Site icon Vistara News

Lifestyle Tips: ಆರೋಗ್ಯಕರ ಒತ್ತಡರಹಿತ ಜೀವನಕ್ಕೆ ಸರಳ ಸಪ್ತಸೂತ್ರಗಳು!

happy life

ನಮ್ಮ ಕೆಲವು ಆರೋಗ್ಯಕರ ಶಿಸ್ತಿನ ನಿತ್ಯಾಭ್ಯಾಸಗಳೇ ನಮ್ಮ ಆರೋಗ್ಯದ ಕೀಲಿ ಕೈ. ಆದರೆ ಬದಲಾದ ಪ್ರಪಂಚ, ಬದಲಾದ ವ್ಯವಸ್ಥೆ, ಉದ್ಯೋಗದ ಒತ್ತಡ, ಆಧುನಿಕ ಮನಸ್ಥಿತಿ ಸೇರಿದಂತೆ ಹಲವು ಸವಾಲುಗಳು ನಮ್ಮ ಎಷ್ಟೋ ದಿನಚರಿಯನ್ನು ಬದಲಾಯಿಸಿಬಿಟ್ಟಿದೆ. ಇದರಿಂದ ನಮಗೇ ಅರಿವಿಲ್ಲದಂತೆ ನಾವು ಹಲವಾರು ಸಮಸ್ಯೆಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಆದರೆ ಉತ್ತರ ನಮ್ಮ ಜೀವನಶೈಲಿಯಲ್ಲಿದೆ ಎಂಬ ಸತ್ಯ ಮಾತ್ರ ನಮಗೆ ಅರಿವಾಗುವುದಿಲ್ಲ. ಹಾಗೆ ನೋಡಿದರೆ, ನಮ್ಮ ಆರೋಗ್ಯದ ಗುಟ್ಟು ಇದರಲ್ಲೇ ಇದೆ. ನಾವು ಮಾತ್ರ ಬೇರೆಯದರ ಹುಡುಕಾಟದಲ್ಲಿ ಇವನ್ನು ಮರೆಯುತ್ತಿದ್ದೇವೆ. ಹಾಗಾದರೆ ಬನ್ನಿ, ನಮ್ಮ ಬದುಕನ್ನೇ ಬದಲಾಯಿಸಬಲ್ಲ, ಆರೋಗ್ಯಕರ ಜೀವನದತ್ತ ಮತ್ತೆ ನಮ್ಮನ್ನು ಕೊಂಡೊಯ್ಯಬಲ್ಲ ಅಭ್ಯಾಸಗಳು ಯಾವುವು (Lifestyle Tips) ಎಂಬುದನ್ನು ನೋಡೋಣ.

1. ಚೆನ್ನಾಗಿ ನಿದ್ದೆ ಮಾಡಿ: ಹೌದು. ಇಂದು ದೇಹಕ್ಕೆ ನಿಜವಾಗಿ ಅಗತ್ಯವಾಗಿ ಬೇಕಾಗಿರುವ ಗುಣಮಟ್ಟ್ದ ನಿದ್ದೆಯನ್ನು ನಾವು ನಮ್ಮ ದೇಹಕ್ಕೆ ನ್ಯಾಯವಾಗಿ ಕೊಡುತ್ತಿಲ್ಲ. ನಿತ್ಯವೂ ಏಳರಿಂದ ಎಂಟು ಗಂಟೆಗಳ ನಿದ್ದೆ ಸಾಮಾನ್ಯ ಆರೋಗ್ಯವಂತ ವಯಸ್ಕನಿಗೆ ಅಗತ್ಯವಿದೆ. ಕೆಲಸದ ಒತ್ತಡ, ಗ್ಯಾಜೆಟ್‌ಗಳ ಅಭ್ಯಾಸದಿಂದಾಗಿ ಇಂದು ಆ ನಿದ್ದೆ ಕಡಿಮೆಯಾಗಿದೆ. ಹಾಗಾಗಿ ಸರಿಯಾದ ಸಮಯದಲ್ಲಿ ಪ್ರತಿನಿತ್ಯ ಬೇಗ ನಿದ್ದೆ ಮಾಡಿ ಬೆಳಗ್ಗೆ ಬೇಗನೆ ಏಳುವ ಶಿಸ್ತುಬದ್ಧ ಅಭ್ಯಾಸ ರೂಢಿಸಿಕೊಳ್ಳಿ.

2. ಸ್ಮಾರ್ಟ್‌ ಉಪವಾಸ: ಉಪವಾಸದ ಅಭ್ಯಾಸ ಇಂದು ಬಹಳಷ್ಟು ಕಡಿಮೆಯಾಗಿದೆ. ಪುಟ್ಟ ಅವಧಿಗೆ ಹಸಿವಿನಿಂದಿರುವುದು, ಲಘುವಾಗಿ ಉಣ್ಣುವುದು ನಮ್ಮ ಎರಡು ಮುಖ್ಯ ವಂಶವಾಹಿನಿಗಳಿಗೆ ಒಳ್ಳೆಯದು. ಈ ವಂಶವಾಹಿನಿಯಲ್ಲಿ ನಮ್ಮ ಒತ್ತಡ, ಕ್ಯಾನ್ಸರ್‌, ವಯಸ್ಸಾದಂತೆ ಬರುವ ರೋಗಗಳು ಇವೆಲ್ಲವುಗಳ ವಿರುದ್ಧ ಹೋರಾಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊಟ್ಟೆ ತುಂಬ ಅತಿಯಾಗಿ ಉಣ್ಣುವುದನ್ನು ಕಡಿಮೆ ಮಾಡಿ. ಹೊಟ್ಟೆಯಲ್ಲಿ ಕೊಂಚ ಜಾಗ ಉಳಿಸಿಕೊಂಡು ಲಘುವಾಗಿ ಉಣ್ಣಿ.

