ವರ್ಷಾಂತ್ಯ ಸಮೀಪಿಸುತ್ತಿರುವಾಗ ಹೊಸ ವರ್ಷಕ್ಕೆಂದು (New Year 2024) ನಡೆಸುವ ತಯಾರಿಗಳಲ್ಲಿ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುವುದೂ ಒಂದು. ಈವರೆಗೆ ಎಷ್ಟೋ ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ನಿರ್ಣಯಗಳನ್ನು ತೆಗೆದುಕೊಂಡಿರುತ್ತೇವೆ. ಅವುಗಳಲ್ಲಿ ಹೆಚ್ಚಿನವುಗಳು ನಮಗೆ ತಿಳಿಯದಂತೆ ಜಾರಿಯೇ ಹೋಗಿರುತ್ತವೆ. ಅದೇನು, ಎತ್ತ ಎನ್ನುವ ಕಲ್ಪನೆಯಿಲ್ಲದಂತೆ ಮುಂದಿನ ವರ್ಷ ಮತ್ತದೇ ಪುನರಾವರ್ತನೆ. ಈ ವರ್ಷವೂ ಬರುವ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ, ಒಳ್ಳೆಯ ಜೀವನಶೈಲಿ ರೂಢಿಸಿಕೊಳ್ಳುವ ಬಗ್ಗೆ, ದೇಹಾರೋಗ್ಯ ಹೆಚ್ಚಿಸಿಕೊಳ್ಳುವ ಬಗ್ಗೆ ನಿರ್ಣಗಳನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ಮಾನಸಿಕ ಆರೋಗ್ಯದ ಸುಧಾರಣೆಗೂ ನಿರ್ಣಯ ತೆಗೆದುಕೊಂಡರೆ ಹೇಗೆ?
ಹೀಗೆನ್ನುತ್ತಿದ್ದಂತೆ, ʻನಮಗೇನು ತಲೆ ಕೆಟ್ಟಿಲ್ಲʼ ಎಂದೆನ್ನುವ ಕಾಲ ಹೋಗಿಯಾಯಿತು. ಇಂದಿನ ಜನ ಅದನ್ನೂ ಸೂಕ್ತ ರೀತಿಯಲ್ಲೇ ಅರ್ಥೈಸಿಕೊಳ್ಳುತ್ತಿದ್ದಾರೆ. ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಗಳು ಸರಿಯಾಗಿರುವುದು ಎಷ್ಟು ಮುಖ್ಯ ಎನ್ನುವುದು ಆಧುನಿಕ ಬದುಕಿನ ಮುಖಾಮುಖಿಯಲ್ಲಿರುವ ಎಲ್ಲರಿಗೂ ಅರ್ಥವಾಗುವಂಥ ಅಂಶಗಳು. ಹಾಗಾದರೆ ಈ ವರ್ಷಕ್ಕೆ ಈ ಕುರಿತು ಏನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು?
ನಮ್ಮನ್ನು ನಾವು ನೋಡಿಕೊಳ್ಳುವುದು
ಇತ್ತೀಚಿನ ದಿನಗಳಲ್ಲಿ ಸೆಲ್ಫ್ ಕೇರ್ ಅಥವಾ ಸ್ವಕಾಳಜಿ ಎನ್ನುವುದನ್ನು ಸ್ವಾರ್ಥ ಎನ್ನುವಂತೆ ದೂರುವ ಹಾಗಿಲ್ಲ, ಅದು ಸ್ವಾರ್ಥ ಅಲ್ಲವೂ ಅಲ್ಲ. ಕುಟುಂಬದ ಅಥವಾ ಆಪ್ತರ ಕಾಳಜಿ ವಹಿಸುವಷ್ಟೇ ಸಹಜವಾಗಿ ನಮ್ಮ ಬಗ್ಗೆಯೂ ನಾವು ಕಾಳಜಿ ವಹಿಸುವುದರಿಂದ, ʻಬದುಕೇ ಸಾಕುʼ ಎನ್ನುವ ಹಂತಕ್ಕೆ ಹೋಗುವುದನ್ನು, ಖಿನ್ನತೆಯತ್ತ ಜಾರುವುದನ್ನು ತಪ್ಪಿಸಬಹುದು ಎನ್ನುತ್ತವೆ ಅ‍್ಯಯನಗಳು.
ಧ್ಯಾನ
ಇದಂತೂ ನಮ್ಮ ಪ್ರಾಚೀನ ಅಸ್ತ್ರ. ಪ್ರತಿದಿನ ನಿಯಮಿತವಾಗಿ ಧ್ಯಾನ ಬದುಕಿನಲ್ಲಿ ನಿಧಾನವಾಗಿ, ಆದರೆ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಬಲ್ಲದು ಎಂಬುದೀಗ ವೈಜ್ಞಾನಿಕವಾಗಿ ಸಾಬೀತಾಗಿದೆ. ನಮ್ಮ ದೇಹದ ಬಹಳಷ್ಟು ನೋವು-ನಷ್ಟಗಳಿಗೆ ಮಾನಸಿಕ ಒತ್ತಡ, ತುಮುಲಗಳೇ ಕಾರಣ ಎಂಬುದನ್ನುತಜ್ಞರೂ ಒಪ್ಪುತ್ತಾರೆ.
