Site icon Vistara News

Mental Health: ನಿಮ್ಮ ಪ್ರೀತಿಪಾತ್ರರು ಮಾನಸಿಕವಾಗಿ ಕುಗ್ಗಿದಾಗ ಜೊತೆಯಾಗಿರುವುದೆಂದರೆ ಹೀಗೆ!

mental care

ದೈಹಿಕ ಆರೋಗ್ಯಕ್ಕೆ ಕೊಡುವಷ್ಟು ಕಾಳಜಿ ಈ ಸಮಾಜ ಮಾನಸಿಕ ಆರೋಗ್ಯಕ್ಕೆ ನೀಡುವುದಿಲ್ಲ. ಕಾಯಿಲೆ ಎಷ್ಟೇ ದೊಡ್ಡದಿರಲಿ, ದೈಹಿಕವಾಗಿದ್ದರೆ ನಮ್ಮ ಜೊತೆ ನಿಲ್ಲುವ ಮಂದಿ ಇರುತ್ತಾರೆ. ಆದರೆ, ಮಾನಸಿಕವಾಗಿದ್ದರೆ, ಸುತ್ತ ಯಾರೂ ಇರುವುದಿಲ್ಲ. ಮಾನಸಿಕ ಕಾಯಿಲೆಯನ್ನು ಅದರ ತೀವ್ರತೆಯನ್ನು, ಅದಕ್ಕೆ ಬೇಕಾಗಿರುವ ಕಾಳಜಿಯನ್ನು ಅರ್ಥ ಮಾಡಿಕೊಂಡು ಸಹಾಯಕ್ಕೆ, ಬೆಂಬಲಕ್ಕೆ ನಿಲ್ಲುವವರು ಬಹಳ ಕಡಿಮೆ. ಅದರ ಅಗತ್ಯದ ಬಗ್ಗೆ ತಿಳುವಳಿಕೆಯೂ ಕಡಿಮೆ. ಖಿನ್ನತೆ, ಒತ್ತಡದಂತಹ ಸಾಮಾನ್ಯ ಮಾನಸಿಕ ಸಮಸ್ಯೆಗಳಿಂದು ಹೆಚ್ಚಾಗುತ್ತಿರುವ ಕಾಲದಲ್ಲಿ, ನಮ್ಮ ಜೊತೆಗಿರುವ, ಕುಟುಂಬದ, ಸ್ನೇಹಿತ ವರ್ಗದ, ಆತ್ಮೀಯರ ಸಹಾಯಕ್ಕೆ ನಾವು ಹೇಗೆ ನಿಲ್ಲಬಹುದು ಹಾಗೂ ಎಂತಹ ಕಾಳಜಿ ಅವರಿಗೆ ಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಇಂದು ಬಹಳ ಅಗತ್ಯವಾಗಿದೆ.

ಪ್ರತಿಯೊಬ್ಬರೂ ಜೀವನದಲ್ಲಿ ಹಂಬಲಿಸುವುದು ನಮ್ಮ ಜೊತೆಗಿರುವವರು ನಮಗೆ ಒಂದು ಹಿಡಿ ಕಾಳಜಿ, ಪ್ರೀತಿ ತೋರಲಿ ಎಂದು. ಆದರೆ, ಮಾನಸಿಕವಾಗಿ ಕೆಳಗಿಳಿದಾಗ ನಿಜವಾಗಿ ಸಮಾಧಾನ ಮಾಡುವ ಜೀವ ಹತ್ತಿರ ಇರುವುದು ಕಡಿಮೆ. ತೊಂದರೆಯಲ್ಲಿದ್ದಾಗ, ಮಾನಸಿಕವಾಗಿ ನೊಂದಿದ್ದಾಗ ನಮ್ಮ ಜೊತೆ ಇರುವವರೇ ನಿಜವಾಗಿಯೂ ಹತ್ತಿರದವರು ಎಂಬ ಮಾತಿದೆ. ಎಷ್ಟೇ ಹತ್ತಿರವಿದ್ದರೂ ಮಾನಸಿಕವಾಗಿ ನೊಂದಿದ್ದಾಗ ಸಮಾಧಾನ ಹೇಳುವುದು, ಜೊತೆಗಿರುವುದು ಎಲ್ಲವೂ ಸವಾಲಿನ ಕೆಲಸವೇ ಸರಿ. ಬಹಳಷ್ಟು ಮಂದಿ ಹತ್ತಿರವಿದ್ದರೂ ಹಂಚಿಕೊಳ್ಳಬಯಸುವುದಿಲ್ಲ. ಹಾಗಾದರೆ ಇಂಥ ಸಮಯದಲ್ಲಿ ಏನು ಮಾಡುವುದರಿಂದ ನಾವು ನಮ್ಮ ಪ್ರೀತಿಪಾತ್ರರಿಗೆ ಆಸರೆಯಾಗಬಹುದು ಎಂಬುದರ ಅರಿವು ಅತ್ಯಂತ ಅಗತ್ಯ.

