ಮಳೆ ಬಂತೆಂದರೆ ಪಶ್ಚಿಮ ಘಟ್ಟದ ತಪ್ಪಲಿನ ಮಂದಿಗೆ ಹಬ್ಬದ ಹಾಗೆ. ಬೆಟ್ಟದ ತಪ್ಪಲಿನ ಮಂದಿಯ ಬದುಕು ಮಳೆಯೊಂದಿಗೆ ಬೆಸೆದುಕೊಂಡಿರುತ್ತದೆ. ಅವರಿಗೆ ಹೊಸ ವರ್ಷ ಬಂದರೂ ವರ್ಷದ ಮೊದಲ ಮಳೆಗೆ ಆಗುವಷ್ಟು ಖುಷಿ ಆಗಲಾರದು. ತಪ್ಪಲಿನ ಮಂದಿಗೆ ಮಳೆ ಬಂತೆಂದರೆ ಬೆಳೆ ಬೆಳೆವ ಉತ್ಸಾಹ. ಮಳೆಗಾಗಿ ಕಾದು ಕಾದು, ಮಳೆ ಬಂದಾಕ್ಷಣ ಗದ್ದೆ ಬೇಸಾಯದಿಂದ ಹಿಡಿದು ಪ್ರತಿಯೊಂದು ಕೆಲಸಕ್ಕೂ ಜೀವಕಳೆ ಬರುತ್ತದೆ. ಬೇಸಗೆಯಿಂದ ಬೇಸತ್ತಿದ್ದ ಮೈಮನಕ್ಕೂ ಹೊಸತನ ಬಂದು ಹೊಸ ಅಡುಗೆ, ಬಗೆಬಗೆಯ ತಿನಿಸುಗಳನ್ನು ಮಾಡಿ (monsoon foods) ಮನೆಗಳಲ್ಲಿ ಹಂಚಿಕೊಂಡು ತಿನ್ನುವುದು, ದೂರದೂರುಗಳಿಂದ ಬಂದ ಮಕ್ಕಳು ಮೊಮ್ಮಕ್ಕಳ ಜೊತೆಗೂಡಿ ಮಾಡಿ ಹಂಚಿ ತಿನ್ನುವುದು, ಬರಲಾಗದ ಮಂದಿಗೆ ಪಾರ್ಸೆಲ್ ಮಾಡುವ ವ್ಯವಸ್ಥೆ ಮಾಡುವುದು ಎಲ್ಲವೂ ಮಳೆಗಾಲದ ನಿತ್ಯರೂಢಿಯಲ್ಲಿ ಬಂದು ಹೋಗುವಂಥವುಗಳು.
1. ಪತ್ರೊಡೆ: ಮಳೆ ಬಂದಾಗ ತೋಟದ ಸುತ್ತಮುತ್ತಲೆಲ್ಲ ಹೃದಯಾಕಾರದ ಕೆಸುವಿನೆಲೆ ಬೆಳೆಯತೊಡಗುತದೆ. ಈ ಎಲೆಗಳನ್ನು ಕೊಯ್ದು ತಂದು, ತೊಳೆದು ನೆನೆಸಿಟ್ಟ ಅಕ್ಕಿ, ಕಡ್ಲೆಬೇಳೆಯ ಜೊತೆಗೆ ಒಂದಿಷ್ಟು ಜೀರಿಗೆ, ಕೊತ್ತಂಬರಿ, ಬೆಲ್ಲ, ಮೆಣಸು, ತೆಂಗಿನಕಾಯಿ ಹಾಕಿ ಹಿಟ್ಟು ಮಾಡಿಟ್ಟು, ಒಂದೊಂದೇ ಎಲೆಯ ಮೇಲೆ ಹಿಟ್ಟು ಹಚ್ಚಿ, ಎಲೆಯ ಮೇಲೆ ಎಲೆ ಇಡುತ್ತಾ, ಹಿಟ್ಟನ್ನೂ ಹಚ್ಚುತ್ತಾ ಮಡಚಿ, ಹಬೆಯಲ್ಲಿ ಬೇಯಿಸಿ ಮಾಡುವ ಅಪರೂಪದ ಪರಂಪರಾಗತ ತಿನಿಸು. ಬೆಳಗಿನ ತಿಂಡಿಗೆ ಬಳಸಲಾಗುವ ಈ ತಿಂಡಿ ಈಗೀಗ ಕೆಲವು ರೆಸ್ಟೋರೆಂಟುಗಳಲ್ಲೂ ಸಿಗುವಂತಾಗಿದೆ. ಕರಾವಳಿಯಲ್ಲೂ ಈ ತಿನಿಸು ಬಲು ಪ್ರಸಿದ್ಧಿ. ಕೊಂಕಣ ಪ್ರದೇಶದಲ್ಲಿ ಬಳಕೆಯಲ್ಲಿರುವ ಈ ತಿನಿಸು ಬೇರೆಬೇರೆ ಹೆಸರುಗಳಿಂದ ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್‌ನ ಕೆಲವು ಭಾಗಗಳಲ್ಲೂ ಮಾಡುತ್ತಾರೆ.
2. ಅಣಬೆ ಕರಿ: ಮಳೆಗಾಲ ಬಂದ ತಕ್ಷಣ ತಮ್ಮ ತಮ್ಮ ಕೃಷಿ ಭೂಮಿಗಳಲ್ಲಿ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುವ ಬಿಳಿಯಾದ ಬಟನ್ ಅಣಬೆಗಳನ್ನು ತಂದು ಬಗೆಬಗೆಯ ಮಸಾಲೆಗಳನ್ನು ಅರೆದು ಅಡುಗೆ ಮಾಡುವುದೂ ಕೂಡಾ, ಪಶ್ಚಿಮ ಘಟ್ಟ ಹಾಗೂ ಕರಾವಳಿಯ ಭಾಗದ ಮಂದಿಗೆ ಎಲ್ಲಿಲ್ಲದ ಸಂಭ್ರಮ. ಮಾರುಕಟ್ಟೆಯ ಅಣಬೆಯನ್ನು ತಂದು ಮಾಡುವುದಕ್ಕಿಂತಲೂ, ತಮ್ಮದೇ ಭೂಮಿಯಲ್ಲಿ ರಾತ್ರಿ ಕಳೆದು ಬೆಳಕು ಮೂಡುವಷ್ಟರಲ್ಲಿ ಪ್ರತ್ಯಕ್ಷವಾಗುವ ಅಣಬೆಗಳನ್ನು ಕಂಡರೆ ಆಗುವ ಸಂಭ್ರಮ ಅಲ್ಲಿನ ಮಂದಿಯ ಬಾಯಿಯಲ್ಲಿಯೇ ಕೇಳಬೇಕು. ರುಚಿಯಾದ ಅಣಬೆ ಕರಿ, ವರ್ಷದ ಮಳೆಗಾಲದಲ್ಲಿ ಮೂರ್ನಾಲ್ಕು ಬಾರಿಯಾದರೂ ಆಗದಿದ್ದರೆ, ಖಂಡಿತವಾಗಿಯೂ ಇಲ್ಲಿನ ಮಂದಿಗೆ ಸಂಭ್ರಮ ತಪ್ಪಿದಂತೆಯೇ.
