Site icon Vistara News

New year 2023: ಹೊಸವರ್ಷದ ಹರುಷಕ್ಕೆ ಹತ್ತು ಸರಳ ಸೂತ್ರಗಳು!

hill

ಹೊಸ ವರ್ಷ ಎಂದರೆ ʻಕಾಲೆಂಡರ್‌ನ ಪುಟ ಮಾತ್ರ ಬದಲಾಗುತ್ತದೆ, ಅದೇ ಬದುಕುʼ ಎಂಬುದು ನಿಜವಾದರೂ, ನಾವು ʻಈ ವರ್ಷವಾದರೂ ಬದುಕಿನಲ್ಲಿ ಇಂಥದ್ದನ್ನು ಮಾಡಬೇಕು, ಇಂಥ ಚಟವನ್ನು ಬಿಡಬೇಕು, ಇರುವುದೊಂದೇ ಜೀವನ ಎಂದ ಮೇಲೆ ಇನ್ನಾದರೂ ನನ್ನ ಸಂತೋಷಗಳನ್ನು ಕಂಡುಕೊಳ್ಳುವುದನ್ನು ಅಭ್ಯಾಸ ಮಾಡಬೇಕು ಎಂದು ಬಹುತೇಕ ಎಲ್ಲರೂ ಅಂದುಕೊಂಡೇ ಇರುತ್ತೇವೆ. ಈ ವರ್ಷ ಹಿಂಗಿರಲಿ, ಖುಷಿ ತರಲಿ ಎಂದು ಬಯಸುವುದು ತಪ್ಪಲ್ಲ. ಹೊಸ ಆರಂಭಕ್ಕೆ ಮುನ್ನುಡಿ ಬರೆದು ಬದುಕಿನ ಕೆಟ್ಟ ಅಧ್ಯಾಯಗಳನ್ನು ಮರೆತು ಒಳ್ಳೆಯದೇ ಆಗಲಿ ಎಂದು ಖುಷಿಯಿಂದ ಬದುಕಿನ ಸಂತೋಷಕ್ಕಾಗಿ ಆಸೆ ಪಟ್ಟರೆ ಅದು ಆಶಾವಾದ. ಅಂದುಕೊಂಡದ್ದು ಎಲ್ಲ ನಡೆಯದಿದ್ದರೂ, ಮಾಡಲಾಗದಿದ್ದರೂ, ಆ ಕಡೆಗಿನ ಪ್ರಯತ್ನವಂತೂ ಜೀವನಪ್ರೀತಿಯೇ ಅಲ್ಲವೇ!

ಬದುಕಿನಲ್ಲಿ ದೊಡ್ಡ ದೊಡ್ಡ್‌ ಆಸೆ ಕನಸುಗಳ ವಿಷಯ ಸೈಡಿಗಿರಲಿ. ಮೊದಲು ತೀರಾ ಸರಳವಾದ ವಿಷಯವನ್ನೇ ಕೈಗೆತ್ತಿಕೊಳ್ಳೋಣ. ಇವುಗಳಲ್ಲಿ ಸಣ್ಣ ಮಟ್ಟಿನ ಬದಲಾವಣೆ ಮಾಡಿಕೊಂಡರೂ ಅದು ನಮ್ಮ ಮಟ್ಟಿಗೆ ಸಾಧನೆಯೇ, ಖುಷಿಯೇ. ನಾನು ಬದಲಾಗಿದ್ದೇನೆ ಎಂದು ಎಷ್ಟೇ ನೀವು ಹೇಳಿಕೊಂಡರೂ ನಿಮ್ಮ ಮಾಜಿ ಪ್ರೇಮಿಯ ಹೊರತು ಇನ್ಯಾರೂ ನಿಮ್ಮ ಮಾತುಗಳನ್ನು ಒಪ್ಪಿಕೊಳ್ಳಲಿಕ್ಕಿಲ್ಲ ಎಂಬುದು ಕಟು ಸತ್ಯವೇ. ಆದರೂ, ಬದಲಾವಣೆಯೆಡೆಗೆ ನೀವು ಪ್ರಯತ್ನ ಮಾಡಿದರೆ ಆತ್ಮತೃಪ್ತಿ ನಿಮ್ಮದೇ. ನಿಮ್ಮ ಹೊಸ ಕನಸುಗಳಲ್ಲಿ ನಿಯಮಗಳಲ್ಲಿ ಇವೂ ಒಂದಿಷ್ಟು ಇದ್ದರೆ ಬದುಕು ಸುಂದರ.

