ಮುಂಬಯಿಯಲ್ಲಿ ದಡಾರ ಸಾಂಕ್ರಾಮಿಕ (Measles Outbreak) ವ್ಯಾಪಿಸುತ್ತಿದ್ದು, ನವೆಂಬರ್ ೧೫ರವರೆಗೆ ಒಟ್ಟು ಏಳು ಮಕ್ಕಳು ಈ ಮಾರಿಗೆ ಬಲಿಯಾಗಿದ್ದರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಶಂಕಿತ ಪ್ರಕರಣಗಳು ವರದಿಯಾಗಿದ್ದು, ೧೪೨ ಪ್ರಕರಣಗಳು ಮಾತ್ರ ದಡಾರ (Measles) ಎಂದು ಖಾತ್ರಿಯಾಗಿದೆ. ಪುಟ್ಟ ಕಂದಮ್ಮಗಳಿಗೆ ಎಂಎಂಆರ್ ಚುಚ್ಚುಮದ್ದು (ಮಂಪ್ಸ್, ಮೀಸಲ್ಸ್, ರುಬೆಲ್ಲಾ) ನೀಡಲಾಗುತ್ತಿದೆಯಲ್ಲ. ಹಾಗಿದ್ದರೂ ದಡಾರ ಮತ್ತೇಕೆ ಕಾಣಿಸಿಕೊಂಡಿದೆ? ಇದರ ಲಕ್ಷಣಗಳೇನು? ಯಾಕಾಗಿ ಬರುತ್ತದೆ? ಬಂದರೇನು ಮಾಡಬೇಕು ಎಂಬ ಬಗ್ಗೆ ಒಂದಿಷ್ಟು ಮಾಹಿತಿಯಿದು.
ಶ್ವಾಸಕೋಶದ ಮೂಲಕ ಚರ್ಮಕ್ಕೆ ಹರಡುವ ರೋಗವಿದು ದಡಾರ. ಕೊರೊನಾದಂತೆ ಹಿಂದೊಮ್ಮೆ ವಿಶ್ವದೆಲ್ಲೆಡೆ ವ್ಯಾಪಿಸಿ ಲಕ್ಷಾಂತರ ಜೀವಗಳನ್ನು ಬಲಿಪಡೆದಿದ್ದ ಈ ವೈರಸ್, ಈಗಲೂ ಚಾಲ್ತಿಯಲ್ಲಿದೆ. ಆದರೆ ವ್ಯಾಕ್ಸಿನೇಷನ್ ಪ್ರಮಾಣ ಎಲ್ಲೆಡೆ ವ್ಯಾಪಕವಾಗಿರುವುದರಿಂದ ಸಾವಿನ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಆದಾಗ್ಯೂ ೨೦೧೭ರಲ್ಲಿ ವಿಶ್ವದೆಲ್ಲೆಡೆ ವ್ಯಾಪಿಸಿದ್ದ ದಡಾರ ಮತ್ತು ಅದರಿಂದ ಉಂಟಾದ ಸಮಸ್ಯೆಗಳಿಂದ ಒಂದು ಲಕ್ಷಕ್ಕೂ ಹೆಚ್ಚಿನ ಮಂದಿ (ಬಹುಪಾಲು ಮಕ್ಕಳು) ಜೀವ ತೆತ್ತಿದ್ದಾರೆ ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಲಕ್ಷಣಗಳೇನು?
ಚುಚ್ಚುಮದ್ದು ಇದ್ದರೂ ಇಷ್ಟೊಂದು ವ್ಯಾಪಕವಾಗಿರುವ ಈ ರೋಗದ ಕ್ಷಣಗಳನ್ನು ತಿಳಿಯುವುದು ಮುಖ್ಯ. ಜ್ವರ, ಒಣ ಕೆಮ್ಮು, ನೆಗಡಿ, ಗಂಟಲು ನೋವು, ಕಣ್ಣು ಕೆಂಪಾಗಿ ಊದಿಕೊಂಡು ನೀರು ಸೋರುವುದು, ಬಾಯಿಯೊಳಗೆ ಅಂದರೆ ಕೆನ್ನೆಯ ಒಳಭಾಗದಲ್ಲಿ ಚುಕ್ಕೆಗಳಂತೆ ಕಾಣಿಸಿಕೊಳ್ಳುತ್ತವೆ. ಮೈಮೇಲೆಲ್ಲಾ ದಡಸಲು ಗುಳ್ಳೆಗಳು ಕಂಡುಬರುತ್ತವೆ. ಇದು ತೀವ್ರಗೊಂಡರೆ ನ್ಯುಮೋನಿಯಾ, ಕಿವಿ ಸೋರುವುದು, ಕಿವುಡುತನ, ವಾಂತಿ-ಭೇದಿ ಆರಂಭವಾಗಬಹುದು. ಅತಿಕಡಿಮೆ ಪ್ರಕರಣಗಳಲ್ಲಿ ಮೆದುಳುಜ್ವರವೂ ಬರಬಹುದು.
ಏನು ಕಾರಣ?
