Site icon Vistara News

Masala Tea : ಹಸಿವು ನಿಯಂತ್ರಿಸಿ ದೇಹದ ತೂಕ ಇಳಿಸುವ ಮಸಾಲೆ ಚಹಾ!

Masal Tea

ಚಹಾ ಕುಡಿಯುವುದು ಹಲವಾರು ದೇಶಗಳ ಸಂಸ್ಕೃತಿಯ ಭಾಗ. ಹಾಲು ಹಾಕದೆಯೇ ನಾನಾ ರೀತಿಯ ಹರ್ಬಲ್‌ ಚಹಾಗಳು (Masala Tea) ಜಪಾನ್‌ನಂಥ ಪೂರ್ವ ದೇಶಗಳಲ್ಲಿ ಜನಪ್ರಿಯವಾದರೆ, ಡಿಕಾಕ್ಷನ್‌ಗೆ ಹಾಲು ಬೆರೆಸಿದ ಚಹಾ ಪಶ್ಚಿಮದ ಬ್ರಿಟಿಷ್‌ ಬದುಕಿನ ಭಾಗ. ನಡುವಿರುವ ನಾವು, ಅಂದರೆ ಭಾರತೀಯರು ಹಾಲು ಬೆರೆಸದ ನಿಂಬೆ ಚಹಾ(Lemon Tea) , ಪುದೀನಾ ಚಹಾಗಳಿಂದ ಹಿಡಿದು ವಿವಿಧ ರೀತಿಯ ಹರ್ಬಲ್‌ ಚಹಾ (Herbal Tea), ಗ್ರೀನ್‌ ಟೀ, ಬ್ಲ್ಯಾಕ್‌ ಟೀಗಳು ಹಾಗೂ ಹಾಲು ಬೆರೆಸಿದ ಖಡಕ್‌ ಮಸಾಲೆ ಚಹಾಗಳವರೆಗೆ ಯಾವುದಕ್ಕಾದರೂ ಸೈ. ಅತಿಯಾದ ಚಹಾ ಸೇವನೆ ಹೇಗೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಲ್ಲದೋ ಹಾಗೆಯೇ ಕೆಲವು ರೀತಿಯ ಚಹಾ ಸೇವನೆಗಳು ಆರೋಗ್ಯಕ್ಕೆ ಲಾಭವನ್ನೂ ತಂದುಕೊಡಬಲ್ಲವು. ಎಂಥಾ ಚಹಾ ಅದು? ಬನ್ನಿ ತಿಳಿಯೋಣ.

ಮಸಾಲೆ ಚಹಾ: ಇದು ಚಹಾ ಪ್ರಿಯರೆಲ್ಲರಿಗೂ ಗೊತ್ತಿರುವ ವಿಷಯವೇ. ದಾಲ್ಚಿನಿ ಚಕ್ಕೆ, ಲವಂಗ, ಏಲಕ್ಕಿ, ಚಕ್ರಮೊಗ್ಗು, ಕೇಸರಿ, ಶುಂಠಿ ಮುಂತಾದ ಹಲವಾರು ಮಸಾಲೆ ಪದಾರ್ಥಗಳನ್ನು ಚಹಾ ತಯಾರಿಕೆಯಲ್ಲಿ ಬಳಸುತ್ತೇವೆ. ಕೆಲವೊಮ್ಮೆ ಇವುಗಳಲ್ಲಿ ಒಂದೊಂದೇ ವಸ್ತುಗಳನ್ನು, ಕೆಲವೊಮ್ಮೆ ಈ ವಸ್ತುಗಳ ಮಿಶ್ರಣಗಳನ್ನು ಬಳಸಿ ರುಚಿಕರವಾದ ಚಹಾ ತಯಾರಿಕೆ ಭಾರತೀಯರಲ್ಲಿ ರೂಢಿ. ಮಾತ್ರವಲ್ಲ, ಬೇರೆ ದೇಶಗಳಲ್ಲೂ ಈ ವಸ್ತುಗಳ ಚಹಾ ಬಳಕೆಯಲ್ಲಿದೆ. ಮುಖ್ಯವಾಗಿ ಚಳಿಗಾಲದಲ್ಲಿ ಬಿಸಿಯಾಗಿ ಏನಾದರೊಂದಿಷ್ಟು ಸವಿಯೋಣ ಎನಿಸಿದಾಗ ಇವು ಉಪಯುಕ್ತ. ಆದರೆ ಇಂಥ ಪೇಯಗಳಿಂದ ಆರೋಗ್ಯಕ್ಕೆ ಲಾಭವಾಗುವುದು ಹೇಗೆ ಎಂಬುದೀಗ ಪ್ರಶ್ನೆ.

