Site icon Vistara News

Masala Tea: ಭಾರತದ ಮಸಾಲೆ ಚಹಾಕ್ಕೆ ಸಾಟಿಯೇ ಇಲ್ಲ! ವಿಶ್ವದಲ್ಲೇ ಮಸಾಲೆ ಚಹಾ ನಂ.2 !

herbal tea

ಚಹಾ ಅಂದರೆ ಕೇವಲ ಪೇಯವಲ್ಲ, ಅದೊಂದು ಭಾವ ಎಂಬ ಮಾತನ್ನು ಒಪ್ಪುವ ಭಾರತೀಯರು ದೇಶದ ಉದ್ದಗಲಕ್ಕೂ ಇದ್ದಾರೆ. ಯಾಕಂದರೆ, ದೇಶದ ಉದ್ದಗಲಕ್ಕೂ, ಬೆಳಗ್ಗೆ ಎದ್ದ ಕೂಡಲೇ ಬಹುತೇಕರ ದಿನ ಆರಂಭವಾಗುವುದು ಒಂದು ಕಪ್‌ ಚಹಾದಿಂದಲೇ. ಚಹಾ ಒಳ್ಳೆಯದೋ, ಕೆಟ್ಟದ್ದೋ ಎಂಬ ಬಗ್ಗೆ ಸಾಕಷ್ಟು ವಾದ ವಿವಾದಗಳಿದ್ದರೂ, ಹಿತಮಿತವಾಗಿ ಚಹಾ ಕುಡಿಯುವುದರಿಂದ ಚಹಾ ಕೆಟ್ಟದ್ದು ಮಾಡಲಾರದು ಎಂಬ ನಂಬಿಕೆ ಬಹುತೇಕರಲ್ಲಿದೆ. ಹಾಗಾಗಿಯೋ ಏನೋ, ಚಹಾವನ್ನು ಯಾರಿಗೂ ಅಷ್ಟು ಸುಲಭವಾಗಿ ಬಿಡಲು ಸಾಧ್ಯವಾಗದು. ಇಂತಹ ಚಹಾ ಪ್ರಿಯರಿಗಾಗಿ ಒಂದು ಶುಭಸುದ್ದಿಯಿದೆ. ಆಲ್ಕೋಹಾಲ್‌ ಹೊರತಾದ ಪೇಯಗಳ ಪಟ್ಟಿಯಲ್ಲಿ ವಿಶ್ವದಲ್ಲೇ ಎರಡನೇ ಅತ್ಯುತ್ತಮ ಪೇಯವಾಗಿ ಚಹಾ ಹೊರಹೊಮ್ಮಿದೆ. ಅದು ಮಸಾಲೆ ಚಹಾ! (Masala Tea)

ಟೇಸ್ಟ್‌ ಅಟ್ಲಾಸ್‌ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದಾದ್ಯಂತ ಜನರು ವೋಟ್‌ ಮಾಡಿದ್ದು ಭಾರತದ ಮಸಾಲೆ ಚಹಾಕ್ಕೆ. ಹೀಗಾಗಿ ವಿಶ್ವದ ಅತ್ಯಂತ ಜನಪ್ರಿಯ ಅಲ್ಕೋಹಾಲ್ ರಹಿತ ಪೇಯಗಳ ಪೈಕಿ ಮಸಾಲೆ ಚಹಾಕ್ಕೆ ಎರಡನೇ ಸ್ಥಾನ ದೊರೆತಿದೆ.

ಮಸಾಲೆ ಚಹಾದಿಂದ ಸಿಗುವ ಆರೋಗ್ಯಕರ ಲಾಭಗಳನ್ನೂ ಸೇರಿಸಿದಂತೆ, ಬಹಳಷ್ಟು ಮಂದಿ, ಈ ಚಹಾವನ್ನು ಭಾವನೆಗಳನ್ನು ಉದ್ದೀಪಿಸುವ, ಮನಸ್ಸಿಗೆ ಖುಷಿಯನ್ನು, ನೆಮ್ಮದಿಯನ್ನು ನೀಡುವ ಪೇಯ ಎಂದು ವರ್ಣಿಸಿದ್ದಾರೆ.

