ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ ಸಡಗರ-ಸಂಭ್ರಮ ಎಲ್ಲೆಡೆ ಆರಂಭವಾಗಿದೆ. ಆಯಾ ದಿನಕ್ಕೆ ತಕ್ಕಂತೆ ಕೆಳಗೆ ನೀಡಿರುವ ವರ್ಣದ ಟ್ರೆಂಡಿ ಎಥ್ನಿಕ್‌ವೇರ್‌ಗಳನ್ನು ಧರಿಸಿ, ಸಂಭ್ರಮಿಸಿ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಮೊದಲನೇ ದಿನ ಶ್ವೇತವರ್ಣ
ಸೆಪ್ಟೆಂಬರ್ ೨೬ರಂದು ದೇವಿ ಶೈಲಪುತ್ರಿಯನ್ನು ಆರಾಧಿಸುವವರು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಗೋಲ್ಡನ್ ಬಾರ್ಡರ್‌ನ ಕ್ರೇಪ್, ಜಾರ್ಜೆಟ್ ಶ್ವೇತವರ್ಣದ ಸೀರೆ ಅಥವಾ ಕಮೀಜ್, ಗಾಗ್ರಾ ಧರಿಸಬಹುದು. ಪರ್ಲ್ ಆಭರಣ ಮ್ಯಾಚ್ ಮಾಡಬಹುದು. ಅಂದ ಹಾಗೆ, ಬಿಳಿ ಬಣ್ಣ ಶಾಂತಿ ಹಾಗೂ ಪರಿಶುದ್ಧತೆಯ ದ್ಯೋತಕ.
ಕೆಂಪು ಸೀರೆಯಲ್ಲಿ ದೇವಿಯಂತೆ ಕಂಗೊಳಿಸಿ
ಸೆಪ್ಟೆಂಬರ್ ೨೭ರಂದು ಬ್ರಹ್ಮಚಾರಿಣಿ ದೇವಿಗೆ ಒಪ್ಪುವ ಕೆಂಪು ದಿರಸಿಗೆ ಪ್ರಾಧಾನ್ಯತೆ. ಈ ದಿನಕ್ಕೆ ಸೂಟ್ ಆಗುವಂತೆ ಈಗಾಗಲೇ ನಾನಾ ಬಗೆಯ ಗೋಲ್ಡನ್ ಬಾರ್ಡರ್ ಇರುವಂತಹ ರೇಷ್ಮೆ ಸೀರೆ ಹಾಗೂ ಎಥ್ನಿಕ್ ಡಿಸೈನರ್‌ವೇರ್‌ಗಳು ಲಭ್ಯ. ಕುಂದನ್ ಜ್ಯುವೆಲರಿಗಳೊಂದಿಗೆ ಇವನ್ನು ಧರಿಸಿ ಸಂಭ್ರಮಿಸಿ.
ರಾಯಲ್ ಲುಕ್ ನೀಡುವ ನೀಲಿ
ಸೆಪ್ಟೆಂಬರ್ ೨೮ರಂದು ದೇವಿ ಚಂದ್ರಕಾಂತೆಯ ವಿಶೇಷ ದಿನವಾಗಿದ್ದು, ಡಿವೈನ್ ಎನರ್ಜಿ ಪ್ರತಿನಿಧಿಸುವ ರಾಯಲ್ ಬ್ಲ್ಯೂ ವರ್ಣಕ್ಕೆ ಪ್ರಾಧಾನ್ಯತೆ. ಈ ವರ್ಣದ ಸೀರೆ, ಲೆಹೆಂಗಾ, ಗಾಗ್ರಾದಂತಹ ಎಥ್ನಿಕ್‌ವೇರ್ ಇಲ್ಲವೇ ಸಿಲ್ಕ್ ಸೀರೆ ಧರಿಸಿ.
ಹಳದಿ ವರ್ಣದಲ್ಲಿ ಕಾಣಿಸಿಕೊಳ್ಳಿ
ಸೆಪ್ಟೆಂಬರ್ ೨೯ರಂದು ಕಷ್ಮಾಂಡಾ ದೇವಿಯ ದಿನ. ಖುಷಿಯನ್ನು ಪ್ರತಿನಿಧಿಸುವ ಹಳದಿ ವರ್ಣ ಇದೀಗ ಫ್ಯಾಷನ್‌ನಲ್ಲಿ ಸನ್ ಕಲರ್ ಹೆಸರಲ್ಲಿ ಟ್ರೆಂಡಿಯಾಗಿದೆ. ಸನ್‌ಕಲರ್‌ನ ಯಾವುದೇ ಎಥ್ನಿಕ್‌ವೇರ್ ಆದರೂ ಸರಿಯೇ! ಸೀರೆಯಾದರೂ ಓಕೆ.