ಪ್ಯಾರಮಿಕ್ಸೊ ವೈರಸ್ ಕುಟುಂಬಕ್ಕೆ ಸೇರಿದ ವೈರಾಣುವಿನಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಈ ವೈರಸ್‌ನ ಸಂಪರ್ಕಕ್ಕೆ ಬಂದ ೧೦-೧೪ ದಿನಗಳಲ್ಲಿ ಲಕ್ಷಣಗಳು ಗೋಚರಿಸುತ್ತವೆ. ಮೊದಲಿಗೆ ಮಕ್ಕಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ಉಪಟಳ ಈಗ ವಯಸ್ಕರಲ್ಲೂ ಕಾಣಿಸುತ್ತಿದೆ. ಕೆಮ್ಮು, ಸೀನು, ಜೊಲ್ಲು ಮುಂತಾದ ದೇಹದ್ರವಗಳ ಮೂಲಕ ಇದು ಇನ್ನೊಬ್ಬರಿಗೆ ಸರಾಗವಾಗಿ ಮತ್ತು ತ್ವರಿತವಾಗಿ ಹರಡುತ್ತದೆ. ಸೋಂಕಿತ ವ್ಯಕ್ತಿಯ ಜೊಲ್ಲಿನಂಥ ವಸ್ತು ತಾಗಿದ ಸ್ಥಳವನ್ನು ಆರೋಗ್ಯವಂತ ಮುಟ್ಟಿ, ತನ್ನ ಕೈಯನ್ನು ಕಣ್ಣು-ಮೂಗು-ಬಾಯಿಗೆ ಹಾಕಿದರೆ ಸೋಂಕು ಹರಡುತ್ತದೆ. ಸೋಂಕಿತನ ಹತ್ತಿರ ನಿಂತಾಗಲೂ, ಆತನ ಕೆಮ್ಮು-ಸೀನು ಇತ್ಯಾದಿಗಳ ಮೂಲಕ ಮತ್ತೊಬ್ಬರಿಗೆ ಹರಡಬಹುದು. ಹಾಗಾಗಿ ಶಾಲೆಯಲ್ಲಿ ಒಂದು ಮಗುವಿಗೆ ದಡಾರ ಬಂದರೆ ವಾಯುವೇಗದಲ್ಲಿ ಉಳಿದ ಮಕ್ಕಳಿಗೆ ಹರಡುತ್ತದೆ.
ತಡೆ ಹೇಗೆ?
ಎಲ್ಲಕ್ಕಿಂತ ಮೊದಲನೆಯದಾಗಿ, ಚಿಕ್ಕಮಕ್ಕಳಿಗೆ ಎಂಎಂಆರ್ ಚುಚ್ಚುಮದ್ದು ಕೊಡಿಸಲೇಬೇಕು. ಈ ಬಗ್ಗೆ ಮಕ್ಕಳ ತಜ್ಞರಲ್ಲಿ ಸಲಹೆ ಪಡೆಯುವುದು ಸೂಕ್ತ. ಶಾಲೆಗೆ ಹೋಗುವ ಮಗುವಿನಲ್ಲಿ ಈ ಸೋಂಕು ಕಾಣಿಸಿಕೊಂಡರೆ ಆ ಮಗುವನ್ನು ಮನೆಯ ಉಳಿದವರಿಂದ ಪ್ರತ್ಯೇಕಿಸುವುದು ಒಳ್ಳೆಯದು. ರೋಗದ ಲಕ್ಷಣಗಳು ತಗ್ಗುವುದಕ್ಕೆ ಮೂರು ವಾರಗಳವರೆಗೂ ಬೇಕಾಗುತ್ತದೆ. ಹಾಗಾಗಿ ಪೂರ್ಣ ಗುಣವಾಗುವವರೆಗೆ ಶಾಲೆಗಂತೂ ಕಳಿಸಲೇಕೂಡದು. ಇದರಿಂದ ಉಳಿದೆಲ್ಲಾ ಮಕ್ಕಳಿಗೆ ಹರಡುವ ಸಂಭವ ತಗ್ಗುತ್ತದೆ. ಕೋವಿಡ್ ಸಮಯದಲ್ಲಿ ಇದ್ದಂತೆಯೇ, ಆಗಾಗ ಕೈತೊಳೆದು ವೈಯಕ್ತಿಯ ಶುಚಿತ್ವದತ್ತ ಗಮನಹರಿಸಬೇಕು ಮತ್ತು ಸತ್ವಪೂರ್ಣ ಆಹಾರ ಸೇವಿಸಬೇಕು. ವಯಸ್ಕರಲ್ಲಿ ಈ ರೋಗ ಕಾಣಿಸಿಕೊಂಡರೆ, ಸ್ವಯಂವೈದ್ಯ ಸಲ್ಲದು. ವೈರಸ್‌ನಿಂದ ಹರಡುವ ರೋಗ ಇದಾದ್ದರಿಂದ ಆಂಟಿಬಯಾಟಿಕ್ ಔಷಧಗಳು ಹೆಚ್ಚಿನ ಪರಿಣಾಮ ಬೀರವು. ಹಾಗಾಗಿ ರೋಗ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಕಾಣಲೇಬೇಕು.
ಇದನ್ನೂ ಓದಿ | ವಿಸ್ತಾರ Explainer: ಭಾರತದ ಗೋಧಿಯನ್ನು ಟರ್ಕಿ ನಿರಾಕರಿಸಿದ್ದೇಕೆ? ದಡಾರ ಸೋಂಕು ಪತ್ತೆಯಾಯಿತೆ?