ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿ ಸಮೀಪಿಸುತ್ತಿದೆ. ಆಗಲೇ ನವವರ್ಣದ ಸೀರೆಗಳಿಗೆ ಮಾರುಕಟ್ಟೆಯಲ್ಲಿ ಮೊದಲಿಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್‌ನ ಡಿಸೈನ್‌ನ ಸಿಂಪಲ್ ಕಲರ್‌ಫುಲ್ ಸೀರೆಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ.
ಡಿಮ್ಯಾಂಡ್‌ಗೆ ಕಾರಣವೇನು?
ನವರಾತ್ರಿ ಅಂದರೆ, ಒಂಬತ್ತು ದಿನಗಳಂದು ೯ ಶಕ್ತಿ ದೇವತೆಗಳ ಆರಾಧನೆ ಹಾಗೂ ಪೂಜೆ ಎಲ್ಲೆಡೆ ನಡೆಯುತ್ತದೆ. ದೇವಸ್ಥಾನಗಳಲ್ಲಿ ಮಾತ್ರವಲ್ಲ, ಬಹುತೇಕ ಮನೆಗಳಲ್ಲೂ ನವರಾತ್ರಿ ಸಂಭ್ರಮಾಚರಣೆ ನಡೆಯಲಿದೆ. ಪ್ರತಿದಿನವೂ ಒಂದೊಂದು ದೇವಿಯ ಪೂಜೆ ಆ ದೇವಿಯನ್ನು ಪ್ರತಿನಿಧಿಸುವ ವರ್ಣಗಳ ಸೀರೆ ಇಲ್ಲವೇ ಎಥ್ನಿಕ್ ಉಡುಪುಗಳನ್ನು ಹೆಣ್ಣುಮಕ್ಕಳು ಧರಿಸುವುದು ಸಾಮಾನ್ಯವಾಗಿದೆ. ಪ್ರಿಂಟೆಡ್ ಸೀರೆಗಳಿಗಿಂತ ಹೆಚ್ಚಾಗಿ ಸಾದಾ ಪ್ಲೇನ್ ಸೀರೆಗಳಿಗೆ ಪ್ರಾಮುಖ್ಯತೆ ಹೆಚ್ಚು. ಉದಾಹರಣೆಗೆ ಶ್ವೇತವರ್ಣ, ಗುಲಾಬಿ, ಕೆಂಪು , ಹಳದಿ ಹೀಗೆ ಒಂಬತ್ತು ದಿನಗಳು ೯ ಬಗೆಯ ಬಣ್ಣದ ಸೀರೆಗಳಲ್ಲಿ ಹೆಣ್ಣುಮಕ್ಕಳು ಕಾಣಿಸಿಕೊಳ್ಳುತ್ತಾರೆ. ಇಂದು ಒಂದು ವರ್ಷ ಉಟ್ಟ ಸೀರೆ ಮತ್ತೊಂದು ವರ್ಷ ಉಡುವುದು ಕಾಣಸಿಗುವುದಿಲ್ಲ. ಹಾಗಾಗಿ ನವರಾತ್ರಿ ಸಮಯದಲ್ಲಿ ಸೀರೆಗಳನ್ನು ಕೊಳ್ಳುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಸೀರೆ ಶೋರೂಂವೊಂದರ ಮಾಲೀಕರು.
ಯೂನಿಫಾರ್ಮ್ ಲುಕ್ ನೀಡುವ ಸೀರೆಗಳು
“ಒಂಭತ್ತು ದಿನಗಳ ಬಣ್ಣಗಳ ಬಗ್ಗೆ ಸೀರೆ ಶೋರೂಮ್‌ನವರು ಕೂಡ ಮಾಹಿತಿ ನೀಡುತ್ತಾರೆ. ನಮ್ಮ ಸ್ತ್ರೀ ಗುಂಪು ಹಾಗೂ ಸಂಘದ ಸದಸ್ಯೆಯರು ನವರಾತ್ರಿಯನ್ನು ಆಚರಿಸುತ್ತೇವೆ. ಎಲ್ಲರೂ ಯೂನಿಫಾರ್ಮ್‌ನಂತೆ ಆಯಾ ದಿನಕ್ಕೆ ತಕ್ಕಂತೆ ಒಂದೊಂದು ದಿನವೂ ಒಂದೊಂದು ಬಣ್ಣದ ಸೀರೆಯನ್ನು ಉಡುತ್ತೇವೆ, ಸಂಭ್ರಮಿಸುತ್ತೇವೆ” ಎನ್ನುತ್ತಾರೆ ಲೇಡಿಸ್ ಕ್ಲಬ್‌ವೊಂದರ ಸದಸ್ಯರು.
ಸದಾ ಸೀರೆಗಳಿಗೆ ಬೇಡಿಕೆ
ನವರಾತ್ರಿಯಲ್ಲಿ ಹೆಚ್ಚಾಗಿ ಪ್ರಿಂಟೆಡ್ ಸೀರೆಗಳ ಆಯ್ಕೆ ತೀರಾ ಕಡಿಮೆ. ಡಿಸೈನರ್ ಸದಾ ವರ್ಣದ ಸೀರೆಗಳಿಗೆ ಹೆಚ್ಚು ಬೇಡಿಕೆ ಎನ್ನುತ್ತಾರೆ ಮಾರಾಟಗಾರರು. ಜಾರ್ಜೆಟ್, ಕ್ರೇಪ್, ಸಿಲ್ಕ್, ಕಾಟನ್ ಹೀಗೆ ಮಾನೋಕ್ರೋಮ್ ಲುಕ್ ನಿಡುವ ಸೀರೆಗಳು ಹೆಚ್ಚು ಮಾರಾಟವಾಗುತ್ತವೆ. ನೋಡಲು ಇವು ಯೂನಿಫಾರ್ಮ್ ಲುಕ್ ನೀಡುತ್ತವೆ. ಮಿಕ್ಸ್ ಮ್ಯಾಚ್ ವರ್ಣದ ಸೀರೆಗಳು ನವರಾತ್ರಿಯಲ್ಲಿ ಧರಿಸುವುದು ಕಡಿಮೆ ಎನ್ನುತ್ತಾರೆ ಮಾಡೆಲ್ ದೀಪ್ತಿ.
ನವವರ್ಣದ ಸೀರೆ ಪ್ರಿಯರಿಗೆ ಟಿಪ್ಸ್
· ನಾನಾ ಬ್ರಾಂಡ್‌ಗಳಲ್ಲಿ ನವವರ್ಣದ ಸೀರೆಗಳು ಲಭ್ಯ.
· ಜ್ಯುವೆಲರಿಗಳನ್ನು ಸೀರೆಯ ವರ್ಣಕ್ಕೆ ತಕ್ಕಂತೆ ಮ್ಯಾಚ್ ಮಾಡಬಹುದು.
· ಮಿಕ್ಸ್ ಮ್ಯಾಚ್ ಬ್ಲೌಸ್ ಧರಿಸುವುದು ನಾಟ್ ಓಕೆ.
· ಜ್ಯುವೆಲರಿ ಮ್ಯಾಚ್ ಮಾಡಲಾಗದಿದ್ದಲ್ಲಿ ಬಂಗಾರವರ್ಣದ್ದು ಧರಿಸಿ.
· ಹೇರ್‌ಸ್ಟೈಲ್ ಟ್ರೆಡಿಷನಲ್ ಲುಕ್ ನೀಡುವಂತಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Holiday Fashion | ಬಂತು ದಸರಾ ಹಾಲಿಡೇ ಫ್ಯಾಷನ್