ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಶೋನಲ್ಲಿ ಥೀಮ್ ಕುರಿತಂತೆ ಶೋ ಮಾಡುವುದು ಗೊತ್ತು! ಕೆಲವು ಬಾರಿ ಆಯಾ ಡಿಸೈನರ್ ಹಾಗೂ ಶೋ ಡೈರೆಕ್ಟರ್‌ಗಳ ಅಭಿಲಾಷೆಗೆ ತಕ್ಕಂತೆ ಇಡೀ ಶೋವನ್ನು ನಿರೂಪಿಸುವುದು ಗೊತ್ತು! ಆದರೆ, ಒಂದು ಬೆಕ್ಕಿಗೆ ಗೌರವ ಸಲ್ಲಿಸಲು ಶೋನಲ್ಲಿ ಕ್ಯಾಟ್ ಕಾಸ್ಟ್ಯೂಮ್‌ನಲ್ಲಿ ಕಾಣಿಸಿಕೊಂಡು ಪ್ರೀತಿ ವ್ಯಕ್ತಪಡಿಸುವುದು ಗೊತ್ತೇ! ಈಗಾಗಲೇ ಈ ಸುದ್ದಿ ಒಂದೆರೆಡು ದಿನಗಳಿಂದ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ! ಹೌದು. ಖ್ಯಾತ ರ‍್ಯಾಪರ್ ಹಾಗೂ ಸಿಂಗರ್ ಡೋಜಾ ಕ್ಯಾಟ್ ಅಂತರಾಷ್ಟ್ರೀಯ ಮಟ್ಟದ ಮೆಟ್ ಗಾಲದಲ್ಲಿ ಖ್ಯಾತ ಡಿಸೈನರ್‌ರೊಬ್ಬರ ಟ್ರೈಬ್ಯೂಟ್‌ಗಾಗಿ ಆಯೋಜಿಸಿದ್ದ ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ (Metgala Fahion), ಡಿಸೈನರ್ ಸಾಕಿದ್ದ ಬೆಕ್ಕಿನ ಕಾಸ್ಟ್ಯೂಮ್ ಧರಿಸಿ, ಬೆಕ್ಕಿನಂತೆ ಕಾಣಿಸಿಕೊಂಡು ರ‍್ಯಾಂಪ್ ವಾಕ್ ಮಾಡಿದ್ದು, ಮಿಯಾಂ ಎಂದು ಪೋಸ್ ನೀಡಿದ್ದು ಎಲ್ಲವೂ ಇದೀಗ ಫ್ಯಾಷನ್ ಲೋಕದ ಸದ್ಯದ ಹಾಟ್ ಸುದ್ದಿಗಳಲ್ಲೊಂದಾಗಿದೆ.
ಇಂದಿನ ಜನರೇಷನ್‌ನ ಫ್ಯಾಷನ್ ಲೋಕದಲ್ಲಿ ಏನೆಲ್ಲಾ ನೋಡಬಹುದು ಎಂಬುದಕ್ಕೆ ಈ ಶೋನಲ್ಲಿ ಡೋಜಾ ಕ್ಯಾಟ್ ಧರಿಸಿದ ಕ್ಯಾಟ್ ಔಟ್‌ಫಿಟ್ ಒಂದು ಪಕ್ಕಾ ಉದಾಹರಣೆಯಾಗಿತ್ತು. ಅದೇನೋ ಸರಿ, ಬೆಕ್ಕಿನ ಉಡುಪಿಗೆ ಯಾಕಿಷ್ಟು ಪ್ರಾಮುಖ್ಯತೆ ? ಎಂದು ಕೊಳ್ಳುತ್ತಿದ್ದೀರಾ! ಅದಕ್ಕೂ ಒಂದು ಕಥೆಯಿದೆ. ಈ ಬಗ್ಗೆ ಫ್ಯಾಷನ್ ವಿಮರ್ಶಕರು ವಿವರಿಸಿದ್ದಾರೆ.