೧. ಬದಲಾಗದಿರಿ, ಹಾಗೆಯೇ ಇರಿ. ಬದಲಾವಣೆ ಮಾಡಿಕೊಳ್ಳುವುದೆಂದರೆ ಇದ್ದಕ್ಕಿದ್ದಂತೆ ಸಂಪೂರ್ಣ ಬದಲಾಗಿಬಿಡುವುದಲ್ಲ. ಬದಲಾವಣೆಯ ತುಡಿತ ಇದ್ದರೂ ನಿಮ್ಮತನ ಉಳಿಸಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ, ನೀವು ನೀವಾಗಿಯೇ ಇರಿ. ಇಲ್ಲಿ ಬದಲಾಗದೆ ಇರಲು ಪ್ರಯತ್ನಪಡಿ. ಬೆಳವಣಿಗೆ ಬೇಕು. ಆದರೆ ನಾವು ನಾವಾಗಿಯೇ ಇರುವುದು ಮುಖ್ಯ. ಗೆಳೆಯರೆಲ್ಲ ಹೊಸವರ್ಷಕ್ಕೆ ಪಾರ್ಟಿ ಮಾಡುತ್ತಿದ್ದಾರಾ? ಊರೂರು ಅಲೆಯುತ್ತಿದ್ದಾರಾ? ಬಿಡಿ, ನೀವು ಮನೆಯಲ್ಲಿದ್ದರೂ ಖುಷಿಪಡಿ.

೨. ಕುಟುಂಬ ಎಲ್ಲವೂ ಹೌದು ನಿಜ. ಕುಟುಂಬದ ಜೊತೆ ಸಮಯ ಕಳೆಯಬೇಕು ಎಂಬುದೂ ನಿಜವೇ. ಆದರೆ, ಇದರರ್ಥ ಯಾವಾಗಲೂ ಜೊತೆಗೇ ಇರಬೇಕು ಎಂದಲ್ಲ. ನಿಮಗಾಗಿ, ಅಂದರೆ ಕೇವಲ ನಿಮಗಾಗಿ ಅಂತ ಸಮಯ ಮೀಸಲಿಡುವುದು ಬಹಳ ಅಗತ್ಯ ಎಂಬುದನ್ನು ಇನ್ನಾದರೂ ಅರ್ಥ ಮಾಡಿಕೊಳ್ಳಿ.

೩. ರಜೆ ಬೇಕು, ಆದರೆ ಕೇಳುವುದು ಹೇಗೆ? ಬಾಸ್‌ ಬೈತಾರೆ, ಏನಂದುಕೊಂಡಾರು ಇತ್ಯಾದಿ ಇತ್ಯಾದಿ ಅಂಜಿಕೆಗಳನ್ನು ಬದಿಗಿಡುವುದನ್ನು ಕಲಿಯುವುದು ಬಹಳ ಅಗತ್ಯ. ಮೈಬಗ್ಗಿಸಿ ವರ್ಷಪೂರ್ತಿ ದುಡಿಯುತ್ತೇವಲ್ಲ, ನಮಗೆ ಅಂತ ಒಂದಿಷ್ಟು ಸಂಸ್ಥೆಯ ನಿಯಮಗಳ ಪ್ರಕಾರ ಇದ್ದೇ ಇರುತ್ತದೆ. ಅದನ್ನು ತೆಗೆದುಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಕೂಡಾ. ಅಂಥ ರಜೆಗಳನ್ನು ಈ ವರ್ಷ ಉಪಯೋಗಿಸಿಕೊಂಡು ಒಂದಿಷ್ಟು ಅಂದುಕೊಂಡದ್ದನ್ನು ಮಾಡುತ್ತೇನೆ ಎಂದು ಪಣ ತೊಡಿ ನೋಡೋಣ!

೪. ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತೀರಿ ಎಂದರೆ ಆ ಕೆಲಸಕ್ಕೆ ತಕ್ಕಂತೆ ಒಂದಿಷ್ಟು ಪ್ರಯೋಜನಗಳೂ ಸಂಬಳದ ಜೊತೆ ಇರುತ್ತದೆ. ಉದಾಹರಣೆಗೆ, ಸಂಸ್ಥೆ ನಿಮಗೆ ಒಂದಿಷ್ಟು ದಿನಸಿ ಸಾಮಾನು ಕೊಳ್ಳಲು ಕೂಪನ್‌ ಕೊಡಬಹುದು ಅಥವಾ, ನಿಮ್ಮ ಇಂಟರ್ನೆಟ್‌ ಬಿಲ್‌ ಕಟ್ಟಬಹುದು, ಇವನ್ನೆಲ್ಲ ಉತ್ತಮವಾಗಿ ಬಳಸಿಕೊಳ್ಳುವುದನ್ನು ಕಲಿಯಬಹುದು.