ನಿಮ್ಮಲ್ಲಿ ಅನೇಕರು, ಉತ್ತರ ಭಾರತದ ಬೀದಿ ಬದಿಗಳಲ್ಲಿ ಸಿಗುವ ಮಟಕಾ ಚಾಯ್‌ ಕುಡಿದಿರಬಹುದು. ಮಣ್ಣಿನ ಪುಟ್ಟ ಮಡಿಕೆಯಂಥಹ ಚಹಾ ಕಪ್‌ಗಳಲ್ಲಿ ಹಬೆಯಾಡುವ ಮಸಾಲೆ ಚಹಾ ಚಳಿಗಾಲದಲ್ಲಿ ಹೀರುತ್ತಿದ್ದರೆ ಸ್ವರ್ಗಸಮಾನ ಸುಖ ಎಂದು ಅನೇಕ ಚಹಾ ಪ್ರಿಯರು ಬಣ್ಣಿಸಬಹುದು. ಇಂತಹ ಚಹಾ ಮಾಡುವುದು ಹೇಗೆ, ಪರ್ಫೆಕ್ಟ್‌ ರುಚಿಯನ್ನು ಅನುಭವಿಸುವುದು ಹೇಗೆ ಎಂದು ಅನೇಕರಿಗೆ ಕುತೂಹಲವಿರಬಹುದು. ವಿಶ್ವದೆಲ್ಲೆಡೆ ಸುದ್ದಿ ಮಾಡಿದ ಈ ಮಸಾಲೆ ಚಹಾ ಮಾಡುವುದನ್ನು ಈ ಚಳಿಗಾಲದಲ್ಲೂ ನೀವು ಕಲಿಯದಿದ್ದರೆ ಇನ್ಯಾವತ್ತು ಕಲಿಯುತ್ತೀರಿ ಹೇಳಿ! ಬನ್ನಿ, ಪರ್ಫೆಕ್ಟ್‌ ರುಚಿಯ ಮಸಾಲೆ ಚಹಾ ಮಾಡೋಣ.

1. ಏಲಕ್ಕಿ: ಮಸಾಲೆ ಚಹಾ ಅಂದ ಕೂಡಲೇ, ಅದಕ್ಕೆ ಖಂಡಿತಾ ಅಗತ್ಯವಾದ ಮಸಾಲೆಗಳ ಪೈಕಿ ಏಲಕ್ಕಿಯೂ ಒಂದು ಏಲಕ್ಕಿಯ ಘಮ ಮಸಾಲೆ ಚಹಾದಲ್ಲಿ ಮಿಸ್‌ ಆದರೆ, ಅದಕ್ಕೆ ಸರಿಯಾದ ಹದ ಬರದು. ಯಾಕೆಂದರೆ ಏಲಕ್ಕಿಯ ಘಮವೇ ಅಂಥದ್ದು. ಗಾಢವಾದದ್ದು. ಇಂಥ ಏಲಕ್ಕಿಯನ್ನು ಕುಟ್ಟ್ಣಿಯಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿಯೂ ಇಟ್ಟುಕೊಳ್ಳಬಹುದು.

2. ಶುಂಠಿ: ಶುಂಠಿ ಕೂಡಾ ಏಲಕ್ಕಿಯಂತೆಯೇ ಮಸಾಲೆ ಚಹಾದ ಪ್ರಮುಖ ಭಾಗ. ಮಸಾಲೆ ಚಹಾಕ್ಕೊಂದು ಗರಂ ಅನಿಸಬಹುದಾದ ಗಂಟಲಿಗೆ ಹಿತವೆನ್ನುವ ಕಾರದ ರುಚಿಯನ್ನೂ ವಿಶಿಷ್ಠ ಘಮವನ್ನೂ ನೀಡುವಲ್ಲಿ ಶುಂಠಿಯ ಪಾತ್ರ ಮಹತ್ವದ್ದು.