ಒಂದು ಮಾಡೆಲ್ ಬೆಕ್ಕಿನ ಕಥೆ
ಖ್ಯಾತ ಜರ್ಮನ್ ಡಿಸೈನರ್ ಹಾಗೂ ಫ್ರೆಂಚ್ ಫ್ಯಾಷನ್ ಹೌಸ್ ಚಾನೆಲ್‌ನ ಕ್ರಿಯೇಟಿವ್ ಡೈರೆಕ್ಟರ್ ದಿವಂಗತ ಕಾರ್ಲ್ ಲಾಗರ್‌ಫೆಲ್ಡ್ ಅವರ ಬಳಿ ಬೆಕ್ಕು ಒಂದಿತ್ತು. ಅದು ಅವರ ಫೇವರಿಟ್‌ಪೆಟ್ ಮಾತ್ರವಲ್ಲ, ಬದಲಿಗೆ ಮಾಡೆಲ್ ಕೂಡ ಆಗಿತ್ತು. ಈ ಬೆಕ್ಕಿಗೆ ಮಾಡೆಲಿಂಗ್‌ನಲ್ಲೂ ಬ್ಯುಝಿಯಾಗಿಸಿದ್ದರು. ಸಾಕಷ್ಟು ಜಾಹೀರಾತು ಹಾಗೂ ಫ್ಯಾಷನ್ ಕುರಿತ ಫೋಟೊಶೂಟ್‌ಗಳಲ್ಲೂ ಕಾಣಿಸಿಕೊಂಡಿತ್ತು. ಆ ಮಟ್ಟಿಗೆ ಈ ಬೆಕ್ಕು ಖ್ಯಾತಿ ಗಳಿಸಿತ್ತು. ಅಲ್ಲದೇ, ಡಿಸೈನರ್ ಲಾಗರ್‌ಫೆಲ್ಡ್ ಅವರಿಗೆ ಅಚ್ಚುಮೆಚ್ಚಾಗಿತ್ತು. ಸಾಮಾನ್ಯ ಮಾಡೆಲ್ ಬಳಿಯಿದ್ದ ಈ ಬೆಕ್ಕು ಲಾಗರ್ ಅವರ ಮನೆ ಸೇರಿದ ನಂತರ ಇದರ ಭವಿಷ್ಯವೇ ಬದಲಾಗಿತ್ತು. ಸೆಲೆಬ್ರೆಟಿ ಬೆಕ್ಕಿನ ಸ್ಥಾನ ಮಾನ ಪಡೆದಿತ್ತು, ಅಷ್ಟು ಮಾತ್ರವಲ್ಲ, ಸೋಷಿಯಲ್ ಮೀಡಿಯಾದಲ್ಲೂ ಪಾಪ್ಯುಲರ್ ಆಗಿತ್ತು ಎನ್ನುತ್ತಾರೆ ಫ್ಯಾಷನ್ ವಿಮಶಕರು.
ಲಾಗರ್ ಅವರ ನಿಧನದ ನಂತರ ಅವರಿಗೆ ಗೌರವ ಸಲ್ಲಿಸಲು ಅವರ ಫೇವರಿಟ್ ಸಂಗತಿಯನ್ನೇ ಥೀಮ್ ಆಗಿ ರೂಪಿಸಿ, ಶೋ ನಡೆಸುವುದು ರಿವಾಜಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಕಾಲ್ ಲಾಗರ್‌ಫೆಲ್ಡ್ ಎ ಲೈನ್ ಆಫ್ ಬ್ಯೂಟಿ ಹೆಸರಲ್ಲಿ ಅವರಿಗೆ ಗೌರವ ಸಲ್ಲಿಸಲು ಥೀಮ್ ಮಾಡಿ ಶೋ ನಡೆಸಲಾಯಿತು. ಸಾಕಷ್ಟು ಕಾಸ್ಟ್ಯೂಮ್‌ಗಳ ಪ್ರದಶನ ನಡೆದರೂ ಕೂಡ ಡೋಜಾ ಕ್ಯಾಟ್ ಧರಿಸಿದ್ದ ಕ್ಯಾಟ್ ಔಟ್‌ಫಿಟ್ ಮಾತ್ರ ಎಲ್ಲರ ಗಮನ ಸೆಳೆಯುವುದರೊಂದಿಗೆ ಜಗತ್ತಿನಾದ್ಯಂತ ಸುದ್ದಿಯಾಯಿತು. ಜೊತೆಗೆ ಫ್ಯಾಷನ್ ಶೋ ಕೇವಲ ಮಾಡೆಲ್‌ಗಳಿಗೆ ಮಾತ್ರವಲ್ಲ, ಪೆಟ್ ಅನಿಮಲ್‌ಗಳಿಗೂ ಗೌರವ ಸೂಚಿಸಲು ನಡೆಸಬಹುದು ಎಂಬುದನ್ನು ಸಾರಿ ಸಾರಿ ಹೇಳಿತು. ಪೆಟ್ ಪ್ರಿಯರನ್ನು ಸೆಳೆಯಿತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಯಾರಿದು ಡೋಜಾ ಕ್ಯಾಟ್ ?