3. ಏಡಿ ಕರಿ: ಮಳೆಗಾಲವೆಂದರೆ ನೀರು. ತೋಟ ಗಟ್ಟೆಯ ಬದು ಎಲ್ಲೆಲ್ಲೂ ಹರಿದು ಹೋಗುವ ಜುಳುಜುಳು ನೀರಿನಲ್ಲಿ ಕಪ್ಪೆಗಳೂ, ಏಡಿಗಳೂ, ಪುಟ್ಟ ಪುಟ್ಟ ಮೀನುಗಳೂ ಎಲ್ಲೆಲ್ಲಿಂದಲೋ ಬಂದುಬಿಡುತ್ತವೆ. ಹೀಗೆ ಬಂದ ಏಡಿಗಳನ್ನು ಹಿಡಿಯುವುದೂ ಕೂಡಾ ಬೆಟ್ಟದ ತಪ್ಪಲಿನ ಕರಾವಳಿ, ಮಳೆಯೂರಿನ ಮಂದಿಗೆ ಸಡಗರ. ಅಕ್ಕಪಕ್ಕದ ಮನೆಗಳ ಮಂದಿ ಜೊತೆಯಾಗಿ ಸೇರಿ, ತಲೆಗೊಂದು ಹೆಡ್‌ಲೈಟ್ ಕಟ್ಟಿ, ರಾತ್ರಿಯ ವೇಳೆ, ಗದ್ದೆಯ ಬದುವಿಗೆ ನೀರಿನೊಂದಿಗೆ ಬರುವ ಏಡಿಗಳನ್ನು ಹಿಡಿಯುವುದು ಎಂದರೆ ಅದೊಂದು ದೊಡ್ಡ ಬೇಟೆಯಂತೆಯೇ. ಹೀಗೆ ಹಿಡಿದು ತಂದ ಏಡಿಗಳನ್ನು ತಮ್ಮಲ್ಲೇ ಹಂಚಿಕೊಂಡು, ಅಥವಾ ಎಲ್ಲರೂ ಒಂದಾಗಿ ಅಡುಗೆ ಮಾಡಿ, ಸಂಭ್ರಮ ಪಡುವುದು ಇಲ್ಲಿನ ಮಂದಿಯ ಮಳೆಗಾಲದಲ್ಲಿ ತಪ್ಪಿಸಲಾಗದ ಚಟುವಟಿಕೆ.
4. ಕಳಲೆ ಅಡುಗೆ: ಮಳೆಗಾಲ ಬಂತೆಂದರೆ ಬಿದಿರು ಚಿಗುರತೊಡಗುತ್ತದೆ. ಬಿದಿರಿನ ಸುತ್ತಮುತ್ತ ಹೊಸ ಬಿದಿರಿನ ಪುಟ್ಟ ಪುಟ್ಟ ಮೊಳಕೆಗಳೂ ಮೊಳೆಯತೊಡಗುತ್ತದೆ. ಈ ಎಳೆ ಬಿದಿರು ಎರಡರಿಂದ ಮೂರು ಅಡಿ ಎತ್ತರ ಬೆಳೆದ ತಕ್ಷಣ ಅದನ್ನು ಕತ್ತರಿಸಿ ತಂದು ಅದರ ಹೊರ ಪದರಗಳನ್ನೆಲ್ಲ ತೆಗೆದು ಒಳಗಿನ ತಿರುಳನ್ನು ಹೆಚ್ಚಿ ಅದರಿಂದ, ಗಸಿ, ಪಲ್ಯ, ಕಡುಬು, ಉಪ್ಪಿನಕಾಯಿ ಸೇರಿದಂತೆ ಅನೇಕ ಬಗೆಯ ಅಡುಗೆಗಳನ್ನು ಮಾಡಲಾಗುತ್ತದೆ. ಮಳೆಗಾಲದಲ್ಲಿ ಈ ಭಾಗದ ಬಹುತೇಕರ ಮನೆಗಳಲ್ಲಿ ಒಮ್ಮೆಯಾದರೂ ಇದನ್ನು ಮಾಡದಿದ್ದರೆ ಯಾರಿಗೂ ನಿದ್ದೆ ಬಾರದು. ಮಿದುವಾದ ಎಳೆಬಿದಿರಿನ ಅಡುಗೆ ಬಲು ರುಚಿ.
