Site icon Vistara News

Memory Food: ಮಕ್ಕಳ ಜ್ಞಾಪಕ ಶಕ್ತಿ ಚುರುಕುಗೊಳಿಸಬೇಕೇ? ನಿಮ್ಮ ಮಕ್ಕಳಿಗೆ ಈ ಆಹಾರಗಳನ್ನು ಕೊಡಿ!

memory foods1

ಮಕ್ಕಳಿಗೆ ಬೆಳೆಯುವ ವಯಸ್ಸಿನಲ್ಲಿ ಪೂರಕವಾದ ಆಹಾರವನ್ನು ಹೆತ್ತವರಾಗಿ ಒದಗಿಸುವುದು (Parenting tips) ನಮ್ಮ ಕರ್ತವ್ಯ. ಅವರ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಆಹಾರಗಳನ್ನು ನಾವು ನೀಡಿದಲ್ಲಿ, ಅವರ ಆರೋಗ್ಯವಷ್ಟೇ ಅಲ್ಲ, ಬುದ್ಧಿವಂತಿಕೆ, ಜ್ಞಾಪಕಶಕ್ತಿ, ಕಲಿಕೆಯ ಆಸಕ್ತಿ ಸೇರಿದಂತೆ ಪ್ರತಿಯೊಂದೂ ಸಕಾರಾತ್ಮಕವಾಗಿ ವಿಕಾಸಗೊಂಡು ಉತ್ತಮ ಹಾದಿಯಲ್ಲಿ ಸಾಗುತ್ತದೆ. ಆರೋಗ್ಯಕರ ವಾತಾವರಣದ ಜೊತೆಗೆ ಅವರ ಮಿದುಳಿನ ಬೆಳವಣಿಗೆಗೆ ಅಗತ್ಯ ಆಹಾರವೂ (memory food for kids) ಮುಖ್ಯ. ಬನ್ನಿ, ಮಕ್ಕಳ ಜ್ಞಾಪಕ ಶಕ್ತಿ (memory power) ವೃದ್ಧಿಸಿ ಅವರ ಮಿದುಳಿನ ಬೆಳವಣಿಗೆಯನ್ನು ಪ್ರಚೋದಿಸುವ ಉತ್ತಮ ಆಹಾರಗಳಾವುವು ಎಂಬುದನು ನೋಡೋಣ.

1. ಬ್ರಾಹ್ಮಿ(ಒಂದೆಲಗ): ಬಹುತೇಕ ಎಲ್ಲರಿಗೂ ತಿಳಿದಿರುವ ಹಾಗೆ ಬ್ರಾಹ್ಮಿ ಅಥವಾ ಒಂದೆಲಗ ಬುದ್ಧಿಮತ್ತೆ ಹಾಗೂ ನೆನಪುನ ಶಕ್ತಿ ಹೆಚ್ಚು ಮಾಡಲು ಅತ್ಯುತ್ತಮ ಆಹಾರ. ಬ್ರಾಹ್ಮಿ ಎಲೆಗಳನ್ನು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮಕ್ಕಳಲ್ಲಿ ಸ್ಮರಣ ಶಕ್ತಿ ಹೆಚ್ಚುತ್ತದೆ ಎಂಬುದನ್ನು ಆಯುರ್ವೇದವೂ ಪುಷ್ಠೀಕರಿಸುತ್ತದೆ. ಪುರಾತನ ಕಾಲದಿಂದಲೂ ನಮ್ಮ ಹಿರಿಯರು ಇದನ್ನು ಬಳಸುತ್ತಲೂ ಬಂದಿದ್ದಾರೆ. ಯೋಚನಾಶಕ್ತಿಯನ್ನು ಚುರುಕುಗೊಳಿಸುವ, ಕಲಿಕೆಗೆ ಪ್ರೇರೇಪಿಸುವ ಮಿದುಳಿನಲ್ಲಿರುವ ರಾಸಾಯನಿಕಗಳ ಶಕ್ತಿಯನ್ನು ಇದು ಹೆಚ್ಚಿಸುತ್ತದೆ ಎಂದೂ ಅಧ್ಯಯನಗಳು ದೃಢಪಡಿಸಿವೆ.