ಅಂದ ಹಾಗೆ, ಡೋಜಾ ಕ್ಯಾಟ್, ಖ್ಯಾತ ಅಮೆರಿಕನ್ ರ‍್ಯಾಪರ್ ಹಾಗೂ ಸಿಂಗರ್. ಇವರ ಮೂಲ ಹೆಸರು ಆಮ್ಲಾ ರತ್ನ ಜ್ಯಾಂಡೆಲ್ ಡ್ಲಾಮಿನಿ. ಅಚ್ಚರಿಯ ವಿಚಾರವೆಂದರೇ, ಡೋಜಾ ಕ್ಯಾಟ್ ಕ್ಯಾಲಿಫೋರ್ನಿಯಾ ಭಾರತೀಯ ಮೂಲದ ಆಶ್ರಮದಲ್ಲಿ ಕೆಲಕಾಲ ಕಳೆದಿದ್ದರಂತೆ. ಆಗ ಕ್ಲಾಸಿಕಲ್ ಮ್ಯೂಸಿಕ್ ಮಾತ್ರವಲ್ಲ, ಭರತನಾಟ್ಯಂ ಕೂಡ ಅಭ್ಯಾಸ ಮಾಡಿದ್ದರಂತೆ. ಹಾಗೆಂದು ಅವರು ಭಾರತೀಯರೇನಲ್ಲ! ತಮ್ಮದೇ ಆದ ಆಲ್ಬಂ ಮೂಲಕ ಜಗತ್ತಿನಾದ್ಯಂತ ಹೆಸರು ಮಾಡಿದ್ದಾರೆ ಕೂಡ.
ಇದೀಗ ಕಾಲ್ ಲೆಗರ್‌ಫೆಲ್ಡ್ ಅವರ ಫೇವರಿಟ್ ಕ್ಯಾಟ್ ಚೌಪೆಟ್ಟೆ ಥೀಮ್ ಲುಕ್‌ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಕೇವಲ ಬೆಕ್ಕಿನಂತೆ ಕಾಣಿಸಿಕೊಳ್ಳುವುದಿರಲಿ, ಅದರಂತೆ ಕಾಣಲು ಅಗತ್ಯವಿರುವ ಶೇಪ್ ನೀಡುವ ಪ್ರೊಸ್ಥೆಟಿಕ್ಸ್ ಕೂಡ ಹಾಕಿದ್ದಾರೆ. ಮಿಯಾಂ ಎಂದು ಪೆಟ್ ಪ್ರಿಯರ ಗಮನ ಸೆಳೆದಿದ್ದಾರೆ. ಇನ್ನು, ಈ ಮೆಟ್‌ಗಾಲಾವನ್ನು ನಟ, ನಿಮಾಪಕ ಹಾಗೂ ಲೇಖಕ ಲಾಲಾ ಅಂತೋನಿ ಹಮ್ಮಿಕೊಂಡಿದ್ದರು. ಪೆನೆಪಲೊಪ್ ಕ್ರೂಝ್, ಕಾರ್ಲೈ ಕ್ಲೊಸ್, ಜೆನ್ನಿ, ಅಲಿಯಾ ಭಟ್ ಸೇರಿದಂತೆ ಖ್ಯಾತನಾಮರು ತಮ್ಮ ವಿವಿಧ ಔಟ್‌ಫಿಟ್‌ಗಳಿಂದ ನೋಡುಗರನ್ನು ಸೆಳೆದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)