ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಯೂಟಿ ಟ್ರೆಂಡ್‌ನಲ್ಲಿ ಇದೀಗ ಮಿನಿ ಲಿಪ್‌ಸ್ಟಿಕ್‌ಗಳದ್ದೇ ಕಾರುಬಾರು. ಹೌದು. ಈ ಚೋಟಾ ಲಿಪ್‌ಸ್ಟಿಕ್‌ಗಳು (Mini Lipstick Trend) ಜೆನ್ ಜಿ ಹುಡುಗಿಯರನ್ನು ಮಾತ್ರವಲ್ಲ, ಲಿಪ್‌ಸ್ಟಿಕ್ ಪ್ರೇಮಿಗಳ ಪರ್ಸ್‌ಗೆ ಸೇರಿವೆ. ಔಟಿಂಗ್ ಹಾಗೂ ಟ್ರಾವೆಲಿಂಗ್ ಮಾಡುವಾಗ ಅತಿ ಸುಲಭವಾಗಿ ಬಳಸಬಹುದಾದ ಮಿನಿ ಲಿಪ್‌ಸ್ಟಿಕ್‌ಗಳು ಇದೀಗ ಯುವತಿಯರ ನೆಚ್ಚಿನ ಕಾಸ್ಮೆಟಿಕ್ ಲಿಸ್ಟ್‌ನಲ್ಲಿವೆ. ನೋಡಲು ಕ್ಯೂಟಾಗಿ, ಪುಟ್ಟ ಲಿಪ್‌ಸ್ಟಿಕ್‌ನಂತೆ ಕಾಣುವ ಈ ಚೋಟಾ ಲಿಪ್‌ಸ್ಟಿಕ್‌ಗಳು ಇದೀಗ ಬೇಡಿಕೆ ಹೆಚ್ಚಿಸಿಕೊಂಡಿವೆ.
ಏನಿದು ಮಿನಿ ಲಿಪ್ ಸ್ಟಿಕ್ಸ್
ಸಾಮಾನ್ಯವಾಗಿ ಎಲ್ಲಾ ಬ್ರಾಂಡ್‌ಗಳಲ್ಲೂ ಲಿಪ್‌ಸ್ಟಿಕ್‌ಗಳು ಒಂದೇ ಸ್ಟಾಂಡರ್ಡ್ ಸೈಝ್‌ನಲ್ಲಿ ಬರುತ್ತವೆ. ಆದರೆ, ಇದರ ಅರ್ಧದ ಸೈಝಿಗೆ ಬಿಡುಗಡೆಯಾಗಿರುವ ಲಿಪ್‌ಸ್ಟಿಕ್‌ಗಳೇ ಇವು. ಬೇಬಿ ಲಿಪ್‌ಸ್ಟಿಕ್ಸ್ ಎಂದೂ ಕೂಡ ಕರೆಯಲಾಗುತ್ತದೆ. ನೋಡಲು ಕ್ಯೂಟಾಗಿ ಕಾಣುವ ಈ ಲಿಪ್‌ಸ್ಟಿಕ್‌ಗಳು ಟ್ರಾವೆಲ್ ಹಾಗೂ ಮಾನಿನಿಯರ ಬ್ಯಾಗ್‌ನಲ್ಲಿ ಹೆಚ್ಚು ಜಾಗ ಹಿಡಿಯದೇ ಆರಾಮವಾಗಿ ಇರಿಸಬಹುದಾದಂತ ಸೈಝ್‌ನಲ್ಲಿ ಬಿಡುಗಡೆಯಾಗಿವೆ. ಹಾಗೆಂದು ಈ ಕಾನ್ಸೆಪ್ಟ್ ಹೊಸದೇನಲ್ಲ! ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳಲ್ಲಿ ಮಾತ್ರ ದೊರಕುತ್ತಿದ್ದವು. ಇದೀಗ ಕೈಗೆಟಕುವ ಬೆಲೆಯಲ್ಲಿ ಸಾಮಾನ್ಯ ಹುಡುಗಿಯರು ಕೊಳ್ಳಬಹುದಾದ ದರದಲ್ಲಿ ಸಿಗುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಈ ವರ್ಷ ಅತಿ ಹೆಚ್ಚು ಬ್ರಾಂಡ್‌ಗಳಲ್ಲಿ ತೀರಾ ಹೆಚ್ಚು ಸಂಖ್ಯೆಯಲ್ಲಿ ಬಿಡುಗಡೆಯಾಗಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್. ಅವರ ಪ್ರಕಾರ, ಮೇಕಪ್ ಎಕ್ಸ್‌ಪರ್ಟ್‌ಗಳಲ್ಲದವರು, ಅತಿ ಹೆಚ್ಚಾಗಿ ರಿಟೇಲ್‌ನಲ್ಲಿ ಕೊಂಡು ಕೊಳ್ಳುವ ಪ್ರಾಡಕ್ಟ್‌ಗಳ ಸಾಲಿಗೆ ಇದು ಸೇರಿದೆ ಎನ್ನುತ್ತಾರೆ.
