Site icon Vistara News

Munnar Tour: ಮುನ್ನಾರ್‌ನ ಈ 5 ರಮಣೀಯ ಸ್ಥಳಗಳನ್ನು ನೋಡಲೇಬೇಕು!

Munnar Tour

ಬೆಂಗಳೂರು: ಪ್ರವಾಸವೆಂದರೆ ಎಲ್ಲರಿಗೂ ಇಷ್ಟ. ಕುಟುಂಬದ ಜೊತೆ ಹಾಡುತ್ತಾ, ಕುಣಿಯುತ್ತಾ ಪ್ರವಾಸ ಮಾಡುವ ಆನಂದವೇ ಬೇರೆ. ಹಾಗೇ ಅಲ್ಲಿನ ಸ್ಥಳಗಳ ಪ್ರಕೃತಿ ಸೌಂದರ್ಯ ಕೂಡ ನಮ್ಮ ಮನಸ್ಸಿಗೆ ನೆಮ್ಮದಿ ನೀಡುವಂತಿರಬೇಕು ಹಾಗೂ ಆ ಸ್ಥಳ ನಮ್ಮ ನೆನಪಿನಲ್ಲಿ ಚಿರಕಾಲ ಉಳಿಯುವಂತಿರಬೇಕು. ಅಂತಹ ಸ್ಥಳಗಳಿಗೆ ಭೇಟಿ ನೀಡಲು ಜನರು ಇಷ್ಟಪಡುತ್ತಾರೆ. ಅದಕ್ಕೆ ಮುನ್ನಾರ್ (Munnar Tour) ಹೇಳಿಮಾಡಿಸಿದ ಸ್ಥಳವಾಗಿದೆ.

ದಕ್ಷಿಣ ಭಾರತದ ಜನಪ್ರಿಯ ಗಿರಿಧಾಮಗಳಲ್ಲಿ ಮುನ್ನಾರ್ ಕೂಡ ಒಂದು. ಇದರ ಸುತ್ತಲೂ ಇರುವ ಪ್ರಕೃತಿಯ ಸೌಂದರ್ಯ ಕಣ್ಣಿಗೆ ಹಬ್ಬದೂಟವನ್ನುಂಟು ಮಾಡುತ್ತದೆ. ಮುನ್ನಾರ್ ಗೆ ಬರುವ ಪ್ರವಾಸಿಗರು ಪ್ರವಾಸದ ಆನಂದವನ್ನು ಅನುಭವಿಸುತ್ತಾರೆ. ಹಾಗಾಗಿ ವಾರಂತ್ಯದ ವೇಳೆ ಪ್ರವಾಸಕ್ಕೆ ಪ್ಲ್ಯಾನ್ ಮಾಡುವವರು ಇಲ್ಲಿಗೆ ಭೇಟಿ ನೀಡಿ.

1. ಮರಯೂರ್

ಮುನ್ನಾರ್ ನಿಂದ ಕೆಲವು ಕಿಮಿಗಳಷ್ಟು ದೂರದಲ್ಲಿರುವ ಮರಯೂರ್ ಕಬ್ಬಿನ ಎಸ್ಟೇಟ್ ಗಳು, ಶ್ರೀಗಂಧದ ಕಾಡುಗಳು ಮತ್ತು ಇತಿಹಾಸ ಪೂರ್ವದ ಡಾಲ್ಮೆನ್ ಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಭೇಟಿ ನೀಡುವವರು ತಮ್ಮ ಸಮಯ ಕಳೆಯಲು ಕಬ್ಬಿನ ಗದ್ದೆಗಳ ಉದ್ದಕ್ಕೂ ವಾಕಿಂಗ್ ಮಾಡುತ್ತಾರೆ. ಹಾಗೇ ಹತ್ತಿರದಲ್ಲೇ ಇರುವಂತಹ ತೂವನಂ ಜಲಪಾತಗಳಿಗೆ ಭೇಟಿ ನೀಡುತ್ತಾರೆ. ಯಾಕೆಂದರೆ ಇಲ್ಲಿ ಅದ್ಭುತವಾದ ಪ್ರಕೃತಿ ಸೌಂದರ್ಯವಿದೆ.

2. ದೇವಿಕುಲಂ

ಮುನ್ನಾರ್ ನಿಂದ 7 ಕಿ.ಮೀ ದೂರದಲ್ಲಿರುವ ದೇವಿಕುಲಂ ಒಂದು ಸುಂದರವಾದ ರೆಸಾರ್ಟ್ ಆಗಿದೆ. ಇದು ಹಚ್ಚಹಸಿರಿನ ಕಣಿವೆಗಳು ಮತ್ತು ಪ್ರಶಾಂತವಾಗಿರುವ ಸರೋವರಗಳೊಂದಿಗೆ ಸುಂದರವಾದ ಬೆಟ್ಟಗಳನ್ನು ಹೊಂದಿದೆ. ದೇವಿಕುಲಂ ಸರೋವರದಲ್ಲಿ ದೋಣಿ ವಿಹಾರ ಆನಂದಿಸಬಹುದು. ಹಾಗೇ ಇಲ್ಲಿಂದ ಸ್ವಲ್ಪ ದೂರದಲ್ಲಿರುವ ಸೀತಾದೇವಿ ಸರೋವರದಲ್ಲಿ ಸಮೃದ್ಧ ಖನಿಜಾಂಶಗಳಿರುವ ಕಾರಣ ಅದು ಔಷಧೀಯ ಗುಣವನ್ನು ಹೊಂದಿದೆ ಎನ್ನಲಾಗಿದೆ. ಈ ಸ್ಥಳದಲ್ಲಿ ಪ್ರವಾಸಿಗರು ವನ್ಯಜೀವಿಗಳಿಂದ ತುಂಬಿರುವ ಕಾಡುಗಳ ಮೂಲಕ ಟ್ರೆಕ್ಕಿಂಗ್ ಹೋಗಬಹುದು.

