಿಗೆ ಕಳೆವ ಅವಕಾಶವನ್ನೆಂದೂ ಬಿಡಬೇಡಿ. ಇದರಲ್ಲಿರುವಷ್ಟು ಖುಷಿ ಇನ್ಯಾವುದರಲ್ಲೂ ಸಿಗಲಾರದು.
4. ಸ್ವಾರ್ಥರಹಿತರಾಗಿರುವುದಕ್ಕೆ ಪ್ರಯತ್ನಿಸಿ. ಸುತ್ತಮುತ್ತಲಿನವರ ಜೊತೆ ಪ್ರೀತಿಯಿಂದ, ವಿಶ್ವಾಸದಿಂದ ಮಾತನಾಡಿಸಿ. ಮುಖದಲ್ಲಿನ ಒಂದು ಪುಟ್ಟ ನಗು ಮ್ಯಾಜಿಕ್ಕೇ ಮಾಡಬಲ್ಲುದು. ಕೆಲವೊಂದು ಕೆಲಸಗಳನ್ನು ಬೇರೆವರಿಗೆ ಮಾಡಿಕೊಡಲು ನಿಮ್ಮ ಸ್ವಾರ್ಥ ಅಡ್ಡ ಬರದಿರಲಿ. ಇನ್ನೊಬ್ಬರಿಗೆ ಪ್ರೀತಿಯಿಂದ ಕೊಡುವುದರಲ್ಲಿ ಖುಷಿಯನ್ನು ಕಾಣಿ.
ಇದನ್ನೂ ಓದಿ: Happiness Tips: ಒಬ್ಬರೇ ಇದ್ದಾಗ ಖುಷಿಯಾಗಿರುವುದು ಹೇಗೆ ಗೊತ್ತಾ? ಇಲ್ಲಿವೆ ಟಿಪ್ಸ್!
5. ಗೆಳೆಯರು ಜೀವನದ ಅಮೂಲ್ಯ ಆಸ್ತಿ. ಈ ಮಂತ್ರ ಎಂದಿಗೂ ನೆನಪಿಡಿ. ಸಂಬಂಧಿಕರು, ನೆರೆಹೊರೆಯ ಮಂದಿ ರಕ್ತ ಸಂಬಂಧಿಗಳೂ ಕಷ್ಟದ ಸಂದರ್ಭದಲ್ಲಿ ಕೈಕೊಟ್ಟಾರು. ಆದರೆ, ಗೆಳೆಯರು ಖಂಡಿತಾ ಕೊಡಲಾರರು. ಹಾಗಾಗಿ ಉತ್ತಮ ಗೆಳೆಯರನ್ನು ಸಂಪಾದಿಸಿ. ಅವರನ್ನು ಗೌರವಿಸಿ, ಪ್ರೀತಿ, ಅವರ ಜೊತೆಗೂ ಸಮಯ ಕಳೆಯಿರಿ.
6. ಸಂತೋಷವನ್ನು ಬರಮಾಡಿಕೊಂಡಷ್ಟೇ ಸಹಜವಾಗಿ ಸೋಲನ್ನೂ, ಕಷ್ಟವನ್ನೂ ದುಃಖವನ್ನೂ ಬರಮಾಡಿ. ಖುಷಿ ಯಾವಾಗಲೂ ಇರುವುದಿಲ್ಲ ಎಂಬ ಸತ್ಯವನ್ನು ಮೊದಲು ಒಪ್ಪಿಕೊಳ್ಳುವುದು ಜೀವನದಲ್ಲಿ ಮುಖ್ಯ. ಹಾಗಾಗಿ, ಸಂತೋಷ, ಖುಷಿಯ ಭಾವನೆಗಳ ಹೊರತಾಗಿಯೂ ಬೇರೆ ಭಾವನೆಗಳಿವೆ ಎಂಬುದನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ.
ಕೇವಲ ಖುಷಿಯಷ್ಟೇ ಜೀವನದಲ್ಲಿ ತುಂಬಿರಬೇಕು ಎಂದು ಅಂದುಕೊಳ್ಳುವುದೇ ಮೂರ್ಖತನ. ಜೀವನ ಎಂದರೆ ಏಳುಬೀಳುಗಳ ಸಮಾಗಮ. ಅಲ್ಲಿ ಎಲ್ಲವೂ ಇದೆ. ಬದುಕಿನ ಬಗೆಗೆ ಹೀಗೊಂದು ಮನೋಭಾವವನ್ನು ಮೊದಲೇ ಬೆಳೆಸಿಕೊಂಡಾತ ಹಾಗೂ ತನ್ನ ಅಸ್ತಿತ್ವದ ಬಗೆಗೆ ಕೃತಜ್ಞನಾಗಿರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಖುಷಿಯಾಗಿರುತ್ತಾನೆ/ಳೆ!
ಇದನ್ನೂ ಓದಿ: Happiness Tips: ಸದಾ ಸಂತಸದಿಂದ ಇರಲು ಬೇಕು ಈ 4 ಹಾರ್ಮೋನ್, ಹೆಚ್ಚಿಸಿಕೊಳ್ಳೋಕೆ ಇಲ್ಲಿದೆ ಟಿಪ್ಸ್