೧. ಇಬ್ಬರಿಗೂ ಕಂಫರ್ಟ್‌ ಅನಿಸುವ ಜಾಗವೊಂದನ್ನು ಆಯ್ಕೆ ಮಾಡಿಕೊಂಡು, ಸೂಕ್ತ ಸಂದರ್ಭ ನೋಡಿಕೊಂಡು ಅಂಥವರನ್ನು ಒಬ್ಬರೇ ಮಾತಿಗೆಳೆಯಬೇಕು. ಒಂದಿಷ್ಟು ಮಂದಿ ಜೊತೆಯಾಗಿರುವುದಕ್ಕಿಂತಲೂ ಒಬ್ಬರೇ ಇದ್ದಾಗ ಮನಸ್ಸು ಬಿಚ್ಚಿ ಮಾತನಾಡುವುದು ಹೆಚ್ಚು. ಮಾನಸಿಕವಾಗಿ ಜರ್ಝರಿತರಾದ ಮಂದಿಗೆ ಎಲ್ಲ ರೀತಿಯ ಕಂಫರ್ಟ್‌ ನೀಡಿ, ಅವರು ಮನಸ್ಸು ಬಿಚ್ಚಿ ಹಗುರಾಗಲು ಅವಕಾಶ ನೀಡಬೇಕು. ಅವಸರ ಮಾಡಬಾರದು. ನಿಧಾನವಾಗಿ ಅವರಾಗಿಯೇ ಅವರ ಸಮಯ ತೆಗೆದುಕೊಂಡು ಹೇಳಲು ಕಾಯಬೇಕು. ಅವಸರ ಇಲ್ಲಿ ಸಹಾಯ ಮಾಡುವುದಿಲ್ಲ. ತಾಳ್ಮೆ ಬಹಳ ಮುಖ್ಯ ಎಂದು ನೆನಪಿಡಿ.

೨. ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡುವಾಗ ನೇರ ಪ್ರಶ್ನೆಗಳನ್ನೇ ಕೇಳುವುದು ಒಳ್ಳೆಯದು. ಯಾಕೆಂದರೆ, ಸರಿಯಾದ ಮಾಹಿತಿಗಳು ಇಂಥ ಸಂದರ್ಭವೇ ಹೊರಬರುತ್ತದೆ. ಆದರೆ, ನೇರ ಪ್ರಶ್ನೆಗಳನ್ನು ಕೇಳುವಂಥ ವಾತಾವರಣವನ್ನು ರೆಡಿ ಮಾಡಿದ ಮೇಲೆಯೇ ಕೇಳಿ. ಮೊದಲೇ ಅಸಂಬದ್ಧ ಪ್ರಶ್ನೆ ಕೇಳುವುದು ಇಡೀ ಪರಿಸ್ಥಿತಿಯನ್ನೇ ಬಿಗಡಾಯಿಸಬಹುದು.

ಇದನ್ನೂ ಓದಿ: Mental Health | ಒತ್ತಡ ಹೆಚ್ಚಿದೆಯೇ? ಇವು ನೆರವಾಗಬಹುದು!