3. ಮಾಂಸಖಂಡಗಳ ಬಲವರ್ಧನೆ ಮಾಡಿ: ಉತ್ತಮ ಮಾಂಸಖಂಡಗಳನ್ನು ವೃದ್ಧಿಸಿಕೊಳ್ಳುವುದು ಒಳ್ಳೆಯದು. ವ್ಯಾಯಾಮ, ವೈಟ್‌ ಟ್ರೈನಿಂಗ್‌, ಪುಶ್‌ ಅಪ್‌, ಯೋಗ ಇತ್ಯಾದಿಗಳು ಒಳ್ಳೆಯದು. ಸೂರ್ಯ ನಮಸ್ಕಾರದಂತಹ ಸಾಮಾನ್ಯ ಯೋಗಾಭ್ಯಾಸವಾದರೂ ಮಾಡುವುದು ಒಳ್ಳೆಯದು.

4. ಸ್ನ್ಯಾಕ್‌ ತಿನ್ನುವುದು ಕಡಿಮೆ ಮಾಡಿ: ಏನಾದರೊಂದು ಬಾಯಲ್ಲಿ ಹಾಕಿ ಮೆಲ್ಲುತ್ತಲೇ ಇರುವುದು ಹಲವರಿಗೆ ಅಭ್ಯಾಸ. ಇದು ಅತಿಯಾಗಿ ತಿನ್ನುವುದರ ಲಕ್ಷಣ. ಆದಷ್ಟೂ ಈ ಅಭ್ಯಾಸವನ್ನು ಕಡಿಮೆ ಮಾಡಿ.

ಇದನ್ನೂ ಓದಿ: Chia Seeds Day: ಇಂದು ಚಿಯಾ ಸೀಡ್ಸ್‌ ದಿನ! ಇದರ ಬಳಕೆ ಹೇಗೆ? ಏನು ಪ್ರಯೋಜನ?

5. ಧ್ಯಾನ: ಸಾಕಷ್ಟು ಸಂಶೋಧನೆಗಳು ಇಂದು ಧ್ಯಾನವು ಮಾನಸಿಕ ಆರೋಗ್ಯವನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವುದನ್ನು ಒಪ್ಪಿಕೊಂಡಿವೆ. ಮಾನಸಿಕ ಒತ್ತಡದಂತಹ ಹಲವು ಸಮಸ್ಯೆಗಳನ್ನು ಧ್ಯಾನವು ದೂರವಿರಿಸುತ್ತದೆ.

6 ಒಳ್ಳೆಯ ಆಹಾರ ಸೇವನೆ: ಉತ್ತಮ ಆರೋಗ್ಯಕರ ಜೀವನಕ್ಕೆ ನಾವು ಏನು ತಿನ್ನುತ್ತೇವೆ ಎಂಬುದೂ ಮುಖ್ಯವಾಗುತ್ತದೆ. ಸತ್ವಾಹಾರ ಸೇವನೆ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಹಾಗೂ ಜಂಕ್‌ನಿಂದ ದೂರವಿರುವುದರ ಅಭ್ಯಾಸ ಮಾಡಿಕೊಂಡರೆ, ಎಷ್ಟೋ ಸಮಸ್ಯೆಗಳಿಂದ ನಾವು ದೂರವಿರಬಹುದು.

7. ಇತರ ಆರೋಗ್ಯಕರ ಚಟುವಟಿಕೆಗಳು: ಓದುವುದು, ಬರವಣಿಗೆ, ಇನ್‌ಡೋರ್‌ ಗೇಮ್‌ಗಳು, ಮಕ್ಕಳೊಂದಿಗೆ ಆಡುವುದು, ಹೊಸ ಕಲಿಕೆಗಳು, ಹೊಸ ಭಾಷಾ ಕಲಿಕೆ, ಸಂಗೀತ, ನೃತ್ಯ, ಚಿತ್ರಕಲೆ, ಸಾಹಿತ್ಯದಂತಹ ಕ್ರಿಯಾಶೀಲ ಚಟುವಟಿಕೆಗಳು ಇತ್ಯಾದಿ ಮನೋಲ್ಲಾಸ ನೀಡುವ ಚಟುವಟಿಕೆಗಳೂ ಕೂಡಾ ನಮ್ಮನ್ನು ಆರೋಗ್ಯವಾಗಿರಿಸುತ್ತದೆ. ಮಾನಸಿಕವಾಗಿ, ದೈಹಿಕವಾಗಿ ಒತ್ತಡರಹಿತರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ವಿಸ್ತಾರ Explainer | killer stress | ಒತ್ತಡ ಏರುತ್ತಿದೆ, ಹೃದಯ ಕುಸಿಯುತ್ತಿದೆ!

Exit mobile version