ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೈಸೂರಿನ ಅಪೂರ್ವ ರೈ ಇದೀಗ ವಿವಾಹಿತರಿಗೆಂದೇ ನಡೆಯುತ್ತಿರುವ ಮಿಸೆಸ್ ಯೂನಿವರ್ಸ್ ೨೦೨೩ ಪೇಜೆಂಟ್‌ನಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸಲು ಬಲ್ಗೇರಿಯಾಗೆ ತೆರಳಿದ್ದಾರೆ. ಈ ಬಗ್ಗೆ ʼವಿಸ್ತಾರʼದೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಹೆಣ್ಣುಮಗಳಾಗಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಇದೆ. ಆತ್ಮವಿಶ್ವಾಸದಿಂದ ಪ್ರತಿ ರೌಂಡ್‌ನಲ್ಲೂ ಪಾಲ್ಗೊಳ್ಳುವೆ ಎಂದು ತಿಳಿಸಿದ್ದಾರೆ.
ಯಾರಿದು ಅಪೂರ್ವ ರೈ ?
ಸದ್ಯಕ್ಕೆ ಮೈಸೂರಿನ ವಾಸಿಯಾಗಿರುವ ಅಪೂರ್ವ ರೈ, ಕ್ಲಿನಿಕಲ್ ಕಾಸ್ಮೋಟಾಲಜಿಸ್ಟ್ ಪ್ರೊಫೆಷನ್‌ನಲ್ಲಿ ಬ್ಯುಜಿಯಾಗಿರುವ ಮಹಿಳೆ. ಮೂಲತಃ ಮಾಡೆಲ್ ಕೂಡ. ಮದುವೆಗೆ ಮುನ್ನ ಫೆಮೀನಾ ಮಿಸ್ ಇಂಡಿಯಾದಲ್ಲಿ ಫೈನಲ್ ತನಕ ಭಾಗವಹಿಸಿ, ಕಾರಣಾಂತರಗಳಿಂದ ಮಾಡೆಲಿಂಗ್ ಪ್ರಪಂಚದಿಂದ ಕೆಲಕಾಲ ದೂರಾಗಿದ್ದರು. ಹುಟ್ಟಿದ್ದು ಶಿವಮೊಗ್ಗವಾದರೂ ಮದುವೆಯಾದ ನಂತರ ಮೈಸೂರಿನಲ್ಲಿ ಪತಿಯೊಂದಿಗೆ ಸೆಟಲ್ ಆಗಿದ್ದಾರೆ. ಇವರಿಗೊಬ್ಬ ಪುಟ್ಟ ಮಗನಿದ್ದಾನೆ.
ಮಿಸೆಸ್ ಸೌತ್ ಪೆಸಿಫಿಕ್ ಏಷಿಯಾ ಯೂನಿವರ್ಸ್ ೨೦೨೨ ಟೈಟಲ್ ವಿಜೇತೆ
ಕಳೆದ ಸಾಲಿನಲ್ಲಿ ಮುಂಬಯಿಯಲ್ಲಿ ನಡೆದ ಮಿಸೆಸ್ ಸೌತ್ ಫೆಸಿಫಿಕ್ ಏಷಿಯಾ ಯೂನಿವರ್ಸ್‌ನಲ್ಲಿ ಟೈಟಲ್ ಪಡೆದ ನಂತರ ಅಪೂರ್ವ ಖ್ಯಾತ ಪೇಜೆಂಟ್ ಕೋಚ್ ರಿತಿಕಾ ಅವರ ಬಳಿ ಮಿಸೆಸ್ ಯೂನಿವರ್ಸ್‌ನಲ್ಲಿ ಭಾಗವಹಿಸಲು ಟ್ರೈನಿಂಗ್ ಪಡೆದಿದ್ದಾರೆ. ಸಾಕಷ್ಟು ಸಿದ್ಧತೆ ನಡೆಸಿದ್ದಾರೆ. ಸ್ಟೈಲಿಂಗ್‌ನಿಂದ ಹಿಡಿದು ಪೇಜೆಂಟ್‌ನ ಪ್ರತಿ ರೂಲ್ಸ್ ಹಾಗೂ ರೆಗ್ಯುಲೇಷನ್‌ಗಳ ಬಗ್ಗೆ ತಿಳಿದುಕೊಂಡಿದ್ದಾರೆ.
ವಿವಾಹಿತ ಮಹಿಳೆಯರಿಗೆ ಸ್ಫೂರ್ತಿ
ಮಹಿಳೆ ಮದುವೆಯಾದ ತಕ್ಷಣ ಮಾಡೆಲಿಂಗ್ ಪ್ರಪಂಚದಲ್ಲಿ ಮುಂದುವರಿಯಲು ಇಚ್ಛಿಸುವ ಮಾನಿನಿಯರು ತಮ್ಮ ಕನಸನ್ನು ಕೈ ಬಿಡಬೇಕಿಲ್ಲ! ಕುಟುಂಬದ ಸಹಕಾರದೊಂದಿಗೆ ಕೈಗೂಡಿಸಿಕೊಳ್ಳಬಹುದು. ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರಿಯಲು ಮದುವೆಯಾದರೇನಂತೆ! ಮೊದಲು ಆತ್ಮವಿಶ್ವಾಸ ಮೈಗೂಡಿಸಿಕೊಂಡು ಸೂಕ್ತ ತರಬೇತಿಯೊಂದಿಗೆ ಮುಂದುವರಿಯಬೇಕು. ಆಗಷ್ಟೇ ಗುರಿ ತಲುಪಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಪೂರ್ವ ರೈ.
ಈಗಾಗಲೇ ಬಲ್ಗೇರಿಯಾದಲ್ಲಿರುವ ಅಪೂರ್ವ, ಅಲ್ಲಿ ಪ್ರತಿದಿನ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಇತರೇ ೮೦ ಕ್ಕೂ ಹೆಚ್ಚು ರಾಷ್ಟ್ರಗಳಿಂದ ಆಗಮಿಸಿರುವ ಸ್ಪರ್ಧಿಗಳ ಜೊತೆಗೆ ಭಾಗವಹಿಸುತ್ತಿದ್ದಾರೆ.
ನಮ್ಮ ರಾಷ್ಟ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಮೈಸೂರಿನ ಅಪೂರ್ವ ರೈ ಅವರಿಗೆ ಆಲ್ ದಿ ಬೆಸ್ಟ್ ಹೇಳೋಣ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion : ಅಜೆರ್ಬೈಜಾನ್‌ನ ವಿಂಟರ್ ಸ್ಟ್ರೀಟ್ ಫ್ಯಾಷನ್‌ಗೆ ಸೈ ಎಂದ ನಟಿ ಶ್ರದ್ಧಾ ಶ್ರೀನಾಥ್