೩. ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ. ನೀವು ಸಮಸ್ಯೆಯನ್ನು ನೋಡುವ ದೃಷ್ಟಿಕೋನವನ್ನೂ ಅವರಿಗೆ ವಿವರಿಸಬಹುದು. ಆದರೆ ಅದೆಲ್ಲೂ ಅವರ ಯೋಚನೆಗಳಿಗೆ, ಅವರ ಭಾವನೆಗಳಿಗೆ ಧಕ್ಕೆಯಾಗದಂತೆ, ಅವರ ಆಲೋಚನೆಗಳಿಗೆ ಘಾಸಿಯಾಗದಂತೆ ವ್ಯವಹರಿಸಿ. ಈ ಸಂದರ್ಭ ಅತ್ಯಂತ ಸೂಕ್ಷ್ಮವಾಗಿರುವುದರಿಂದ ಅವರಿಗೆ ಸಮಾಧಾನ ಹೇಳುವುದು ನಿಮ್ಮ ಮುಖ್ಯ ಉದ್ದೇಶವಾಗಿರಬೇಕು.

೪. ಮುಖ್ಯವಾಗಿ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಇಲ್ಲಿ ಬೇಕಾಗಿಲ್ಲ ಎಂಬುದನ್ನು ಗಮನದಲ್ಲಿಡಬೇಕು. ಇಲ್ಲಿ ನಿಮ್ಮ ಉಪಸ್ಥಿತಿ, ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಜೊತೆಗಿರುವ ವ್ಯಕ್ತಿಯಷ್ಟೇ ಅಗತ್ಯ ಎಂಬುದನ್ನು ಮನಗಾಣಬೇಕು. ಸಮಸ್ಯೆಯನ್ನು ನಾನು ಪರಿಹರಿಸುತ್ತೇನೆ ಎನ್ನುವುದಕ್ಕಿಂತ ಸಮಸ್ಯೆಗೆ ಜೊತೆಗಿದ್ದು, ಅವರಿಗೆ ಹೆಗಲು ಕೊಡುವುದು ಅತ್ಯಂತ ಮುಖ್ಯ. ಇದು ಬೆಣ್ಣೆಯಿಂದ ಕೂದಲು ತೆಗೆದಂತೆ. ಇಲ್ಲಿ ಅವರಿಗೆ ಮಾನಸಿಕವಾಗಿ ವೈದ್ಯರ ಆಥವಾ ಕೌನ್ಸೆಲಿಂಗ್‌ನ ಅಗತ್ಯವಿದೆ ಎಂದು ನಿಮಗೆ ಅನಿಸಿದರೆ, ಅದಕ್ಕೂ ಒಪ್ಪಿಸುವುದು, ಅದಕ್ಕೆ ಬೇಕಾದ ಸಹಾಯ ಮಾಡುವುದನ್ನೂ ಮರೆಯಬೇಡಿ. ಯಾಕೆಂದರೆ, ಮಾನಸಿಕವಾಗಿ ವೈದ್ಯರ ನೆರವು ಬೇಕಾದಾಗ, ಅವರಿಗೂ ಅದರ ಅರಿವಿರುವುದಿಲ್ಲ ಎಂಬುದನ್ನು ನೆನಪಿಡಿ. ಅದಕ್ಕೆ ಮತ್ತೊಬ್ಬರ ಸಹಾಯ, ಉಪಸ್ಥಿತಿ ಇಲ್ಲಿ ಮುಖ್ಯ. ಪರಿಸ್ಥಿತಿಯನ್ನು ಜಾಣ್ಮೆಯಿಂದ ಅಷ್ಟೇ ತಾಳ್ಮೆಯಿಂದ ನಿಭಾಯಿಸುವುದಷ್ಟೇ ಇಲ್ಲಿ ಬಹು ಮುಖ್ಯ.

ಇದನ್ನೂ ಓದಿ: Mental Health | ಹೊಸ ವರ್ಷದಲ್ಲಿ ಮಾನಸಿಕ ಆರೋಗ್ಯ ಸದೃಢವಾಗಿರಬೇಕೆ?

Exit mobile version