2. ಕುಂಬಳಕಾಯಿ: ಕುಂಬಳಕಾಯಿ ಅಥವಾ ಕೂಷ್ಮಾಂಡ ಮಿದುಳಿನ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಮಕ್ಕಳಲ್ಲಿ ಬುದ್ಧಿಮತ್ತೆ ಹೆಚ್ಚಿಸಲು, ಸರಿಯಾಗಿ ಬೆಳೆಯದ ಮಿದುಳನ್ನು ಚುರುಕುಗೊಳಿಸಲು ಹಾಗೂ ಅಪಸ್ಮಾರದಂತಹ ತೊಂದರೆಗಳಿಗೂ ಇದು ನೆರವಾಗುತ್ತದೆ.

3. ಬ್ಲೂಬೆರಿ: ಬ್ಲೂಬೆರಿ ಹಣ್ಣುಗಳಲ್ಲಿ ಅತ್ಯಂತ ಹೆಚ್ಚು ಫ್ಲೇವನಾಯ್ಡ್‌ಗಳು ಇರುವುದರಿಂದ ಇದು ಜ್ಞಾಪಕಶಕ್ತಿಯ ಜೊತೆಗೆ ಅರಿವಿನ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ.

4. ಸಾಲ್ಮನ್:‌ ಸಾಲ್ಮನ್‌ನಲ್ಲಿರುವ ಒಮೆಗಾ ೩ ಫ್ಯಾಟಿ ಆಸಿಡ್‌ಗಳು ಮಿದುಳನ್ನು ಚುರುಕುಗೊಳಿಸಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.

5. ಮೊಟ್ಟೆ: ಮೊಟ್ಟೆಯಲ್ಲಿ ಚೋಲೈನ್‌ ಎಂಬ ಪೋಷಕಾಂಶ ಇದ್ದು, ಅದು ಸ್ಮರಣ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹಾಗಾಗಿ ಮಕ್ಕಳಿಗೆ ಮೊಟ್ಟೆ ಒಳ್ಳೆಯದು.

6 ವಾಲ್ನಟ್‌: ವಾಲ್ನಟ್‌ನಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್‌ ಹಾಗೂ ಡಿಎಚ್‌ಎ ಧಾರಾಳವಾಗಿ ಇರುವುದರಿಂದ ಇದು ಮಿದುಳಿನ ಆರೋಗ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.

7. ಬಸಳೆ: ಬಸಳೆಯಲ್ಲಿ ಸಾಕಷ್ಟು ಪೋಷಕಾಂಶಗಳೂ, ವಿಟಮಿನ್ಗಳೂ, ಖನಿಜಾಂಶಗಳೂ ಇರುವುದರಿಂದ ಇವು ಒಟ್ಟಾರೆಯಾಗಿ ಮಿದುಳಿನ ಆರೋಗ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.

8. ಬ್ರೊಕೋಲಿ: ಬ್ರೊಕೋಲಿಯಲ್ಲಿ ಸಾಕಷ್ಟು ಪೋಷಕಾಂಶಗಳೂ, ಖನಿಜಾಂಶಗಳೂ ಸಮೃದ್ಧವಾಗಿದ್ದು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಪೂರಕವಾಗಿದೆ.

9. ಅರಿಶಿನ: ಅರಿಶಿನ ಆರೋಗ್ಯಕ್ಕೆ ನೀಡುವ ಕಾಣಿಕೆ ಎಲ್ಲರಿಗೂ ತಿಳಿದ ವಿಚಾರವೇ ಆದರೂ, ಇದರಿಂದ ಮಿದುಳಿನ ಆರೋಗ್ಯದ ಲಾಭಗಳು ತಿಳಿದಿರುವ ಮಂದಿ ಕಡಿಮೆ. ಅರಿಶಿನವನ್ನು ಆಹಾರದಲ್ಲಿ ಬಳಸುವುದರಿಂದ ಮಿದುಳು ಚುರುಕಾಗಿ ಕಲಿಕೆಯ ಆಸಕ್ತಿ, ಗತಿ ವೃದ್ಧಿಯಾಗುತ್ತದೆ.

