ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲದಲ್ಲಿ ಟ್ರೆಂಡಿಯಾಗಿರುವ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್ (Monsoon Lipsticks) ಬಳಸುವವರು ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ತುಟಿಯ ಆರೋಗ್ಯಗೆಡಬಹುದು ಅಥವಾ ಒಣಗಿದಂತಾಗಿ, ನಿಸ್ತೇಜವಾಗಬಹುದು. ಮಳೆಗಾಲದಲ್ಲಿ, ನೀರ ಹನಿಗೆ ಮಾಸದ ಲಿಪ್‌ಸ್ಟಿಕ್ಸ್ ಬಳಸುವುದು ಸಾಮಾನ್ಯ. ಇವು ದುಬಾರಿ ಕೂಡ ಹೌದು. ಗುಣಮಟ್ಟದ ಬ್ರಾಂಡೆಡ್ ವಾಟರ್ ಲಿಪ್‌ಸ್ಟಿಕ್ಸ್ ಬಳಕೆ ಯಾವುದೇ ತೊಂದರೆಯುಂಟು ಮಾಡುವುದಿಲ್ಲ. ಅದೇ ಕಳಪೆ ವಾಟರ್ ಪ್ರೂಫ್ ಲಿಪ್‌ಸ್ಟಿಕ್‌ಗಳು ತುಟಿಯ ಅಂದವನ್ನು ಕೆಡಿಸುವುದರೊಂದಿಗೆ ತುಟಿಯ ಸಿಪ್ಪೆ ಸುಲಿಯುವಂತೆ ಮಾಡುತ್ತವೆ ಎನ್ನುತ್ತಾರೆ ಸೌಂದರ್ಯ ತಜ್ಞರು.
ವಾಟರ್ ಪ್ರೂಫ್ ಲಿಪ್‌ಸ್ಟಿಕ್ ಹಚ್ಚುವ ಮುನ್ನ
ನೀವು ಮಳೆಗಾಲದಲ್ಲಿ ಅತಿ ಹೆಚ್ಚಾಗಿ ವಾಟರ್ ಪ್ರೂಫ್ ಲಿಪ್‌ಸ್ಟಿಕ್ ಬಳಸುವುದಾದಲ್ಲಿ ಆದಷ್ಟೂ ಹಿಂದಿನ ದಿನವೇ ಹೆಚ್ಚು ಮಾಯಿಶ್ಚರೈಸ್ ಮಾಡಿ. ಮಲಗುವ ಮುನ್ನ ತುಟಿಗೆ ವ್ಯಾಸಲೀನ್‌ನಂತಹ ಕ್ರೀಮ್‌ಗಳನ್ನು ಲೇಪಿಸಿ. ಲಿಪ್‌ಸ್ಟಿಕ್ ತೆಗೆದ ನಂತರವೂ ಲೇಪಿಸಿ. ಇದರಿಂದ ತುಟಿ ಒಡೆಯುವುದಿಲ್ಲ.
ತುಟಿಯನ್ನು ಕ್ಲೆನ್ಸ್ ಮಾಡಿ
ವಾಟರ್ ಪ್ರೂಫ್ ಲಿಪ್ ಸ್ಟಿಕ್ ಬಳಸುವವರು ತುಟಿಯನ್ನು ಹರ್ಬಲ್ ಕ್ಲೆನ್ಸಿಂಗ್ ಮಾಡುವುದು ಉತ್ತಮ. ಈ ಲಿಪ್‌ಸ್ಟಿಕ್ ಸುಲಭವಾಗಿ ಹೋಗುವುದಿಲ್ಲ. ಇದಕ್ಕಾಗಿ ಮೇಕಪ್ ರಿಮೂವರ್ ಅಥವಾ ಲಿಪ್‌ಸ್ಟಿಕ್ ರಿಮೂವಿಂಗ್ ಟಿಶ್ಯೂ ಬಳಸಬೇಕಾಗುತ್ತದೆ.
ಲಿಪ್‌ಸ್ಟಿಕ್ ತೆಗೆಯುವುದು ಕಡ್ಡಾಯ
ಮಲಗುವ ಮುನ್ನ ವಾಟರ್ ಪ್ರೂಫ್ ಲಿಪ್‌ಸ್ಟಿಕ್ ತೆಗೆದು ಮಲಗಬೇಕು. ಯಾವುದೇ ಲೋಷನ್ ಹಚ್ಚಿ, ಕೂಡ ತೆಗೆಯಬಹುದು. ಇಲ್ಲವಾದಲ್ಲಿ ತುಟಿಗಳಲ್ಲಿ ಬಿರುಕು ಮೂಡಬಹುದು. ರಿಂಕಲ್ಸ್ ಮೂಡಬಹುದು.
24/7 ವಾಟರ್ ಪ್ರೂಫ್ ಲಿಪ್‌ಸ್ಟಿಕ್ ಹಚ್ಚಬೇಡಿ
ಯಾವುದೇ ಕಾರಣಕ್ಕೂ 24/7 ವಾಟರ್ ಪ್ರೂಪ್ ಲಿಪ್‌ಸ್ಟಿಕ್ ಲೇಪಿಸಬೇಡಿ. ಇದು ತುಟಿಗಳ ಅನಾರೋಗ್ಯಕ್ಕೆ ಈಡುಮಾಡುತ್ತದೆ. ತುಟಿಗಳು ನೈಜತೆ ಕಳೆದುಕೊಂಡು ಒಣಗಿದಂತಾಗಿ, ನಿಸ್ತೇಜವಾಗುತ್ತವೆ.
ಗುಣಮಟ್ಟದ್ದನ್ನು ಬಳಕೆ ಮಾಡಿ
ಗುಣ ಮಟ್ಟದ ಬ್ರಾಂಡೆಡ್ ಲಿಪ್‌ಸ್ಟಿಕ್ಸ್ ಬಳಸಿ. ಎಕ್ಸ್‌ಪೈರಿ ಡೇಟ್ ಆಗಿದ್ದಲ್ಲಿ ಬಿಸಾಕಿ. ಬೀದಿ ಬದಿಯಲ್ಲಿ ಕೊಳ್ಳಬೇಡಿ. ಇವು ಹಾನಿಕಾರಕ ಕೆಮಿಕಲ್ಸ್ ಹೊಂದಿರುತ್ತವೆ ಎಂಬುದನ್ನು ಮರೆಯಬೇಡಿ. ಸೂಕ್ಷ್ಮ ಸ್ಕಿನ್ ಹೊಂದಿರುವ ತುಟಿಗಳು ಸುಕೋಮಲವಾಗಿರುತ್ತವೆ. ಇವುಗಳ ಆರೈಕೆ ಕೂಡ ಅತ್ಯಗತ್ಯ ಎಂಬುದನ್ನು ಮರೆಯಬೇಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಳೆಗಾಲದ ಫ್ಯಾಷನ್‌ನಲ್ಲಿ ಹೂಡಿಗೂ ಬಿತ್ತು ಕತ್ತರಿ!