ಹಸಿರು ಪ್ರೇಮ ತೋರ್ಪಡಿಸಿ
ಸೆಪ್ಟೆಂಬರ್ ೩೦ರಂದು ಪ್ರಕೃತಿಯನ್ನು ಪ್ರತಿನಿಧಿಸುವ ಸ್ಕಂದಮಾತೆಯ ವಿಶೇಷದಿನವಾಗಿದ್ದು, ಹಸಿರಿನ ನಾನಾ ಶೇಡ್‌ಗಳನ್ನು ಹೊಂದಿದ ಚೂಡಿದಾರ್, ಇಲ್ಲವೇ ರೇಷ್ಮೆ ಸೀರೆ ಉಟ್ಟು ಅಲಂಕರಿಸಿಕೊಳ್ಳಬಹುದು.
ಬೂದು ಬಣ್ಣದಲ್ಲಿ ಅಲಂಕೃತಗೊಳ್ಳಿ
ಅಕ್ಟೋಬರ್ ೧ರಂದು ದುಷ್ಟರನ್ನು ಬಗ್ಗುಬಡಿಯುವ ದೇವಿ ಕ್ಯಾತ್ಯಾಯನಿಯ ದಿನದಂದು ಟ್ರೆಂಡ್‌ನಲ್ಲಿರುವ ನಾನಾ ಬೂದು ಬಣ್ಣದ ಪ್ರಿಂಟೆಡ್ ಎಥ್ನಿಕ್‌ವೇರ್ ಇಲ್ಲವೇ ಸಾದಾ ಬೂದು ವರ್ಣದ ಸೀರೆ ಧರಿಸಿ, ಮ್ಯಾಚಿಂಗ್ ಆಭರಣಗಳಿಂದ ಸಿಂಗರಿಸಿಕೊಳ್ಳಬಹುದು.
ಇದನ್ನೂ ಓದಿ : Fashion trend | ಯಂಗ್‌ಲುಕ್‌ಗೆ ಸಾಥ್ ನೀಡುವ ವ್ರಾಪ್ ಹೆಡ್‌ಬ್ಯಾಂಡ್ಸ್
ಆಕರ್ಷಕ ಆರೆಂಜ್ ವರ್ಣ
ಅಕ್ಟೋಬರ್ ೨ರಂದು ಕಾಳರಾತ್ರಿಯ ದಿನದಂದು ಬೆಳಕು ಹಾಗೂ ಜ್ಞಾನದ ಪ್ರತೀಕವಾದ ಆರೆಂಜ್ ವರ್ಣ ಇಂದು ಟ್ರೆಂಡ್‌ನಲ್ಲಿರುವ ಶೇಡ್. ಈ ಬಣ್ಣದಲ್ಲೆ ಶರಾರ, ಗಾಗ್ರಾ, ಲೆಹೆಂಗಾದಂತಹ ನಾನಾ ಬಗೆಯ ಟ್ರೆಡಿಷನಲ್‌ವೇರ್ ಹಾಗೂ ಸೀರೆಗಳು ಲಭ್ಯ. ಅವನ್ನು ಆಯ್ಕೆ ಮಾಡಿ ಧರಿಸಿ.
ಕಲರ್‌ಫುಲ್ ನೇರಳೆ
ಅಕ್ಟೋಬರ್ ೩ರ ಮಹಾಗೌರಿಯ ದಿನದಂದು ನೇರಳೆ ಬಣ್ಣದ ಡಬ್ಬಲ್ ಶೇಡ್ ಇರುವಂತಹ ಎಥ್ನಿಕ್‌ವೇರ್ ಧರಿಸಿ. ಡಬ್ಬಲ್ ಶೇಡ್‌ನ ಬಾರ್ಡರ್ ಸೀರೆ ಆಯ್ಕೆ ಮಾಡಿ ಉಟ್ಟುಕೊಳ್ಳಿ. ಇದಕ್ಕೆ ಹೊಂದುವಂತಹ ಹೇರ್‌ಸ್ಟೈಲ್ ಮಾಡಿಕೊಳ್ಳಿ.
ಮನಸೆಳೆಯುವ ಗುಲಾಬಿ ಶೇಡ್
ಅಕ್ಟೋಬರ್ ೪ರ ಸಿದ್ದಿಧಾತ್ರಿಯ ದಿನದಂದು ಗುಲಾಬಿ ವರ್ಣಕ್ಕೆ ಆದ್ಯತೆ. ಎಲ್ಲರ ಬಳಿಯಲ್ಲೂ ಗುಲಾಬಿ ವರ್ಣದ ಎಥ್ನಿಕ್‌ವೇರ್ ಇದ್ದೇ ಇರುತ್ತದೆ. ಒಂದಿಷ್ಟೂ ಕ್ರಿಸ್ಟಲ್ ಜುವೆಲರಿ ಧರಿಸಿ, ಸಂಭ್ರಮಿಸಿ, ಹಬ್ಬವನ್ನು ಆಚರಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Navratri 2022 | ನವರಾತ್ರಿ ನವವರ್ಣ: ವಿಸ್ತಾರ ಡಿಜಿಟಲ್ ಸಂಭ್ರಮ