ಮಾನಸಿಕ ದೃಢತೆ
ಈಗಿನ ಫಿಟ್ನೆಸ್ ಮಾದರಿಗಳು ಬದಲಾಗುತ್ತಿವೆ. ದೇಹ ದಂಡಿಸಿ ಅದಕ್ಕೊಂದು ಸರಿಯಾದ ರೂಪ ಕೊಡುವುದು ಮಾತ್ರವೇ ಅಲ್ಲ, ಮಾನಸಿಕವಾಗಿ ದೃಢತೆಯನ್ನು ನಮಗದು ನೀಡಬೇಕು. ಹಾಗಾಗಿ “ಈ ವರ್ಕೌಟ್‌ನಿಂದ ನಾನು ಹೇಗೆ ಕಾಣುತ್ತೇನೆ?” ಎನ್ನುವ ಪ್ರಶ್ನೆಗಿಂತಲೂ, “ಇದರಿಂದ ನನಗೇನು ಅನಿಸುತ್ತಿದೆ ಮತ್ತು ಬದುಕು ಎಷ್ಟು ಬದಲಾಗುತ್ತದೆ?” ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತಿದೆ.
ವಿಶ್ರಾಂತಿ
ಉಗುರಿನಿಂದ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವ ಈ ದಿನಗಳಲ್ಲಿ, ಕೆಲವು ಸರಳ ಮತ್ತು ಪ್ರಾಚೀನ ತಂತ್ರಗಳು ನಮ್ಮ ಬದುಕನ್ನು ಗುಣಾತ್ಮಕವಾಗಿ ಬದಲಿಸಬಲ್ಲವು ಎಂಬುದನ್ನು ಮತ್ತೆ ಕಂಡುಕೊಳ್ಳಲಾಗುತ್ತಿದೆ. ಇದೇ ನಿಟ್ಟಿನಲ್ಲಿ, ದೇಹಕ್ಕೆ ಪುನಶ್ಚೈತನ್ಯ ನೀಡುವ ಯೋಗ ಮತ್ತು ಅದರದ್ದೇ ಮಾದರಿಯ ಇತರ ವಿದ್ಯೆಗಳಿಗೆ ಜನಪ್ರಿಯತೆ ಹೆಚ್ಚಬಹುದು. ಮಾತ್ರವಲ್ಲ, ನಿದ್ದೆಯಂಥ ಸರಳ ವಿಶ್ರಾಂತಿಯೂ ನಮಗೆಷ್ಟು ಅತ್ಯಗತ್ಯ ಎಂಬುದು ಜನರಿಗೆ ಮನದಟ್ಟಾಗುತ್ತಿರುವ ದಿನಗಳಿವು. ಹಾಗೆಂದೇ ಯೋಗ ನಿದ್ರೆ, ಧ್ಯಾನ ನಿದ್ರೆ, ನಿದ್ದೆ ಮಾಡಿಸಲೆಂದೇ ರೂಪಿಸಲಾದ ಧ್ವನಿಮುದ್ರಿಕೆಗಳು, ಹಾಡು-ಕಥೆಗಳು- ಇಂಥ ಸಕಲೆಂಟು ಮಾದರಿಗಳು ಜನರಿಗೆ ಅಚ್ಚುಮೆಚ್ಚಾಗುತ್ತಿವೆ. ಕೈಯಲ್ಲಿರುವ ತಂತ್ರಜ್ಞಾನಕ್ಕೆ ಶರಣಾಗಿ ನಿದ್ದೆ ಬಿಡುತ್ತಿರುವ ಜನರನ್ನು ನಿದ್ದೆ ಮಾಡಿಸಲು ಈಗ ಅಂಗೈಗೊಂಬೆಗಳೇ ಸಜ್ಜಾಗಿವೆ.
ಸ್ವಾಸ್ಥ್ಯ
ಈ ಶಬ್ದ ಇತ್ತೀಚಿನ ವರ್ಷಗಳಲ್ಲಿ ಎಂದಿಗಿಂತ ಹೆಚ್ಚು ಕೇಳಿಬರುತ್ತಿದೆ. ಕೆಲವರು ತಮ್ಮ ಖಾಸಗಿ ಸ್ವಾಸ್ಥ್ಯದತ್ತ ಹೆಚ್ಚು ಗಮನ ಹರಿಸಿದರೆ, ಇಡೀ ಸಮಾಜದ ಮತ್ತು ಭೂಮಿಯ ಸ್ವಾಸ್ಥ್ಯದ ಬಗ್ಗೆ ಲಕ್ಷ್ಯ ಕೊಡುವವರ ಸಂಖ್ಯೆಯೂ ಈಗೀಗ ಹೆಚ್ಚುತ್ತಿದೆ. ನಮ್ಮ ದೇಹ ಮತ್ತು ಮನಸ್ಸಿಗೆ ಬೇಕಾಗಿರುವುದೇನು ಎಂಬ ಜನ ಲಕ್ಷ್ಯಕೊಟ್ಟು ಬದುಕನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೋವಿಡ್ ಮತ್ತು ನಂತರದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸ್ಥಿತಿಗತಿಗಳು ಬದುಕನ್ನು ಬೇರೆಯದೇ ರೀತಿಯಲ್ಲಿ ನೋಡಲು ಜನರನ್ನು ಪ್ರೇರೇಪಿಸುತ್ತಿವೆ.
ಹವ್ಯಾಸ ಬೇಕು
ಸಣ್ಣದೇ ಇರಲಿ, ದೊಡ್ಡದಾಗಿರಲಿ- ಅದು ಯಾವುದಾದರೂ ಸರಿ, ಅಂತೂ ಹವ್ಯಾಸವೊಂದು ಬೇಕು. ನಮಗೆ ನಾವೇ ಸವಾಲೊಡ್ಡಿಕೊಳ್ಳುವುದು, ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳದೆ ಇರುವುದು, ಕೃತಜ್ಞತೆಯನ್ನು ರೂಢಿಸಿಕೊಳ್ಳುವುದು- ಇವೆಲ್ಲ ಬದುಕನ್ನು ನಿಜಕ್ಕೂ ಸುಂದರವಾಗಿಸಬಲ್ಲವು.
ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…