ಇದನ್ನೂ ಓದಿ: Parenting Tips: ಮಿತಿ ಮೀರುವ ಮಕ್ಕಳ ಕೋಪ ನಿಯಂತ್ರಣಕ್ಕೆ ಐದು ಐಡಿಯಾಗಳು!

10. ಅವಕಾಡೋ (ಬೆಣ್ಣೆಹಣ್ಣು): ಬೆಣ್ಣೆಹಣ್ಣು ಮಿದುಳಿನ ರಕ್ತಪೂರಣವನ್ನು ಚುರುಕುಗೊಳಿಸಿ ಆರೋಗ್ಯ ವೃದ್ಧಿ ಮಾಡುತ್ತದೆ.

11. ಮೊಸರು: ಮೊಸರು ಮಜ್ಜಿಗೆ ಸೇರಿದಂತೆ ಪ್ರೊಬಯಾಟಿಕ್‌ ಆಹಾರವನ್ನು ಮಕ್ಕಳು ಸೇವಿಸುವುದರಿಂದ ಅವರ ಚಯಾಪಚಯ ಕ್ರಿಯೆ ಸರಿಯಾಗಿ ಆಗಿ, ಅವರ ಸರ್ವತೋಮುಖ ಬೆಳವಣಿಗೆ ಆಗುತ್ತದೆ. ಅರಿವಿನ ಶಕ್ತಿ ಹೆಚ್ಚುತ್ತದೆ.

12. ಸಿಟ್ರಸ್‌ ಹಣ್ಣುಗಳು: ಕಿತ್ತಳೆ, ಮುಸಂಬಿ ಸೇರಿದಂತೆ ಸಿಟ್ರಸ್‌ ಹಣ್ಣುಗಳಲ್ಲಿ ಸಿ ವಿಟಮಿನ್‌ ಹೆಚ್ಚಿರುವುದರಿಂದ ಇವುಗಳ ಸೇವನೆಯೂ ಕೂಡಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಇವೆಲ್ಲವುಗಳ ಜೊತೆಜೊತೆಗೆ ಧಾನ್ಯಗಳು, ಬೇಳೆಕಾಳುಗಳು, ಒಣಬೀಜಗಳು ಹಾಗೂ ಹಣ್ಣುಗಳ ಉಪಯೋಗ ಕೂಡಾ ಒಳ್ಳೆಯದು. ಜಂಕ್‌ ಅಥವಾ ಅನಾರೋಗ್ಯಕರ ಹಾಗೂ ಸಂಸ್ಕರಿಸಿದ ಆಹಾರಗಳನ್ನು ದೂರವಿಟ್ಟು ಸಹಜ ಆಹಾರದತ್ತ ಮುಖ ಮಾಡಿದರೆ, ತಾನೇತಾನಾಗಿ ಮಕ್ಕಳ ಆರೋಗ್ಯ ಮಾತ್ರವಲ್ಲ, ಕಲಿಕೆಯ ಮಟ್ಟವೂ ಏರುಗತಿಯಲ್ಲಿ ಸಾಗುತ್ತದೆ ಎಂಬುದನ್ನು ನೆನಪಿಡಿ!

ಇದನ್ನೂ ಓದಿ: Parenting Tips: ಟೀನೇಜ್‌ ಮಕ್ಕಳ ಹೆತ್ತವರಾಗಿ ನೀವು ನೆನಪಿಟ್ಟುಕೊಳ್ಳಬೇಕಾದ 12 ಸೂತ್ರಗಳು!

Exit mobile version