ರೋಗ ನಿರೋಧಕತೆ ಹೆಚ್ಚಳ: ಮಸಾಲೆ ಚಹಾಗಳಿಂದ ದೊರೆಯುವ ಆಂಟಿ ಆಕ್ಸಿಡೆಂಟ್‌ಗಳು ದೇಹದ ರೋಗ ನಿರೋಧಕ ಶಕ್ತಿಯನ್ನು (immunity Booster) ಬಲಗೊಳಿಸುತ್ತವೆ. ನೆಗಡಿ, ಕೆಮ್ಮು ಮತ್ತು ಫ್ಲೂ ಮಾದರಿಯ ಎಲ್ಲಾ ಲಕ್ಷಣಗಳಿಂದ ಹೋರಾಡಲು ದೇಹಕ್ಕೆ ಬಲ ನೀಡುತ್ತವೆ.

ಉರಿಯೂತ ಶಮನ: ಲವಂಗ ಮತ್ತು ಕೇಸರಿಯಂಥ ಮಸಾಲೆಗಳು ದೇಹದಲ್ಲಿನ ನೋವು ಮತ್ತು ಉರಿಯೂತ ಕಡಿಮೆ ಮಾಡಲು ನೆರವಾಗುತ್ತವೆ. ಇಂಥ ಚಹಾಗಳನ್ನು ಬಿಸಿಯಾಗಿ ಸೇವಿಸಿದಾಗ ಕಟ್ಟಿರುವ ಕಫ ಮತ್ತು ಬಿಗಿದ ಎದೆಯೂ ಸಡಿಲವಾಗಿ ನಿರಾಳವಾಗಿ ಉಸಿರಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : Microwave Cooking: ಮೈಕ್ರೋವೇವ್‌ ಒವನ್‌ನಲ್ಲಿ ಅಡುಗೆ ಬೇಯಿಸುವುದು ಆರೋಗ್ಯಕ್ಕೆ ಮಾರಕವೇ?

ತೂಕ ಇಳಿಕೆ: ಹಸಿವು ನಿಯಂತ್ರಿಸಿ, ಚಯಾಪಚಯ ಕ್ರಿಯೆಯನ್ನು ಸರಾಗಗೊಳಿಸಿ, ದೇಹದ ತೂಕ ಇಳಿಸುವಲ್ಲಿ ಮಸಾಲೆ ಚಹಾ ಒಳ್ಳೆಯ ಫಲಿತಾಂಶ ನೀಡುತ್ತದೆ. ಗ್ರೀನ್‌ ಟೀ, ಹರ್ಬಲ್‌ ಟೀಗಳಿಗೆ ಕೆಲವು ಹನಿ ನಿಂಬೆ ರಸ ಬೆರೆಸುವುದು ಅಥವಾ ಶುಂಠಿ ಚಹಾಗಳು ಈ ನಿಟ್ಟಿನಲ್ಲಿ ಪರಿಣಾಮಕಾರಿ.

ರಕ್ತ ಪರಿಚಲನೆಗೆ ನೆರವು: ಚಳಿಗಾಲದಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾದಾಗ ರಕ್ತ ಪರಿಚಲನೆ ಉಳಿದ ಋತುಗಳಷ್ಟು ಸರಾಗ ಇಲ್ಲದೆ ಇರಬಹುದು. ಅಂಥ ಸಂದರ್ಭದಲ್ಲಿ ದಾಲ್ಚಿನ್ನಿ ಚಕ್ಕೆಯ ಚಹಾ ರಕ್ತದ ಪರಿಚಲನೆಗೆ ನೆರವಾಗುತ್ತದೆ.

ಪಚನಕಾರಿ: ಚಳಿಗಾಲದ ದಿನಗಳಲ್ಲಿ ಭೂರಿ ಭೋಜನ ಉಂಡರೆ, ಅರಗಿಸುವುದೇ ಸಮಸ್ಯೆ. ಇದರಿಂದ ಹೊಟ್ಟೆಯಲ್ಲಿ ನಾನಾ ರೀತಿಯ ಶಬ್ದಗಳು ಮೊದಲಾಗಿ, ಗ್ಯಾಸ್ಟ್ರಿಕ್‌ ಸಹ ತೊಂದರೆ ಕೊಡುತ್ತದೆ. ಇಂಥ ಹೊತ್ತಿನಲ್ಲಿ ಶುಂಠಿ, ಪುದೀನಾ, ಚಕ್ರಮೊಗ್ಗು ಮುಂತಾದವುಗಳ ಚಹಾ ಹೊಟ್ಟೆಯನ್ನು ನಿಶ್ಶಬ್ದವಾಗಿ ಇಡಬಲ್ಲದು.

Exit mobile version