ಕೂದಲಿಗೆ ಬಣ್ಣ ಹಚ್ಚುವುದು ಈಗ ಟ್ರೆಂಡ್. ಅದೇ ಕೂದಲು, ಅದೇ ಸ್ಟೈಲ್‌ನಿಂದ ಬೇಸತ್ತರೆ, ಸಲೂನ್‌ಗೆ ಹೋಗಿ ತದ್ವಿರುದ್ಧವಾದ ಬಣ್ಣ ಹಚ್ಚಿ ಕಳೆಗುಂದಿದ ಮೂಡ್ ಸುಧಾರಿಸಿಕೊಂಡು, ಹೊಸ ಬದುಕೇ ಸಿಕ್ಕಂತೆ ಓಡಾಡುವುದು ಈಗಿನ ಮಂದಿಯ ಹವ್ಯಾಸ. ಸ್ವಲ್ಪ ದಿನಗಳ ನಂತರ ಹೊಸ ಹೇರ್ ಕಟ್ ಮಾಡಿಸಿಕೊಂಡು, ಇನ್ನೊಂದು ಬಣ್ಣ ಟ್ರೈ ಮಾಡಿ ಮತ್ತೆ ಹೊಸತನ ಕಂಡುಕೊಳ್ಳುವುದು, ನಾನಾ ಫೋಟೋಗಳಿಗೆ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಬದಲಾದ ಗೆಟಪ್ಪಿನ ಫೋಟೋ ಹಾಕಿ ಲೈಕೊತ್ತಿಸಿಕೊಂಡು ಖುಷಿಯಾಗಿರುವುದು ಇದ್ದದ್ದೇ. ಇವಿಷ್ಟೆಲ್ಲ ಟ್ರೆಂಡ್ ಇದ್ದರೂ ನೈಸರ್ಗಿಕ ಬಣ್ಣ ನೀಡುವ ಮದರಂಗಿ (ಮೆಹೆಂದಿ) ಮಾತ್ರ ತನ್ನ ಖದರನ್ನು ಎಂದಿಗೂ ಕಳೆದುಕೊಂಡಿಲ್ಲ.
ಈಗಲೂ ಬಹಳಷ್ಟು ಮಹಿಳೆಯರು, ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳನ್ನು ಉಪಯೋಗಿಸದೆ, ಮೆಹೆಂದಿಯನ್ನೇ ಬಳಸುತ್ತಿರುವುದು ವಿಶೇಷ. ಮೆಹೆಂದಿ ಒಂದೊಳ್ಳೆಯ ಹೇರ್ ಕಂಡೀಶನರ್. ನೂರಾರು ಬಗೆಯ ಕೃತಕ ಬಣ್ಣಗಳು ಮಾರುಕಟ್ಟೆಯಲ್ಲಿ ಇಂದು ಲಭ್ಯವಿದ್ದರೂ ಈ ಮೆಹೆಂದಿ ಮಾಡುವ ಕೆಲಸವನ್ನು ಅಷ್ಟು ಸುಲಭವಾಗಿ ನಿರ್ಲಕ್ಷಿಸುವಂತಿಲ್ಲ. ಇದು ಕೂದಲಿಗೆ ಬಣ್ಣವನ್ನು ನೀಡುವುದಲ್ಲದೆ ಹೊಳಪನ್ನೂ ನೀಡುತ್ತದೆ. ಕೂದಲ ಸಮಸ್ಯೆಗಳಿಗೂ ಇದು ಉತ್ತಮ ಟಾನಿಕ್. ಇದು ಕೂದಲ ಬುಡದಲ್ಲಿ ಸೆಬಂ ಉತ್ಪಾದನೆಯನ್ನು ಕಂಟ್ರೋಲ್ ಮಾಡುವುದಲ್ಲದೆ, ತಲೆಕೂದಲು ಉದುರುವುದು, ತಲೆಹೊಟ್ಟು, ಒಣಗಿದಂತಾಗುವುದು, ಹೊಳಪು ಕಳೆದುಕೊಳ್ಳುವುದು ಮತ್ತಿತರ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ಇತ್ತೀಚೆಗೆ ಬಹಳಷ್ಟು ಮಂದಿ ಮಹಿಳೆಯರು ಕೃತಕ ಬಣ್ಣಗಳ ಅಡ್ಡ ಪರಿಣಾಮಗಳನ್ನು ಅರಿಯುತ್ತಿದ್ದು, ಮತ್ತೆ ಹಳೆ ಕಾಲಕ್ಕೆ ಮರಳುವ ಆಸಕ್ತಿ ತೋರಿಸುತ್ತಿದ್ದಾರೆ. ಹಾಗಾದರೆ, ರಾಸಾಯನಿಕ/ಕೃತಕ ಬಣ್ಣಗಳು ಕೂದಲಿಗೆ ಏನು ಮಾಡುತ್ತವೆ ಎಂಬುದನ್ನೂ ಇಲ್ಲಿ ನೋಡೋಣ.
ಬ್ಲೀಚ್ ರಿಪ್‌ಗಳು ಹಾಗೂ ಕೃತಕ ಬಣ್ಣಗಳು ಬಹಳ ಕಾಲ ಕೂದಲಲ್ಲಿ ಉಳಿದುಬಿಡುವುದರಿಂದ ಇವುಗಳಿಂದಾಗುವ ಅಡ್ಡ ಪರಿಣಾಮ ದೊಡ್ಡದು. ಇದು ಮೈಗ್ರೇನ್‌ನಂಹ ತಲೆನೋವನ್ನೂ ತರುತ್ತವೆ.