೫. ಎಲ್ಲರೂ ತಮ್ಮ ಜಾಲತಾಣದ ಅಕೌಂಟ್‌ನಲ್ಲಿ ದಿನಾ ರೀಲ್ಸ್‌, ಸ್ಟೇಟಸ್‌ ಹಾಕ್ತಾ ಇರ್ತಾರೆ ಎಂದರೆ, ಅದಕ್ಕೆ ನೀವು ಲೈಕ್‌ ಮಾಡುತ್ತಲೇ ಇರಬೇಕು ಎಂದೇನಿಲ್ಲ. ಲೈಕ್‌ ಮಾಡದಿರುವುದೂ ಕೂಡಾ ಈಗ ಬುದ್ದೀವಂತರ ಲಕ್ಷಣ. ಅಷ್ಟಾದರೂ ಧೈರ್ಯ ಮಾಡಿ!

೬. ಇಷ್ಟಪಡುವುದನ್ನು ಮಾಡಲು ಪ್ರಯತ್ನಿಸಿ. ಜನರೇನಂದಾರು, ತಮಾಷೆಯಾಗಿದೆ ಎಂದು ಅನಿಸಿದರೂ, ಮಾಡುವುದರಲ್ಲಿ ತಪ್ಪಿಲ್ಲ. ಬೇರೆಯವರಿಗೆ ತೊಂದರೆಯಾಗದಿದ್ದರೆ ಸಾಕು. ಅಷ್ಟೇ ಸಿಂಪಲ್.‌ ಈಗ ಇದು ಟ್ರೆಂಡ್‌ನಲ್ಲಿಲ್ಲ, ಈ ಫ್ಯಾಷನ್‌ ಈಗ ಓಡ್ತಿಲ್ಲ, ಇದನ್ನು ತೊಟ್ಟರೆ ಜನ ನಕ್ಕಾರು. ನಾ ಹೀಗೆ ಮಾಡಿದರೆ ಜನರೇನಂದುಕೊಂಡಾರು ಇತ್ಯಾದಿ ಇತ್ಯಾದಿ ಸಣ್ಣಸಣ್ಣದಕ್ಕೆಲ್ಲ ತಲೆಕೆಡಿಸಿಕೊಳ್ಳೋದು ಬಿಡೋದು ಸುಲಭವಾ? ಒಮ್ಮೆ ಬಿಟ್ಟು ನೋಡಿ. ಬದುಕು ಚಂದ ಅನಿಸಿಬಿಡುತ್ತದೆ!

೭. ಸಾಮಾಜಿಕ ಜಾಲತಾಣಗಳ ಯುಗ ಇದು. ದಿನಕ್ಕೆ ಸಾವಿರ ವಿಷಯ ಕಣ್ಣಿಗೆ ಬೀಳುತ್ತಲೇ ಇರುತ್ತದೆ. ಕಂಡ ತಕ್ಷಣ ನಿಮಗೆ ಇಷ್ಟವಾಗಲಿಲ್ಲ ಎಂದರೆ ಹೋಗಿ ಅಲ್ಲಿ ಮೇಜು ಕುಟ್ಟಿ ಭಾಷಣ ಬಿಗಿದು ಬರಬೇಕೆಂದೇನಿಲ್ಲ. ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿರುವುದನ್ನೂ ಕಲಿಯಿರಿ. ಇಷ್ಟವಾಗದಿದ್ದರೆ ಅವುಗಳಿಂದ ಹೊರಬನ್ನಿ.

೮. ಪ್ರಪಂಚದಲ್ಲಿ ಕಣ್ಣೆದುರಿಗೇ ನೂರೆಂಟು ವಿಷಯಗೂ ನಡೆಯುತ್ತಲೇ ಇರುತ್ತದೆ. ಕಣ್ಣಿದ್ದೂ ಕುರುಡರಂತೆ ನಾವು ಮುಂದೆ ಸಾಗುತ್ತಲೇ ಇರುತ್ತೇವೆ. ನಾವೊಬ್ಬರು ಮಾಡಿ ಏನು ಪ್ರಯೋಜನ ಎಂದು ಸಿನಿಕರಾಬೇಡಿ. ಒಂದಿಷ್ಟು ಕಾಳಜಿ ಮಾಡುವುದನ್ನು ಕಲಿಯಿರಿ. ಅವುಗಳ ಬಗ್ಗೆ ಯೋಚಿಸಿ. ಅದು ಜನರೇ ಆಗಬೇಕಿಲ್ಲ. ಬದಲಾಗುತ್ತಿರುವ ಹವಾಮಾನವಿರಬಹುದು, ಮಾಲಿನ್ಯವಿರಬಹುದು!