3. ಲವಂಗ: ಮಸಾಲೆ ಚಹಾವನ್ನು ಮಾಡಲು ಏಲಕ್ಕಿ ಶುಂಠಿಯಂತೆಯೇ ಲವಂಗವೂ ಬೇಕು. ಎಲ್ಲವೂ ಹಿತಮಿತವಾಗಿದ್ದರಷ್ಟೇ ರುಚಿಯಾದ ಮಸಾಲೆ ಚಹಾ ಸಿದ್ಧವಾದೀತು. ಇದು ಕೊಡುವ ಘಮವೇ ಬೇರೆ!

4. ಚಕ್ಕೆ: ಚಕ್ಕೆಯ ಘಮ ಕೊಂಚವೇ ಮಸಾಲೆಗೆ ಸೇರಿಕೊಂಡರಷ್ಟೇ ಮಸಾಲೆ ಚಹಾಕ್ಕೊಂದು ಅರ್ಥ ಬರುವುದು. ಹಾಗಾಗಿ ಚಕ್ಕೆಯನ್ನು ಬಿಟ್ಟರೆ ಹೇಗೆ ಹೇಳಿ!

5. ಕರಿಮೆಣಸು: ಮಸಾಲೆ ಸಹಾ ಗಂಟಲಿಗೂ ಹಿತಕರವಾಗಿ, ಚಳಿಗಾಲದಲ್ಲಿ ಆರೋಗ್ಯಕ್ಕೂ ಒಳ್ಳೆಯದನ್ನು ಬಯಸುವ ಪ್ರಾಮಾಣಿಕಪ್ರಯತ್ನವನ್ನು ಮಾಡುವ ಮಸಾಲೆಗಳ ಪೈಕಿ ಕರಿಮೆಣಸೂ ಒಂದು. ನೀವು ಖಾರ ಕಡಿಮೆ ಇರುವ ಹದವಾದ ಚಹಾ ಬಯಸುತ್ತೀರೆಂದಾದಲ್ಲಿ, ಶುಂಠಿಯನ್ನು ಸೇರಿಸಿ, ಕರಿಮೆಣಸನ್ನು ಕೈಬಿಡಬಹುದು.

ಈ ಎಲ್ಲ ಮಸಾಲೆಗಳನ್ನು ಹದವಾಗಿ ಕುಟ್ಟು ಪುಡಿ ಮಾಡಿ ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬೇಕಾದಾಗ ಚಹಾಕ್ಕೆ ಹಾಕಿ ಕುದಿಸಬಹುದು. ಅಥವಾ, ಚಹಾ ಮಾಡುವ ಸಂದರ್ಭ ಬೇಕಾದಷ್ಟೇ ಮಸಾಲೆಯನ್ನು ಫ್ರೆಶ್ಶಾಗಿ ಕುಟ್ಟಿ ಪುಡಿ ಮಾಡಿಯೂ ಚಹಾಕ್ಕೆ ಹಾಕಬಹುದು. ಚಹಾವನ್ನು ಚೆನ್ನಾಗಿ ಕುದಿಸಿ, ಸರಿಯಾಗಿ ಹಾಲನ್ನೂ ಹಾಕಿ ಮಾಡಿದ ಚಹಾಕ್ಕೆ ಸಾಟಿಯೇ ಇಲ್ಲ!

ಇದನ್ನೂ ಓದಿ: Masala Tea: ಚಳಿಗಾಲವೆಂದು ಅತಿಯಾಗಿ ಮಸಾಲೆ ಚಹಾ ಕುಡಿಯುತ್ತೀರಾ? ಹಾಗಾದರೆ ಎಚ್ಚರ!

Exit mobile version