6. ಹಲಸಿನ ಹಣ್ಣಿನ ಅಡುಗೆಗಳು: ಬೇಸಿಗೆಯಲ್ಲಿ ಪಶ್ಚಿಮ ಘಟ್ಟದ ತಪ್ಪಲಿನ ಊರುಗಳಲ್ಲಿ ಹಲಸು ಮಾವು ಎಂದರೆ ಸಂಭ್ರಮ. ಇವುಗಳನ್ನು ಬಳಸಿ ಮಾಡುವ ಅಡುಗೆಗಳೂ ಕೂಡಾ ಸಾಂಪ್ರದಾಯಿಕವಾದವುಗಳು. ಬೇರೆಲ್ಲೂ ಸಿಗದ ಅಪರೂಪದ ಬಗೆಗಳು ಹಲಸಿನ ಹಣ್ಣಿನ ಕಾಲದಲ್ಲಿ ಈ ಊರುಗಳಲ್ಲಿ ನಿಮಗೆ ಸಿಗುತ್ತವೆ. ಬೇಸಿಗೆಯಲ್ಲಿನ್ನೂ ಮುಗಿಯದ, ಮಳೆಗಾಲದ ಆರಂಭದ ಒಂದೆರಡು ತಿಂಗಳು ತಿಗುವ ಹಲಸಿನ ಹಣ್ಣಿನಿಂದ ಧೋ ಎಂದು ಸುರಿವ ಮಳೆಯಲ್ಲಿ, ತಿನಿಸುಗಳನ್ನು ಮಾಡಿ ತಿನ್ನುವುದೇ ಇಲ್ಲಿನ ಮಂದಿಗೆ ಹಬ್ಬ. ಹಲಸಿನ ಹಣ್ಣಿನ ದೋಸೆ, ಕಾಯಿಯ ದೋಸೆ, ಹಣ್ಣಪ್ಪಳ, ಮಾಂಬಳ, ಹಲಸಿನ ಹಣ್ಣಿನ ಕಡುಬು, ಗಟ್ಟಿ, ಪಾಯಸ, ಮುಳುಕ ಇತ್ಯಾದಿ ಇತ್ಯಾದಿ ಸಿಹಿತಿನಿಸುಗಳು ಇಲ್ಲಿನ ಮಂದಿಯ ಮಳೆಗಾಲವನ್ನು ಇನ್ನೂ ಅದ್ಭುತವಾಗಿಸುವ ಸಾಮರ್ಥ್ಯ ಹೊಂದಿವೆ.
6. ಹಲಸಿನ ಬೀಜದ ತಿನಿಸುಗಳು: ಬೇಸಗೆಯಲ್ಲಿ ತೆಗೆದಿರಿಸಿದ ಹಲಸಿನ ಬೀಜದಿಂದ ಬಗೆಬಗೆಯ ತಿನಿಸುಗಳನ್ನು ಮಾಡಲು ಮಳೆಗಾಲ ಸಕಾಲ. ಸಂಗ್ರಹಿಸಿಟ್ಟ ಬೀಜಗಳನ್ನು ಬೇಯಿಸಿ ಒಣಗಿಸಿಟ್ಟುಕೊಂಡು ತಿನ್ನುವುದು, ಬೇಯಿಸಿದ ಬೀಜದ ಗಸಿ, ಸಾಂಬಾರು, ವಡೆ, ಹೋಳಿಗೆ, ಪಾಯಸ ಇವೆಲ್ಲವೂ ಮಳೆಗಾಲದಲ್ಲಿ ಒಂದೊಂದಾಗಿ ಮಾಡಲಾಗುತ್ತದೆ.
ಇದನ್ನೂ ಓದಿ: Monsoon Drive: ಡ್ರೈವಿಂಗ್ ಪ್ರಿಯರೇ, ಮಳೆಗಾಲದಲ್ಲಿ ಮರೆಯದೆ ಮಾಡಬೇಕಾದ ರೋಡ್‌ಟ್ರಿಪ್‌ಗಳಿವು!