ಇದನ್ನೂ ಓದಿ | New Year Nail Art | ಹೊಸ ವರ್ಷದ ಸೆಲೆಬ್ರೇಷನ್‌ಗೆ ಎಂಟ್ರಿ ಕೊಟ್ಟ ಗ್ಲಿಟ್ಟರ್ ನೇಲ್‌ ಆರ್ಟ್

೯. ಒಮ್ಮೆಯಾದರೂ ಅಡುಗೆ ಮಾಡಿದ್ದೀರಾ? ನೀರಿ ಬಿದ್ದಾಗ ಕೈಕಾಲು ಬಡಿದು ಈಜಲು ಗೊತ್ತಿದೆಯಾ? ನಿಮ್ಮನೆ ಪಂಪ್‌ಸೆಟ್‌  ಹಾಳಾಯಿತು, ನೀರು ಬರಲಿಲ್ಲ ಎಂದರೆ ನಿಮಗೇ ರಿಪೇರಿ ಮಾಡುವುದು ಗೊತ್ತಾ? ಹೋಗಲಿ, ನಲ್ಲಿ ಲೀಕಾಗುತ್ತಿದೆ ಎಂದರೆ ಸರಿ ಮಾಡುವ ವಿದ್ಯೆಯಾದರೂ ಗೊತ್ತಾ? ಬದುಕಿಗೆ ಅಗತ್ಯ ಬೇಕಾಗುವ ಇಂಥ ಕೌಶಲ್ಯಗಳು ಗೊತಿರಬೇಕು ಕಣ್ರೀ!

೧೦. ಅನ್ಯಾಯದ ವಿರುದ್ಧ ದನಿಯೆತ್ತಬೇಕು ನಿಜವೇ. ಆದರೆ, ಕೆಲವನ್ನು ಕ್ಷಮಿಸುವ ದೊಡ್ಡಗುಣ ಕಲಿಯಿರಿ. ಅವರು ನನಗೆ ಮಾಡಿದ ಅನ್ಯಾಯಕ್ಕೆ ಪಾಠ ಕಲಿಸದೆ ಇರಲ್ಲ ಎಂದು ಕತ್ತಿ ಮಸೆಯುತ್ತಿದ್ದರೆ, ಒಮ್ಮೆ ಕತ್ತಿ ಕೆಳಗಿಟ್ಟು ನೋಡಿ. ಅವರು ಮಾಡಿದ ತಪ್ಪನ್ನು ಮರೆತುಬಿಡಿ. ಅವರಿಂದ ನೀವು ಬದುಕಿನಲ್ಲಿ ಒಂದು ಪಾಠವಾದರೂ ಕಲಿತಿರಲ್ಲ. ಅದು ನಿಮ್ಮ ಪಾಲಿನ ಗಳಿಕೆ ಎಂದು ಸುಮ್ಮನಾಗಿಬಿಡಿ, ಸಿಂಪಲ್.‌ ಮನಸ್ಸು ನಿರಾಳವಾಗುತ್ತದೆ. ಇಂಥದ್ದೆಲ್ಲ ಬದುಕಿನ ಸಣ್ಣಪುಟ್ಟ ಸಂಗತಿಗಳು ನಿಮಗೆ ಸಂತೃಪ್ತಿ ನೀಡದಿದ್ದರೆ ಕೇಳಿ!

ಬದುಕು ಸಿಂಪಲ್ ಕಣ್ರೀ.‌ ಸುಲಭವಾಗಿ ಸರಳವಾಗಿ ಬದುಕಿದರೆ, ಇಡೀ ವರ್ಷವೇ ನಿತ್ಯ ಹರುಷ!

ಹೊಸವರ್ಷದ ಶುಭಾಶಯಗಳು!

ಇದನ್ನೂ ಓದಿ | New Year 2023 | ಹೊಸ ವರ್ಷಾಚರಣೆಗೆ ರಾಜಧಾನಿ ರೆಡಿ; ಪ್ರೇಮಿಗಳು, ಪತಿ-ಪತ್ನಿ ಡ್ಯಾನ್ಸ್‌ಗೆ ಸ್ಪೆಷಲ್ ಫ್ಲೋರ್, ರಕ್ಷಣೆಗೆ ಲೇಡಿ ಬೌನ್ಸರ್ಸ್!

Exit mobile version