ಇವುಗಳಲ್ಲಿರುವ ಗಾಢ ಪರಿಮಳ ಕೆಲವು ಮಂದಿಗೆ ಅಲರ್ಜಿ ಹಾಗೂ ತಲೆನೋವನ್ನೂ ತರುತ್ತದೆ. ಸುವಾಸನೆಗಳು ಇಷ್ಟವಾಗದ ಮಂದಿ ಇವುಗಳಿಂದ ದೂರ ಇರುವುದೇ ಒಳ್ಳೆಯದು.
ಸಾಮಾನ್ಯವಾಗಿ ಸಲೂನ್‌ನಲ್ಲಿ ಬಣ್ಣ ಹಾಕುವ ಪ್ರಕ್ರಿಯೆಯೇ ಸುದೀರ್ಘ. ಕೂದಲನ್ನು ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿ, ಬಣ್ಣ ಹಚ್ಚಿ ಫಾಯಿಲ್ ಒಳಗೆ ಬಂಧಿಸಿಟ್ಟು ಕೆಲಕಾಲ ಬಿಡುವ ಈ ಪ್ರಕ್ರಿಯೆಯಲ್ಲಿ ಕೂದಲಿನ ಬುಡದ ಮೇಲೆ ಭಾರ ಬೀಳುತ್ತದೆ.ಕೂದಲ ಬುಡ ಸಹಜವಾಗಿ ಎಳೆದಂತಾಗಿ ಹೆಚ್ಚಿನ ಒತ್ತಡದಿಂದಾಗಿ ಉದುರುವಿಕೆಯಂತ ಸಮಸ್ಯೆ ಹೆಚ್ಚಾಗುತ್ತದೆ. ಕೇವಲ ಕೂದ ಸಮಸ್ಯೆಗಳು ಮಾತ್ರವಲ್ಲ. ತಲೆತಲಾಂತರಗಳಿಂದ ಸೌಂದರ್ಯ ಚಿಕಿತ್ಸೆಯ ಭಾಗವಾಗಿ ಬಂದಂತಹ ಮೆಹೆಂದಿ ಇತರ ಸಂದರ್ಯ ಸಮಸ್ಯೆಗಳಿಗೂ ಉತ್ತಮ ಪರಿಹಾರ ನೀಡಿರುವುದಕ್ಕೆ ಉದಾಹರಣೆಗಳಿವೆ.
ಮೆಹೆಂದಿ ಅತ್ಯುತ್ತಮ ಕೂಲಿಂಗ್ ಏಜೆಂಟ್. ಬೇಸಗೆಯಲ್ಲಿ ಇದನ್ನು ತಲೆಗೆ ಹಚ್ಚುವುದರಿಂದ ದೇಹದ ಉಷ್ಣತೆ ಕಡಿಮೆ ಮಾಡಬಹುದು. ಹಿಂದಿನ ಕಾಲದಲ್ಲಿ ಮೆಹೆಂದಿಯನ್ನು ಕೈಗೆ ಹಾಗೂ ದೇಹಕ್ಕೆ ಹಚ್ಚಿಕೊಳ್ಳುವುದರ ಉದ್ದೇಶ ಇದ್ದದ್ದೂ ಅದುವೇ. ಉಷ್ಣತೆ ಹೆಚ್ಚಿ ಆಗುವ ತಲೆನೋವನ್ನು ಇದು ಕಡಿಮೆ ಮಾಡುತ್ತದೆ. ಆರ್ತೈಟಿಸ್‌ನಂತಹ ಕಾಯಿಲೆಗಳಿಗೂ ಮೆಹೆಂದಿ ಉತ್ತಮ ಪರಿಹಾರ ನೀಡುತ್ತದಲ್ಲದೆ, ಇದು ನೋವನ್ನು ಕಡಿಮೆಗೊಳಿಸುತ್ತದೆ. ಮೆಹೆಂದಿ ಹಲವು ಚರ್ಮರೋಗಗಳಿಗೂ ರಾಮಬಾಣವಾಗಿ ಕೆಲಸ ಮಾಡುತ್ತದೆ. ಉಗುರಿನ ಆರೋಗ್ಯಕ್ಕೂ ಮೆಹೆಂದಿ ಉತ್ತಮ. ಇದು ನೈಸರ್ಗಿಕ ನೇಲ್ ಪಾಲಿಶ್‌ನಂತೆ ಕೆಲಸ ಮಾಡುತ್ತದೆ. ಆಗಾಗ ಮುರಿಯುವ ಉಗುರು, ಸಿಪ್ಪೆ ಸುಲಿಯುವ ಉಗುರಿನ ತೊಂದರೆಗಳಿರುವವರಿಗೆ ಇದು ಉತ್ತಮ.
ಮೇಕಪ್‌ನಲ್ಲಿಯೂ ಮೆಹೆಂದಿ ಬಳಕೆ ಉತ್ತಮ. ತುಟಿಗಳಿಗೆ ರಂಗು ನೀಡುವಲ್ಲಿಯೂ ಮೆಹೆಂದಿ ಬಳಸುತ್ತಾರೆ. ಮೆಹೆಂದಿ ಇರುವ ಹಲವಾರು ಲಿಪ್‌ಸ್ಟಿಕ್‌ಗಳೂ ಮಾರುಕಟ್ಟೆಯಲ್ಲಿವೆ.
ಇದನ್ನೂ ಓದಿ: hair care: ಒದ್ದೆ ಕೂದಲು ತಂದೊಡ್ಡುವ ತೊಂದರೆಗಳು!