ಹುಡುಗಿಯರಿಗೆ ಪ್ರಿಯವಾದ ಮಿನಿ ಲಿಪ್ ಸ್ಟಿಕ್ಸ್
ಒಂದು ಲಿಪ್‌ಸ್ಟಿಕ್ ಒಬ್ಬರು ಪ್ರತಿದಿನ ಹಚ್ಚಿದರೂ ಒಂದು ವರ್ಷವಾದರೂ ಖಾಲಿಯಾಗುವುದಿಲ್ಲ. ಅಷ್ಟರಲ್ಲಿ ಎಕ್ಸ್‌ಪೈರಿ ಡೇಟ್ ಕೂಡ ಮುಗಿದು ಹೋಗಿರುತ್ತದೆ. ಬಿಸಾಡಬೇಕಾಗುತ್ತದೆ. ಈ ಮಿನಿ ಲಿಪ್‌ಸ್ಟಿಕ್ಸ್ ರೆಗ್ಯುಲರ್ ಲಿಪ್‌ಸ್ಟಿಕ್‌ಗಿಂತ ಅರ್ಧ ಸೈಝ್ ಕಡಿಮೆ ಇರುವುದರಿಂದ ಎಕ್ಸ್‌ಪೈರಿ ಡೇಟ್ ಮುಗಿಯುವುದರೊಳಗೆ ಖಾಲಿಯಾಗುತ್ತದೆ. ಬೆಲೆ ಕೂಡ ಅರ್ಧದಷ್ಟಿರುತ್ತದೆ. ಹಚ್ಚಿ ಹಚ್ಚಿ ಬೇಸರವಾಗುವುದು ಇಲ್ಲ! ಇವುಗಳನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳುವ ಸ್ತ್ರೀಯರು , ಹುಡುಗಿಯರು ಇದೀಗ ಇಂತಹ ಲಿಪ್‌ಸ್ಟಿಕ್ಸ್‌ನತ್ತ ವಾಲುತ್ತಿದ್ದಾರೆ ಎನ್ನುತ್ತಾರೆ ಮೇಕಪ್ ಎಕ್ಸ್‌ಪಟ್ರ್ಸ್.
ಮಿನಿ ಲಿಪ್‌ಸ್ಟಿಕ್ಸ್ ಪ್ರಯೋಜನಗಳು
- ರೆಗ್ಯುಲರ್ ಲಿಪ್‌ಸ್ಟಿಕ್ಸ್ ಬದಲಿಗೆ ಎರಡನ್ನು ಖರೀದಿಸಬಹುದು.
- ಸುಲಭವಾಗಿ ಬೇಕಾದೆಡೆ ಕೊಂಡೊಯ್ಯಬಹುದು.
- ಕಡಿಮೆ ಬೆಲೆಯಲ್ಲಿ ಇಡೀ ಸೆಟ್ ಕೂಡ ಖರೀದಿಸಬಹುದು.
- ಇವುಗಳಲ್ಲೂ ಮ್ಯಾಟ್- ಗ್ಲೋಸಿ ಎರಡೂ ಬಗೆಯವು ಲಭ್ಯ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Pearl Necklace Fashion: ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾದ 3 ಶೈಲಿಯ ಪರ್ಲ್ ನೆಕ್ಲೇಸ್