3. ಚಿನ್ನಕನಾಲ್‌

ಮುನ್ನಾರ್‌ನಿಂದ ಸುಮಾರು 20 ಕಿಮೀ ದೂರದಲ್ಲಿರುವ ಚಿನ್ನಕನಾಲ್ ಮಂಜಿನ ಬೆಟ್ಟಗಳ ನಡುವೆ ಇರುವ ಸುಂದರವಾದ ಹಳ್ಳಿಯಾಗಿದೆ. ಇಲ್ಲಿ ಜುಳುಜುಳು ಹರಿಯುವ ಜಲಪಾತಗಳು, ಸಾಂಬಾರು ತೋಟಗಳು ಮತ್ತು ಪಶ್ಚಿಮ ಘಟ್ಟಗಳ ರಮಣೀಯ ನೋಟವನ್ನು ನೋಡಬಹುದು. ಮನಸ್ಸಿಗೆ ಶಾಂತಿ ಬಯಸುವವರಿಗೆ ಇದು ಸ್ವರ್ಗದಂತೆ ಕಾಣುತ್ತದೆ. ಇಲ್ಲಿ ಒಂದು ಆಕರ್ಷಕವಾದ ಅಟ್ಟುಕಲ್ ಜಲಪಾತಗಳಿವೆ. ಇದು ನೋಡಲು ಬಹಳ ವಿಸ್ಮಯವಾಗಿದೆ ಮತ್ತು ಇಲ್ಲಿ ಸ್ನಾನ ಮಾಡಬಹುದು.

4. ಅನಾಮುಡಿ ಶಿಖರ

ತಮ್ಮ ಜೀವನದಲ್ಲಿ ರೋಮಾಂಚನಕಾರಿ ಸಾಹಸಗಳನ್ನು ಬಯಸುವವರು ಅನಾಮುಡಿ ಶಿಖರವನ್ನು ಏರಬಹುದು. ಈ ಶಿಖರ ದಕ್ಷಿಣ ಭಾರತದ ಅತ್ಯುನ್ನತ ಶಿಖರ ಎಂಬ ಬಿರುದು ಪಡೆದಿದೆಯಂತೆ. ಹಾಗಾಗಿ ಹೃದಯ ಗಟ್ಟಿ ಇರುವವರು ಮಾತ್ರ ಇಲ್ಲಿ ಚಾರಣ ಮಾಡಲು ಸಾಧ್ಯವಂತೆ. ಈ ಶಿಖರವನ್ನು ಏರಿದಾಗ ನಿಮಗಾಗುವ ಖುಷಿಯೇ ಬೇರೆಯಂತೆ. ಹಾಗಾಗಿ ಶಿಖರವನ್ನು ಏರುವಾಗ ದಾರಿಯುದ್ದಕ್ಕೂ ಸುಂದರ ದೃಶ್ಯಗಳನ್ನು , ಸಸ್ಯಗಳನ್ನು , ಪ್ರಾಣಿಗಳನ್ನು ನೋಡಬಹುದು.

5. ಟಾಪ್ ಸ್ಟೇಷನ್

ಟಾಪ್ ಸ್ಟೇಷನ್ ಮುನ್ನಾರ್ ನಿಂದ ಸುಮಾರು 32 ಕಿಮೀ ದೂರದಲ್ಲಿರುವ ಒಂದು ಸುಂದರವಾದ ವ್ಯೂ ಪಾಯಿಂಟ್ ಆಗಿದೆ. ಇದು ಸಮುದ್ರ ಮಟ್ಟದಿಂದ ಸರಿಸುಮಾರು 1700 ಮೀಟರ್ ಎತ್ತರದಲ್ಲಿದೆ. ಈ ಸ್ಥಳ ಪ್ರಕೃತಿ ಪ್ರಿಯರಿಗೆ ಹಾಗೂ ಪೋಟೊಗ್ರಾಪರ್ ಗೆ ಬಹಳ ಇಷ್ಟವಾಗುತ್ತದೆ. ಇದು ಮುನ್ನಾರ್-ಕೊಡೈಕೆನಾಲ್ ರಸ್ತೆಯಲ್ಲಿರುವ ಅತ್ಯಂತ ಎತ್ತರದ ಬಿಂದುವಾಗಿದೆ. ಇಲ್ಲಿಂದ ನೆರೆಯ ರಾಜ್ಯ ತಮಿಳು ನಾಡಿನ ಸುಂದರವಾದ ನೋಟವನ್ನು ಸವಿಯಬಹುದು.

ಇದನ್ನೂ ಓದಿ: Nagarjuna Sagar: ನಾಗಾರ್ಜುನಸಾಗರದ ಈ ಸ್ಥಳಗಳು ವಾರಾಂತ್ಯ ಪ್ರವಾಸಕ್ಕೆ ಸೂಕ್ತ

ವಾರಾಂತ್ಯದಲ್ಲಿ ಪ್ರವಾಸಕ್ಕೆ ಹೋಗಲು ಬಯಸುವವರು ಒಮ್ಮೆ ಮುನ್ನಾರ್‌ನ ಈ ವಿಸ್ಮಯವಾದ ಸ್ಥಳಗಳಿಗೆ ಭೇಟಿ ನೀಡಿ ನಿಮ್ಮ ಅಮೂಲ್ಯವಾದ ಸಮಯವನ್ನು ಆನಂದದಿಂದ ಕಳೆಯಿರಿ.

Exit mobile version